ಚೆನ್ನೈ: ಸ್ಪಿನ್ ಟ್ರ್ಯಾಕ್ನಲ್ಲಿ ಅಮೋಘ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ತೋರಿದ ನ್ಯೂಜಿಲ್ಯಾಂಡ್(New Zealand vs Afghanistan) ತಂಡ ಅಫಘಾನಿಸ್ತಾನ ವಿರುದ್ಧ 149 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಇದು ಕಿವೀಸ್ಗೆ ಒಲಿದ ಸತತ ನಾಲ್ಕನೇ ಗೆಲುವು. ಈ ಗೆಲುವಿನೊಂದಿಗೆ ನ್ಯೂಜಿಲ್ಯಾಂಡ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಮೊದಲು ಅಗ್ರಸ್ಥಾನದಲ್ಲಿದ್ದ ಭಾರತ ದ್ವಿತೀಯ ಸ್ಥಾನಕ್ಕೆ ಕುಸಿದಿದೆ.
ಚೆನ್ನೈಯ ಎಂ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ನ್ಯೂಜಿಲ್ಯಾಂಡ್ ಆರಂಭಿಕ ಆಘಾತದ ಬಳಿಕ ಚೇತರಿಸಿಕೊಂಡು ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ಗೆ 288 ರನ್ ಪೇರಿಸಿತು. ಜವಾಬು ನೀಡಿದ ಅಫಘಾನಿಸ್ತಾನ ನಾಟಕೀಯ ಕುಸಿತ ಕಂಡು 34.4 ಓವರ್ಗಳಲ್ಲಿ 139 ರನ್ಗೆ ಸರ್ವಪತನ ಕಂಡಿತು. ಕಳೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಮಣಿಸಿದ ಅಫಘಾನಿಸ್ತಾನದ ಮೇಲೆ ಈ ಪಂದ್ಯದಲ್ಲಿ ಬಾರಿ ನಿರೀಕ್ಷೆಯೊಂದನ್ನು ಇರಿಸಲಾಗಿತ್ತು. ಆದರೆ ಅದು ಹುಸಿಯಾಗಿದೆ. ಆಫ್ಘನ್ 149 ರನ್ಗಳ ಹೀನಾಯ ಸೋಲು ಕಂಡಿದೆ.
ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಆಫ್ಘನ್ ತಂಡಕ್ಕೆ ಕಿವೀಸ್ನ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಮತ್ತು ವೇಗಿ ಲಾಕಿ ಫರ್ಗ್ಯುಸನ್ ಸೇರಿಕೊಂಡು ಪ್ರಬಲ ಹೊಡೆದ ನೀಡಿದರು. ಉಭಯ ಆಟಗಾರರು ತಲಾ ಮೂರು ವಿಕೆಟ್ ಕಿತ್ತು ಕಿವೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇವರಿಗೆ ಟ್ರೆಂಟ್ ಬೌಲ್ಟ್ 2 ವಿಕೆಟ್ ಕಿತ್ತು ಉತ್ತಮ ಸಾಥ್ ನೀಡಿದರು.
ಆಫ್ಘನ್ನ ಹೊಡಿ ಬಡಿ ಆಟಗಾರರಾದ ರಹಮಾನುಲ್ಲಾ ಗುರ್ಬಾಜ್(11), ಇಬ್ರಾಹಿಂ ಜದ್ರಾನ್(14) ಮೊಹಮ್ಮದ್ ನಬಿ(7) ಮತ್ತು ರಶೀದ್ ಖಾನ್(8) ಅವರು ವಿಫಲಗೊಂಡದ್ದು ತಂಡದ ಹಿನ್ನಡೆಗೆ ಕಾರಣವಾಯಿತು. ಇವರಲ್ಲಿ ಕನಿಷ್ಠ ಇಬ್ಬರು ಸಿಡಿದು ನಿಲ್ಲುತ್ತಿದ್ದರೂ ಆಫ್ಘನ್ ಸ್ಮರಣೀಯ ಗೆಲುವು ಸಾಧಿಸಬಹುದಿತ್ತು. 36 ರನ್ ಗಳಿಸಿದ ರಹಮ್ಮತ್ ಶಾ ಅವರದ್ದೇ ಅತ್ಯಧಿಕ ಗಳಿಕೆ.
