Site icon Vistara News

PAK VS NZ | ಕಿವೀಸ್​ ಬೆಂಡೆತ್ತಿದ ಬಾಬರ್​ ಪಡೆ; ಫೈನಲ್​ಗೇರಿದ ಪಾಕಿಸ್ತಾನ

t20

ಸಿಡ್ನಿ: ಬೌಲಿಂಗ್​ ಮತ್ತು ಬ್ಯಾಟಿಂಗ್​ನಲ್ಲಿ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರಿದ ಪಾಕಿಸ್ತಾನ(PAK VS NZ ) ತಂಡ ಟಿ20 ವಿಶ್ವ ಕಪ್​ನ ಸೆಮಿಫೈನಲ್​ ಸಮರದಲ್ಲಿ ಬಲಿಷ್ಠ ನ್ಯೂಜಿಲೆಂಡ್​​ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿ ಫೈನಲ್​ ಪ್ರವೇಶಿಸಿದೆ. ಕೂಟದ ಆರಂಭಿಕ ಪಂದ್ಯದಲ್ಲಿ ಹೀನಾಯವಾಗಿ ಸೋತು ಎಲ್ಲಡೆ ಟೀಕೆಗೆ ಗುರಿಯಾಗಿದ್ದ ಪಾಕ್​ ಬಳಿಕ ಫಿನಿಕ್ಸ್​ನಂತೆ ಎದ್ದು ಬಂದು ಇದೀಗ ಫೈನಲ್​ ತಲುಪಿ ನಿರಾಳವಾಗಿದೆ. ಗುರುವಾರ ಭಾರತ ಮತ್ತು ಇಂಗ್ಲೆಂಡ್​ ವಿರುದ್ಧದ ಪಂದ್ಯದ ವಿಜೇತರನ್ನು ಪಾಕ್​ ಫೈನಲ್​ನಲ್ಲಿ ಎದುರಿಸಲಿದೆ.

ಸಿಡ್ನಿ ಕ್ರಿಕೆಟ್​ ಮೈದಾನದಲ್ಲಿ ಬುಧವಾರ ನಡೆದ ಈ ಸೆಮಿ ಕಾದಾಟದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ನ್ಯೂಜಿಲೆಂಡ್​ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 152 ರನ್​ ಗಳಿಸಿ ಸವಾಲೊಡ್ಡಿತು. ಬಳಿಕ ಗುರಿ ಬೆನ್ನಟ್ಟಿದ ಪಾಕಿಸ್ತಾನ 19.1 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 153 ರನ್​ ಪೇರಿಸಿ ಗೆಲುವಿನ ನಗೆ ಬೀರಿತು.

ಚೇಸಿಂಗ್​ ವೇಳೆ ಪಾಕ್​ ಆರಂಭಿಕರಾದ ಮೊಹಮ್ಮದ್​ ರಿಜ್ವಾನ್​ ಮತ್ತು ಬಾಬರ್​ ಅಜಂ ಆರಂಭದಿಂದಲೇ ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿ ನ್ಯೂಜಿಲೆಂಡ್​ ಬೌಲರ್‌ಗಳನ್ನು ಕಾಡಿದರು.​ ಅದರಂತೆ ಅರ್ಧಶತಕವನ್ನು ಪೂರೈಸಿದರು. ಇಷ್ಟು ದಿನ ಕಳಪೆ ಬ್ಯಾಟಿಂಗ್​ನಿಂದ ಟೀಕೆಗೆ ಗುರಿಯಾಗಿದ್ದ ಪಾಕ್​ ನಾಯಕ ಮಹತ್ವದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್​ ನಡೆಸಿ ಟೀಕಾಕಾರರಿಗೆ ಬ್ಯಾಟ್​ ಮೂಲಕ ಉತ್ತರ ನೀಡಿದರು. ಅಜಂ 42 ಎಸೆತದಲ್ಲಿ 53 ರನ್​ ಗಳಿಸಿದರು. ಇನ್ನು ಬಾಬರ್​ ಮತ್ತು ರಿಜ್ವಾನ್​ ಮೊದಲ ವಿಕೆಟ್​ಗೆ ಬರೋಬ್ಬರಿ 105 ರನ್​ ಜತೆಯಾಟ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ರಿಜ್ವಾನ್​ 57 ರನ್​ ಗಳಿಸಿ ಟ್ರೆಂಟ್​ ಬೌಲ್ಟ್​ಗೆ ವಿಕೆಟ್​ ಒಪ್ಪಿಸಿದರು.

