ಬೆಂಗಳೂರು: ಕೆಲವು ಸಾಧನೆಗಳೇ ಹಾಗೆ. ಪರ್ವತ ಏರಿದ ಮೇಲೆ ಕೆಳಗಿನ ಇಳಿಜಾರು ನೋಡುವಾಗ ಎದೆ ಝಲ್ಲೆನ್ನುತ್ತದೆ ಈ ಸಾಧನೆ ನಿಜವೇನಾ ಎಂಬ ಬೆರಗು ಮೂಡುತ್ತದೆ. ಶಿಖರ ಸಾಧನೆ ಆತ್ಮತೃಪ್ತಿ ತರುತ್ತದೆ. ಸುಲಭವಾಗಿ ದಕ್ಕಿದ್ದು ಸಾಧನೆ ಎನಿಸಿಕೊಳ್ಳುವುದಿಲ್ಲ. ಇತಿಹಾಸ ನಿರ್ಮಾಣ ದಿನ ಬೆಳಗಾದರೆ ಸಾಧ್ಯವಾಗುವುದಿಲ್ಲ. ನೆಲದಾಳದ ಲೋಹದ ತುಣುಕು ಅಪರಂಜಿ ಚಿನ್ನವಾಗಬೇಕಾದರೆ, ಬೆಂಕಿಯಲ್ಲಿ ಬೇಯಬೇಕು. ಸಾಧಕನೂ ಅಷ್ಟೆ, ಕಷ್ಟಗಳಲ್ಲಿ ನೋಯಬೇಕು, ಸವಾಲುಗಳನ್ನೆದುರಿಸಿ ಕಾದಬೇಕು, ಬೀಳಬೇಕು, ಮೈಕೊಡವಿ ಏಳಬೇಕು.
ಯಾರೋ ಸಾಗಿದ ಕಾಲು ಹಾದಿ ಅನುಸರಿಸಿದರೆ ನಮ್ಮ ಗುರಿ ಮುಟ್ಟಲು ಸಾಧ್ಯವಿಲ್ಲ. ನಮ್ಮ ಗುರಿಯ ಮಾರ್ಗ ನಾವೆ ನಿರ್ಮಿಸಿಕೊಳ್ಳಬೇಕು. ಸಂದರ್ಭಗಳು ಹಾಗೆಯೇ ಇರುತ್ತದೆ. ಇಡೀ ಜಗತ್ತೇ ತನ್ನ ವಿರುದ್ಧವಾಗಿದೆ ಎಂಬ ಭಾವನೆ ಬಲಿಯುತ್ತಿರುತ್ತದೆ. ಕಷ್ಟಗಳು ಬರುವಾಗ ಸಾಲು ಸಾಲಾಗಿ ಬರುತ್ತದೆ. ನಿಲುಗಡೆಯೇ ಇಲ್ಲದ ಜಡಿ ಮಳೆಯಂತೆ ಹೆದರಿಸುತ್ತಿರುತ್ತವೆ. ಈಗಲೋ ಆಗಲೋ ಮುಳುಗುವಂತಿರುವ ಒಡಕಲು ದೋಣಿಯಲ್ಲಿ ದಡವೇ ಕಾಣದ ಸಾಗರ ಮಧ್ಯದಲ್ಲಿ ಅತಂತ್ರವಾದ ಅಸಹಾಯಕತೆ ಸೃಷ್ಟಿಸಿಬಿಟ್ಟಿರುತ್ತವೆ.
ಜೀವನ್ಮರಣ ಸಂದಿಗ್ಧದಲ್ಲಿ ಸಿಲುಕಿದಾಗಲೂ ಹೋರಾಡುವ, ಬದುಕುವುದಕ್ಕೊಂದು ಹೊಸ ದಾರಿಯನ್ನು ಹುಡುಕುವ ಶಕ್ತಿಯನ್ನು, ಛಾತಿಯನ್ನು ಪ್ರಕೃತಿ ಮನುಷ್ಯನಿಗೆ ಕೊಟ್ಟಿದೆ. ಕೋಟೆಯ ಎಲ್ಲ ಬಾಗಿಲುಗಳನ್ನು ಮುಚ್ಚಿದರೂ, ಬೆಳಕು ತೂರುವುದಕ್ಕೊಂದು ಸಣ್ಣ ಕಿಂಡಿ ಇದ್ದರು ಸಾಕು ಜೀವನ ಹೋರಾಟ ಮುಂದುವರೆಸುವುದಕ್ಕೆ. ಇದಕ್ಕೆ ಜಮ್ಮು ಕಾಶ್ಮೀರದ ಅಮೀರ್ ಹುಸೈನ್ ಲೋನ್(Amir Hussain Lone) ಅವರ ಸಾಧನೆಯೇ ಉತ್ತಮ ನಿದರ್ಶನ.
