ಪುಣೆ: ಹೈಲೋಲ್ಟೇಜ್ ಪಂದ್ಯ ನಿರೀಕ್ಷೆ ಮಾಡಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲ್ಯಾಂಡ್(SA vs NZ) 190 ರನ್ಗಳ ಹೀನಾಯವಾಗಿ ಸೋಲು ಕಂಡಿದೆ. ಕೂಟದಲ್ಲಿ ಬಲಿಷ್ಠವಾಗಿದ್ದ ಇತ್ತಂಡಗಳ ಈ ಪಂದ್ಯವನ್ನು ಅಭಿಮಾನಿಗಳು ತೀವ್ರ ಪೈಪೋಟಿಯ ನಿರೀಕ್ಷೆ ಮಾಡಿದ್ದರು. ಆದರೆ ಈ ನಿರೀಕ್ಷೆ ಹುಸಿಯಾಗಿದೆ. ಪಂದ್ಯ ಗೆದ್ದ ದಕ್ಷಿಣ ಆಫ್ರಿಕಾ ಉತ್ತಮ ರನ್ರೇಟ್ ಧಾರಣೆಯಲ್ಲಿ 12 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮೊದಲ ಸ್ಥಾನದಲ್ಲಿದ್ದ ಭಾರತ ದ್ವಿತೀಯ ಸ್ಥಾನಕ್ಕೆ ಜಾರಿದೆ.
ಇಲ್ಲಿನ ಮಹಾರಾಷ್ಟ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ನ 32ನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ಡಿ ಕಾಕ್(114) ಮತ್ತು ಡುಸ್ಸೆನ್(133) ಅವರ ಶತಕದ ನೆರವಿನಿಂದ, ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ಗೆ 357 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ 35.3 ಓವರ್ಗಳಲ್ಲಿ 167 ರನ್ಗೆ ಸರ್ವಪತನ ಕಂಡು ಶರಣಾಯಿತು. ಸೋಲು ಕಂಡ ಕಿವೀಸ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿಯಿತು. ಆಸೀಸ್ ಮೂರನೇ ಸ್ಥಾನಕ್ಕೇರಿತು.
ಆಸ್ಟ್ರೇಲಿಯಾ ವಿರುದ್ಧದ ಕಳೆದ ಪಂದ್ಯದಲ್ಲಿ 388 ರನ್ಗಳ ಸನಿಹಕ್ಕೆ ಬಂದ ಕಿವೀಸ್ ತಂಡಕ್ಕೆ ದಕ್ಷಿಣ ಆಫ್ರಿಕಾದ ಈ ಮೊತ್ತ ಎಲ್ಲಿಯೂ ಸಾಲದು ಎಂದು ಕ್ರಿಕೆಟ್ ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಆದರೆ ಹರಿಣಗಳ ಹರಿತ ಬೌಲಿಂಗ್ ದಾಳಿಯ ಮುಂದೆ ಮಂಕಾದ ಕಿವೀಸ್ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ನಂಬುಗೆಯ ಬ್ಯಾಟರ್ಗಳೆಲ್ಲ ಕೈ ಕೊಟ್ಟಾಗ ಟೊಂಕ ಕಟ್ಟಿನಿಂತ ಗ್ಲೆನ್ ಫಿಲಿಪ್ಸ್ ಅಂತಿಮ ಹಂತದಲ್ಲಿ ಶಕ್ತಿ ಮೀರಿ ಗೆಲುವುನಿನ ಪ್ರಯತ್ನ ಮಾಡಿದರು. 46 ಎಸೆತದಲ್ಲಿ ಅರ್ಧಶತಕ ಬಾರಿಸಿದರು. ಅಂತಿಮವಾಗಿ 60 ರನ್ ಗಳಿಸಿ ವಿಕೆಟ್ ಕೈಚೆಲ್ಲಿದರು. ಇವರ ವಿಕೆಟ್ ಬೀಳುತ್ತಿದ್ದಂತೆ ಕಿವೀಸ್ನ ಇನಿಂಗ್ಸ್ ಕೂಡ ಮುಕ್ತಾಯ ಕಂಡಿತು. ಇವರನ್ನು ಹೊರತುಪಡಿಸಿ ವಿಲ್ ಯಂಗ್ 33 ಮತ್ತು ಡ್ಯಾರಿಲ್ ಮಿಚೆಲ್ 24 ರನ್ ಬಾರಿಸಿದರು.
