ರಾವಲ್ಪಿಂಡಿ: ತಾನು ತೋಡಿದ ಹಳ್ಳಕ್ಕೆ ತಾನೇ ಬಿದ್ದ ಎನ್ನುವ ನಾಣ್ಣುಡಿಯಂತೆ ಪಾಕಿಸ್ತಾನ(PAK vs BNG) ತಂಡ ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್(PAK vs BNG 1st Test) ಪಂದ್ಯದಲ್ಲಿ ಹೀನಾಯ 10 ವಿಕೆಟ್ಗಳ ಸೋಲು ಕಂಡಿದೆ. ಬಾಂಗ್ಲಾದೇಶ ತಂಡ ಪಾಕ್ ನೆಲದಲ್ಲಿ ಇದೇ ಮೊದಲ ಗೆಲುವು ಸಾಧಿಸಿ ಐತಿಹಾಸಿಕ ಸಾಧನೆ ಮಾಡಿದೆ.
ರಾವಲ್ಪಿಂಡಿಯಲ್ಲಿ ನಡೆದ ಈ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ 6 ವಿಕೆಟ್ಗೆ 448 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು. ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 565 ರನ್ ಪೇರಿಸಿತು. ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ಅಂತಿಮ ದಿನದಾಟದಲ್ಲಿ ಕೇವಲ 146 ರನ್ಗೆ ಸರ್ವ ಪತನ ಕಂಡಿತು. ಗೆಲುವಿಗೆ 28 ರನ್ ಗುರಿ ಪಡೆದ ಬಾಂಗ್ಲಾದೇಶ ವಿಕೆಟ್ ನಷ್ಟವಿಲ್ಲದೆ 30 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಅತಿಯಾದ ಆತ್ಮವಿಶ್ವಾಸವೇ ಪಾಕ್ ತಂಡದ ಸೋಲಿಗೆ ಕಾರಣವಾಯಿತು. ಮೊದಲ ಇನಿಂಗ್ಸ್ನಲ್ಲಿ ಡಿಕ್ಲೇರ್ ಮಾಡದೇ ಇರುತ್ತಿದ್ದರೆ ಕನಿಷ್ಠ ಪಂದ್ಯವನ್ನು ಡ್ರಾ ಮಾಡುವ ಅವಕಾಶ ದೊರಕುತ್ತಿತ್ತು. ಇದೀಗ ಸೋಲು ಕಂಡು ಪೇಚಿಗೆ ಸಿಲುಕಿದೆ.
ಐತಿಹಾಸಿಕ ಗೆಲುವು
ಬಾಂಗ್ಲಾದೇಶ ಪಾಕಿಸ್ತಾನ ನೆಲದಲ್ಲಿ ಸಾಧಿಸಿದ ಮೊದಲ ಗೆಲುವು ಇದಾಗಿದೆ. ಇದುವರೆಗೆ 13 ಟೆಸ್ಟ್ ಪಂದ್ಯಗಳನ್ನು ಆಡಿತ್ತಾದರೂ ಒಂದೇ ಒಂದು ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಇದೀಗ 14 ನೇ ಪ್ರಯತ್ನದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದು ಸಾಧನೆ ಮಾಡಿದೆ.
ಬಾಂಗ್ಲಾ ಪರ ದ್ವಿತೀಯ ಇನಿಂಗ್ಸ್ನಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ ಮೆಹಿದಿ ಹಸನ್ ಮಿರಾಜ್ 21 ರನ್ಗೆ 4 ವಿಕೆಟ್ ಉಡಾಯಿಸಿದರೆ, ಅನುಭವಿ ಶಕಿಬ್ ಅಲ್ ಹಸನ್, 3 ವಿಕೆಟ್ ಕಡೆವಿದರು. ಬ್ಯಾಟಿಂಗ್ನಲ್ಲಿ ಮೊದಲ ಇನಿಂಗ್ಸ್ನಲ್ಲಿ ಪಾಕ್ ಬೌಲರ್‌ಗಳ ಮೇಲೆ ಸವಾರಿ ಮಾಡಿದ್ದ ಅನುಭವಿ ಆಟಗಾರ ಮುಶ್ಫಿಕರ್ ರಹೀಂ 191 ರನ್ ಬಾರಿಸಿದ್ದರು. ಅವರ ಈ ಭರ್ಜರಿ ಆಟ ಬಾಂಗ್ಲಾ ತಂಡಕ್ಕೆ ಮೇಲುಗೈ ಸಾಧಿಸುವಂತೆ ಮಾಡಿತು. ಉಳಿದಂತೆ ಮೆಹಿದಿ ಹಸನ್ 77, ಶಾದ್ಮನ್ ಇಸ್ಲಾಂ 93 ರನ್ ಬಾರಿಸಿದ್ದರು.
ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿಯೂ ಪ್ರಗತಿ ಸಾಧಿಸಿದ ಬಾಂಗ್ಲಾ
ಪಾಕಿಸ್ತಾನದ ವಿರುದ್ಧದ ಮೊದಲ ಟೆಸ್ಟ್ ಗೆಲುವು ಸಾಧಿಸಿದ ಬಾಂಗ್ಲಾದೇಶ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) 2023-25 ಅಂಕಗಳ ಪಟ್ಟಿಯಲ್ಲಿ ಜಂಟಿ-ಐದನೇ ಸ್ಥಾನಕ್ಕೆ ಏರಿತು. ಮತ್ತೊಂದೆಡೆ, ಶಾನ್ ಮಸೂದ್ ನಾಯಕತ್ವದಲ್ಲಿ ಆಡಿದ ಎಲ್ಲಾ ನಾಲ್ಕು ಟೆಸ್ಟ್ ಪಂದ್ಯಗಳನ್ನು ಕಳೆದುಕೊಂಡಿರುವ ಪಾಕಿಸ್ತಾನ ಇದೀಗ ಎರಡನೇ-ಕೊನೆಯ ಸ್ಥಾನಕ್ಕೆ ಕುಸಿದಿದೆ. ಬಾಂಗ್ಲಾದೇಶ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಅಂತಿಮ ಟೆಸ್ಟ್ ಆಗಸ್ಟ್ 30ರಿಂದ ಆರಂಭಗೊಳ್ಳಲಿದೆ. ಈ ಪಂದ್ಯವನ್ನು ಸೋತರೆ ಪಾಕ್ ತವರಿನಲ್ಲಿ ಸರಣಿ ಸೋಲಿನ ಮುಖಭಂಗ ಎದುರಿಸಲಿದೆ.