ಲಾಸ್ ಏಂಜಲೀಸ್: ಲಾಸ್ ಏಂಜಲೀಸ್ನಲ್ಲಿ(Los Angeles Olympics 2028) ನಡೆಯಲಿರುವ ಒಲಿಂಪಿಕ್ಸ್(2028 Olympics Cricket) ಕ್ರೀಡಾ ಕೂಟದಲ್ಲಿ ಕ್ರಿಕೆಟ್ ಸೇರಿಸುವ ಪ್ರಸ್ತಾವ ವಿಳಂಬಗೊಂಡಿದೆ. ಎರಡು ದಿನಗಳ ಹಿಂದೆ ಈ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡಿಸಲು ಸಂಘಟನ ಸಮಿತಿ ಒಲವು ತೋರಿದೆ ಎಂದು ವರದಿಯಾಗಿತ್ತು. ಆದರೆ ಇದೀಗ ಕ್ರಿಕೆಟ್ ಸೇರಿಸುವ ನಿರ್ಧಾರ ವಿಳಂಬವಾಗಿದೆ ಎಂದು ತಿಳಿದುಬಂದಿದೆ.
ಕ್ರಿಕೆಟ್ ಅಪಾರ ಅಭಿಮಾನಿಗಳನ್ನು ಆಕರ್ಷಿಸುವ ಸಾಮರ್ಥ್ಯ ಹೊಂದಿರುವ ಕ್ರೀಡೆ ಆಗಿದೆ. ಹೀಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಇತರ 9 ಹೊಸ ಕ್ರೀಡೆಗಳ ಜತೆ ಕ್ರಿಕೆಟ್ ಕೂಡ ಸೇರಿಸಬೇಕೆಂದು ಐಸಿಸಿಯು(ICC) ಒಲಿಂಪಿಕ್ ಸಮಿತಿ ಮನವಿಯನ್ನು ಸಲ್ಲಿಸಿತ್ತು. ಅಲ್ಲದೆ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಆರು ತಂಡಗಳ ಟಿ20 ಕೂಟದ ಕ್ರಿಕೆಟ್ ನಡೆಸುವಂತೆ ವೇಳಾಪಟ್ಟಿಯನ್ನು ರಚಿಸಿ ಗೇಮ್ಸ್‌ನ ಸಂಘಟನ(IOC) ಸಮಿತಿಗೆ ಶಿಫಾರಸು ಮಾಡಿತ್ತು. ಆದರೆ ಇದೀಗ ಅಂತಿಮ ನಿರ್ಧಾರ ಕೈಗೊಳ್ಳುವಲ್ಲಿ ಮತ್ತೆ ಐಒಸಿ ಕಾಲಾವಕಾಶ ಕೇಳಿದೆ.
ಕ್ರಿಕೆಟ್ ಅಲ್ಲದೇ ಬೇಸ್‌ಬಾಲ್/ಸಾಫ್ಟ್ಬಾಲ್, ಕರಾಟೆ, ಕಿಕ್‌ಬಾಕ್ಸಿಂಗ್, ಸ್ಕ್ವಾಷ್ ಸೇರಿದಂತೆ ಕೆಲವು ಆಟಗಳು 2028ರ ಒಲಿಂಪಿಕ್ಸ್‌ಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಒಂದೊಮ್ಮೆ ಕ್ರಿಕೆಟ್ ಸೇರ್ಪಡೆಯಾದರೆ ಯಾವ ತಂಡಗಳು ಸ್ಥಾನ ಪಡೆಯಲಿದೆ ಮತ್ತು ಯಾವ ಆಧಾರದಲ್ಲಿ 6 ತಂಡಗಳನ್ನು ಆಯ್ಕೆ ಮಾಡಲಾಗುವುದು ಎನ್ನುವುದು ಸದ್ಯದ ಕುತೂಹಲವಾದರೂ ಅಕ್ಟೋಬರ್ನಲ್ಲಿ ಒಲಿಂಪಿಕ್ ಸಮಿತಿ ತೆಗೆದುಕೊಳ್ಳುವ ಅಂತಿಮ ನಿರ್ಧಾರದಲ್ಲಿ ಕ್ರಿಕೆಟ್ ಭವಿಷ್ಯ ಅಡಗಿದೆ.
