ಬೆಂಗಳೂರು: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ವಿಶ್ವಕಪ್ ಫೈನಲ್ನಲ್ಲಿ (ICC World Cup 2023) ಬಳಸಲಾದ ಪಿಚ್ಗೆ ಅಂತಾರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ‘ಸರಾಸರಿ’ ರೇಟಿಂಗ್ ನೀಡಿದೆ. ಈಡನ್ ಗಾರ್ಡನ್ಸ್ನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಎರಡನೇ ಸೆಮಿಫೈನಲ್ ಪಂದ್ಯ ನಡೆದಿತ್ತು. ಈ ಸ್ಟೇಡಿಯಮ್ಗೂ ಇದೇ ರೀತಿಯ ರೇಟಿಂಗ್ ನೀಡಲಾಗಿದೆ.
ಕೋಲ್ಕೊತಾದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದ ಉಸ್ತುವಾರಿಯನ್ನು ಶ್ರೀನಾಥ್ ವಹಿಸಿದ್ದರು. ವರದಿಗಳ ಪ್ರಕಾರ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಕೆಲವು ಸಹಾಯಕ ಸಿಬ್ಬಂದಿ ಈಗಾಗಲೇ ಫೈನಲ್ ಪಂದ್ಯ ನಡೆದ ಮೇಲ್ಮೈಯ ಸ್ಥಿತಿಯ ಬಗ್ಗೆ ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ. ಪಿಚ್ ಸರಿಯಾಗಿ ಇರಲಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಪಿಚ್ ಹೆಚ್ಚು ತಿರುವು ಪಡೆಯದ ಕಾರಣ ಭಾರತ ತಂಡ ಸೋಲು ಕಂಡಿತ್ತು ಎಂಬುದಾಗಿ ಅವರು ಹೇಳಿದ್ದರು. ಎರಡನೇ ಬ್ಯಾಟಿಂಗ್ ಮಾಡಿರುವ ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತದ ಸ್ಪಿನ್ನರ್ಗಳು ನಿರುಪಯುಕ್ತ ಎಂದು ಎನಿಸಿಕೊಂಡಿದ್ದರು.
ನಿಧಾನಗತಿಯ ತಿರುವು ಪಡೆಯದ ಪಿಚ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಕೇವಲ 240 ರನ್ಗಳನ್ನು ಗಳಿಸಿತ್ತು. ಇದು ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಸವಾಲು ಆಗಿರಲಿಲ್ಲ. . ಫೈನಲ್ನಲ್ಲಿ ಅದ್ಭುತ ಫಾರ್ಮ್ನಲ್ಲಿದ್ದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರಂತಹ ಆಟಗಾರರು ಆಸ್ಟ್ರೇಲಿಯಾದ ಬೌಲರ್ಗಳ ವಿರುದ್ಧ ತಿಣುಕಾಡಿದರು. ಆಸ್ಟ್ರೇಲಿಯಾದ ಬೌಲರ್ಗಳು ಹೆಚ್ಚು ಶಿಸ್ತು ಬದ್ಧವಾಗಿ ಕಂಡು ಬಂದರು. ನಿಯಮಿತವಾಗಿ ವಿಕೆಟ್ ಕಳೆದುಕೊಂಡ ಭಾರತ ಸೋಲಿ ಕಂಡಿತ್ತು.
