ಬೆಂಗಳೂರು: ಇಂದು ಜಗತ್ತಿನ ಪ್ರಮುಖ ಅಂತಾರಾಷ್ಟ್ರೀಯ ಕ್ರೀಡಾಕೂಟ ಎನಿಸಿಕೊಂಡಿರುವ ಒಲಿಂಪಿಕ್ಸ್ಗೆ ಸಾವಿರಾರು(Olympic Games History) ವರ್ಷಗಳ ಇತಿಹಾಸವಿದೆ. ಈ ಒಲಿಂಪಿಕ್ ಕ್ರೀಡಾಕೂಟದ ಹಿನ್ನೆಲೆ, ಇತಿಹಾಸ ಮತ್ತು ಗ್ರೀಸ್ ದೇಶಕ್ಕೆ ನೀಡುವ ವಿಶೇಷ ಮಾನ್ಯತೆಯ ಕುರಿತ ಮಾಹಿತಿ ಇಲ್ಲಿದೆ.
ಗ್ರೀಸ್ಗೆ ವಿಶೇಷ ಸ್ಥಾನಮಾನ
ಚೊಚ್ಚಲ ಒಲಿಂಪಿಕ್ ಸಂಘಟಿಸಿದ ಹೆಗ್ಗಳಿಕೆ ಗ್ರೀಸ್ ದೇಶಕ್ಕೆ ಸಲ್ಲುತ್ತದೆ. ಸುಮಾರು ಕ್ರಿ.ಪೂ. 776ರಲ್ಲಿ ಗ್ರೀಸ್‌ನ ಒಲಿಂಪಿಯಾದಲ್ಲಿ ಮೊದಲ ಬಾರಿಗೆ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಮೂರ್ನಾಲ್ಕು ಶತಮಾನದವರೆಗೆ ಈ ಕೂಟವನ್ನು ಆಯೋಜಿಸಲಾಗುತ್ತಿತ್ತು. ಬಳಿಕ ಕ್ರಮೇಣ ನಿಂತುಹೋದ ಒಲಿಂಪಿಕ್‌ಗೆ ಚಾಲನೆ ಸಿಕ್ಕಿದ್ದು 1859ರಲ್ಲಿ. ಇವಾಂಜೆಲಾಸ್ ಝಪ್ಪಾಸ್ ಎಂಬಾತ ಪ್ರಪ್ರಥಮ ಅಂತಾರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟವನ್ನು ಪ್ರಾಯೋಜಿಸಿದನು. ಬಳಿಕ 1894ರಲ್ಲಿ ಫ್ರಾನ್ಸ್‌ನ ಪಿಯರೆ ಡಿ ಕ್ಯುಬರ್ತಿನ್ ಎಂಬುವವನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು ಹುಟ್ಟುಹಾಕಿ, 1896ರಲ್ಲಿ ಪ್ರಥಮ ಬಾರಿಗೆ ಗ್ರೀಸ್‌ನ ಈಗಿನ ರಾಜಧಾನಿ ಅಥೆನ್ಸ್ ನಗರದಲ್ಲಿ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟ ಆಯೋಜಿಸಲಾಯಿತು. ಇದು ಮೊದಲ ಆಧುನಿಕ ಒಲಿಂಪಿಕ್ ಕ್ರೀಡಾಕೂಟ.
ಮೊದಲ ಒಲಿಂಪಿಕ್ ಸಂಘಟಿಸಿದ ಕಾರಣ ಪ್ರತಿ ಬಾರಿಯ ಉದ್ಘಾಟನ ಸಮಾರಂಭದಲ್ಲಿ ಕ್ರೀಡಾಪಟುಗಳ ಪಥಸಂಚಲನ ನಡೆಯುವಾಗ ಗ್ರೀಸ್ ತಂಡವೇ ಮುಂಚೂಣಿಯಲ್ಲಿರುತ್ತದೆ. ಬಳಿಕ ಆತಿಥೇಯ ದೇಶದ ಭಾಷೆಯ ಅಲ್ಪಾಬೆಟಿಕ್ ಅಕ್ಷರಮಾಲೆಯನ್ನು ಅನುಸರಿಸಿ ತಂಡಗಳು ಪಥಸಂಚಲನದಲ್ಲಿ ಪಾಲ್ಗೊಳ್ಳುತ್ತವೆ. ಆತಿಥೇಯ ತಂಡ ಯಾವಾಗಲೂ ಕೊನೆಯ ಸ್ಥಾನದಲ್ಲಿರುತ್ತದೆ.
