Site icon Vistara News

Odi Cricket History: ಏಕದಿನ ಕ್ರಿಕೆಟ್​ನಲ್ಲಿ ಗೆಲುವಿನ ದಾಖಲೆ ಬರೆದ ಆಸ್ಟ್ರೇಲಿಯಾ

Mitchell Starc made the opening breakthrough

ನವದೆಹಲಿ: ಬುಧವಾರ ನಡೆದ ಏಕದಿನ ವಿಶ್ವಕಪ್​ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್​ ಆಸ್ಟ್ರೇಲಿಯಾ ತಂಡ ನೆದರ್ಲೆಂಡ್ಸ್​ ವಿರುದ್ಧ 309 ರನ್​ಗಳ ಗೆಲುವು ಸಾಧಿಸಿತು. ಈ ಗೆಲುವಿನಿಂದಿಗೆ ಆಸ್ಟ್ರೇಲಿಯಾ ತಂಡ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ(Odi Cricket History) 600ನೇ ಗೆಲುವು ದಾಖಲಿಸಿತು. ಜತೆಗೆ ಈ ಸಾಧನೆ ಮಾಡಿದ ವಿಶ್ವದ ಮೊದಲ ತಂಡ ಎನಿಸಿಕೊಂಡಿತು.

ಭಾರತಕ್ಕೆ ದ್ವಿತೀಯ ಸ್ಥಾನ

50 ವರ್ಷಗಳಿಂದ ಅಧಿಕ ಇತಿಹಾಸ ಹೊಂದಿರುವ ಏಕದಿನ ಕ್ರಿಕೆಟ್​ನಲ್ಲಿ ಈ ವರೆಗೆ 25 ದೇಶಗಳು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿವೆ. ಇವುಗಳಲ್ಲಿ ಕೇವಲ 3 ದೇಶಗಳಷ್ಟೇ 500ಕ್ಕಿಂತ ಅಧಿಕ ಗೆಲುವು ಸಾಧಿಸಿವೆ. 600 ಜಯ ಕಂಡ ಆಸ್ಟ್ರೇಲಿಯಾಕ್ಕೆ ಅಗ್ರಸ್ಥಾನ. 552 ಗೆಲುವು ಸಾಧಿಸಿದ ಭಾರತ ದ್ವಿತೀಯ ಸ್ಥಾನದಲ್ಲಿದೆ. 510 ಪಂದ್ಯಗಳನ್ನು ಗೆದ್ದಿರುವ ಭಾರತದ ಬದ್ಧ ಎದುರಾಳಿ ಪಾಕಿಸ್ತಾನ ಮೂರನೇ ಸ್ಥಾನದಲ್ಲಿದೆ.

ಅತಿ ಹೆಚ್ಚು ಪಂದ್ಯವಾಡಿದ್ದು ಭಾರತ

ಏಕದಿನದಲ್ಲಿ ಅತೀ ಹೆಚ್ಚು ಪಂದ್ಯಗಳನ್ನಾಡಿದ ದಾಖಲೆ ಭಾರತದ ಹೆಸರಲ್ಲಿರುವುದು ವಿಶೇಷ. 1046 ಪಂದ್ಯಗಳನ್ನಾಡಿದೆ. ಆಸ್ಟ್ರೇಲಿಯಾ 991, ಪಾಕಿಸ್ತಾನ 966 ಪಂದ್ಯಗಳನ್ನಾಡಿವೆ. ಅತೀ ಹೆಚ್ಚು 441 ಸೋಲನುಭವಿಸಿದ್ದು ಭಾರತ ತಂಡಕ್ಕೆ ಅಂಟಿದ ಕಳಂಕವಾಗಿದೆ. ಆಸ್ಟ್ರೇಲಿಯಾ 348 ಸೋಲು, ಪಾಕಿಸ್ತಾನ 426 ಸೋಲು ಕಂಡಿದೆ.

