ದೋಹಾ: ಮೊಣಕಾಲು ನೋವಿನ ಸಮಸ್ಯೆಗೆ ಒಳಗಾಗಿರುವ ಬ್ರೆಜಿಲ್ ತಂಡದ ಸ್ಟಾರ್ ಆಟಗಾರ ನೇಮರ್, ಫಿಫಾ ವಿಶ್ವ ಕಪ್‌ನ ಗುಂಪು ಹಂತದ ಉಳಿದೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಗುರುವಾರ ನಡೆದ ಸರ್ಬಿಯಾ ವಿರುದ್ಧದ ಪಂದ್ಯದ ವೇಳೆ ಅವರು ಕಾಲು ಉಳುಕಿಸಿಕೊಂಡಿದ್ದರು. ಹೀಗಾಗಿ ಅವರಿಗೆ ಮುಂದಿನ ಪಂದ್ಯಗಳನ್ನು ಆಡಲು ಸಾಧ್ಯವಾಗುತ್ತಿಲ್ಲ. ಆದರೆ, ನಾಕೌಟ್ ಹಂತದ ಪಂದ್ಯಗಳಿಗೆ ಅವರು ಲಭ್ಯರಾಗಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಕೋಟ್ಯಂತರ ಸಂಖ್ಯೆಯ ನೇಮರ್ ಅಭಿಮಾನಿಗಳಿಗೆ ಬೇಸರ ಉಂಟಾಗಿದೆ.
ಬ್ರೆಜಿಲ್‌ನ ಫಾರ್ವರ್ಡ್ ಆಟಗಾರ ಗುರುವಾರ ಲುಸೈಲ್ ಸ್ಟೇಡಿಯಮ್‌ನಲ್ಲಿ ನಡೆದ ಹಣಾಹಣಿಯ ವೇಳೆಯಲ್ಲಿ ಅವರು ಗಾಯಗೊಂಡಿದ್ದರು. ಹೀಗಾಗಿ ಪಂದ್ಯ ಮುಕ್ತಾಯಕ್ಕೆ ೧೦ ನಿಮಿಷಗಳು ಬಾಕಿ ಇರುವಂತೆಯೇ ಮೈದಾನ ತೊರೆದಿದ್ದರು. ಅದಕ್ಕಿಂತ ಮೊದಲು ಅವರಿಗೆ ಐಸ್ ಪ್ಯಾಕ್ ಸೇರಿದಂತೆ ನಾನಾ ರೀತಿಯಲ್ಲಿ ಪ್ರಥಮ ಚಿಕಿತ್ಸೆಗಳನ್ನು ನೀಡಲಾಗಿತ್ತು. ಆದರೆ ಸುಧಾರಿಸಿಕೊಳ್ಳದ ಕಾರಣ ಹೋಟೆಲ್ ರೂಮ್‌ಗೆ ಮರಳಿದ್ದರು. ಆ ಬಳಿಕ ಅವರಿಗೆ ನಾನಾ ರೀತಿಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದ್ದು ಕೆಲವು ದಿನಗಳ ವಿಶ್ರಾಂತಿಗೆ ಸೂಚಿಸಲಾಗಿದೆ. ಹೀಗಾಗಿ ಅವರು ಗುಂಪು ಹಂತದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.
ಬ್ರೆಜಿಲ್ ತಂಡ ನವೆಂಬರ್ ೨೮ರಂದು ಸ್ವಿಜರ್ಲೆಂಡ್ ತಂಡದ ಸವಾಲ ಎದುರಿಸಲಿದ್ದು, ಬಳಿಕ ಕ್ಯಾಮೆರೂನ್ ತಂಡದ ವಿರುದ್ಧ ಡಿಸೆಂಬರ್ ೩ರಂದು ಆಡಬೇಕಾಗಿದೆ. ಆದರೆ, ಆ ಬಳಿಕ ನಡೆಯುವ ಪಂದ್ಯಗಳಿಗೆ ಅವರು ಲಭ್ಯರಿರುತ್ತಾರೆ.
ಇದನ್ನೂ ಓದಿ | Fifa World Cup | ಬ್ರೆಜಿಲ್ ತಂಡದ ನಾಯಕ ನೇಮರ್‌ಗೆ ಗಾಯ; ಮುಂದಿನ ಪಂದ್ಯಕ್ಕೆ ಅನುಮಾನ!