Site icon Vistara News

Sarabjot Singh : ಹರಿಯಾಣ ಸರ್ಕಾರದ ಉದ್ಯೋಗದ ಆಫರ್​ ತಿರಸ್ಕರಿಸಿದ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಸರಬ್ಜೋತ್​ ಸಿಂಗ್​​

Sarabjot Singh

ಬೆಂಗಳೂರು : ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಶೂಟಿಂಗ್​ ಮಿಶ್ರ ತಂಡ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್ ಅವರೊಂದಿಗೆ ಕಂಚಿನ ಪದಕ ಗೆದ್ದ ಭಾರತದ ಶೂಟರ್ ಸರಬ್ಜೋತ್ ಸಿಂಗ್ (Sarabjot Singh) ಅವರು ದೇಶ ವ್ಯಾಪಿ ಖ್ಯಾತಿ ಪಡೆದುಕೊಂಡಿದ್ದಾರೆ. ತಮ್ಮ ರಾಜ್ಯದ ಕ್ರೀಡಾ ಸಾಧಕರಿಗೆ ಉದ್ಯೋಗಳನ್ನು ನೀಡುವ ಪರಿಪಾಠದಂತೆ ಹರಿಯಾಣ ಸರ್ಕಾರ ಅವರಿಗೆ ಉದ್ಯೋಗದ ಭರವಸೆ ಕೊಟ್ಟಿತ್ತು. ಆದರೆ ಅವರು ಅದನ್ನು ತಿರಸ್ಕರಿಸಲು ನಿರ್ಧರಿಸಿದ್ದಾರೆ. ಭಾರತವನ್ನು ಪ್ರತಿನಿಧಿಸುವ ಅನೇಕ ಕ್ರೀಡಾಪಟುಗಳು ತಮ್ಮ ಪ್ರಯಾಣದಲ್ಲಿ ಬೆಂಬಲ ಮತ್ತು ಆರ್ಥಿಕ ಸಹಾಯದ ಕೊರತೆಯ ಬಗ್ಗೆ ದೂರು ನೀಡುತ್ತಿರುವ ನಡುವೆ ಸರಬ್ಜೋತ್, ತಮ್ಮ ಗುರಿ ದೊಡ್ಡದಿದೆ ಎಂದು ಹೇಳುವ ಮೂಲಕ ಸರ್ಕಾರಿ ಉದ್ಯೋಗವನ್ನು ಬೇಡ ಎಂದಿದ್ದಾರೆ.

ಸರಬ್ಜೋತ್ ಅವರು ಯೋಗ್ಯ ಕೆಲಸವನ್ನು ಪಡೆಯಬೇಕು ಎಂದು ಅವರ ಕುಟುಂಬ ಭಯಸಿದ್ದರೂ. ಈ ಸಮಯದಲ್ಲಿ ಶೂಟಿಂಗ್ ತನ್ನ ಮೊದಲ ಆದ್ಯತೆ ಎಂದು ಯುವ ಶೂಟರ್​ ಹೇಳಿದ್ದಾರೆ. “ಕೆಲಸ ಉತ್ತಮವಾಗಿದೆ, ಆದರೆ ನಾನು ಈಗ ಅದನ್ನು ತೆಗೆದುಕೊಳ್ಳುವುದಿಲ್ಲ. ನಾನು ಮೊದಲು ನನ್ನ ಶೂಟಿಂಗ್ ಮೇಲೆ ಗಮನ ಹರಿಸಲು ಬಯಸುತ್ತೇನೆ” ಎಂದು ಸರಬ್ಜೋತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

