Site icon Vistara News

US Open 2023: ಯುಎಸ್‌ ಓಪನ್‌ ಗೆದ್ದು ದಾಖಲೆ ಬರೆದ ನೊವಾಕ್‌ ಜೋಕೊವಿಕ್; ಇತಿಹಾಸಕ್ಕೆ ಇನ್ನೊಂದೇ ಹೆಜ್ಜೆ ಬಾಕಿ

Novak Djokovic US Open 2023

Novak Djokovic Beats Daniil Medvedev At US Open 2023 To Win Record-Tying 24th Grand Slam

ವಾಷಿಂಗ್ಟನ್:‌ ಟೆನಿಸ್‌ ಜಗತ್ತಿನ ದಿಗ್ಗಜರಲ್ಲಿ ಒಬ್ಬರಾದ ನೊವಾಕ್‌ ಜೋಕೊವಿಕ್ (Novak Djokovic) ಅವರು ಅಮೆರಿಕ ಓಪನ್‌ ಸಿಂಗಲ್ಸ್‌ (US Open 2023) ಪ್ರಶಸ್ತಿಯನ್ನು ಗೆಲ್ಲುವ ಮೂಲಕ ವಿಶಿಷ್ಟ ದಾಖಲೆ ಬರೆದಿದ್ದಾರೆ. ಟೆನಿಸ್‌ ಇತಿಹಾಸದಲ್ಲಿಯೇ ಅತಿಹೆಚ್ಚು ಗ್ರ್ಯಾನ್‌ಸ್ಲ್ಯಾಮ್‌ಗಳನ್ನು ಗೆದ್ದ ಮಾರ್ಗರೇಟ್‌ ಕೋರ್ಟ್‌ ಅವರ ದಾಖಲೆಯನ್ನು ಸರ್ಬಿಯಾ ಆಟಗಾರ ಸರಿಗಟ್ಟಿದ್ದಾರೆ. ಮಾರ್ಗರೇಟ್‌ ಕೋರ್ಟ್‌ ಅವರು 24 ಗ್ರ್ಯಾನ್‌ಸ್ಲ್ಯಾಮ್‌ ಸಿಂಗಲ್ಸ್‌ ಪ್ರಶಸ್ತಿ ಗೆದ್ದಿದ್ದರು. ಈಗ ಜೋಕೊವಿಕ್‌ ಅವರು ಕೂಡ 24ನೇ ಗ್ರ್ಯಾನ್‌ಸ್ಲ್ಯಾಮ್‌ ಗೆಲ್ಲುವ ಮೂಲಕ ಟೆನಿಸ್‌ ದಂತಕತೆಯ ದಾಖಲೆ ಸರಿಗಟ್ಟಿದ್ದಾರೆ. ಇನ್ನೊಂದು ಗ್ರ್ಯಾನ್‌ಸ್ಲ್ಯಾಮ್‌ ಗೆದ್ದರೆ ನೊವಾಕ್‌ ಜೋಕೊವಿಕ್‌ ಸಾರ್ವಕಾಲಿಕ ದಾಖಲೆ ಬರೆಯಲಿದ್ದಾರೆ.

ನ್ಯೂಯಾರ್ಕ್‌ನ ಅರ್ಥುರ್‌ ಆ್ಯಶ್‌ ಸ್ಟೇಡಿಯಂನಲ್ಲಿ (Arthur Ashe Stadium) ನಡೆದ ಯುಎಸ್‌ ಓಪನ್‌ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ರಷ್ಯಾದ ಡ್ಯಾನಿಲ್‌ ಮಡ್ವೆಡೆವ್‌ ವಿರುದ್ಧ 6-3, 7-6 (7/5), 6-3 ನೇರ ಸೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ನೊವಾಕ್‌ ಜೋಕೊವಿಕ್‌ ಇತಿಹಾಸ ಸೃಷ್ಟಿಸಿದರು. ಜೋಕೊವಿಕ್‌ ಅವರ ಗ್ರ್ಯಾನ್‌ಸ್ಲ್ಯಾಮ್‌ಗಳಲ್ಲಿ 4 ಯುಎಸ್‌ ಓಪನ್‌, 10 ಆಸ್ಟ್ರೇಲಿಯಾ ಓಪನ್‌, 7 ವಿಂಬಲ್ಡನ್‌ ಹಾಗೂ 3 ಫ್ರೆಂಚ್‌ ಓಪನ್‌ ಸಿಂಗಲ್ಸ್‌ ಪ್ರಶಸ್ತಿಗಳಿವೆ.

