Site icon Vistara News

Pakistan Cricket Team : ಸೋಲಿನ ಆಘಾತ; ಪಾಕ್​​ ತಂಡದ ವಿದೇಶಿ ಬೌಲಿಂಗ್ ಕೋಚ್​ ರಾಜೀನಾಮೆ

Morne Morkel

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ (Pakistan Cricket Team) ಬೌಲಿಂಗ್ ಕೋಚ್ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಮಾರ್ನೆ ಮಾರ್ಕೆಲ್ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಪಿಸಿಬಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವೇಗಿ ಜೂನ್ 2023 ರಲ್ಲಿ ಆರು ತಿಂಗಳ ಒಪ್ಪಂದದ ಮೇಲೆ ಪಾಕಿಸ್ತಾನಕ್ಕೆ ಸೇರಿದ್ದರು. ಅವರ ಮೊದಲ ನೇಮಕವು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಡೆದಿತ್ತು. ಇದೀಗ ಪಾಕಿಸ್ತಾನ ತಂಡ ವಿಶ್ವ ಕಪ್​ನಲ್ಲಿ ಕಳಪೆ ಪ್ರದರ್ಶನ ನೀಡಿದೆ. ಕೇವಲ ನಾಲ್ಕು ಪಂದ್ಯಗಳಲ್ಲಿ ಗೆದ್ದು ಲೀಗ್ ಹಂತದಿಂದಲೇ ಹೊರಕ್ಕೆ ನಡೆದಿದೆ. ಹೀಗಾಗಿ ಆ ತಂಡದಲ್ಲಿ ಸಮಸ್ಯೆಗಳು ಉದ್ಭವಿಸಿದೆ. ಅದರ ಪರಿಣಾಮವಾಗಿ ಮಾರ್ನೆ ತಂಡ ಬಿಟ್ಟು ಹೊರಕ್ಕೆ ನಡೆದಿದ್ದಾರೆ.

ಅಂದ ಹಾಗೆ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಈ ರೀತಿಯ ಪ್ರಕ್ರಿಯೆಗಳು ಮಾಮೂಲಿಯಾಗಿದೆ. ಈ ಹಿಂದೆಯೂ ವಿಶ್ವ ಕಪ್ ಸೇರಿದಂತೆ ನಾನಾ ಟೂರ್ನಿಗಳಲ್ಲಿ ಪಾಕಿಸ್ತಾನ ತಂಡ ಸೋತಾಗ ಇದೇ ರೀತಿಯ ಪ್ರಕ್ರಿಯೆಗಳು ನಡೆದಿದ್ದವು. ಇದೀಗ ಮತ್ತೊಂದು ಬಾರಿ ಪುನರಾವರ್ತನೆ ಆಗಿದೆ.

ಇದನ್ನೂ ಓದಿ : ICC World Cup 2023 : ವಾಂಖೆಡೆ ಪಿಚ್ ಕುರಿತು ಮಾಹಿತಿ ಸಂಗ್ರಹಿಸಿದ ಟೀಮ್ ಇಂಡಿಯಾ

ಮಾರ್ಕೆಲ್ ಅವರಿಗೆ ಬದಲಿಯನ್ನು ಇನ್ನೂ ಘೋಷಿಸಲಾಗಿಲ್ಲವಾದರೂ, ಶೀಘ್ರದಲ್ಲೇ ಬೌಲಿಂಗ್ ತರಬೇತುದಾರರನ್ನು ತರುವುದಾಗಿ ಪಿಸಿಬಿ ಭರವಸೆ ನೀಡಿದೆ. ಏತನ್ಮಧ್ಯೆ, ಪಾಕಿಸ್ತಾನ ಕ್ರಿಕೆಟ್ ತಂಡದ ಮುಂದಿನ ಡಿಸೆಂಬರ್ 14 ರಿಂದ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗಬೇಕಾಗಿದೆ.

ಉಮರ್ ಗುಲ್ ಸಾಧ್ಯತೆ?