ಮಹಾರಾಜ್-ಮರ್ಕೋ ಮಾರಕ ದಾಳಿ
ದಕ್ಷಿಣ ಆಫ್ರಿಕಾದ ವೇಗಿ ಮಾರ್ಕೊ ಜಾನ್ಸೆನ್ ಮತ್ತು ಸ್ಪಿನ್ನರ್ ಕೇಶವ್ ಮಹರಾಜ್ ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಕಿವೀಸ್ ಆಟಗಾರರು ರನ್ ಗಳಿಸಲು ಪರದಾಡಿದರು. ಮಹರಾಜ್ 46 ರನ್ ವೆಚ್ಚದಲ್ಲಿ 4 ವಿಕೆಟ್ ಕಿತ್ತರೆ, ಜಾನ್ಸೆನ್ 31 ರನ್ ನೀಡಿ 3 ವಿಕೆಟ್ ಕೆಡವಿದರು.
ಹಾಲಿ ಆವೃತ್ತಿಯಲ್ಲಿ ನಾಲ್ಕನೇ ಶತಕ ಬಾರಿಸಿದ ಡಿ ಕಾಕ್
ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಎಡಗೈ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅವರು ಸೊಗಸಾದ ಬ್ಯಾಟಿಂಗ್ ಮೂಲಕ ಉತ್ತಮ ಅಡಿಪಾಯ ಹಾಕಿದರು. ಕಳೆದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಅವರು ಈ ಪಂದ್ಯದಲ್ಲಿ ತಾಳ್ಮೆಯುವ ಬ್ಯಾಟಿಂಗ್ಗೆ ಒತ್ತು ನೀಡಿ 103 ಎಸೆತಗಳಿಂದ ಶತಕ ಪೂರ್ತಿಗೊಳಿಸಿದರು. ಈ ಮೂಲಕ ಹಾಲಿ ವಿಶ್ವಕಪ್ ಟೂರ್ನಿಯಲ್ಲಿ 4ನೇ ಶತಕ ಬಾರಿಸಿದ ಸಾಧನೆ ಮಾಡಿದರು.
ಇದನ್ನೂ ಓದಿ Quinton de Kock: ಶತಕ ಬಾರಿಸಿ ಸಂಗಕ್ಕರ ದಾಖಲೆ ಸರಿಗಟ್ಟಿದ ಕ್ವಿಂಟನ್ ಡಿ ಕಾಕ್
ಸಂಗಕ್ಕರ ದಾಖಲೆ ಸರಿಗಟ್ಟಿದ ಡಿ ಕಾಕ್
ಈ ಶತಕ ಬಾರಿಸುವ ಮೂಲಕ ಡಿ ಕಾಕ್ ಅವರು ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತ್ಯಧಿಕ ಶತಕ ಬಾರಿಸಿದ ಸಾಧಕರ ಪಟ್ಟಿಯಲ್ಲಿ ಕುಮಾರ್ ಸಂಗಕ್ಕರ ಅವರ ದಾಖಲೆಯನ್ನು ಸರಿಗಟ್ಟಿದರು. ಸಂಗಕ್ಕಾರ 2015ರ ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ, ಸ್ಕಾಟ್ಲೆಂಡ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು. ಇದೀಗ ಡಿ ಕಾಕ್ ಕೂಡ 4 ಶತಕ ಬಾರಿಸುವ ಮೂಲಕ ಈ ದಾಖಲೆಯನ್ನು ಸರಿಗಟ್ಟಿದ್ದಾರೆ.
ಪ್ರಸ್ತುತ ಟೀಮ್ ಇಂಡಿಯಾದ ನಾಯಕನಾಗಿರುವ ರೋಹಿತ್ ಶರ್ಮ ಅವರು ಒಂದೇ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರನಾಗಿದ್ದಾರೆ. ಅವರು 2019ರಲ್ಲಿ ಲಂಡನ್ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ 5 ಶತಕ ಬಾರಿಸಿದ್ದರು. ಡಿ ಕಾಕ್ ಅವರು ಇನ್ನೊಂದು ಶತಕ ಬಾರಿಸಿದರೆ ರೋಹಿತ್ ಅವರು 5 ಶತಕದ ದಾಖಲೆಯನ್ನು ಸರಿಗಟ್ಟುವ ಅವಕಾಶವಿದೆ. ಅವರ ಬ್ಯಾಟಿಂಗ್ ಫಾರ್ಮ್ ಗಮನಿಸುವಾಗ ಇನ್ನೊಂದು ಶತಕ ಬಾರಿಸುವುದು ಕಷ್ಟವಾಗದು. ದಕ್ಷಿಣ ಆಫ್ರಿಕಾ ಪರ ಅತ್ಯಧಿಕ ಏಕದಿನ ಶತಕ ಬಾರಿಸಿದ ಮೂರನೇ ಆಟಗಾರ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ. ಡಿ ಕಾಕ್ ಅವರ 21 ಶತಕ ಇದಾಗಿದೆ. 