ರಾತ್ರಿ ಆಟ ಸುಲಭ
ಚೆಂಡು ಬ್ಯಾಟ್ ಗೆ ಚೆನ್ನಾಗಿ ಬರುತ್ತಿರುವುದರಿಂದ ಫ್ಲಡ್ ಲೈಟ್ ಅಡಿಯಲ್ಲಿ ಬ್ಯಾಟಿಂಗ್ ಮಾಡುವುದು ತುಂಬಾ ಸುಲಭವಾಗಿತ್ತು. ಒಂದು ಹಂತದಲ್ಲಿ ಪ್ರವಾಸಿ ತಂಡ 3 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿದ್ದಾಗ ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಮಿಂಚುವ ಸೂಚನೆ ನೀಡಿದ್ದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಆಸೀಸ್ ಬ್ಯಾಟರ್ ಟ್ರಾವಿಸ್ ಹೆಡ್ ನಿರ್ದಯವಾಗಿ ಆಡಿದರು. ಟ್ರಾವಿಸ್ ಹೆಡ್ ಅವರ ಮಾಸ್ಟರ್ ಕ್ಲಾಸ್ ಆಟಕ್ಕೆ ಆಸ್ಟ್ರೇಲಿಯಾಕ್ಕೆ ಅಹಮದಾಬಾದ್ನಲ್ಲಿ ನಡೆದ 6ನೇ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲಲು ಸಹಾಯ ಮಾಡಿದರು. ಮಾರ್ನಸ್ ಲಾಬುಶೇನ್ ಅರ್ಧಶತಕ ಬಾರಿಸಿದರೆ, ಗ್ಲೆನ್ ಮ್ಯಾಕ್ಸ್ವೆಲ್ ಗೆಲುವಿನ ರನ್ ಬಾರಿಸಿದರು.
ಇದನ್ನೂ ಓದಿ : Gautam Gambhir : ಗಂಭೀರ್ ನಗುವಿಗೆ ಗಂಭೀರವಾಗಿ ತಿರುಗೇಟು ಕೊಟ್ಟ ಶ್ರೀಶಾಂತ್!
ಕುತೂಹಲಕಾರಿ ಸಂಗತಿಯೆಂದರೆ, ಪಂದ್ಯದ ಮೊದಲು ಮತ್ತು ನಂತರ ಪಿಚ್ ಬಗ್ಗೆ ಸಾಕಷ್ಟು ಮಾತುಕತೆಗಳು ನಡೆದವು. ಫೈನಲ್ಗೆ ಮುಂಚಿತವಾಗಿ, ಆಸ್ಟ್ರೇಲಿಯಾದ ಮಾಧ್ಯಮಗಳು ಭಾರತೀಯರು ಯಶಸ್ವಿಯಾಗಲು ಮೇಲ್ಮೈಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿಕೊಂಡಿದ್ದವು. ಪಂದ್ಯದ ನಂತರ, ಮಾಜಿ ನಾಯಕ ರಿಕಿ ಪಾಂಟಿಂಗ್ ನಿಧಾನಗತಿಯ ಮೇಲ್ಮೈಯಲ್ಲಿ ಆಡುವ ಭಾರತದ ಯೋಜನೆಗೆ ‘ಹಿನ್ನಡೆ’ ಎಂದು ಅಭಿಪ್ರಾಯಪಟ್ಟಿದ್ದರು.
ವಿಶ್ವ ಕಪ್ನಲ್ಲಿ ಭಾರತದ 11 ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ‘ಸರಾಸರಿ’ ಪಿಚ್ ನಲ್ಲಿ ಆಡಲಾಗಿದೆ ಎಂದು ಹೇಳಲಾಗಿದೆ. ಅಹ್ಮದಾಬಾದ್ನಲ್ಲಿ ಪಾಕಿಸ್ತಾನ ವಿರುದ್ಧ, ಲಕ್ನೋದಲ್ಲಿ ಇಂಗ್ಲೆಂಡ್ ವಿರುದ್ಧ, ಕೋಲ್ಕತಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಪಂದ್ಯ ಮತ್ತು ಫೈನಲ್ ಪಂದ್ಯದ ಪಿಚ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಪಂದ್ಯ ನಡೆದ ಚೆನ್ನೈ ಪಿಚ್ ಕೂಡ ಅವರೇಜ್ ಎಂದು ರೇಟಿಂಗ್ ಕೊಡಲಾಗಿದೆ.