Site icon Vistara News

Wimbledon 2023 : ಸೋಲಿನ ಹತಾಶೆಗೆ ರ್ಯಾಕೆಟ್​ ಪುಡಿಗಟ್ಟಿದ ಜೊಕೊವಿಕ್​! ಮುಂದೇನಾಯಿತು?

Novak Djokovic

ಲಂಡನ್​: ಜೊಕೊವಿಕ್​​ಗೆ ವಿಂಬಲ್ಡನ್​ 2023 (Wimbledon 2023) ಭಾರೀ ನಿರಾಸೆಯಾಗಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸರ್ಬಿಯಾದ ಆಟಗಾರನನ್ನು ಸ್ಪೇನ್​ನ ಯುವ ಪ್ರತಿಭೆ ಕಾರ್ಲೊಸ್​ ಅಲ್ಕಜಾರ್​ 1-6, 7-6 (8/6), 6-1, 3-6, 6-4 ಸೆಟ್ ಗಳಿಂದ ಸೋಲಿಸಿ ಟ್ರೋಫಿ ಗೆದ್ದುಕೊಂಡರು. ಸ್ಪೇನ್ ಆಟಗಾರನ ಪಾಲಿಗೆ ಅದು ಚೊಚ್ಚಲ ವಿಂಬಲ್ಡನ್​ ಪ್ರಶಸ್ತಿ. ಈ ಮೂಲಕ ದಾಖಲೆಗಳ ಸರದಾರನಿಗೆ ಭರ್ಜರಿ ಹಿನ್ನಡೆ ಉಂಟಾಯಿತು. ಸೋಲಿನ ಬಗ್ಗೆ ಸಕಾರಾತ್ಮಕ ಭಾವನೆಯನ್ನು ಎಂದೂ ಹೊಂದದ ನೊವಾಕ್​ ವಿಂಬಲ್ಡನ್ ಅಂಗಣದಲ್ಲೂ ದುರ್ವರ್ತನೆ ಪ್ರದರ್ಶಿಸಿದರು. ರ್ಯಾಕೆಟ್​ ನೆಟ್​ಗೆ ಬಡಿಯುವುದು ಸೇರಿದಂತೆ ಎಲ್ಲ ರೀತಿಯ ತಪ್ಪುಗಳನ್ನು ಎಸಗಿದರು. ಟೆನಿಸ್​ ನಿಯಮಗಳನ್ನು ಉಲ್ಲಂಘಿಸಿ ದಂಡ ಹಾಕಿಸಿಕೊಂಡರು. ಅವರ ದುರ್ವರ್ತನೆಯನ್ನು ಪ್ರೇಕ್ಷಕರು ಖಂಡಿಸಿದರು. ಒಂದಿನಿತೂ ಬೆಂಬಲ ಅವರಿಗೆ ಕೊಡಲಿಲ್ಲ.

ಈ ಸೋಲಿನೊಂದಿಗೆ ಆಲ್ ಇಂಗ್ಲೆಂಡ್ ಕ್ಲಬ್​​ನಲ್ಲಿ ದಾಖಲೆಯ ಎಂಟನೇ ಪ್ರಶಸ್ತಿ ಮತ್ತು 24 ನೇ ಗ್ರ್ಯಾಂಡ್ ಸ್ಲಾಮ್ ಕಿರೀಟವನ್ನು ಗೆಲ್ಲುವ 36 ವರ್ಷದ ಜೊಕೊವಿಕ್ ಅವರ ಪ್ರಯತ್ನವನ್ನು ಫಲಿಸಲಿಲ್ಲ. ಇದು ಒಂದು ದಶಕದಲ್ಲಿ ಸೆಂಟರ್ ಕೋರ್ಟ್ ನಲ್ಲಿ ಸರ್ಬಿಯಾದ ಆಟಗಾರನ ಮೊದಲ ಸೋಲು.

ಮೊದಲ ಸೆಟ್​ನಲ್ಲಿ ಹಿನ್ನಡೆ ಹೊಂದಿದ ನಂತರ ಅಲ್ಕರಾಜ್ ಅದ್ಭುತ ಪ್ರದರ್ಶನವನ್ನು ನೀಡಿದರು. ನಂತರ ಅವರು ಎರಡನೇ ಸೆಟ್ ಪಾಯಿಂಟ್ ಉಳಿಸಲು ಹೋದರು, ಮತ್ತು ಮೂರನೇ ಸೆಟ್​ನಲ್ಲಿ ಸರ್ಬಿಯಾ ಆಟಗಾರನ ಮೇಲೇ ಮೇಲುಗೈ ಸಾಧಿಸಿದರು. ಜೊಕೊವಿಕ್ ನಾಲ್ಕನೇ ಸೆಟ್​​ನಲ್ಲಿ ಉತ್ತಮ ಹೋರಾಟ ನೀಡಿ ಗೆದ್ದರು. ಈ ನಿರೀಕ್ಷೆ ಪ್ರೇಕ್ಷಕರಿಗೆ ಇತ್ತು. ಆದಾಗ್ಯೂ, ಅಲ್ಕರಾಜ್ ತಮ್ಮ ಉತ್ಸಾಹ ಕಳೆದುಕೊಳ್ಳಲಿಲ್ಲ. ಅಂತಿಮ ಸೆಟ್ 6-4 ರಿಂದ ಗೆದ್ಮುದು ವಿಜಯೋತ್ಸವ ಆಚರಿಸಿದರು.

