ಇಂದೋರ್: ಪದೇಪದೆ ಬೆನ್ನುನೋವಿಗೆ ತುತ್ತಾಗಿ ತಂಡದದಿಂದ ಹೊರಗುಳಿಯುತ್ತಿದ್ದ ಶ್ರೇಯಸ್ ಅಯ್ಯರ್(Shreyas Iyer) ಆಸ್ಟ್ರೇಲಿಯಾ(IND vs AUS) ವಿರುದ್ಧದ ದ್ವಿತೀಯ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್ ನಡೆಸಿ ಶತಕ ಬಾರಿಸಿ ಸಂಭ್ರಮಿಸಿದರು. ಈ ಮೂಲಕ ವಿಶ್ವಕಪ್ಗೆ ಒಂದು ವಾರ ಬಾಕಿ ಇರುವಾಗ ಗ್ರೇಟೆಸ್ಟ್ ಕಮ್ಬ್ಯಾಕ್ ಮಾಡಿದರು.
ಪಂದ್ಯದ ಬಳಿಕ ಮಾತನಾಡಿದ ಅಯ್ಯರ್, ಬಹಳ ದಿನಗಳ ಬಳಿಕ ತೋರಿದ ಈ ಪ್ರದರ್ಶನದಿಂದ ವಿಶ್ವಕಪ್ಗೂ ಮುನ್ನ ನನ್ನಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮೂಡಿದೆ ಎಂದು ಹೇಳಿದರು. ಇದೇ ವೇಳೆ ವಿಶ್ವಕಪ್ನಲ್ಲಿ ಮೂರನೇ ಕ್ರಮಾಂಕದಲ್ಲಿ ಆಡುವ ಇಂಗಿತವನ್ನು ವ್ಯಕ್ತಪಡಿಸಿದರು. “ನನ್ನ ಯೋಜನೆ ಕೊಹ್ಲಿ ಅವರು ಆಡುವ ಮೂರನೇ ಕ್ರಮಾಂಕ. ಆದರೆ ನನಗೆ ತಿಳಿದಿದೆ. ಈ ಸ್ಥಾನ ನನಗೆ ಸಿಗುವುದಿಲ್ಲ ಎಂದು, ಏಕೆಂದರೆ ವಿರಾಟ್ ಈ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಾರೆ. ಹೀಗಾಗಿ ಈ ಸ್ಥಾನವನ್ನು ಪಡೆಯಲು ಯಾವುದೇ ಅವಕಾಶವಿಲ್ಲ. ಆದ್ದರಿಂದ ನಾನು ಯಾವುದೇ ಕ್ರಮಾಂಕ ನೀಡಿದರೂ ಬ್ಯಾಟ್ ಬೀಸಬಲ್ಲ” ಎಂದು ಹೇಳಿದರು.
ಆಸೀಸ್ ವಿರುದ್ಧದ ಪಂದ್ಯದಲ್ಲಿ ಅಯ್ಯರ್ 90 ಎಸೆತ ಎದುರಿಸಿ 11 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 105 ರನ್ ಬಾರಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರಬಹಿಸಿದರು. ಅವರ ಈ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗಿಲ್ ಜತೆ ಸೇರಿಕೊಂಡು ದ್ವಿತೀಯ ವಿಕೆಟ್ಗೆ ಭರ್ತಿ 200 ರನ್ಗಳ ಜತೆಯಾಟನ್ನೂ ನಡೆಸಿದ್ದರು.
ಗ್ರೇಟ್ ಕಮ್ಬ್ಯಾಕ್
ಆಸೀಸ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಅಯ್ಯರ್ ಬೆನ್ನು ನೋವಿನ ಸಮಸ್ಯೆಗೆ ಸಿಲುಕಿ 6 ತಿಂಗಳ ಕಾಲ ಕ್ರಿಕೆಟ್ ನಿಂದ ದೂರ ಉಳಿದಿದ್ದರು. ಇದಾದ ಬಳಿಕ ಅವರು ಐಪಿಎಲ್ನಿಂದಲೂ ದೂರ ಉಳಿದಿದ್ದರು. ಶಸ್ತ್ರಚಿಕಿತ್ಸಗೆ ಒಳಗಾಗಿದ್ದ ಬಳಿಕ ಬೆಂಗಳೂರಿನ ರಾಷ್ಟ್ರೀಯ ಅಕಾಡೆಮಿಯಲ್ಲಿ ಪುನಶ್ಚೇತನದಲ್ಲಿ ಗುಣಮುಖರಾಗಿದ್ದರು. ಹೀಗಾಗಿ ಅವರನ್ನು ಏಷ್ಯಾ ಕಪ್ ಜತೆಗೆ ವಿಶ್ವಕಪ್ ತಂಡದಲ್ಲಿಯೂ ಅವಕಾಶ ನೀಡಲಾಗಿತ್ತು. ವಿಶ್ವಕಪ್ಗೆ ಒಂದು ವಾರ ಇರುವಾಗ ಬಲಿಷ್ಠ ಆಸೀಸ್ ವಿರುದ್ಧ ಶತಕ ಬಾರಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅವರ ಬ್ಯಾಟಿಂಗ್ ಫಾರ್ಮ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಹೆಚ್ಚು ನೆರವಾಗಲಿದೆ. ಅಯ್ಯರ್ ಮಾತ್ರವಲ್ಲದೆ ವಿಶ್ವಕಪ್ನಲ್ಲಿ ಸ್ಥಾನ ಪಡೆದ ಎಲ್ಲ ಆಟಗಾರರು ಕೂಡ ಉತ್ತಮ ಪ್ರದರ್ಶನ ತೋರುವ ಮೂಲಕ ವಿಶ್ವಕಪ್ ಗೆಲ್ಲುವ ಬರವಸೆ ಮೂಡಿಸಿದ್ದಾರೆ.
ಇದನ್ನೂ ಓದಿ IND vs AUS: ಆಸೀಸ್ ವಿರುದ್ಧದ ಅಂತಿಮ ಪಂದ್ಯಕ್ಕೆ ಶುಭಮನ್ ಗಿಲ್,ಶಾರ್ದೂಲ್ ಅಲಭ್ಯ
For everyone who stood by me ❤️ pic.twitter.com/T3jgwLGQLS
— Shreyas Iyer (@ShreyasIyer15) September 25, 2023
ನಂಬಿಕೆಯ ಆಟಗಾರ
ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಭರವಸೆಯ ಪ್ರತಿಭಾನ್ವಿತ ಆಟಗಾರ. ಇದುವರೆಗೆ ಟೀಮ್ ಇಂಡಿಯಾ ಪರ 10 ಟೆಸ್ಟ್, 45 ಏಕದಿನ ಮತ್ತು 49 ಟಿ20 ಪಂದ್ಯಗಳನ್ನು ಆಡಿದ್ದಾರೆ. 2017ರಲ್ಲಿ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 50 ಓವರ್‌ಗಳ ಸ್ವರೂಪದಲ್ಲಿ, ಅವರು 46.13 ಸರಾಸರಿಯಲ್ಲಿ 1753 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದರು.