Site icon Vistara News

Ind vs Pak : ಭಾರತದ ಬೌಲಿಂಗ್​ ದಾಳಿಗೆ ಬೆದರಿದ ಪಾಕ್​ ತಂಡ 191 ರನ್​ಗೆ ಆಲ್​ಔಟ್​

Kuldeep yadav

ಅಹಮದಾಬಾದ್​​: ಭಾರತದ ಬೌಲರ್​ಗಳ ಮಾರಕ ದಾಳಿಗೆ ಬೆದರಿದ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನ (Ind vs Pak) ತಂಡ 42.5 ಓವರ್​ಗಳಲ್ಲಿ 191 ರನ್​ಗಳಿಗೆ ಆಲ್​ಔಟ್​ ಆಗಿದೆ. ಇದರೊಂದಿಗೆ ಭಾರತ ತಂಡಕ್ಕೆ 192 ರನ್​ಗಳ ಸುಲಭ ಗೆಲುವಿನ ಗುರಿ ಎದುರಾಗಿದೆ. ಜಸ್​ಪ್ರಿತ್​ ಬುಮ್ರಾ, ಮೊಹಮ್ಮದ್ ಸಿರಾಜ್​, ಹಾರ್ದಿಕ್ ಪಾಂಡ್ಯ, ಕುಲ್ದೀಪ್​ ಯಾದವ್​, ರವೀಂದ್ರ ಜಡೇಜಾ ತಲಾ 2 ವಿಕೆಟ್​ ಪಡೆಯುವ ಮೂಲಕ ಭಾರತ ತಂಡಕ್ಕೆ ಮುನ್ನಡೆಗೆ ಕಾರಣರಾದರು. ಇನಿಂಗ್ಸ್​​ ಉದ್ದಕ್ಕೂ ಭಾರತದ ಬೌಲರ್​ಗಳು ಹಾಗೂ ಫೀಲ್ಡರ್​ಗಳು ಮೆರೆದಾಡಿದರು. ಪಾಕ್​ ಬ್ಯಾಟರ್​ಗಳು ಅಕ್ಷರಶಃ ಪರದಾಡಿದರು.

ಹೈವೋಲ್ಟೇಜ್​ ಹಣಾಹಣಿಯಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಪಾಕ್​ ತಂಡ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ 41 ರನ್ ಬಾರಿಸಿತು. ಹೀಗಾಗಿ ಪಾಕ್​ ತಂಡ ದೊಡ್ಡ ಮೊತ್ತ ಪೇರಿಸುವ ನಿರೀಕ್ಷೆಯಿತ್ತು. ಆದರೆ, ಮೊಹಮ್ಮದ್ ಸಿರಾಜ್​ ಅಬ್ದುಲ್ಲಾ ಶಫಿಖ್​ ಅವರನ್ನು ಔಟ್ ಮಾಡಿದರು. ಅವರು 20 ರನ್​ಗೆ ಔಟ್ ಮಾಡಿದರು. ಅದಾದ ಬಳಿಕವೂ ಪಾಕ್​ ತಂಡ ಬ್ಯಾಟಿಂಗ್ ಮುಂದುವರಿಸಿತು. ಆದರೆ ಮತ್ತೊಂದು ಬದಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಇಮಾಮ್​ ಉಲ್​ ಹಕ್​ (36) ಅವನ್ನು ಹಾರ್ದಿಕ್​ ಪಾಂಡ್ಯ ಔಟ್ ಮಾಡಿದರು.

