ಹೈದರಾಬಾದ್ : ಅಕ್ಟೋಬರ್ 5 ರಿಂದ ಆರಂಭವಾಗಲಿರುವ ವಿಶ್ವಕಪ್ನಲ್ಲಿ (World Cup 2023) ಆಡಲು ಪಾಕಿಸ್ತಾನ ಕ್ರಿಕೆಟ್ ತಂಡ ಭಾರತಕ್ಕೆ ಬಂದಿದೆ. ಅಭ್ಯಾಸ ಪಂದ್ಯಗಳು ಸೇರಿದಂತೆ ತಂಡದ ಕೆಲವು ಪಂದ್ಯಗಳು ಹೈದರಾಬಾದ್ನಲ್ಲಿ ನಡೆಯಲಿರುವ ಕಾರಣ ಬಾಬರ್ ಅಜಮ್ ಬಳಗ ಹೈದರಾಬಾದ್ನಲ್ಲಿ ಉಳಿದುಕೊಂಡಿದೆ. 7 ವರ್ಷಗಳ ಬಳಿಕ ಭಾರತಕ್ಕೆ ಭೇಟಿ ನೀಡಿದ ಪಾಕ್ ಬಳಗಕ್ಕೆ ಆತ್ಮೀಯ ಸ್ವಾಗತ ದೊರಕಿದೆ. ಈ ತಂಡಕ್ಕೆ ಉಳಿದೆಲ್ಲ ತಂಡಕ್ಕಿಂತ ಹೆಚ್ಚಿನ ಭದ್ರತೆಯೂ ನೀಡಲಾಗಿದೆ.
Update: No beef will be served to any team in food menu in India. Pakistan team hotel's food menu includes lamb chops, mutton curry, Hyderabadi biryani, grilled fish, butter chicken and vegetable pulao ✅
— Farid Khan (@_FaridKhan) September 28, 2023
– via NDTV & PTI #CWC23 #WorldCup2023
ಪಾಕಿಸ್ತಾನದಲ್ಲಿ ಗೋಮಾಂಸ (ಬೀಫ್) ಸಾಮಾನ್ಯ ಆಹಾರ. ಪ್ರೊಟೀನ್ಗಾಗಿ ಅಲ್ಲಿನ ಆಟಗಾರರು ಭೀಫ್ ಬಳಸುತ್ತಾರೆ. ಆದರೆ, ಭಾರತಕ್ಕೆ ಬಂದಿರುವ ಪಾಕ್ ತಂಡಕ್ಕೆ ಬೀಫ್ ಕೊಡುವುದಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ. ಶುಕ್ರವಾರ ನ್ಯೂಜಿಲೆಂಡ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯಕ್ಕೆ ಮುಂಚಿತವಾಗಿ, ಪಾಕಿಸ್ತಾನ ಕ್ರಿಕೆಟ್ ತಂಡದ ಆಹಾರ ಮೆನುವನ್ನು ಬಹಿರಂಗಪಡಿಸಲಾಗಿದೆ. ಅದರಲ್ಲಿ ಬೀಫ್ ಇಲ್ಲ ಎಂಬುದಾಗಿ ಗೊತ್ತಾಗಿದೆ.
ಸುದ್ದಿ ಸಂಸ್ಥೆಗಳ ವರದಿ ಪ್ರಕಾರ ಭಾರತದಲ್ಲಿ ಭಾಗವಹಿಸುವ ಎಲ್ಲಾ 10 ತಂಡಗಳಿಗೆ ಗೋಮಾಂಸ ಲಭ್ಯವಿರುವುದಿಲ್ಲ. ಪಾಕಿಸ್ತಾನವು ಚಿಕನ್, ಮಟನ್ ಮತ್ತು ಮೀನುಗಳಿಂದ ಪ್ರೋಟೀನ್ ಪಡೆಯುತ್ತದೆ. ತಂಡದ ಡಯಟ್ ಚಾರ್ಟ್ ಗ್ರಿಲ್ಡ್ ಲ್ಯಾಂಬ್ ಚಾಪ್ಸ್, ಮಟನ್ ಕರಿ, ಅತ್ಯಂತ ಜನಪ್ರಿಯ ಬಟರ್ ಚಿಕನ್ ಮತ್ತು ಗ್ರಿಲ್ಡ್ ಮೀನುಗಳನ್ನು ಒಳಗೊಂಡಿದೆ. ಆದರೆ, ಯಾವುದೇ ಕಾರಣಕ್ಕೆ ಭೀಫ್ ಕೊಡುವುದಕ್ಕೆ ಒಪ್ಪಿಲ್ಲ.
ಕಾರ್ಬೋಹೈಡ್ರೇಟ್ಗಳಿಗಾಗಿ ತಂಡವು ಬೇಯಿಸಿದ ಬಾಸ್ಮತಿ ಅಕ್ಕಿ, ಬೊಲೊಗ್ನೀಸ್ ಸಾಸ್ನಲ್ಲಿ ಸ್ಪಾಗೆಟ್ಟಿ ಮತ್ತು ಸಸ್ಯಾಹಾರಿ ಪಲಾವ್ ನೀಡಬೇಕು ಎಂದು ವಿನಂತಿಸಿದೆ. ಪ್ರಸಿದ್ಧ ಹೈದರಾಬಾದಿ ಬಿರಿಯಾನಿಯನ್ನು ಊಟದ ಆಯ್ಕೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಪಾಕ್ ತಂಡಕ್ಕೆ ಎರಡು ಅಭ್ಯಾಸ ಪಂದ್ಯಗಳು
ಏಕದಿನ ವಿಶ್ವಕಪ್ ಅಧಿಕೃತವಾಗಿ ಪ್ರಾರಂಭವಾಗುವ ಮೊದಲು ಪಾಕಿಸ್ತಾನವು ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಅವರು ಮೊದಲು ಶುಕ್ರವಾರ ಹೈದರಾಬಾದ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದ್ದು, ನಂತರ ಮುಂದಿನ ಮಂಗಳವಾರ ತಮ್ಮ ಎರಡನೇ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದ್ದಾರೆ.
ಪಾಕಿಸ್ತಾನದ ಏಕದಿನ ವಿಶ್ವಕಪ್ ಅಭಿಯಾನ ಅಕ್ಟೋಬರ್ 6 ರಂದು ನೆದರ್ಲ್ಯಾಂಡ್ಸ್ ವಿರುದ್ಧ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ.
ಪಾಕಿಸ್ತಾನ ತಂಡ: ಬಾಬರ್ ಅಜಮ್ (ನಾಯಕ), ಶದಾಬ್ ಖಾನ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಖರ್ ಅಹ್ಮದ್, ಸಲ್ಮಾನ್ ಅಲಿ ಆಘಾ, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಹ್ಯಾರಿಸ್ ರವೂಫ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಮ್.