27 ಶತಕ ಬಾರಿಸಿರುವ ಹಾಶಿಮ್ ಆಮ್ಲಾ ಮೊದಲ ಸ್ಥಾನದಲ್ಲಿದ್ದಾರೆ. 25 ಶತಕ ಬಾರಿಸಿದ ಎಬಿ ಡಿ ವಿಲಿಯರ್ಸ್ ದ್ವಿತೀಯ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ IND vs SL: ‘ಲಂಕಾ ದಹನ’ ಮಾಡಿ ಸೆಮಿಫೈನಲ್ ಪ್ರವೇಶಿಸಲಿ ಟೀಮ್ ಇಂಡಿಯಾ
200 ರನ್ ಜತೆಯಾಟ
ಡಿ ಕಾಕ್ ಮತ್ತು ದ್ವಿತೀಯ ಕ್ರಮಾಂಕದಲ್ಲಿ ಆಡಲಿಳಿದ ರಸ್ಸಿ ವಾನ್ ಡರ್ ಡುಸ್ಸೆನ್ ಸೇರಿಕೊಂಡು ಕಿವೀಸ್ ಬೌಲರ್ಗಳ ಕಿವಿ ಹಿಂಡುವಲ್ಲಿ ಯಶಸ್ಸಿಯಾದರು. ಉಭಯ ಆಟಗಾರರು ಶತಕ ಬಾರಿಸಿ ಸಂಭ್ರಮಿಸುವ ಜತೆಗೆ ದ್ವಿತೀಯ ವಿಕೆಟ್ಗೆ ಬರೋಬ್ಬರಿ 200 ರನ್ ರಾಶಿ ಹಾಕಿದರು. ಇದೇ ವೇಳೆ ಡಿ ಕಾಕ್ ಟಿಮ್ ಸೌಥಿ ಓವರ್ನಲ್ಲಿ ವಿಕೆಟ್ ಕೈಚೆಲ್ಲಿದರು. ಒಟ್ಟು 116 ಎಸೆತ ಎದುರಿಸಿದ ಅವರು 10 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 114 ರನ್ ಬಾರಿಸಿದರು.
ಡುಸ್ಸೆನ್ ಶತಕ ಸಂಭ್ರಮ
ರಸ್ಸಿ ವಾನ್ ಡರ್ ಡುಸ್ಸೆನ್ ಕೂಡ ಶತಕ ಬಾರಿಸಿ ಸಂಭ್ರಮಿಸಿದರು. ಈ ಮೂಲಕ ಹಾಲಿ ಆವೃತ್ತಿಯಲ್ಲಿ 2 ಶತಕ ಬಾರಿಸಿದ ಸಾಧನೆ ಮಾಡಿದರು. ಡಿ ಕಾಕ್ಗಿಂತ ಡುಸ್ಸೆನ್ ಅವರ ಆಟ ಬಿರಿಸಿನಿಂದ ಕೂಡಿತ್ತು. 5 ಸಿಕ್ಸರ್ ಮತ್ತು 9 ಬೌಂಡರಿ ಬಾರಿಸಿ 133 ರನ್ ಗಳಿಸಿ ಟಿಮ್ ಸೌಥಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಶತಕ ವೀರರ ವಿಕೆಟ್ಗಳೆರಡು ಸೌಥಿ ಪಾಲಾಯಿತು. ಅಂತಿಮ ಹಂತದಲ್ಲಿ ಡೇವಿಡ್ ಮಿಲ್ಲರ್ ಕೇವಲ 30 ಎಸೆತಗಳಿಂದ ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು 350ರ ಗಡಿ ದಾಟಿಸಿದರು. ದಕ್ಷಿಣ ಆಫ್ರಿಕಾ ಆಡಿದ 7 ಪಂದ್ಯಗಳ ಪೈಕಿ ಮೊದಲು ಬ್ಯಾಟಿಂಗ್ ನಡೆಸಿದ ಎಲ್ಲ 5 ಪಂದ್ಯಗಳಲ್ಲಿಯೂ 350ಕ್ಕೂ ಅಧಿಕ ರನ್ ಬಾರಿಸಿದ ಸಾಧನೆ ಮಾಡಿದೆ. ಹಾರ್ಡ್ ಹಿಟ್ಟರ್ ಹೆನ್ರಿಚ್ ಕ್ಲಾಸೆನ್ 15 ರನ್ ಬಾರಿಸಿ ಅಜೇಯರಾಗಿ ಉಳಿದರು. ಕಿವೀಸ್ ಪರ ಬೌಲಿಂಗ್ನಲ್ಲಿ ಸೌಥಿ 2 ವಿಕೆಟ್ ಕಿತ್ತರು.
ಇದನ್ನೂ ಓದಿ IND vs SL: ಇಂಡೋ-ಲಂಕಾ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡಗಳು ಹೀಗಿದೆ