ದುರಂತದಲ್ಲಿ ಕೈ ಕಳೆದುಕೊಂಡ ಅಮೀರ್…
ಹೌದು, 24 ವರ್ಷದ ಅಮೀರ್ ಹುಸೈನ್ ಲೋನ್ ಎರಡೂ ಕೈಗಳು ಇಲ್ಲದಿದ್ದರೂ ಕೂಡ ಅದ್ಭುತವಾಗಿ ಕ್ರಿಕೆಟ್ ಆಡುತ್ತಾರೆ. ತನ್ನ ಕಾಲಿನಿಂದ ಬೌಲಿಂಗ್ ಮಾಡುತ್ತಾರೆ. ಅವರ ಈ ಸಾಹಸದ ವಿಡಿಯೊ ಎಲ್ಲಡೆ ವೈರಲ್ ಆಗಿದೆ. ಹುಟ್ಟುವಾಗ ಎಲ್ಲರಂತೆ ಸಹಜವಾಗಿ ಎರಡು ಕೈಗಳ ಸಮೇತವೇ ಹುಟ್ಟಿದ ಅಮೀರ್ ತನ್ನ ಕೈಗಳನ್ನು ಕಳೆದುಕೊಂಡದ್ದು ಒಂದು ದುರಂತದಲ್ಲಿ. 8 ವರ್ಷದವರಿದ್ದಾಗ ತನ್ನ ತಂದೆಯ ಮರದ ಮಿಲ್ಲೊಂದರಲ್ಲಿ ಇದ್ದ ಯಂತ್ರವೊಂದಕ್ಕೆ ಕೈಗಳು ಸಿಲುಕಿ ಅಮೀರ್ ತಮ್ಮ ಎರಡು ಕೈಗಳನ್ನು ಕಳೆದುಕೊಂಡರು.
ಇದನ್ನೂ ಓದಿ ವಿಸ್ತಾರ ಸಂಪಾದಕೀಯ: ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ, ಯುವ ಕ್ರಿಕೆಟಿಗರಿಗೆ ಸ್ಫೂರ್ತಿ
#WATCH | Anantnag, J&K: 34-year-old differently-abled cricketer from Waghama village of Bijbehara. Amir Hussain Lone currently captains Jammu & Kashmir's Para cricket team. Amir has been playing cricket professionally since 2013 after a teacher discovered his cricketing talent… pic.twitter.com/hFfbOe1S5k
— ANI (@ANI) January 12, 2024
ಬದುಕುವ ಛಲ ಬಿಡದ ಅವರು ಈ ಆಘಾತದಿಂದ ನಿಧಾನವಾಗಿ ಚೇತರಿಸಿಕೊಂಡ ಬಳಿಕ ತನ್ನ ಎಲ್ಲ ಕೆಲಸಗಳನ್ನು ಕಾಲುಗಳಿಂದ ಮಾಡಲು ಅಭ್ಯಾಸ ಮಾಡಿಕೊಂಡರು. ತಮ್ಮ ಗೆಳೆಯರೊಂದಿಗೆ ಕ್ರಿಕೆಟ್ ಕೂಡ ಆಡಲು ಆರಂಭಿಸಿದರು. ಹೀಗೆ ಹಂತ ಹಂತವಾಗಿ ಕ್ರಿಕೆಟ್ ಕೌಶಲವನ್ನು ಹೆಚ್ಚಿಸಿಕೊಂಡ ಅಮೀರ್ ಈಗ ಕಾಶ್ಮೀರ ಪ್ಯಾರಾ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ.
ಬದುಕು ಬದಲಿಸಿದ ಶಿಕ್ಷಕ…
ಜಮ್ಮು ಕಾಶ್ಮೀರದ ಬಿಜ್ಬೆಹರಾದ ವಘಮ್ ಗ್ರಾಮದ ನಿವಾಸಿಯಾದ ಅಮೀರ್ ಅವರನ್ನು ಕ್ರಿಕೆಟ್ ಆಟಗಾರನಾಗಿ ಮಾಡುವಲ್ಲಿ ಶಿಕ್ಷಕರೊಬ್ಬರ ಪಾತ್ರ ಮುಖ್ಯವಾಗಿತ್ತು. ಶಾಲಾ ದಿನಗಳಲ್ಲಿಯೇ ಕೈ ಇರದಿದ್ದರೂ ಕೂಡ ಕ್ರಿಕೆಟ್ ಆಡಲು ಪ್ರಯತ್ನಿಸುತ್ತಿರುವುದನ್ನು ಕಂಡ ಶಿಕ್ಷಕರೊಬ್ಬರು ಈತನನ್ನು ಕಾಶ್ಮೀರದ ಪ್ಯಾರಾ ಕ್ರಿಕೆಟ್ ಟೀಮ್‌ಗೆ ಪರಿಚಯಿಸಿದ್ದರು. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಅಮೀರ್ ಈಗ ಕಾಶ್ಮೀರ ಪ್ಯಾರಾ ಕ್ರಿಕೆಟ್ ತಂಡದ ನಾಯಕನಾಗಿ ಮಿಂಚಿದ್ದಾರೆ.
ಅಮೀರ್ ತನ್ನ ಕತ್ತು ಮತ್ತು ಭುಜದ ಸಹಾಯದಿಂದ ಬ್ಯಾಟಿಂಗ್ ನಡೆಸುತ್ತಾರೆ. ಕಾಲಿನ ಬೆರಳುಗಳ ಮಧ್ಯೆ ಚೆಂಡನ್ನು ಸಿಕ್ಕಿಸಿ ಬೌಲಿಂಗ್ ಮಾಡುವ ಛಾತಿ ಹೊಂದಿದ್ದಾರೆ. ಅವರ ಕ್ರಿಕೆಟ್ ಬದುಕಿನ ಸಂಪೂರ್ಣ ಚಿತ್ರಣವನ್ನು ಎಎನ್ಐ ವಿಶೇಷ ಎಪಿಸೋಡ್ ಮೂಲಕ ಜಗತ್ತಿಗೆ ಪರಿಚಯಿಸಿದೆ. ಅಮೀರ್ ಅವರನ್ನು ವಿಶೇಷ ಸಂದರ್ಶನ ಮಾಡಿದ ಮತ್ತು ಅವರು ಯಾವ ರೀತಿ ಕ್ರಿಕೆಟ್ ಆಡುತ್ತಾರೆ ಎನ್ನುವ ವಿಡಿಯೊವನ್ನು ಎಎನ್ಐ ತನ್ನ ಟ್ವಿಟರ್ ಎಕ್ಸ್ನಲ್ಲಿ ಹಂಚಿಕೊಂಡಿದೆ.
ಸಿನೆಮಾ ಆಗಲಿದೆ ಅಮೀರ್ ಸಾಹಸಗಾಥೆ
ಅಮೀರ್ ಅವರ ಸಾಹಸಗಾಥೆಯನ್ನು ಸಿನಿಮಾ ಮಾಡಲು ಬಾಲಿವುಡ್‌ನ ಪ್ರಸಿದ್ಧ ಚಲನಚಿತ್ರ ನಿರ್ಮಾಣ ಸಂಸ್ಥೆ ಪಿಕಲ್ ಎಂಟರ್‌ಟೈನ್‌ಮೆಂಟ್ ಮುಂದೆ ಬಂದಿದೆ. ಈ ಸಿನೆಮಾಗೆ ಅಮೀರ್ ಎಂದು ಹೆಸರಿಡಲು ಚಿತ್ರ ತಂಡ ನಿರ್ಧರಿಸಿದೆ. ಈ ಸಿನಿಮಾಗೆ ಬಿಗ್ ಬ್ಯಾಟ್ ಸಂಸ್ಥೆ ಬಂಡವಾಳ ಹೂಡುತ್ತಿದ್ದು, ಮಹೇಶ್ ವಿ ಭಟ್ ನಿರ್ದೇಶನ ಮಾಡಲಿದ್ದಾರೆ.