ಬಾಬರ್​, ರಿಜ್ವಾನ್​ ಉತ್ತಮ ಬ್ಯಾಟಿಂಗ್​

ಮೊದಲೆರಡು ವಿಕೆಟ್​ಗಳು ಪತನಗೊಳ್ಳುತ್ತಿದ್ದಂತೆ ಜತೆಯಾದ ನಾಯಕ ಬಾಬರ್ ಅಜಂ ಹಾಗೂ ವಿಕೆಟ್​ ಕೀಪರ್​ ಮೊಹಮ್ಮದ್ ರಿಜ್ವಾನ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರಿಬ್ಬರೂ ಮೂರನೇ ವಿಕೆಟ್​ಗೆ 82 ರನ್​ ಜತೆಯಾಟ ನೀಡಿದರು. ನಾಯಕ ಬಾಬರ್ ಅಜಮ್ ಅವರಂತೂ ಅರ್ದ ಶತಕ ಬಾರಿಸಿ ಭಾರತಕ್ಕೆ ಅಪಾಯಕಾರಿಯಾಗುವ ಲಕ್ಷಣ ತೋರಿದರು. ಆದರೆ, ಮೊಹಮ್ಮದ್ ಸಿರಾಜ್ ಅವರನ್ನು ಬೌಲ್ಡ್ ಮಾಡುವ ಮೂಲಕ ಭಾರತಕ್ಕೆ ಚೈತನ್ಯ ತಂದರು.

ಬಳಿಕ ಸ್ಪಿನ್​ ದಾಳಿಗೆ ಇಳಿದ ಕುಲ್ದೀಪ್​ ಯಾದವ್ ಒಂದೇ ಓವರ್​ನಲ್ಲಿ ಸೌದ್ ಶಕೀಲ್​ (6ರನ್​) ಹಾಗೂ ಇಫ್ತಿಕಾರ್ ಅಹ್ಮದ್​ (4) ಅವರನ್ನು ಔಟ್​ ಮಾಡುವ ಮೂಲಕ ಪಂದ್ಯಕ್ಕೆ ನಾಟಕೀಯ ತಿರುವು ತಂದರು. ಬಳಿಕ ದಾಳಿಗೆ ಇಳಿದ ಜಸ್​ಪ್ರಿತ್​ ಬುಮ್ರಾ ಕ್ರೀಸ್​​ನಲ್ಲಿ ತಳವೂರಿದ್ದ ರಿಜ್ವಾನ್​ ವಿಕೆಟ್​ ಉರುಳಿಸಿದರು. ರಿಜ್ವಾನ್ 1 ರನ್ ಕೊರತೆಯೊಂದಿಗೆ ಅರ್ಧ ಶತಕ ಬಾರಿಸುವ ಅವಕಾಶ ಕಳೆದುಕೊಂಡರು. ಈ ರೀತಿಯಾಗಿ ಆರಂಭಗೊಂಡ ಭಾರತದ ಬೌಲಿಂಗ್ ಪ್ರಭಾವ ಕೊನೇ ತನಕ ಮುಂದುವರಿಯಿತು.

ಇದನ್ನೂ ಓದಿ : Ind vs Pak : ಪಾಕ್ ವಿರುದ್ಧ ಪಂದ್ಯದ ವೇಳೆ ತಪ್ಪು ಜೆರ್ಸಿ ಹಾಕಿಕೊಂಡು ಮೈದಾನಕ್ಕೆ ಬಂದ ಕೊಹ್ಲಿ

ಶದಾಬ್ ಖಾನ್​ ಬುಮ್ರಾ ಎಸೆತಕ್ಕೆ ಬೌಲ್ಡ್ ಆದರೆ, ಮೊಹಮ್ಮದ್ ನವಾಜ್​ ಪಾಂಡ್ಯ ಎಸೆತಕ್ಕೆ ಕ್ಯಾಚ್ ನೀಡಿ ಔಟಾಗುವ ಮೊದಲು ಕೇವಲ ನಾಲ್ಕು ರನ್ ಬಾರಿಸಿದ್ದರು. ಹಸನ್​ ಅಲಿ 12 ರನ್ ಬಾರಿಸಿ ಜಡೇಜಾ ಎಸೆತಕ್ಕೆ ಶುಭ್​ಮನ್ ಗಿಲ್​ಗೆ ಕ್ಯಾಚ್​ ನೀಡಿ ನಿರ್ಗಮಿಸಿದರು. ಶಹೀನ್​ ಶಾ ಅಫ್ರಿದಿ 2 ರನ್ ಬಾರಿಸಿ ಔಟಾಗದೇ ಉಳಿದರೆ ಹ್ಯಾರಿಸ್ ರವೂಫ್​ 2 ರನ್ ಕೊಡುಗೆ ಕೊಟ್ಟರು.

Exit mobile version