Site icon Vistara News

Olympic Rings: ಒಲಿಂಪಿಕ್ಸ್‌ ಧ್ವಜದಲ್ಲಿರುವ 5 ರಿಂಗ್​ಗಳ ಮಹತ್ವವೇನು?

Olympic Rings

Olympic Rings: Why are there five rings in the Olympic symbol? What does it mean?

ಪ್ಯಾರಿಸ್​: ವಿಶ್ವದ ಅತಿ ದೊಡ್ಡ ಕ್ರೀಡಾಕೂಟವಾದ ಒಲಿಂಪಿಕ್ಸ್​(olympics) ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಬಾರಿ ಪ್ಯಾರಿಸ್​ನಲ್ಲಿ(paris olympics) ಕ್ರೀಡಾಕೂಡ ನಡೆಯುತ್ತಿದೆ. ಇದೇ ತಿಂಗಳ 26ರಿಂದ ಟೂರ್ನಿ ಆರಂಭಗೊಳ್ಳಲಿದೆ. ಇದಕ್ಕೂ ಮುನ್ನ ಒಲಿಂಪಿಕ್ಸ್‌ ಧ್ವಜದಲ್ಲಿರುವ 5 ರಿಂಗ್​ಗಳ(Olympic Rings) ಮಹತ್ವವೇನು ಎನ್ನುವ ಕುತೂಹಲಕಾರಿ ವಿಚಾರ ಇಂತಿದೆ.

5 ಖಂಡಗಳನ್ನು ಪ್ರತಿನಿಧಿಸುವ 5 ರಿಂಗ್‌ಗಳುಳ್ಳ ಒಲಿಂಪಿಕ್ಸ್‌ ಧ್ವಜವನ್ನು 1913ರಲ್ಲಿ ಆಧುನಿಕ ಒಲಿಂಪಿಕ್ಸ್‌ ಪಿತಾಮಹ ಫ್ರಾನ್ಸ್‌ನ ಪಿಯರ್‌ ಡಿ ಕೌಬರ್ಟಿನ್‌ ವಿನ್ಯಾಸಗೊಳಿಸಿದರು. ಈ ಬಾರಿಯ ಒಲಿಂಪಿಕ್ಸ್​ ಕೂಡ ಫ್ರಾನ್ಸ್​ನಲ್ಲಿಯೇ ನಡೆಯುತ್ತಿರುವುದು ವಿಶೇಷ. ಈ ಒಲಿಂಪಿಕ್ಸ್‌ ಧ್ವಜ 1920ರ ಬೆಲ್ಜಿಯಂನ ಅಂಟ್ವೆರ್ಪ್​ನಲ್ಲಿ ಮೊದಲ ಬಾರಿ ಅಧಿಕೃತವಾಗಿ ಹಾರಾಡಿಸಲಾಯಿತು. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಪ್ರತಿ ದೇಶದ ರಾಷ್ಟ್ರಧ್ವಜವೂ ಈ ರಿಂಗ್‌ಗಳ ಒಂದಾದರೂ ಬಣ್ಣವನ್ನು ಒಳಗೊಂಡಿರುವುದು ಈ ರಿಂಗ್​ನ ವಿಶೇಷತೆ.

ವೈವಿಧ್ಯಮಯ ಭಾಷೆ, ಸಂಸ್ಕೃತಿ, ಹವಾಮಾನ, ಆರ್ಥಿಕತೆ, ಆಹಾರ ಪದ್ಧತಿ ಮತ್ತು ಮೈಬಣ್ಣದ ಜನರೆಲ್ಲ ಒಂದಾಗಿ ಸೇರುವ ವಿಶ್ವದ ಅತಿದೊಡ್ಡ ವೇದಿಕೆ ಒಲಿಂಪಿಕ್ಸ್ ಕ್ರೀಡಾಕೂಟವಾಗಿದೆ. ಹಲವು ವೈವಿಧ್ಯಗಳ ನಡುವೆಯೂ ಒಲಿಂಪಿಕ್ಸ್ ಏಕತೆಯನ್ನು ಸಾರುವುದು ಈ ಕ್ರೀಡಾಕೂಟದ ವಿಶೇಷತೆ.