1896ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ನಡೆದಿತ್ತು
ಒಲಿಂಪಿಕ್ಸ್‌ನಲ್ಲಿ ಇಷ್ಟರವರೆಗೆ ಒಮ್ಮೆ ಮಾತ್ರ ಕ್ರಿಕೆಟ್ ಸ್ಪರ್ಧೆ ನಡೆದಿದೆ. 1896ರ ಉದ್ಘಾಟನ ಏಥೆನ್ಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸ್ಪರ್ಧೆಯನ್ನು ಸೇರ್ಪಡೆಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಭಾಗವಹಿಸುವ ತಂಡಗಳ ಕೊರತೆಯಿಂದ ರದ್ದು ಮಾಡಲಾಗಿತ್ತು. ಆದರೆ ನಾಲ್ಕು ವರ್ಷಗಳ ಬಳಿಕ 1900ರ ಪ್ಯಾರಿಸ್ ಒಲಿಪಿಕ್ಸ್‌ನಲ್ಲಿ ಕ್ರಿಕೆಟ್ ಸ್ಪರ್ಧೆ ಮೊದಲ ಬಾರಿ ಜರಗಿದೆ. ಗ್ರೇಟ್ ಬ್ರಿಟನ್ ಮತ್ತು ಆತಿಥೇಯ ಫ್ರಾನ್ಸ್ ಮಾತ್ರ ಸ್ಪರ್ಧಿಸಿದ್ದು, ಬ್ರಿಟನ್ ಚಿನ್ನ ಜಯಿಸಿತ್ತು.ಸೈಂಟ್ ಲೂಯಿಸ್‌ನಲ್ಲಿ 1904ರಲ್ಲಿ ನಡೆದ ಒಲಿಂಪಿಕ್ಸನಲ್ಲಿ ಕ್ರಿಕೆಟ್ ಸ್ಪರ್ಧೆಗೆ ಸಿದ್ಧಥೆ ನಡೆಸಲಾಗಿದ್ದರೂ ಅಂತಿಮವಾಗಿ ರದ್ದುಗೊಂಡಿತ್ತು. ಆ ಬಳಿಕ ಯಾವುದೇ ಒಲಿಂಪಿಕ್ಸ್‌ನಲ್ಲೂ ಕ್ರಿಕೆಟ್ ಸ್ಪರ್ಧೆ ನಡೆದಿಲ್ಲ.
ಇದನ್ನೂ ಓದಿ 2028 Olympics Cricket: 2028ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಸೇರ್ಪಡೆ?
ಹಲವು ವರ್ಷಗಳಿಂದ ಶ್ರಮ
ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಆಟವನ್ನು ಸೇರಿಸಬೇಕು ಎಂಬ ಚರ್ಚೆ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಈಗಲೂ ಅದು ಚರ್ಚಿತ ವಿಷಯವೇ. ಇದಕ್ಕೆ ಹಲವಾರು ಕಾರಣಗಳಿವೆ. ನ್ಯಾಯಯುತವಾಗಿ ಪಂದ್ಯ ನಡೆಸುವುದು ಕಷ್ಟ. ಕ್ರಿಕೆಟ್ ಅಭಿಮಾನಿಗಳಿಗೂ ಇದು ತಿಳಿದಿರುವಂತದ್ದೆ. ಹಲವಾರು ಬಾರಿ, ತೀರ್ಪುಗಳು ವಿವಾದ ಸೃಷ್ಟಿಸಿರುವುದೂ ಉಂಟು. ಎಷ್ಟೇ ತಂತ್ರಜ್ಞಾನಗಳನ್ನು ಬಳಸುತ್ತಿದ್ದರೂ, ಕೆಲವೊಂದು ಬಾರಿ ಅಂಪೈರ್ ಗಳಿಂದ ತಪ್ಪು ನಿರ್ಧಾರಗಳು ಬಂದಿವೆ. ಹೀಗಾಗಿ, ಸರಿಯಾದ ನಿರ್ಧಾರ ಕೈಗೊಳ್ಳಲು ಆಗದಿರುವುದು ಒಂದು ಕಾರಣ ಎನ್ನಬಹುದು.
ಇನ್ನೊಂದೆಡೆ ಸಮಯದ ಅಭಾವ ಕೂಡ ಮಹತ್ವ ಪಡೆದುಕೊಂಡಿದೆ. ಕ್ರಿಕೆಟ್ ಹೋರಾಂಗಣ ಆಟವಾದ ಕಾರಣ ಒಂದು ಪಂದ್ಯ ನಡೆಯಬೇಕಿದ್ದರೆ ಕನಿಷ್ಠ 2-3 ಘಂಟೆಗಳನ್ನು ಮೀಸಲಿಡಬೇಕು. ಏನೇ ಅಂದರೂ ಟಿ10 ಆಟ ಆಡಿಸಿದರೂ 120 ನಿಮಿಷಗಳು ಬೇಕಾಗಿದೆ. ಇದು ಕೂಡ ಹಿನ್ನಡೆಗೆ ಕಾರಣವಾಗಿರಬಹುದು.