ವಿಲಿಯಮ್ಸನ್-ಮಿಚೆಲ್​​ ಆಸರೆ
ಮೊದಲು ಬ್ಯಾಟಿಂಗ್​ ನಡೆಸಿದ ನ್ಯೂಜಿಲೆಂಡ್​ಗೆ ಆರಂಭಿಕ ಓವರ್‌ನಲ್ಲೇ ಪಾಕ್ ಶಾಕ್​ ನೀಡಿತು. ಶಾಹಿನ್​ ಅಫ್ರಿದಿ ತಮ್ಮ ಮೊದಲ ಓವರ್​ನಲ್ಲಿಯೇ ಡೇಂಜರಸ್​ ಬ್ಯಾಟರ್​ ಫಿನ್​ ಅಲೆನ್​(4) ಅವರ ವಿಕೆಟ್​ ಕಿತ್ತು ಪಾಕ್​ಗೆ ಮುನ್ನಡೆ ತಂದುಕೊಟ್ಟರು. ಆದರೆ, ನಾಯಕ ಕೇನ್ ವಿಲಿಯಮ್ಸನ್ ಹಾಗೂ ಡ್ಯಾರೆಲ್ ಮಿಚೆಲ್ ಅವರ ಜವಾಬ್ದಾರಿಯುತ ಬ್ಯಾಟಿಂಗ್​ ನೆರವಿನಿಂದ ಕಿವೀಸ್ ಪಡೆ ಸವಾಲಿನ ಮೊತ್ತ ಪೇರಿಸಲು ಯಶಸ್ವಿಯಾಯಿತು. ಈ ಜೋಡಿ ತಂಡವನ್ನು ಕುಸಿತದಿಂದ ಪಾರು ಮಾಡುವುದರ ಜತೆಗೆ ಉತ್ತಮ ಜತೆಯಾಟದಲ್ಲಿಯೂ ಭಾಗಿಯಾಯಿತು.

ಕೇನ್ ವಿಲಿಯಮ್ಸನ್ 42 ಎಸೆತಗಳಲ್ಲಿ 46 ರನ್‌ ಗಳಿಸಿದರೆ ಡ್ಯಾರಿಲ್​ ಮಿಚೆಲ್​ 35 ಎಸೆತಗಳಲ್ಲಿ ಅಜೇಯ 53 ರನ್‌ ಸಿಡಿಸಿದರು. ಉಳಿದಂತೆ ಡೆವಾನ್​ ಕಾನ್ವೆ 21 ರನ್​ ಗಳಿಸಿದರು. ಪಾಕಿಸ್ತಾನ ತಂಡದ ಬೌಲರ್​ಗಳು ಹೆಚ್ಚು ವಿಕೆಟ್​ ಉರುಳಿಸಲು ಸಾಧ್ಯವಾಗದಿದ್ದರೂ ರನ್​ ನಿಯಂತ್ರಣ ಮಾಡುವುದರಲ್ಲಿ ಯಶಸ್ವಿಯಾದರು. ಶಾಹಿನ್ ಅಫ್ರಿದಿ 2 ವಿಕೆಟ್ ಪಡೆದರೆ ಒಂದು ವಿಕೆಟ್ ಮೊಹಮ್ಮದ್ ನವಾಜ್ ಪಾಲಾಯಿತು.

ಸಂಕ್ಷಿಪ್ತ ಸ್ಕೋರ್​

ನ್ಯೂಜಿಲೆಂಡ್​: 20 ಓವರ್​ಗಳಲ್ಲಿ 4 ವಿಕೆಟ್​ಗೆ 152(ಕೇನ್​ ವಿಲಿಯಮ್ಸನ್​ 46, ಡ್ಯಾರೆಲ್​ ಮಿಚೆಲ್​ ಅಜೇಯ 53, ಶಾಹಿನ್​ ಅಫ್ರಿದಿ 24ಕ್ಕೆ2)

ಪಾಕಿಸ್ತಾನ (ಬಾಬರ್​ ಅಜಂ 53, ಮೊಹಮ್ಮದ್​ ರಿಜ್ವಾನ್​ 57, ಮೊಹಮ್ಮದ್​ ಹ್ಯಾರಿಸ್​ 30, ಟ್ರೆಂಟ್​ ಬೌಲ್ಟ್​ 33ಕ್ಕೆ 2).

ಇದನ್ನೂ ಓದಿ | T20 World Cup | ವಿರಾಟ್​ ಕೊಹ್ಲಿಗೆ ಗಾಯ; ಇಂಗ್ಲೆಂಡ್​ ವಿರುದ್ಧದ ಸೆಮಿಫೈನಲ್​ ಪಂದ್ಯಕ್ಕೆ ಅನುಮಾನ?

Exit mobile version