Site icon Vistara News

ICC World Cup 2023 : ಬಿಗ್​ ಸ್ಕೋರ್​ ಪಂದ್ಯದಲ್ಲಿ ಲಂಕಾ ಮಣಿಸಿದ ಪಾಕ್​

pakistan cricket team

ಹೈದರಾಬಾದ್​ : ಆರಂಭಿಕ ಬ್ಯಾಟರ್​ ಅಬ್ದುಲ್ಲಾ ಶಫಿಕ್ (113ರನ್​) ಹಾಗೂ ಮೊಹಮ್ಮದ್ ರಿಜ್ವಾನ್​ (ಅಜೇಯ 131 ರನ್​) ಜೋಡಿಯ ಅಮೋಘ ಶತಕದ ನೆರವಿನಿಂದ ಮಿಂಚಿದ ಪಾಕಿಸ್ತಾನ ತಂಡ ಶ್ರೀಲಂಕಾ ತಂಡದ ವಿರುದ್ಧದ ವಿಶ್ವ ಕಪ್​ (ICC World Cup 2023) ಪಂದ್ಯದಲ್ಲಿ 6 ವಿಕೆಟ್​ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಪಾಕಿಸ್ತಾನ ತಂಡ ಹಾಲಿ ವಿಶ್ವ ಕಪ್​ನಲ್ಲಿ ಸತತ ಎರಡನೇ ಗೆಲುವು ಪಡೆದುಕೊಂಡಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ ನೆದರ್ಲೆಂಡ್ಸ್ ವಿರುದ್ಧ 81 ರನ್​ಗಳ ವಿಜಯ ದಾಖಲಿಸಿತ್ತು. ವಿಶ್ವ ಕಪ್​ ಅಂಕಪಟ್ಟಿಯಲ್ಲಿ ಒಟ್ಟು 4 ಅಂಕಗಳನ್ನು ಪಡೆದುಕೊಂಡು ಎರಡನೇ ಸ್ಥಾನ ಗಿಟ್ಟಿಸಿದೆ. ನ್ಯೂಜಿಲ್ಯಾಂಡ್​ ತಂಡ ಮೊದಲ ಸ್ಥಾನದಲ್ಲಿದೆ.

ಈ ಸುದ್ದಿಗಳನ್ನೂ ಓದಿ :
ICC World Cup 2023 : ಶತಕಗಳ ಮೇಲೆ ಶತಕ ಬಾರಿಸಿ ಹೊಸ ದಾಖಲೆ ಬರೆದ ಡೇವಿಡ್​ ಮಲಾನ್​
ICC World Cup 2023 : 31 ವರ್ಷಗಳ ಹಳೆಯ ದಾಖಲೆ ಮುರಿದ ಜೋ ರೂಟ್​
Virat kohli : ನಾಲ್ಕು ಪದಗಳಲ್ಲಿ ಅಣ್ಣನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೊಹ್ಲಿಯ ತಂಗಿ

ಇಲ್ಲಿನ ರಾಜೀವ್​ ಗಾಂಧಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 344 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಪಾಕಿಸ್ತಾನ ತಂಡ ಇನ್ನೂ 10 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ನಷ್ಟಕ್ಕೆ 345 ರನ್ ಬಾರಿಸಿ ಜಯ ಗಳಿಸಿತು. ಈ ಪಂದ್ಯದಲ್ಲಿ ಒಟ್ಟು ನಾಲ್ಕು ಶತಕಗಳು ದಾಖಲಾಗಿದ್ದು, ಲಂಕಾ ಪರ ಕುಸಾಲ್​ ಮೆಂಡಿಸ್​ (122) ಹಾಗೂ ಸದೀರಾ ಸಮರ ವಿಕ್ರಮ (108) ಮೂರಂಕಿ ಮೊತ್ತ ಬಾರಿಸಿದರು. ಪಾಕ್ ಪರ ಶಫಿಕ್ ಹಾಗೂ ರಿಜ್ವಾನ್​ ಶತಕಗಳನ್ನು ಬಾರಿಸಿದರು. ಇದು ಪಾಕಿಸ್ತಾನ ತಂಡ ವಿಶ್ವ ಕಪ್​ನಲ್ಲಿ ಚೇಸ್ ಮಾಡಿದ ಗರಿಷ್ಠ ರನ್​ಗಳ ಗುರಿಯೆನಿಸಿಕೊಂಡಿದೆ.

ಮೊದಲು ಬ್ಯಾಟ್​ ಮಾಡಿದ ಲಂಕಾ ತಂಡ 5 ರನ್​ಗೆ ಮೊದಲ ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಯಿತು. ಆದರೆ, ಮೂರನೇ ವಿಕೆಟ್​ಗೆ ಪಾಥುಮ್ ನಿಸ್ಸಾಂಕ (51) ಹಾಗೂ ಕುಸಾಲ್​ ಮೆಂಡಿಸ್​ (122) 102 ರನ್​ಗಳ ಜತೆಯಾಟವಾಡಿದರು. ಬಳಿಕ ಬಂದ ಸದೀರ ಸಮರವಿಕ್ರಮ ಕೂಡ ಉತ್ತಮವಾಗಿ ಬ್ಯಾಟ್ ಬೀಸಿದರು. ಇವರಿಬ್ಬರು ನಾಲ್ಕನೇ ವಿಕೆಟ್​ಗೆ 111 ರನ್​ಗಳ ಜತೆಯಾಟ ಕೊಟ್ಟರು. ಈ ವೇಳೆ ಶ್ರೀಲಂಕಾ 3 ವಿಕೆಟ್​ಗೆ 218 ರನ್​ ಗಳಿಸಿತ್ತು. ಆ ಬಳಿಕ ಪಾರಮ್ಯ ಸಾಧಿಸಿದ ಪಾಕಿಸ್ತಾನದ ಬೌಲರ್​ಗಳು ಲಂಕಾ ವಿಕೆಟ್​ಗಳನ್ನು ಸತತವಾಗಿ ಪಡೆದರು. ಹೀಗಾಗಿ ಲಂಕಾ ತಂಡದ ಮೊತ್ತ 344ಕ್ಕೆ ಕೊನೆಗೊಂಡಿತು.

ಪಾಕ್ ಅಬ್ಬರ

ದೊಡ್ಡ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಭಾರತ ತಂಡ ಇಮಾಮ್​ ಉಲ್​ ಹಕ್ ಅವರನ್ನು 12 ರನ್​ಗೆ ಕಳೆದುಕೊಳ್ಳುವ ಮೂಲಕ ಆತಂಕಕ್ಕೆ ಒಳಗಾಯಿತು. ಬಳಿಕ ಬಾಬರ್ ಅಜಮ್​ ಕೂಡ 10 ರನ್​ ಬಾರಿಸಿ ಔಟಾದರು. ಈ ವೇಳೆ ಜತೆಯಾದ ಅಬ್ದುಲ್ಲಾ ಶಫೀಕ್ ಮತ್ತು ಮಹಮ್ಮದ್‌ ರಿಜ್ವಾನ್ 176 ರನ್​ಗಳ ಜತೆಯಾಟವಾಡಿದರು. ಲಂಕಾ ಬೌಲ್​ಗಳನ್ನು ಹಿಮ್ಮೆಟ್ಟಿಸಿ ಗೆಲುವಿನ ಕಡೆಗೆ ಹೆಜ್ಜೆಯಿಟ್ಟರು. ಬಳಿಕ ಬಂದ ಸೌದ್ ಶಕಿಲ್ 31 ರನ್ ಬಾರಿಸಿದರೆ ಇಫ್ತಿಕಾರ್​ ಅಹಮದ್​ 22 ರನ್​ ಹೊಡೆದರು. ಕೊನೇ ತನಕ ಔಟಾಗದೇ ಉಳಿದ ರಿಜ್ವಾನ್​ ತಮ್ಮ ಶತಕ ಪೂರೈಸುವ ಜತೆಗೆ ತಂಡಕ್ಕೆ ಗೆಲುವಿನ ಕೊಡುಗೆ ಕೊಟ್ಟರು.

Exit mobile version