ಮೆಲ್ಬೋರ್ನ್: ಸ್ಯಾಮ್ ಕರನ್ ಮತ್ತು ಆದಿಲ್ ರಶೀದ್ ಬೌಲಿಂಗ್ ಆರ್ಭಟಕ್ಕೆ ನಲುಗಿದ ಪಾಕಿಸ್ತಾನ ತಂಡ ಐಸಿಸಿ ಟ20 ವಿಶ್ವ ಕಪ್ ಫೈನಲ್ ಪಂದ್ಯದಲ್ಲಿ 137 ರನ್ ಗಳಿಸಿದೆ. ಇಂಗ್ಲೆಂಡ್ ತಂಡ ಗೆಲುವಿಗೆ 138 ರನ್ ಗಳಿಸಬೇಕಿದೆ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾನುವಾರದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 137 ರನ್ ಪೇರಿಸಿ ಇಂಗ್ಲೆಂಡ್ ತಂಡಕ್ಕೆ ಸವಾಲೊಡ್ಡಿದೆ. ಇಂಗ್ಲೆಂಡ್ ಪರ ಆದಿಲ್ ರಶೀದ್ 2, ಸ್ಯಾಮ್ ಕರನ್ 3 ವಿಕೆಟ್ ಕಿತ್ತು ಮಿಂಚಿದರು.
ಪಾಕ್ಗೆ ಆರಂಭಿಕ ಆಘಾತ
ನ್ಯೂಜಿಲೆಂಡ್ ವಿರುದ್ಧದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿ ಮಿಂಚಿದ್ದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಈ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದರು. ಕೇವಲ 15 ರನ್ಗೆ ಆಟ ಮುಗಿಸಿದರು. ಈ ವಿಕೆಟ್ ಪತನದ ಬಳಿಕ ಆಡಲಿಳಿದ ಮೊಹಮ್ಮದ್ ಹ್ಯಾರಿಸ್(8) ಕೂಡ ಹೆಚ್ಚು ಹೊತ್ತು ಕ್ರೀಸ್ ಆಕ್ರಮಿಸಲು ವಿಫಲರಾದರು. ತಂಡದ ಮೊತ್ತ 50ರ ಗಡಿ ದಾಟುವ ಮೊದಲೇ ಪ್ರಮುಖ ಎರಡು ವಿಕೆಟ್ ಕಳೆದುಕೊಂಡು ಪಾಕ್ ಆರಂಭಿಕ ಆಘಾತಕ್ಕೆ ಸಿಲುಕಿತು.
ಆರಂಭಿಕ ಎರಡು ವಿಕೆಟ್ ಕಳೆದು ಕೊಂಡು ಸಂಕಷ್ಟಕ್ಕೆ ಸಿಲುಕಿದ ಪಾಕಿಸ್ತಾನ ತಂಡಕ್ಕೆ ನೆರವಾದದ್ದು ನಾಯಕ ಬಾಬರ್ ಅಜಂ. ತಾಳ್ಮೆಯುತ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸುವ ಪ್ರಯತ್ನ ಮಾಡಿದರು. ಆದರೆ ಇವರ ಆಟವೂ ಹೆಚ್ಚು ಕಾಲ ನಡೆಯಲಿಲ್ಲ. ಆದಿಲ್ ರಶೀದ್ ಅವರ ಎಸೆತವನ್ನು ಲಾಂಗ್ ಆನ್ ಕಡೆಗೆ ಬಾರಿಸುವ ಯತ್ನದಲ್ಲಿ ಬೆನ್ ಸ್ಟೋಕ್ಸ್ಗೆ ಕ್ಯಾಚ್ ನೀಡಿ ಔಟಾದರು. ಅವರ ಗಳಿಕೆ 32 ರನ್ಗೆ ಕೊನೆಕೊಂಡಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಶಾನ್ ಮಸೂದ್(38) ಮತ್ತು ಶಾದಾಬ್ ಖಾನ್(20) ಸಾಹಸದಿಂದ ತಂಡ ಸ್ಪರ್ಧಾತ್ಮಕ ಮೊತ್ತ ಗಳಿಸಿತು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ: 20 ಓವರ್ಗಳಲ್ಲಿ 8 ವಿಕೆಟ್ಗೆ 137 (ಬಾಬರ್ ಅಜಂ 32, ಶಾನ್ ಮಸೂದ್ 38, ಆದಿಲ್ ರಶೀದ್ 22ಕ್ಕೆ2, ಸ್ಯಾಮ್ ಕರನ್ 12ಕ್ಕೆ 3).
ಇದನ್ನೂ ಓದಿ | T20 World Cup | ಹಾಲಿ ಆವೃತ್ತಿಯಲ್ಲಿ ಹೆಚ್ಚು ಅರ್ಧ ಶತಕಗಳನ್ನು ಬಾರಿಸಿದವರು