ಇದನ್ನೂ ಓದಿ The Olympic Games: 72ರ ಇಳಿ ವಯಸ್ಸಿನಲ್ಲೂ ಒಲಿಂಪಿಕ್ಸ್ ಪದಕ ಗೆದ್ದಿದ್ದ ಶೂಟರ್; ಯಾರಿವರು?
ಒಲಿಂಪಿಕ್ ಟಾರ್ಚ್ ರಿಲೇ
ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಯಾವುದೇ ದೇಶ ಆತಿಥ್ಯ ವಹಿಸಿದರೂ ಕೂಡ ಒಲಿಂಪಿಕ್ಸ್ ಕ್ರೀಡಾಜ್ಯೋತಿಯನ್ನು ಪುರಾತನ ಗೇಮ್ಸ್ ಆಯೋಜಿಸಿದ್ದ ಗ್ರೀಸ್‌ನಿಂದ ತರಲಾಗುತ್ತದೆ. ಅಲ್ಲಿ ಬೆಳಗಲ್ಪಟ್ಟ ಜ್ಯೋತಿ ಮೊದಲು ಗ್ರೀಸ್ ನಗರದಲ್ಲಿ ಸಂಚರಿಸಿದ ನಂತರ ಕೂಟ ನಡೆಯುವ ದೇಶಕ್ಕೆ ಬರುತ್ತದೆ. ಗ್ರೀಸ್‌ನ ಜಿಮ್ನಾಸ್ಟ್ ಎಲೆಟ್‌ಥಿಯೋರಿಸ್ ಪೆಟ್ರೌನಿಯಾಸ್, ರಿಯೋ ಒಲಿಂಪಿಕ್ಸ್ ಕ್ರೀಡಾಜ್ಯೋತಿ ಹಿಡಿದ ಮೊದಲ ಅಥ್ಲೀಟ್.
4 ವರ್ಷಗಳಿಗೊಮ್ಮೆ ನಡೆಯುವ ಟೂರ್ನಿ
ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಒಲಿಂಪಿಕ್ ಕ್ರೀಡಾಕೂಟ ನಡೆಯುತ್ತದೆ. ಇದೊಂದು ಅಂತಾರಾಷ್ಟ್ರೀಯ ಕ್ರೀಡಾಕೂಟವಾಗಿದೆ. ಈ ಕ್ರೀಡಾಕೂಟವನ್ನು ಬೇಸಿಗೆ ಮತ್ತು ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟವೆಂದು ವಿಂಗಡಿಸಲಾಗಿದೆ. 1992ರ ತನಕ ಈ ಎರಡೂ ಕ್ರೀಡಾಕೂಟಗಳು ಒಂದೇ ವರ್ಷದಲ್ಲಿ ನಡೆಯುತ್ತಿದ್ದವು. ಈಗ ಈ ಎರಡು ಕ್ರೀಡಾಕೂಟಗಳ ನಡುವೆ 2 ವರ್ಷಗಳ ಅಂತರ ಇರುತ್ತದೆ.
ಇದನ್ನೂ ಓದಿ Olympics On Television: ಒಲಿಂಪಿಕ್ಸ್ ಕ್ರೀಡಾಕೂಟ ಮೊದಲ ಬಾರಿಗೆ ಟಿವಿಯಲ್ಲಿ ಪ್ರಸಾರ ಕಂಡಿದ್ದು ಯಾವಾಗ?
ಈ ಬಾರಿಯ ವಿಶೇಷತೆ
ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಒಲಿಂಪಿಕ್ಸ್ ಇತಿಹಾಸದಲ್ಲೇ ವಿಶೇಷ ಮಹತ್ವ ಪಡೆದಿದೆ. ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್ ವರೆಗೆ ಬೋಟ್‌ಗಳಲ್ಲೇ ಪರೇಡ್ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.