ಇದನ್ನೂ ಓದು IND vs BAN: ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿ ಭಾರತ; ಬಾಂಗ್ಲಾ ಎದುರಾಳಿ
New Zealand continue their unbeaten run in #CWC23 with yet another emphatic win in Chennai 👊#NZvAFG 📝: https://t.co/2MEcSjgyXA pic.twitter.com/r6tiqMz7HA
— ICC Cricket World Cup (@cricketworldcup) October 18, 2023
ಗ್ಲೆನ್ ಫಿಲಿಪ್ಸ್ ಸ್ಫೋಟಕ ಆಟ
ಮೊದಲು ಬ್ಯಾಟಿಂಗ್ ನಡೆಸಿದ ಕಿವೀಸ್ 30 ರನ್ಗೆ ಮೊದಲ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ಡೇವೊನ್ ಕಾನ್ವೆ 20ರನ್ ಗಳಿಸಿ ಬೇಗನೆ ವಿಕೆಟ್ ಕೈಚೆಲ್ಲಿದರು. ಆದರೆ ವಿಲ್ ಯಂಗ್(54) ಮತ್ತು ರಚೀನ್ ರವೀಂದ್ರ(32) ಸೇರಿಕೊಂಡು ಉತ್ತಮ ಇನಿಂಗ್ಸ್ ಕಟ್ಟಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ದ್ವಿತೀಯ ವಿಕೆಟ್ಗೆ 79 ರನ್ ಒಟ್ಟುಗೂಡಿಸಿದರು.
ಉತ್ತಮ ಸ್ಥಿತಿಯಲ್ಲಿದ್ದ ನ್ಯೂಜಿಲ್ಯಾಂಡ್ ಹಠಾತ್ ಕುಸಿತ ಕಂಡಿತು. 110 ರನ್ಗೆ 4 ವಿಕೆಟ್ ಕಳೆದುಕೊಂಡು ಮತ್ತೆ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಕಿವೀಸ್ 200 ರನ್ ಒಳಗೆ ಆಲೌಟ್ ಆಗಲಿದೆ ಎಂದು ನಿರೀಕ್ಷೆ ಮಾಡಲಾಯಿತು. ಆದರೆ ಗ್ಲೆನ್ ಫಿಲಿಪ್ಸ್ ಮತ್ತು ನಾಯಕ ಟಾಮ್ ಲ್ಯಾಥಮ್ ಸೇರಿಕೊಂಡು ಆಫ್ಘನ್ ಬೌಲರ್ಗಳ ಚಳಿ ಬಿಡಿಸಿದರು. ಉಭಯ ಆಟಗಾರರು ಅರ್ಧಶತಕ ಬಾರಿಸಿ ಮಿಂಚಿದರು. ಈ ಜೋಡಿ 5ನೇ ವಿಕೆಟ್ಗೆ ಬರೋಬ್ಬರಿ 144 ರನ್ ರಾಶಿ ಹಾಕಿದರು. ಗ್ಲೆನ್ ಫಿಲಿಪ್ಸ್ ಸೊಗಸಾದ 4 ಬೌಂಡರಿ ಮತ್ತು 4 ಸಿಕ್ಸರ್ ಬಾರಿಸಿ 71 ರನ್ ಬಾರಿಸಿದರು. ಲ್ಯಾಥಂ 3 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 68 ರನ್ ಬಾರಿಸಿದರು.
ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಮಾರ್ಕ್ ಚಾಪ್ಮನ್ ಕೇವಲ 12 ಎಸೆತಗಳಿಂದ ಅಜೇಯ 25 ರನ್ ಬಾರಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಆಫ್ಘನ್ ಪರ ನವೀನ್ ಉಲ್ ಹಕ್ ಮತ್ತು ಅಜ್ಮತುಲ್ಲಾ ಒಮರ್ಜಾಯ್ ತಲಾ 2 ವಿಕೆಟ್ ಪಡೆದರು. ಮುಜೀಬ್ ಮತ್ತು ರಶೀದ್ ತಲಾ 1 ವಿಕೆಟ್ ಪಡೆಯಲಷ್ಟೇ ಶಕ್ತರಾದರು.