ಇದನ್ನೂ ಓದಿ : Wimbledon 2023: ಗ್ರ್ಯಾನ್‌ ಸ್ಲಾಂ ಸರದಾರ ಜೊಕೋವಿಕ್‌ ಮಣಿಸಿ ವಿಂಬಲ್ಡನ್ ಗೆದ್ದ ಬಿಸಿರಕ್ತದ ತರುಣ ಅಲ್ಕರಾಜ್‌

ಅಲ್ಕರಾಜ್ ಪೂರ್ಣ ಪ್ರತಿಭೆ ಎಂಬುದನ್ನು ಪಂದ್ಯ ಮುಗಿದ ನಂತರ ಜೊಕೊವಿಕ್ ಒಪ್ಪಿಕೊಂಡರು. ಆದರೆ ಪಂದ್ಯದ ಸಮಯದಲ್ಲಿ ಅವರು ಈ ಸ್ಫೂರ್ತಿಯನ್ನು ಪ್ರದರ್ಶಿಸಲಿಲ್ಲ. ಹಿನ್ನಡೆಯ ಪ್ರತಿ ಕ್ಷಣವೂ ಕೋಪ ತೋರಿಸಿದರು. ರ್ಯಾಕೆಟ್​ ಪುಡಿಗಟ್ಟಿದರು. ಇದು ಆಯೋಜಕರಿಗೆ ಹಾಗೂ ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ. ಅಂತಿಮ ಸೆಟ್ ನ ಮೂರನೇ ಗೇಮ್ ನಲ್ಲಿ ಅಲ್ಕರಾಜ್ ತನ್ನ ಸರ್ವ್ ಮುರಿದಾಗ ನೊವಾಕ್​ ಈ ವರ್ತನೆ ತೋರಿದರು. ತಮ್ಮ ಸೀಟ್​ ಕಡೆಗೆ ಸಾಗುತ್ತಿದ್ದಂತೆ, ಜೊಕೊವಿಕ್ ತಮ್ಮ ರ್ಯಾಕೆಟ್ ಅನ್ನು ನಟ್​​ ಕಟ್ಟಿದ ಕಂಬಕ್ಕೆ ಹೊಡೆದರು. ರ್ಯಾಕೆಟ್​ ಅನ್ನು ಸಂಪೂರ್ಣವಾಗಿ ಮುರಿದು ಹಾಕಿದರು.

23 ಗ್ರ್ಯಾನ್​ ಸ್ಲಾಮ್ ಪ್ರಶಸ್ತಿ ಗೆದ್ದಿರುವ ನೊವಾಕ್​​ಗೆ ಚೇರ್​ ಅಂಪೈರ್ ಫರ್ಗುಸ್ ಮರ್ಫಿ ತಕ್ಷಣವೇ ಎಚ್ಚರಿಕೆ ನೀಡಿದರು. ಜೋಕೋವಿಕ್ ಅವರ ಆನ್-ಕೋರ್ಟ್ ವರ್ತನೆಗಳು ಪ್ರೇಕ್ಷಕರಿಗೆ ಸರಿ ಹೊಂದಲಿಲ್ಲ. ಅವರೆಲ್ಲರೂ ಇನ್ನಷ್ಟು ತಮಾಷೆ ಮಾಡಿ ಅವರನ್ನು ಕೆರಳಿಸಿದರು. ಪಂದ್ಯದ ಬಳಿಕವೂ ನೆಟ್ಟಿಗರು ನೊವಾಕ್​ ವರ್ತನೆ ಬಗ್ಗೆ ಕಿಡಿ ಕಾರಿದರು. ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.

ಅಲ್ಕರಾಜ್​ಗೆ ಅಭಿನಂದನೆ

ಫೈನಲ್ ಪಂದ್ಯದಲ್ಲಿ ಆಡಬೇಕಾಗಿರುವ ಗುಣಮಟ್ಟದ ಆಟವನ್ನು ಆಡಿದ್ದೀರಿ. ನೀವು ಪ್ರಶಸ್ತಿಗೆ ಸಂಪೂರ್ಣವಾಗಿ ಅರ್ಹರಾಗಿದ್ದೀರಿ ಎಂದು ಜೊಕೊವಿಕ್ ತಮ್ಮ ಎರಡನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದ 20 ವರ್ಷದ ಅಲ್ಕರಾಜ್ ಬಗ್ಗೆ ಹೊಗಳಿದ್ದಾರೆ. ಆದರೆ, ಅವರ ವರ್ತನೆ ಮಾತ್ರ ಯಾರಿಗೂ ಹಿಡಿಸಲಿಲ್ಲ.

Exit mobile version