ಪರ್ತ್: ಅತ್ಯಂತ ರೋಚಕವಾಗಿ ಸಾಗಿದ ಪಾಕಿಸ್ತಾನ ಮತ್ತು ಜಿಂಬಾಬ್ವೆ ವಿರುದ್ಧದ ಟಿ20 ವಿಶ್ವ ಕಪ್ನ ಸೂಪರ್-12 ಪಂದ್ಯದಲ್ಲಿ ಜಿಂಬಾಬ್ವೆ ರೋಚಕ ಒಂದು ರನ್ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ನಲ್ಲಿ ಜಿಂಬಾಬ್ವೆ ತಂಡವು ಪಾಕ್ ಪಡೆಗೆ ಸೋಲುಣಿಸಿ ಐತಿಹಾಸಿಕ ಗೆಲುವು ದಾಖಲಿಸಿದೆ.
ಪರ್ತ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಜಿಂಬಾಬ್ವೆ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 130 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ತನ್ನ ಪಾಲಿನ ಓವರ್ನಲ್ಲಿ 8 ವಿಕೆಟ್‌ಗೆ 129 ರನ್ ಗಳಿಸಿ ಒಂದು ರನ್ ಅಂತರದಿಂದ ಸೋಲು ಕಂಡಿತು. ಈ ಸೋಲಿನೊಂದಿಗೆ ಬಾಬರ್ ಪಡೆಯ ಸೆಮಿ ಫೈನಲ್ ಹಾದಿ ದುರ್ಗಮವಾಗಿದೆ.
ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಪಾಕ್ ಆರಂಭದಲ್ಲೇ ಆಫಾತ ಎದುರಿಸಿತು. ನಾಯಕ ಬಾಬರ್ ಆಜಂ(4), ಮೊಹಮ್ಮದ್ ರಿಜ್ವಾನ್ (14) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾದ ಶಾನ್ ಮಸೂದ್(44) ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಡಸೇರಿಸುವಲ್ಲಿ ವಿಫಲರಾದರು.
ಇನಿಂಗ್ಸ್ ಆರಂಭಿಸಿದ ಜಿಂಬಾಬ್ವೆಗೆ ಮಧುವರೆ(17) ಹಾಗೂ ನಾಯಕ ಕ್ರೇಗ್ ಇರ್ವಿನ್(19) ಮೊದಲ ವಿಕೆಟ್‌ಗೆ 42 ರನ್ಗಳ ಜೊತೆಯಾಟ ನಡೆಸಿ ಉತ್ತಮ ಅಡಿಪಾಯ ನಿರ್ಮಿಸಿದರು. ಆದರೆ ಈ ಜೋಡಿ ಔಟಾದ ಬಳಿಕ ನಾಟಕೀಯ ಕುಸಿತಕ್ಕೆ ಒಳಗಾಗಿದ್ದ ಜಿಂಬಾಬ್ವೆ ತಂಡಕ್ಕೆ ಆಸರೆಯಾಗಿದ್ದು ಸೀನ್ ವಿಲಿಯಮ್ಸ್. 31 ರನ್ ಬಾರಿಸುವ ಮೂಲಕ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ನಲ್ಲಿ ಕಚ್ಚಿ ನಿಂತು ತಂಡವನ್ನು ದಿಢೀರ್ ಕುಸಿತದಿಂದ ಪಾರು ಮಾಡಿದರು. ಅಂತಿಮ ಹಂತದಲ್ಲಿ ಬ್ರಾಡ್ ಇವನ್ಸ್ 15 ಎಸೆತಗಳಲ್ಲಿ 19 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿದಾಟಿತು.
ಸಂಕ್ಷಿಪ್ತ ಸ್ಕೋರ್
ಜಿಂಬಾಬ್ವೆ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 130
ಪಾಕಿಸ್ತಾನ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 129
ಇದನ್ನೂ ಓದಿ | T20 World Cup | ಭಾರತ-ನೆದರ್ಲೆಂಡ್ಸ್ ಪಂದ್ಯದ ವೇಳೆ ಯುವಕನ ಪ್ರೇಮ ನಿವೇದನೆ, ಒಪ್ಪಿದಳಾ ಯುವತಿ?