Site icon Vistara News

Team India : ಭವಿಷ್ಯದ ಪಾಂಡ್ಯ ಪತ್ತೆ; ಬ್ಯಾಟಿಂಗ್, ಬೌಲಿಂಗ್​ನಲ್ಲಿ ಅಬ್ಬರಿಸಿದ ಯುವ ಆಟಗಾರ

Arshin Kulkarni

ಬೆಂಗಳೂರು: ವೇಗದ ಬೌಲಿಂಗ್ ಆಲ್​ರೌಂಡರ್​ಗಳಿಗೆ ಕ್ರಿಕೆಟ್​ ತಂಡದಲ್ಲೀಗ (Team India) ಡಿಮ್ಯಾಂಡ್​ ಹೆಚ್ಚು. ಐಪಿಎಲ್​ನಲ್ಲೂ ಅವರು ಕೋಟಿ ಕೋಟಿ ಬಾಚಿಕೊಳ್ಳುತ್ತಾರೆ. ಭಾರತದ ಪಾಲಿಗೆ ಸದ್ಯ ಅತ್ಯಂತ ಯಶಸ್ವಿ ವೇಗದ ಬೌಲಿಂಗ್ ಆಲ್​ರೌಂಡರ್​ ಎಂದರೆ ಹಾರ್ದಿಕ್ ಪಾಂಡ್ಯ, ಶಾರ್ದೂಲ್ ಠಾಕೂರ್ ಇದೇ ವಿಭಾಗದಲ್ಲಿ ಇದ್ದರೂ ಯಶಸ್ಸಿನ ರೇಟ್ ಕಡಿಮೆ. ಶಿವಂ ದುಬೆ ಕೂಡ ಅಷ್ಟಕಷ್ಟೆ. ಹೀಗಾಗಿ ಪಾಂಡ್ಯ ಬಗ್ಗೆ ಆಯ್ಕೆದಾರರಿಗೆ ಹೆಚ್ಚಿನ ಒಲವಿದೆ. ಆದರೆ, ಪಾಂಡ್ಯ ಪದೇಪದೆ ಗಾಯಕ್ಕೆ ಒಳಗಾಗುವ ಕಾರಣ ಅವರ ಲಭ್ಯತೆ ದೊಡ್ಡ ಸಮಸ್ಯೆಯಾಗಿದೆ. ಈ ವೇಳೆ ಹೊಸ ಅಲ್​ರೌಂಡ್​ ಪ್ರತಿಭೆಯೊಂದು ಬೆಳಕಿಗೆ ಬಂದಿದೆ. ಅವರೇ ಮಧ್ಯಮ ವೇಗದ ಬೌಲಿಂಗ್ ಆಲ್ರೌಂಡರ್ ಅರ್ಶಿನ್ ಕುಲಕರ್ಣಿ.

ಇದೀಗ ನಡೆಯುತ್ತಿರುವ 19ರ ವಯೋಮಿತಿಯ ಏಷ್ಯಾ ಕಪ್​ನಲ್ಲಿ ಅವರು ಮಿಂಚುತ್ತಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಅಂಡರ್ -19 ತಂಡಕ್ಕೆ ಪಾದಾರ್ಪಣೆ ಮಾಡಿರುವ ಅವರು ಮಿಂಚಿದ್ದಾರೆ. ದುಬೈನ ಮೈದಾನವು 18 ವರ್ಷದ ಆಟಗಾರನ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಪಂದ್ಯದಲ್ಲಿ 70 ರನ್ ಗಳಿಸಿದ ಅವರು 8-0-29-3 ರ ಪ್ರಭಾವಶಾಲಿ ಬೌಲಿಂಗ್ ಅಂಕಿಅಂಶಗಳನ್ನು ಪ್ರದರ್ಶಿಸಿದ್ದಾರೆ. ಹೀಗಾಗಿ ಇವರನ್ನು ಭವಿಷ್ಯದ ಹಾರ್ದಿಕ್​ ಪಾಂಡ್ಯ ಎಂದೇ ಹೇಳಲಾಗುತ್ತಿದೆ.

ಮಹಾರಾಷ್ಟ್ರದ ಸೋಲಾಪುರದ ಅರ್ಶಿನ್ ಕುಲಕರ್ಣಿ ಉತ್ತಮ ಕ್ರಿಕೆಟ್ ಅವಕಾಶಗಳಿಗಾಗಿ ಪುಣೆಗೆ ಸ್ಥಳಾಂತರಗೊಂಡವರು. ಅರ್ಶಿನ್ ಮಹಾರಾಷ್ಟ್ರ ಅಂಡರ್ 14 ತಂಡ ಮತ್ತು ಜಿಲ್ಲಾ ತಂಡದ ಭಾಗವಾಗಿರುವುದರಿಂದ ಅವರ ಪೋಷಕರು ಗಮನ ಮಹತ್ವಾಕಾಂಕ್ಷೆಗಳಿಗೆ ನೀರೆರೆದು ಬೆಳೆಸಿದ್ದಾರೆ.

