Site icon Vistara News

IND vs PAK | ಅರ್ಶ್‌ದೀಪ್‌ಗೆ ಖಲಿಸ್ತಾನಿ ಎಂದು ಪಟ್ಟಕಟ್ಟಿದ ಪಾಕಿಸ್ತಾನಿಗಳು, ಭಾರತೀಯರ ವಿರೋಧ

ind vs pak

ಮುಂಬಯಿ : ಸೆಪ್ಟೆಂಬರ್‌ ೪ರಂದು ನಡೆದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಏಷ್ಯಾ ಕಪ್‌ ಸೂಪರ್‌-೪ ಪಂದ್ಯದ ನಿರ್ಣಾಯಕ ಹಂತದಲ್ಲಿ ಕ್ಯಾಚ್‌ ಬಿಟ್ಟ ಅರ್ಶ್‌ದೀಪ್‌ ಸಿಂಗ್‌ ಅವರನ್ನು ಖಲಿಸ್ತಾನಿ ಎಂದು ಪಟ್ಟಕಟ್ಟುತ್ತಿರುವವರ ವಿರುದ್ಧ ಭಾರತೀಯ ಕ್ರಿಕೆಟ್‌ ಪ್ರೇಮಿಗಳು ತಿರುಗಿ ಬಿದ್ದಿದ್ದಾರೆ. ಅರ್ಶ್‌ದೀಪ್ ಅವರನ್ನು ಉದ್ದೇಶಪೂರ್ವಕವಾಗಿ ಅವಮಾನ ಮಾಡುವ ಉದ್ದೇಶ ಹೊಂದಿದ್ದ ಪಾಕಿಸ್ತಾನದ ಕಿಡಿಗೇಡಿಗಳು ಈ ಕೃತ್ಯ ನಡೆಸುತ್ತಿದ್ದಾರೆ ಎಂಬುದನ್ನು ನೆಟ್ಟಿಗರೊಬ್ಬರು ಪತ್ತೆ ಹಚ್ಚಿ ಟ್ವೀಟ್‌ ಮಾಡಿದ್ದಾರೆ.

ಇನಿಂಗ್ಸ್‌ನ ೧೭ ಓವರ್‌ನಲ್ಲಿ ಆಸಿಫ್‌ ಅಲಿ ನೀಡಿದ್ದ ಸುಲಭ ಕ್ಯಾಚ್‌ ಅನ್ನು ಅರ್ಶ್‌ದೀಪ್‌ ಸಿಂಗ್‌ ನೆಲಕ್ಕೆ ಚೆಲ್ಲಿದ್ದರು. ಭಾರತ ತಂಡದ ಸೋಲಿಗೆ ಇದು ಪ್ರಮುಖ ಕಾರಣ ಅಲ್ಲವಾದರೂ ಕ್ರಿಕೆಟ್‌ ಪ್ರೇಮಿಗಳಿಗೆ ಸಹಜವಾಗಿ ಅರ್ಶ್‌ದೀಪ್‌ ಮೇಲೆ ಕೋಪ ಬಂದಿದೆ. ಹೀಗಾಗಿ ಅರ್ಶ್‌ದೀಪ್‌ ಅವರ ಮೇಲೆ ಕಿಡಿಕಾರಿದ್ದರು. ಆದರೆ, ಪಾಕಿಸ್ತಾನದ ಕಿಡಿಗೇಡಿಗಳು ಇದೇ ತಕ್ಕ ಸಮಯ ಎಂದು ಅರ್ಶ್‌ದೀಪ್‌ ಅವರನ್ನು ಪಾಕಿಸ್ತಾನ ಬೆಂಬಲಿತ ಖಲಿಸ್ತಾನಿ ಎಂದು ಕರೆಯಲು ಆರಂಭಿಸಿದ್ದಾರೆ.

ಅನ್ಷುಲ್‌ ಸಕ್ಸೇನಾ ಎಂಬುವರೊಬ್ಬರು ಪಾಕಿಸ್ತಾನದ ಖದೀಮರು ಮಾಡಿರುವ ಕುಕೃತ್ಯಗಳನ್ನು ಎತ್ತಿ ತೋರಿಸಿದ್ದಾರೆ. ಅಂತೆಯೇ ಪಾಕಿಸ್ತಾನದವರು ಭಾನುವಾರ ಇಂಟರ್ನೆಟ್‌ ಮೂಲಕ ಖಲಿಸ್ತಾನ ಟ್ರೆಂಡ್‌ ಮಾಡಿರುವುದನ್ನೂ ಗುರುತಿಸಿದ್ದಾರೆ. ಆ ಮೂಲಕ ಉದ್ದೇಶಪೂರ್ವಕವಾಗಿ ಕೃತ್ಯ ನಡೆಸಿದ್ದನ್ನು ಬಯಲು ಮಾಡಿದ್ದಾರೆ.