ಮೆಡ್ವೆಡೆವ್‌ ವಿರುದ್ಧ ಸೇಡು ತೀರಿಸಿಕೊಂಡ ಜೋಕೊ

ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ವಿರುದ್ಧ ನೇರ ಸೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ನೊವಾಕ್‌ ಜೋಕೊವಿಕ್‌ ಅವರು ಎರಡು ವರ್ಷಗಳ ಹಿಂದಿನ ಸೋಲಿನ ಸೇಡು ತೀರಿಸಿಕೊಂಡರು. ನೊವಾಕ್‌ ಜೋಕೊವಿಕ್‌ ಅವರನ್ನು ಡ್ಯಾನಿಲ್‌ ಮೆಡ್ವೆಡೆವ್‌ ಅವರನ್ನು ನೇರ ಸೆಟ್‌ಗಳ ಅಂತರದಲ್ಲಿ ಸೋಲಿಸಿದ್ದರು. ಈಗ ಮೆಡ್ವೆಡೆವ್‌ ಅವರನ್ನು ನೇರ ಸೆಟ್‌ಗಳ ಅಂತರದಲ್ಲಿ ಸೋಲಿಸಿದ ನೊವಾಕ್‌ ಸೇಡು ತೀರಿಸಿಕೊಂಡರು. ಹಾಗೆಯೇ, ಎರಡು ತಿಂಗಳ ಹಿಂದಷ್ಟೇ ವಿಂಬಲ್ಡನ್‌ನಲ್ಲಿ ಕಾರ್ಲೋಸ್‌ ಅಲ್ಕರಾಜ್‌ ವಿರುದ್ಧ ಸೋತ ಕಹಿ ಕೂಡ ಜೋಕೊವಿಕ್‌ ಅವರದ್ದಾಗಿತ್ತು.

ಇದನ್ನೂ ಓದಿ: US Open 2023: ರನ್ನರ್​ ಅಪ್​ ಸ್ಥಾನ ಪಡೆದ ಬೋಪಣ್ಣ-ಎಬ್ಡೆನ್‌ ಜೋಡಿ

ಖುಷಿ ಹಂಚಿಕೊಂಡ ಜೋಕೊವಿಕ್‌

ಯುಎಸ್‌ ಓಪನ್‌ ಸಿಂಗಲ್ಸ್‌ ಪ್ರಶಸ್ತಿ ಸ್ವೀಕರಿಸುವ ವೇಳೆ ನೊವಾಕ್‌ ಜೋಕೊವಿಕ್‌ ಖುಷಿ ಹಂಚಿಕೊಂಡರು. “ಟೆನಿಸ್‌ನಲ್ಲಿ ಇತಿಹಾಸ ಸೃಷ್ಟಿಸುವುದು ನಿಜವಾಗಿಯೂ ವಿಶೇಷ. ನಾನು 24 ಗ್ರ್ಯಾನ್‌ಸ್ಲ್ಯಾಮ್‌ಗಳನ್ನು ಗೆಲ್ಲುತ್ತೇನೆ ಎಂದು ಎಂದಿಗೂ ಅಂದುಕೊಂಡಿರಲಿಲ್ಲ. ಇದು ಎಂದಿಗೂ ಈಡೇರದ ಕನಸು ಎಂದುಕೊಂಡಿದ್ದೆ. ಆದರೆ, ಕಳೆದ ಎರಡು ವರ್ಷಗಳಿಂದ ನನಗೂ ಈ ಅವಕಾಶ ಇದೆ, ನಾನೂ ಸಾಧಿಸಬಹುದು ಎಂಬ ವಿಶ್ವಾಸ ಮೂಡಿತು. ಈಗ ಪ್ರಶಸ್ತಿಯನ್ನು ಕೈಯಲ್ಲಿ ಹಿಡಿದಿರುವುದು ಖುಷಿ ತಂದಿದೆ” ಎಂದು ಹೇಳಿದ್ದಾರೆ.

Exit mobile version