ಶೈಕ್ಷಣಿಕ ಸವಾಲುಗಳು

ಅಡೆತಡೆಗಳು ಕೇವಲ ಕ್ರಿಕೆಟ್ ಗೆ ಮಾತ್ರ ಸೀಮಿತವಾಗಿರಲಿಲ್ಲ. ಸೋಲಾಪುರದ ಸೇಂಟ್ ಜೋಸೆಫ್ ಶಾಲೆಯಲ್ಲಿ ಅರ್ಶಿನ್ ಅವರು ಶೈಕ್ಷಣಿಕ ಅಗತ್ಯಗಳನ್ನು ಪೂರೈಸುವ ಸವಾಲು ಎದುರಿಸಿದರು, ಅರ್ಶಿನ್ ಕುಲಕರ್ಣಿಗೆ ವಾರದಲ್ಲಿ ಮೂರು ದಿನಗಳ ರಜೆ ನೀಡುವಂತೆ ಕುಟುಂಬವು ಶಾಲೆಗೆ ಮನವಿ ಮಾಡಿತ್ತು. ಶಿಕ್ಷಣ ಮತ್ತು ಕ್ರಿಕೆಟ್ ಅನ್ನು ಹೊಂದಾಣಿಕೆ ಮಾಡಲು ಅದು ನೆರವಾಯಿತು. ಅರ್ಶಿನ್ ಕುಲಕರ್ಣಿ ಕ್ಯಾಡೆನ್ಸ್ ಅಕಾಡೆಮಿಗೆ ಸೇರಿದ್ದರಿಂದ ಕುಟುಂಬವು ಪುಣೆಯಲ್ಲಿ ಒಂದು ಮನೆಯನ್ನು ಬಾಡಿಗೆ ಮನೆ ಪಡೆಯಿತು.

ಇದನ್ನೂ ಓದಿ : Gautam Gambhir : ಮೋದಿಯನ್ನು ಪನೌತಿ ಎಂದವರಿಗೆ ತಿರುಗೇಟು ಕೊಟ್ಟ ಗೌತಮ್​ ಗಂಭೀರ್​

ಸ್ಪಿನ್​ನಿಂದ ವೇಗದ ಬೌಲಿಂಗ್ ಕಡೆಗೆ

ಆರಂಭದಲ್ಲಿ ಲೆಗ್-ಸ್ಪಿನ್ನರ್ ಮತ್ತು ಬ್ಯಾಟರ್​ ಆಗಿದ್ದ ಅರ್ಶಿನ್ ಮಧ್ಯಮ ವೇಗಕ್ಕೆ ಪರಿವರ್ತನೆಗೊಂಡರು. ಅವರ ತರಬೇತುದಾರರು ಅವರ ದೇಹದ ಬಗ್ಗೆ ಗಮನಿಸಿ ವೇಗದ ಬೌಲಿಂಗ್​ಗೆ ಪ್ರೇರಣೆ ಕೊಟ್ಟರು. ಮಾಜಿ ವೇಗದ ಬೌಲರ್ ಆಗಿದ್ದ ತಮ್ಮ ಅಜ್ಜನ ಮಾರ್ಗದರ್ಶನದಲ್ಲಿ, ಅರ್ಶಿನ್ ಕುಲಕರ್ಣಿ ಚೆಂಡಿನ ಸೀಮ್ ಬಳಸಿ ಸ್ವಿಂಗ್ ಕಲೆಯನ್ನು ಕಲಿತರು.

ಅರ್ಶಿನ್ ಅವರ ಯಶಸ್ಸಿನ ಅಡಿಪಾಯ ಸಮರ್ಪಣೆ ಮತ್ತು ಸಮಯಪ್ರಜ್ಞೆಯ ಮೇಲೆ ನಿಂತಿದೆ. ಕಳೆದ ವರ್ಷ ವಿನೂ ಮಂಕಡ್ ಟ್ರೋಫಿಯಲ್ಲಿ ಮಹಾರಾಷ್ಟ್ರದ ಪ್ರಮುಖ ರನ್ ಸ್ಕೋರರ್ ಆಗಿ ಹೊರಹೊಮ್ಮಿದ್ದರು. ನೆಟ್ಸ್​ನಲ್ಲಿ ಅವರ ನಿಯಮಿತ ಉಪಸ್ಥಿತಿ ಫಲ ನೀಡಿತ್ತು. ಅವರು ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರೆಸಿದ್ದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ಹಿರಿಯ ಮಹಾರಾಷ್ಟ್ರ ತಂಡದಲ್ಲಿ ಸ್ಥಾನ ಪಡೆದರು. ಮಹಾರಾಷ್ಟ್ರ ಪ್ರೀಮಿಯರ್ ಲೀಗ್​ನಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದರು.

ಪಾಂಡ್ಯ ಅಭಿಮಾನಿ

ಆಲ್​ರೌಂಡ್ ಅರ್ಶಿನ್​ ಅವರು ಹಾರ್ದಿಕ್ ಪಾಂಡ್ಯ ಅಭಿಮಾನಿ. ಅಂಡರ್-19 ಏಷ್ಯಾಕಪ್​ಗಾಗಿ ದುಬೈಗೆ ತೆರಳುವ ಮೊದಲು, ಅರ್ಶಿನ್ ಕುಲಕರ್ಣಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತಮ್ಮ ಆರಾಧ್ಯ ದೈವಯವಾಗಿರುವ ಹಾರ್ದಿಕ್ ಪಾಂಡ್ಯ ಅವರನ್ನು ಭೇಟಿಯಾಗಿದ್ದರು.. ಒತ್ತಡವನ್ನು ನಿಭಾಯಿಸುವ ಬಗ್ಗೆ ಸಲಹೆ ಪಡೆದಿ್ದರು. ಅಫ್ಘಾನಿಸ್ತಾನ ವಿರುದ್ಧ ಅಜೇಯ 70 ರನ್ ಗಳಿಸಿದ್ದ ಅವರು ಪಾಂಡ್ಯ ಮಾತನ್ನು ಪ್ರತಿಬಿಂಬಿಸಿದ್ದರು. ಅವರು ಸಂಯಮ ಮತ್ತು ಉತ್ತಮ ಶಾಟ್​ಗಳೊಂದಿಗೆ ಚೇಸಿಂಗ್ ಮಾಡಿದ್ದರು.

Exit mobile version