ಭಾರತಕ್ಕೆ ಮೊದಲ ಗೆಲುವು ಸಿಕ್ಕಿದ್ದೇ ವಿಶ್ವಕಪ್​ನಲ್ಲಿ

ಭಾರತಕ್ಕೆ ಮೊದಲ ಏಕದಿನ ಗೆಲುವು ಒಲಿದದ್ದು ಲೀಡ್ಸ್‌ ಅಂಗಳದಲ್ಲಿ ಅದು 1975ರ ವಿಶ್ವಕಪ್‌ ಪಂದ್ಯಾವಳಿಯ ಪೂರ್ವ ಆಫ್ರಿಕಾ ಎದುರಿನ ಪಂದ್ಯವಾಗಿತ್ತು. ಇಲ್ಲಿ ಭಾರತ 10 ವಿಕೆಟ್‌ ಅಂತರದಿಂದ ಗೆದ್ದು ಬೀಗಿತ್ತು. ಆಗ ವೆಂಕಟರಾಘವನ್‌ ನಾಯಕರಾಗಿದ್ದರು. ಪೂರ್ವ ಆಫ್ರಿಕಾ 120ರನ್​ಗೆ ಕುಸಿದರೆ, ಗುರಿ ಬೆನ್ನಟ್ಟಿದ ಭಾರತ 29.5 ಓವರ್‌ಗಳಲ್ಲಿ ವಿಕೆಟ್​ ನಷ್ಟವಿಲ್ಲದೆ 123 ರನ್‌ ಬಾರಿಸಿತು. ಸುನಿಲ್​ ಗಾವಸ್ಕರ್‌ 65, ಫಾರುಕ್​ ಎಂಜಿನಿಯರ್‌ 54 ರನ್‌ ಹೊಡೆದಿದ್ದರು.

ಇದನ್ನೂ ಓದಿ AUS vs NED: ವಿಶ್ವಕಪ್​ನಲ್ಲಿ ತನ್ನದೇ ದಾಖಲೆಯನ್ನು ತಿದ್ದಿ ಬರೆದ ಆಸ್ಟ್ರೇಲಿಯಾ

ಭಾರತ ತನ್ನ ಏಕದಿನ ಅಭಿಯಾನವನ್ನು 1974ರ ಇಂಗ್ಲೆಂಡ್‌ ಪ್ರವಾಸದಲ್ಲಿ ಆರಂಭಿಸಿತು. ಈ ಸರಣಿ ವೇಳೆ 2 ಪಂದ್ಯಗಳನ್ನು ಆಡಲಾಗಿತ್ತು. ಭಾರತ ಎರಡರಲ್ಲೂ ಸೋಲು ಕಂಡಿತ್ತು. 1974ರ ಜುಲೈ 13ರಂದು ಲೀಡ್ಸ್‌ನಲ್ಲಿ ಏಕದಿನ ಇತಿಹಾಸದ ತನ್ನ ಮೊದಲ ಪಂದ್ಯವಾಡಿದ ಭಾರತ ಈ ಪಂದ್ಯವನ್ನು 4 ವಿಕೆಟ್‌ಗಳಿಂದ ಸೋತಿತ್ತು. ಭಾರತ 53.5 ಓವರ್‌ಗಳಲ್ಲಿ 265ಕ್ಕೆ ಆಲೌಟಾದರೆ, ಆತಿಥೇಯ ಇಂಗ್ಲೆಂಡ್‌ 51.1 ಓವರ್‌ಗಳಲ್ಲಿ 6 ವಿಕೆಟಿಗೆ 266 ರನ್‌ ಬಾರಿಸಿತ್ತು. ನಾಯಕ ಅಜಿತ್‌ ವಾಡೇಕರ್‌ (67) ಮತ್ತು ಬೃಜೇಶ್‌ ಪಟೇಲ್‌ (82) ಅರ್ಧ ಶತಕ ಬಾರಿಸಿದ್ದರು. ಸೋಮವಾರವಷ್ಟೇ ಇಹಲೋಕ ತ್ಯಜಿಸಿದ ಬಿಷನ್​ ಸಿಂಗ್​ ಬೇಡಿ 2 ವಿಕೆಟ್‌ ಉರುಳಿಸಿದ್ದರು.

ಮೊದಲ ಏಕದಿನ ಪಂದ್ಯವಾಡಿದ್ದೇ ಆಸೀಸ್ಟ್ರೇಲಿಯಾ

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ತಂಡಗಳು ಮೆಲ್ಬರ್ನ್ ಅಂಗಳದಲ್ಲಿ ವಿಶ್ವದ ಪ್ರಪ್ರಥಮ ಏಕದಿನ ಪಂದ್ಯವನ್ನಾಡಿದ ದಾಖಲೆ ಹೊಂದಿದೆ. ಮುಂದೆ ಇದು ಕ್ರಾಂತಿಕಾರಿ ಪರಿವರ್ತನೆಗೆ ನಾಂದಿಯಾಯಿತು. ಈಗ ಆಸ್ಟ್ರೇಲಿಯಾ ದಾಖಲೆಯ 600 ಪಂದ್ಯಗಳ್ನು ಗೆದ್ದ ಸಾಧನೆ ಮಾಡಿದೆ.

Exit mobile version