“ನನ್ನ ಕುಟುಂಬವು ನನ್ನಲ್ಲಿ ಯೋಗ್ಯ ಕೆಲಸವನ್ನು ಪಡೆಯುವಂತೆ ಹೇಳುತ್ತಿದೆ. ಆದರೆ ನಾನು ಶೂಟಿಂಗ್​ನಲ್ಲಿಯೇ ಮುಂದುವರಿಸಲು ಬಯಸುತ್ತೇನೆ. ನಾನು ತೆಗೆದುಕೊಂಡ ನಿರ್ಧಾರಗಳಿಗೆ ವಿರುದ್ಧವಾಗಿ ಹೋಗಲು ನಾನು ಬಯಸುವುದಿಲ್ಲ, ಆದ್ದರಿಂದ ನಾನು ಈಗ ಕೆಲಸ ತೆಗೆದುಕೊಳ್ಳಲು ಸಾಧ್ಯವಿಲ್ಲ” ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಪ್ಯಾರಿಸ್ ಕ್ರೀಡಾಕೂಟದಲ್ಲಿ ಸರಬ್ಜೋತ್ ಮತ್ತು ಮನು ಒಟ್ಟಾಗಿ ಒಲಿಂಪಿಕ್ಸ್ ಮಿಶ್ರ ತಂಡ ಕಂಚಿನ ಪದಕವನ್ನು ಗೆದ್ದರು ಆದರೆ ಮೂರನೇ ಸ್ಥಾನವು ಅವರಿಗೆ ಕಡಿಮೆ ಎಂದು ಎನಿಸಿದೆ.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತದ ಸ್ಪರ್ಧಿಗಳ ಹೋರಾಟ ಮುಕ್ತಾಯ; ಈ ಬಾರಿ ಆರು ಪದಕಗಳು ಮಾತ್ರ

“ನಾನು ಇನ್ನೂ ನನ್ನ ಮುಖ್ಯ ಗುರಿ ಸಾಧಿಸಿಲ್ಲ. ನಾನು 2028 ರಲ್ಲಿ ನನ್ನ ಮುಖ್ಯ ಗುರಿಯನ್ನು ಪೂರ್ಣಗೊಳಿಸುತ್ತೇನೆ. ಪ್ಯಾರಿಸ್ ನಲ್ಲಿ ನನ್ನ ವೈಯಕ್ತಿಕ ಅತ್ಯುತ್ತಮವಾದುದನ್ನು ನೀಡುತ್ತೇನೆ ಎಂದು ನಾನು ನನ್ನ ವೈಯಕ್ತಿಕ ಡೈರಿಯಲ್ಲಿ ಬರೆಯುತ್ತಿದ್ದೆ. ಆದಾಗ್ಯೂ, ನಾನು ಇನ್ನೂ ನನ್ನ ವೈಯಕ್ತಿಕ ಅತ್ಯುತ್ತಮವಾದದ್ದನ್ನು ನೀಡಿಲ್ಲ. 2028ರಲ್ಲಿ ಚಿನ್ನ ಗೆಲ್ಲುವ ಗುರಿ ಹೊಂದಿದ್ದೇನೆ’ ಎಂದು ಸರಬ್ಜೋತ್ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕೇವಲ 22 ವರ್ಷದ ಸರಬ್ಜೋತ್ ಈಗಾಗಲೇ 2028ರ ಲಾಸ್ ಏಂಜಲೀಸ್ ಒಲಿಂಪಿಕ್ ಕ್ರೀಡಾಕೂಟದ ಮೇಲೆ ಕಣ್ಣಿಟ್ಟಿದ್ದಾರೆ. ಪ್ಯಾರಿಸ್​​ನಲ್ಲಿ ವೈಯಕ್ತಿಕ ಪದಕ ಗೆಲ್ಲಲು ವಿಫಲವಾದ ಯುವ ಪಿಸ್ತೂಲ್ ಶೂಟರ್ ನಾಲ್ಕು ವರ್ಷಗಳ ಅವಧಿಯಲ್ಲಿ ಚಿನ್ನದ ಪದಕಕ್ಕಿಂತ ಕಡಿಮೆಯಿಲ್ಲದ ಗುರಿಯನ್ನು ಹೊಂದಿದ್ದಾರೆ.

Exit mobile version