ವಿಕಿಪೀಡಿಯಾಗೆ ನೋಟಿಸ್

ಅರ್ಶ್‌ದೀಪ್‌ ಅವರನ್ನು ಖಲಿಸ್ತಾನಿ ದೇಶದವರು ಎಂದು ಬರೆಯಲಾಗಿರುವ ವಿಕಿಪಿಡಿಯಾಗೇ ಕೇಂದ್ರ ಸರಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ ನೋಟಿಸ್‌ ಜಾರಿ ಮಾಡಿದೆ. ವಿಕಿಪೀಡಿಯಾ ಓಪನ್ ಸೋರ್ಸ್‌ ಮಾಹಿತಿ ಕಣಜವಾಗಿದ್ದು, ಯಾರು ಬೇಕಾದರೂ ಮಾಹಿತಿಯನ್ನು ತಿದ್ದಲು ಸಾಧ್ಯವಿದೆ. ಅಂತೆಯೇ ಪಾಕಿಸ್ತಾನಿ ಮೂಲದ ಕಿಡಿಗೇಡಿಗಳು ಅರ್ಶ್‌ದೀಪ್‌ ಅವರ ಮಾಹಿತಿಯನ್ನು ತಿದ್ದಿ, ಖಲಿಸ್ತಾನ ದೇಶದ ಪರವಾಗಿ ಅಡುವ ಆಟಗಾರ, ಖಲಿಸ್ತಾನ ಪರ ಪದಾರ್ಪಣೆ ಮಾಡಿದ ಆಟಗಾರ, ಖಲಿಸ್ತಾನ ತಂಡದ ಪರ ೧೮ ವಯೋಮಿತಿಯ ತಂಡದಲ್ಲಿ ಆಡಿದ ಅಟಗಾರ ಎಂದೆಲ್ಲ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಸರಕಾರ ನೋಟಿಸ್‌ ನೀಡಿದೆ. ಈ ಕುಕೃತ್ಯವನ್ನೂ ಅನ್ಷುಲ್‌ ಸಕ್ಸೇನಾ ಅವರು ಬಯಲು ಮಾಡಿದ್ದು, ಐಪಿ ವಿಳಾಸ ಸಮೇತ ಕಿಡಿಗೇಡಿಗಳ ಕೃತ್ಯವನ್ನು ಬೊಟ್ಟು ಮಾಡಿ ತೋರಿಸಿದ್ದಾರೆ.

ಭಾರತೀಯರ ಬೆಂಬಲ

ಕ್ರಿಕೆಟಿಗ ಅರ್ಶ್‌ದೀಪ್‌ ಸಿಂಗ್‌ಗೆ ಭಾರತೀಯ ಕ್ರಿಕೆಟಿಗರು ಹಾಗೂ ರಾಜಕೀಯ ನಾಯಕರು ಬೆಂಬಲ ಸೂಚಿಸಿದ್ದಾರೆ. ಅದರಲ್ಲೂ ಪಂಜಾಬ್ ಮೂಲದ ನಾಯಕರು ಕ್ರಿಕೆಟಿಗನನ್ನು ಟೀಕಿಸಿದವರರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಭಾರತ ತಂಡದ ಮಾಜಿ ಸ್ಪಿನ್ನರ್‌ ಹಾಗೂ ಆಪ್‌ ನಾಯಕ ಹರ್ಭಜನ್‌ ಸಿಂಗ್‌, ಅರ್ಶ್‌ದೀಪ್‌ ಅವರನ್ನು ದೂರುತ್ತಿರುವವರ ಮೇಲೆ ಕಿಡಿಕಾರಿದ್ದಾರೆ.

“ಯಾರೂ ಉದ್ದೇಶಪೂರ್ವಕವಾಗಿ ಕ್ಯಾಚ್‌ ಬಿಡುವುದಿಲ್ಲ. ನಮ್ಮ ಹುಡುಗನ ಬಗ್ಗೆ ನಮಗೆ ಹೆಮ್ಮೆಯಿದೆ. ಪಾಕಿಸ್ತಾನಿ ಕ್ರಿಕೆಟಿಗರು ಚೆನ್ನಾಗಿ ಆಡಿದರು. ನಮ್ಮ ದೇಶದ ಆಟಗಾರನ ಬಗ್ಗೆಯೇ ಕೆಟ್ಟದಾಗಿ ಕಾಮೆಂಟ್‌ ಮಾಡುವವರದ್ದು ಸಣ್ಣತನ,’ ಎಂದು ಅವರು ಬರೆದುಕೊಂಡಿದ್ದಾರೆ.

Exit mobile version