Site icon Vistara News

Olympic Medals: ಒಲಿಂಪಿಕ್ಸ್​ ವಿಜೇತರಿಗೆ ನೀಡುವ ಚಿನ್ನದ ಪದಕ ಚಿನ್ನದ್ದಲ್ಲ!

Olympic Medals

Olympic Medals: How big are Olympic medals and what are they made of?

ಬೆಂಗಳೂರು: ಇದುವರೆಗಿನ ಒಲಿಂಪಿಕ್ಸ್(Olympic)​ ಇತಿಹಾಸದಲ್ಲೇ(olympic history) ಅಮೆರಿಕದ ಖ್ಯಾತ ಈಜು ದಂತಕಥೆ ಮೈಕೆಲ್ ಫೆಲ್ಪ್ಸ್ ಅತ್ಯಧಿಕ ಪದಕ ಗೆದ್ದ ಸಾಧಕ. ‘ಚಿನ್ನದ ಮೀನು’ ಎಂದೇ ಖ್ಯಾತಿಗಳಿಸಿರುವ ಇವರು ಸರ್ವಾಧಿಕ 23 ಚಿನ್ನದ ಪದಕ ಗೆದ್ದಿದ್ದಾರೆ. ಅಚ್ಚರಿ ಎಂದರೆ ಇವರು ಗೆದ್ದಿರುವ ಪದಕಗಳು ಚಿನ್ನದ್ದಲ್ಲ. ಹಾಗಿದ್ದರೆ ಚಿನ್ನ ಗೆದ್ದ(Olympic Medals) ಸಾಧಕರಿಗೆ ಯಾವ ಪದಕ ನೀಡಲಾಗುತ್ತದೆ ಎನ್ನುವ ಕುತೂಹಲಕ್ಕೆ ಉತ್ತರ ಇಲ್ಲಿದೆ.

ಹೌದು, ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ಸಾಧಕರಿಗೆ ನಿಜವಾದ ಚಿನ್ನದ ಪದಕ ನೀಡಲಾಗುವುದಿಲ್ಲ. ಲೇಪನ ಮಾಡಿದ ಪದಕವನ್ನಷ್ಟೇ ನೀಡಲಾಗುತ್ತದೆ. ಪೂರ್ತಿ ಚಿನ್ನದಿಂದಲೇ ತಯಾರಿಸಿದ ಪದಕಗಳನ್ನು 1912ರ ಸ್ವೀಡನ್‌ನ ಸ್ಟಾಕ್‌ಹೊಮ್ಲಿಯಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಕೊನೆಯ ಬಾರಿಗೆ ನೀಡಲಾಗಿತ್ತು. ಆ ಬಳಿಕ ಬಂಗಾರದ ಪದಕಗಳು ಚಿನ್ನದ ಲೇಪನವನ್ನಷ್ಟೆ (ಕನಿಷ್ಠ 6 ಗ್ರಾಂ) ಹೊಂದಿರುತ್ತವೆ ಮತ್ತು ಶೇಕಡ 93 ಬೆಳ್ಳಿಯೇ ತುಂಬಿರುತ್ತದೆ. ಹೀಗಾಗಿ ಒಲಿಂಪಿಕ್ಸ್‌ನ ಚಿನ್ನ ಮತ್ತು ಬೆಳ್ಳಿ ಪದಕಗಳ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ.

ಇದನ್ನೂ ಓದಿ Paris Olympics: ಪ್ಯಾರಿಸ್‌ ಒಲಿಂಪಿಕ್ಸ್​ ಭದ್ರತಾ ಕಾರ್ಯದಲ್ಲಿ ಭಾರತದ ಶ್ವಾನದಳ; ಬೆಂಗಳೂರಿನಲ್ಲಿ ತರಬೇತಿ

ಬೆಳ್ಳಿ ಪದಕ ನೀಡಲಾಗಿತ್ತು


1896ರ ಮೊದಲ ಒಲಿಂಪಿಕ್ಸ್​ನಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಬೆಳ್ಳಿ ಪದಕವನ್ನೇ ನೀಡಲಾಗಿತ್ತು. 2ನೇ ಸ್ಥಾನ ಪಡೆದವರು ಕಂಚಿನ ಪದಕ ಗಳಿಸಿದ್ದರು. 1900ರ ಒಲಿಂಪಿಕ್ಸ್‌ ವಿಜೇತರಿಗೆ ಪದಕಗಳ ಬದಲಾಗಿ ಟ್ರೋಫಿಗಳನ್ನು ನೀಡಲಾಗಿತ್ತು. 1904ರ ಒಲಿಂಪಿಕ್ಸ್‌ನಿಂದ ಚಿನ್ನ, ಬೆಳ್ಳಿ, ಕಂಚಿನ ಪದಕ ನೀಡುವ ಸಂಪ್ರದಾಯ ಹುಟ್ಟಿಕೊಂಡಿತು. ಪ್ರತಿ ಪದಕ ಕನಿಷ್ಠ 7.7 ಎಂ.ಎಂ. ದಪ್ಪ ಮತ್ತು 85 ಎಂ.ಎಂ. ಸುತ್ತಳತೆ ಹೊಂದಿರಬೇಕೆಂದು ಐಒಸಿ ನಿಯಮ.


ಕ್ರೀಡಾಪಟುಗಳು ಪದಕ ಕಚ್ಚುವುದು ಏಕೆ?


ಒಲಂಪಿಕ್ಸ್‌ನಲ್ಲಿ (Olympic) ಪದಕ ವಿಜೇತ ( winners ) ಕ್ರೀಡಾಪಟುಗಳು ಪದಕವನ್ನು ಕಚ್ಚಿ (Medal Biting) ಫೋಟೋಗೆ ಪೋಸ್ ಕೊಡುವುದನ್ನು ನೋಡಿರುತ್ತೇವೆ. ಇವರು ಯಾಕೆ ಹೀಗೆ ಮಾಡುತ್ತಾರೆ ಎನ್ನುವ ಪ್ರಶ್ನೆಯಂತೂ ಒಂದಲ್ಲಾ ಒಂದು ಬಾರಿ ನಮ್ಮ ಮನದಲ್ಲಿ ಮೂಡಿರುತ್ತದೆ. ಒಲಿಂಪಿಕ್ ಪದಕ ವಿಜೇತರು ಪದಕ ಕಚ್ಚಲು ಕಾರಣವಿದೆ ಮಾತ್ರವಲ್ಲ ಇದಕ್ಕೆ ದೊಡ್ಡ ಇತಿಹಾಸವೇ ಇದೆ.

ಇದನ್ನೂ ಓದಿ The Olympic Games: 72ರ ಇಳಿ ವಯಸ್ಸಿನಲ್ಲೂ ಒಲಿಂಪಿಕ್ಸ್​ ಪದಕ ಗೆದ್ದಿದ್ದ ಶೂಟರ್‌; ಯಾರಿವರು?


ಒಲಿಂಪಿಕ್ಸ್ ನ ಆರಂಭಿಕ ದಿನಗಳು. ಬೆಲೆಬಾಳುವ ಚಿನ್ನವನ್ನು ಕರೆನ್ಸಿಯ ರೂಪದಲ್ಲಿ ಬಳಸಲು ಪ್ರಾರಂಭಿಸಲಾಯಿತು. ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸಲು ವ್ಯಾಪಾರಿಗಳು ಚಿನ್ನದ ನಾಣ್ಯಗಳನ್ನು ಕಚ್ಚಿ ನೋಡುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ. ಚಿನ್ನವು ಮೃದುವಾದ ಲೋಹವಾಗಿದೆ. ಇದರ ಮೇಲೆ ಸ್ವಲ್ಪ ಒತ್ತಡ ಬಿದ್ದರೂ ಗುರುತು ಬೀಳುತ್ತದೆ. ಹೀಗಾಗಿ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತ ಕ್ರೀಡಾಪಟುಗಳು ತಮಗೆ ಸಿಗುವ ಚಿನ್ನದ ಪದಕವನ್ನು ಪರಿಶೀಲಿಸಲು ಹೀಗೆ ಮಾಡುತ್ತಿದ್ದರು. ಕ್ರಮೇಣ ಇದೊಂದು ಅಭ್ಯಾಸದ ಭಾಗವಾಯಿತು.

ಇದನ್ನೂ ಓದಿ Olympic Games History: ಒಲಿಂಪಿಕ್ಸ್​ನಲ್ಲಿ ಗ್ರೀಸ್​ ದೇಶಕ್ಕೆ ವಿಶೇಷ ಮಾನ್ಯತೆ ನೀಡುವುದೇಕೆ?

ಒಲಿಂಪಿಕ್ ಚಾಂಪಿಯನ್‌ಗಳು ತಮ್ಮ ಬಾಯಿಯಲ್ಲಿ ಚಿನ್ನದ ಪದಕವನ್ನು ಕಚ್ಚುವುದು ಈಗ ಶುದ್ಧತೆಯನ್ನು ಪರಿಶೀಲಿಸುವುದಕ್ಕಾಗಿ ಅಲ್ಲ. ಯಾಕೆಂದರೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) 1912 ರಲ್ಲಿ ಶುದ್ಧ ಚಿನ್ನದ ಪದಕಗಳನ್ನು ನೀಡುವುದನ್ನು ನಿಲ್ಲಿಸಿತ್ತು. ಆದರೆ ಅದರ ಅಭ್ಯಾಸ ಕ್ರಮ ಇನ್ನೂ ಮುಂದುವರಿದಿದೆ.

Exit mobile version