ಕಾರವಾರ: ಕಾರವಾರದ ನಿವೇದಿತಾ ಪ್ರಶಾಂತ ಸಾವಂತ ಅವರು ರಾಜ್ಯಮಟ್ಟದ ಅಥ್ಲೆಟಿಕ್ಸ್ ಕೂಟದಲ್ಲಿ ಒಂದು ಚಿನ್ನ ಹಾಗೂ ಒಂದು ಬೆಳ್ಳಿಯ ಪದಕ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಗಸ್ಟ್ 26ರಿಂದ 28ರವರೆಗೆ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ಕಂಠಿರವ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಮುಕ್ತ ಅಥ್ಲೆಟಿಕ್ ಚಾಂಪಿಯನ್‌ಷಿಪ್ ನಡೆದಿತ್ತು. ಈ ಸ್ಪರ್ಧೆಯ್ಲಲಿ ನಿವೇದಿತಾ ಪ್ರಶಾಂತ ಅವರು ಉತ್ತರ ಕನ್ನಡ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅನ್ನು ಪ್ರತಿನಿಧಿಸಿದ್ದರು.
ಮಹಿಳೆಯರ ಡಿಸ್ಕಸ್ ಎಸೆತದಲ್ಲಿ 39.92 ಮೀಟರ್ ಸಾಧನೆ ಮಾಡಿದ ನಿವೇದಿತಾಗೆ ಚಿನ್ನದ ಪದಕ ಲಭಿಸಿದರೆ, ಮಹಿಳೆಯರ ಹ್ಯಾಮರ್ ಥ್ರೋ ವಿಭಾಗದಲ್ಲಿ 43.59 ಮೀಟರ್ ಎಸೆದು ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಎರಡೂ ಸ್ಪರ್ಧೆಗಳಲ್ಲಿ ರಾಷ್ಟ್ರಮಟ್ಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಸಾಧಕಿ ನಿವೇದಿತಾ
ಕಾರವಾರದ ನಿವೇದಿತಾ ಅವರು ಇದುವರೆಗೆ ಡಿಸ್ಕಸ್ ಹಾಗೂ ಶಾಟ್‌ಪುಟ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ 9 ಚಿನ್ನ, 7 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಅಂತೆಯೇ ರಾಜ್ಯಮಟ್ಟದ ಡಿಸ್ಕಸ್ ಎಸೆತದಲ್ಲಿ ದಾಖಲೆ ನಿವೇದಿತಾ ಅವರ ಹೆಸರಲ್ಲಿದೆ. ನಿವೇದಿತಾ ಅವರು ಕಾರವಾರದ ಪ್ರಕಾಶ ರೇವಣಕರ್ ಬಳಿ ತರಬೇತಿ ಪಡೆಯುತ್ತಿದ್ದಾರೆ.
ನಿವೇದಿತಾ ಅವರ ಈ ಕ್ರೀಡಾ ಸಾಧನೆಗೆ ಉತ್ತರಕನ್ನಡ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಸದಾನಂದ ನಾಯ್ಕ, ಕಾರ್ಯದರ್ಶಿ ಕೆ.ಆರ್.ನಾಯಕ ಮತ್ತಿತರರು ಅಭಿನಂದನೆ ಸಲ್ಲಿಸಲಿದ್ದಾರೆ.