ಒಲಿಂಪಿಕ್ಸ್‌ ಆರಂಭೋತ್ಸವವನ್ನು ಮೊದಲ ಬಾರಿಗೆ ಅಳವಡಿಸಿದ್ದು 1908ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ. ಚೊಚ್ಚಲ ಒಲಿಂಪಿಕ್ಸ್‌ ಸಂಘಟಿಸಿದ ಹೆಗ್ಗಳಿಕೆ ಗ್ರೀಕ್‌ಗೆ ಸಲ್ಲುತ್ತದೆ. ಇದೇ ಕಾರಣಕ್ಕೆ ಉದ್ಘಾಟನ ಸಮಾರಂಭದಲ್ಲಿ ಕ್ರೀಡಾಪಟುಗಳ ಪಥಸಂಚಲನ ನಡೆಯುವಾಗ ಪ್ರತಿಸಲವೂ ಗ್ರೀಕ್‌ ತಂಡವೇ ಮುಂಚೂಣಿಯಲ್ಲಿರುತ್ತದೆ. ಬಳಿಕ ಆತಿಥೇಯ ದೇಶದ ಭಾಷೆಯ ಅಲ್ಪಾಬೆಟಿಕ್‌ ಅಕ್ಷರಮಾಲೆಯನ್ನು ಅನುಸರಿಸಿ ತಂಡಗಳು ಪಥಸಂಚಲನದಲ್ಲಿ ಪಾಲ್ಗೊಳ್ಳುತ್ತವೆ. ಆತಿಥೇಯ ತಂಡ ಯಾವಾಗಲೂ ಕೊನೆಯ ಸ್ಥಾನದಲ್ಲಿರುತ್ತದೆ.

ಇದನ್ನು ಓದಿ Paris Olympics 2024: ಮಹಿಳೆಯರ 100 ಮೀಟರ್ ಹರ್ಡಲ್ಸ್​ನಲ್ಲಿ ಒಲಿಂಪಿಕ್ಸ್​ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳೆ ಜ್ಯೋತಿ ಯರ‍್ರಾಜಿ

ಈ ಬಾರಿಯ ವಿಶೇಷತೆ


ಈ ಬಾರಿಯ ಒಲಿಂಪಿಕ್ಸ್​ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ(paris olympics 2024 opening ceremony) ಜುಲೈ 26ರಂದು ಸೀನ್ ನದಿಯಲ್ಲಿ ಸಂಜೆ 7.30ಕ್ಕೆ ಅದ್ಧೂರಿ ಕಾರ್ಯಕ್ರಮದೊಂದಿಗೆ ನೆರವೇರಲಿದೆ. ಕ್ರೀಡಾಕೂಟ ಜುಲೈ 26ರಿಂದ ಆರಂಭವಾಗಿ, ಆಗಸ್ಟ್‌ 11ರವರೆಗೆ ನಡೆಯಲಿದೆ. ಪ್ಯಾರಾಲಿಂಪಿಕ್ಸ್‌ ಆಗಸ್ಟ್‌ 28 ರಿಂದ ಸೆಪ್ಟೆಂಬರ್‌ 8ರವರೆಗೆ ನಿಗದಿಯಾಗಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ಈಗಾಗಲೇ ಕ್ರೀಡಾಕೂಟದ ಆಯೋಜಕರು ಮಾಡಿದ್ದಾರೆ. ಗೇಮ್ಸ್‌ಗಾಗಿಯೇ ಇಲ್ಲಿನ ಸೀನ್‌ ನದಿಯನ್ನು ಸಾರ್ವಜನಿಕ ನಿಧಿಯಿಂದ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿ ಈ ನದಿಯನ್ನು ಸ್ನಾನಮಾಡಲು ಯೋಗ್ಯವೆನಿಸುವ ರೀತಿಯಲ್ಲಿ ಸ್ವಚ್ಛ ಮಾಡಲಾಗಿದೆ.


ಬೋಟ್‌ಗಳಲ್ಲೇ ಪರೇಡ್‌


ಒಲಿಂಪಿಕ್ಸ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್‌ ವರೆಗೆ ಬೋಟ್‌ಗಳಲ್ಲೇ ಪರೇಡ್‌ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.

Exit mobile version