Site icon Vistara News

Novak Djokovic: ರ‍್ಯಾಕೆಟ್ ಎಸೆದು ದುರ್ವರ್ತನೆ ತೋರಿದ ಜೋಕೊವಿಕ್​ಗೆ ಬಿತ್ತು ಭಾರಿ ಮೊತ್ತದ ದಂಡ

Novak Djokovic smashes his racquet on net pole

ಲಂಡನ್​: ಕಳೆದ ಭಾನುವಾರ ನಡೆದ ವಿಂಬಲ್ಡನ್​ ಫೈನಲ್​(Wimbledon 2023 Final) ಪಂದ್ಯದಲ್ಲಿ ರ‍್ಯಾಕೆಟ್ ಎಸೆದು ದುರ್ವರ್ತನೆ ತೋರಿದ ಸರ್ಬಿಯಾದ 23 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಸರದಾರ ನೊವಾಕ್ ಜೋಕೊವಿಕ್​ಗೆ(Novak Djokovic) ವಿಂಬಲ್ಡನ್ ದಂಡ ವಿಧಿಸಿದೆ. ಪ್ರತಿಷ್ಠಿತ ಶಿಸ್ತಿನ ಟೂರ್ನಿಯಲ್ಲಿ ದುರ್ವರ್ತನೆ ತೋರಿದಕ್ಕೆ ಜೋಕೊಗೆ ಆಯೋಜಕರು 8000 ಅಮೆರಿಕನ್‌ ಡಾಲರ್‌(ಅಂದಾಜು 6.5 ಲಕ್ಷ ರೂ.) ದಂಡ ಹಾಕಿದ್ದಾರೆ.

ಕಾರ್ಲೋಸ್‌ ಅಲ್ಕರಾಜ್‌ಗೆ(Carlos Alcaraz) ಅಂಕ ಬಿಟ್ಟುಕೊಟ್ಟ ಸಿಟ್ಟಿನಲ್ಲಿ ಜೋಕೊವಿಕ್ ತಮ್ಮ ರ‍್ಯಾಕೆಟನ್ನು ನೆಟ್‌ನ ಕಂಬಕ್ಕೆ ಎಸೆದು ಸಿಟನ್ನು ಹೊರಹಾಕಿದ್ದರು. ಈ ದುರ್ವರ್ತನೆಗೆ ಇದೀಗ ಟೂರ್ನಿಯ ಆಯೋಜಕರು 6.5 ಲಕ್ಷ ರೂ ದಂಡ ಹಾಕಿದ್ದಾರೆ. ಇದು 2023ರಲ್ಲಿ ಆಟಗಾರನೊಬ್ಬನಿಗೆ ವಿಧಿಸಿದ ಅಧಿಕ ಮೊತ್ತದ ದಂಡ ಎನಿಸಿದೆ.

ಪಂದ್ಯದ ಅಂತಿಮ ಸೆಟ್​ನ ಮೂರನೇ ಗೇಮ್​ನಲ್ಲಿ ಅಲ್ಕರಾಜ್ ತನ್ನ ಸರ್ವ್ ಮುರಿದಾಗ ಜೋಕೊ​ ಈ ವರ್ತನೆ ತೋರಿದ್ದರು. ತಮ್ಮ ಸೀಟ್​ ಕಡೆಗೆ ಸಾಗುತ್ತಿದ್ದಂತೆ, ಜೋಕೊ ತಮ್ಮ ರ‍್ಯಾಕೆಟನ್ನು ನಟ್​​ ಕಟ್ಟಿದ ಕಂಬಕ್ಕೆ ಹೊಡೆದು ಸಂಪೂರ್ಣವಾಗಿ ನಜ್ಜುಗುಜ್ಜು ಮಾಡಿದ್ದರು. ಜತೆಗೆ ಅಂಪೈರ್​ ಜತೆಗೂ ವಾಗ್ವಾದ ನಡೆಸಿ ಹಕವು ತಪ್ಪುಗಳನ್ನು ಎಸಗಿದ್ದರು.

ಇದನ್ನೂ ಓದಿ Carlos Alcazar: ಟೆನಿಸ್​ ಲೋಕದ ಯುವತಾರೆ ಅಲ್ಕರಾಜ್​ ಬಗ್ಗೆ ನಿಮಗೆಷ್ಟು ಗೊತ್ತು?

24ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಜಯಿಸಿ ನೂತನ ಇತಿಹಾಸ ನಿರ್ಮಿಸುವ ಉತ್ಸಾಹದಲ್ಲಿದ್ದ 36 ವರ್ಷದ ನೊವಾಕ್‌ ಜೊಕೋವಿಕ್‌ಗೆ ಕೇವಲ 20 ವರ್ಷದ ಕಾರ್ಲೋಸ್‌ ಅಲ್ಕರಾಜ್‌ ಗಾರ್ಫಿಯ ಎಂಬ ಸ್ಪ್ಯಾನಿಶ್‌ ಆಟಗಾರ ಸೋಲಿನ ಆಘಾತವಿಕ್ಕಿ ಚೊಚ್ಚಲ ವಿಂಬಲ್ಡನ್​ ಟ್ರೋಫಿಯನ್ನು ಎತ್ತಿಹಿಡಿದ್ದಿದ್ದರು. ನಾಲ್ಕೂವರೆ ಗಂಟೆಗಳ ಹೋರಾಟದಲ್ಲಿ ಅಲ್ಕರಾಜ್‌ ಅವರು 1-6, 7-6 (8-6), 6-1, 3-6, 6-4 ಅಂತರದಿಂದ ಜೋಕೊ ಅವರನ್ನು ಮಣಿಸಿದ್ದರು. ಕಾರ್ಲೋಸ್‌ ಅಲ್ಕರಾಜ್‌ ಗ್ರ್ಯಾನ್‌ಸ್ಲಾಮ್‌ ಫೈನಲ್‌ನಲ್ಲಿ ನೊವಾಕ್‌ ಜೊಕೋವಿಕ್‌ ವಿರುದ್ಧ 5 ಸೆಟ್‌ಗಳ ಹೋರಾಟ ನಡೆಸಿ ಗೆದ್ದ ಕೇವಲ 2ನೇ ಆಟಗಾರ ಎನಿಸಿದರು. 2012ರ ಯುಎಸ್‌ ಓಪನ್‌ ಫೈನಲ್‌ನಲ್ಲಿ ಆ್ಯಂಡಿ ಮರ್ರೆ ಈ ಸಾಧನೆಗೈದಿದ್ದರು.

Exit mobile version