ದೋಹಾ : ಪಠಾಣ್ ಸಿನಿಮಾದ ಬೇಷರಮ್ ರಂಗ್ ಹಾಡು ವಿವಾದದ ಕೇಂದ್ರ ಬಿಂದುವಾಗಿರುವುದು ದೀಪಿಕಾ ಅವರ ಬಿಕಿನಿ ಹಾಗೂ ಅದರ ಬಣ್ಣದಿಂದಾಗಿ. ಹಿಂದೂಪರ ಸಂಘಟನೆಗಳು ಕೇಸರಿಗೆ ಅವಮಾನವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸುವ ಜತೆಗೆ ಅಶ್ಲೀಲತೆಯನ್ನೂ ಬೊಟ್ಟು ಮಾಡಿದೆ. ಈ ಘಟನೆಯ ನಡುವೆಯೂ ದೀಪಿಕಾ ಅವರು ಕತಾರ್ನಲ್ಲಿ ಡಿಸೆಂಬರ್ 18ರಂದು ಸಂಜೆ ನಡೆದ ಫಿಫಾ ವಿಶ್ವ ಕಪ್ ಫೈನಲ್ ಪಂದ್ಯಕ್ಕೆ ಮೊದಲು ಟ್ರೋಫಿ ಅನಾವರಣ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಈ ಒಂದು ಅಭೂತಪೂರ್ವ ಅವಕಾಶ ಪಡೆದ ಭಾರತದ ಮೊಟ್ಟ ಮೊದಲ ಪ್ರಜೆ ಎಂಬ ಖ್ಯಾತಿ ಗಳಿಸಿಕೊಂಡಿದ್ದಾರೆ.
ಈ ಸಾಧನೆಯ ನಡುವೆಯೂ ಟ್ರೋಫಿ ಅನಾವರಣ ಕಾರ್ಯಕ್ರಮದ ವೇಳೆ ಅವರು ಧರಿಸಿದ್ದ ಬಟ್ಟೆಯ ಬಗ್ಗೆಯೂ ಟೀಕೆಗಳು ವ್ಯಕ್ತಗೊಂಡಿವೆ. ಅದರೆ, ಈ ಬಾರಿ ಅಶ್ಲೀಲತೆ ಅಥವಾ ಧಾರ್ಮಿಕ ಹಿನ್ನೆಲೆಯಲ್ಲಿ ಟೀಕೆ ಮಾಡಿಲ್ಲ. ಬದಲಾಗಿ ವಿನ್ಯಾಸ ಸರಿಯಿಲ್ಲ ಎಂದು ಹೇಳಲಾಗಿದೆ.
ಸ್ಪೇನ್ನ ಫುಟ್ಬಾಲ್ ಆಟಗಾರ ಇಕರ್ ಕಸಿಲ್ಲಾಸ್ ಜತೆ ದೀಪಿಕಾ ಟ್ರೋಫಿಯನ್ನು ಅನಾವರಣ ಮಾಡಿದ್ದರು. ಈ ವೇಳೆ ಅವರು ವಿಶ್ವ ವಿಖ್ಯಾತಿ ಪಡೆದಿರುವ ಫ್ಯಾಶನ್ ಬ್ರಾಂಡ್ ಲೂಯಿಸ್ ವಿಟ್ಟನ್ ರೂಪಿಸಿದ್ದ ಬಟ್ಟೆ ಧರಿಸಿದ್ದರು. ಬಿಳಿ ಬಟ್ಟೆ ಮೇಲೆ ಅವರು ಟ್ಯಾನ್ ಬಣ್ಣದ ಕೋಟ್ ಧರಿಸಿದ್ದರು. ಇದು ಅವರಿಗೆ ಚೆನ್ನಾಗಿ ಕಾಣುತ್ತಿರಲಿಲ್ಲ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಷೇಪಗಳು ಕೇಳಿ ಬಂದಿವೆ.
ಕೆಲವರು ಲೂಯಿಸ್ ವಿಟ್ಟನ್ ಬ್ರಾಂಡ್ ಅನ್ನು ಉದ್ದೇಶವಾಗಿಟ್ಟುಕೊಂಡು, ಇನ್ನೊಂದಿಷ್ಟು ಸುಂದರವಾದ ಬಟ್ಟೆ ಆಯ್ಕೆ ಮಾಡಬಹುದಾಗಿತ್ತು ಎಂದು ಹೇಳಿದ್ದಾರೆ. ಇನ್ನೊಬ್ಬರು ದೀಪಿಕಾ ಬ್ಯಾಟ್ ಅನ್ನು ಹೆಗಲ ಮೇಲೆ ಹಾಕಿಕೊಂಡಂತಿತ್ತು ಎಂದಿದ್ದಾರೆ. ಇನ್ನೊಬ್ಬರು ದೀಪಿಕಾ ಡ್ರೆಸ್ ಡಫೆಲ್ ಬ್ಯಾಗ್ನಂತಿತ್ತು ಎಂದು ನುಡಿದಿದ್ದಾರೆ.
ಇದನ್ನೂ ಓದಿ | Shahrukh Khan | ದೀಪಿಕಾ ಪಡುಕೋಣೆ ವೇಷಭೂಷಣ ಆಕ್ಷೇಪಾರ್ಹ: ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