ಭಾರತದಲ್ಲಿನಡೆದ ವಿಶ್ವಕಪ್ ಸೋಲಿನ ನಂತರ, ಪಾಕಿಸ್ತಾನವು ಸಂಪೂರ್ಣವಾಗಿ ಕುಸಿದಿದೆ. ಬೌಲಿಂಗ್ ವಿಭಾಗವೂ ಹಲ್ಲಿಲ್ಲದಂತೆ ಹಾವಿನಂತೆ ಕಂಡಿತ್ತ. ಹೀಗಾಗಿ ಪಾಕ್​ ತಂಡದ ಮಾಜಿ ವೇಗಿ ಉಮರ್ ಗುಲ್ ಬೌಲಿಂಗ್ ಕೋಚ್​ ಆಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ. ಕ್ರಿಕೆಟ್ ಪಾಕಿಸ್ತಾನದ ವರದಿಯ ಪ್ರಕಾರ, ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ನವೆಂಬರ್ 20 ರಿಂದ ಉಮರ್ ಗುಲ್ ಮಾರ್ಗದರ್ಶನದಲ್ಲಿ ತರಬೇತಿ ಶಿಬಿರ ಪ್ರಾರಂಭವಾಗುವ ಸಾಧ್ಯತೆಯಿದೆ.

ಐಸಿಸಿ ವಿಶ್ವಕಪ್ 2023ರ ಉದ್ದಕ್ಕೂ ಪಾಕಿಸ್ತಾನದ ಬೌಲರ್​ಗಳು ಫಾರ್ಮ್​ಗಾಗಿ ಹೆಣಗಾಡಿದರು. ಶಾಹೀನ್ ಶಾ ಅಫ್ರಿದಿ 9 ಪಂದ್ಯಗಳಿಂದ 18 ವಿಕೆಟ್ ಕಬಳಿಸಿದ್ದಾರೆ. ಮತ್ತೊಂದೆಡೆ, ಪಂದ್ಯಾವಳಿಯಲ್ಲಿ 16 ವಿಕೆಟ್​ಗಳನ್ನು ಪಡೆದ ಹ್ಯಾರಿಸ್ ರವೂಫ್ ಪ್ರತಿ ಪಂದ್ಯದಲ್ಲೂ ಗರಿಷ್ಠ ರನ್​ ಸೋರಿಕೆ ಮಾಡಿದ್ದರು. ಒಟ್ಟಾರೆ 533 ರನ್ ನೀಡಿದ್ದಾರೆ ಅವರು. ಹಸನ್ ಅಲಿ ಆರು ಪಂದ್ಯಗಳಲ್ಲಿ ಒಂಬತ್ತು ವಿಕೆಟ್ ಗಳೊಂದಿಗೆ ಸಾಮಾನ್ಯ ಪ್ರದರ್ಶನ ನೀಡಿದ್ದರು.

ಮಾರ್ಕೆಲ್ ಈ ಹಿಂದೆ ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಬೌಲಿಂಗ್ ತರಬೇತುದಾರರಾಗಿ ಕೆಲಸ ಮಾಡಿದ್ದರು. 2022 ರ ಯಶಸ್ವಿ ಟಿ 20 ವಿಶ್ವಕಪ್ ಅಭಿಯಾನದಲ್ಲಿ ನಮೀಬಿಯಾ ತಂಡದೊಂದಿಗೆ ಭಾಗಿಯಾಗಿದ್ದರು. ಮುಂಬರುವ ಎಸ್ಎ20 ಆವೃತ್ತಿಯಲ್ಲಿ ಡರ್ಬಾನ್ ಸೂಪರ್ ಜೈಂಟ್ಸ್​​ ತಂಡದ ಬೌಲಿಂಗ್ ತರಬೇತುದಾರರಾಗಿ ಮಾರ್ಕೆಲ್ ನಿಯೋಜನೆಗೊಂಡಿದ್ದಾರೆ.

ಪಾಕಿಸ್ತಾನವು ಡಿಸೆಂಬರ್ 14 ರಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದೆ ಮತ್ತು ಪಿಸಿಬಿಯ ಅಧಿಕೃತ ಪತ್ರಿಕಾ ಪ್ರಕಟಣೆಯ ಪ್ರಕಾರ, ಅವರು ಮಾರ್ನೆ ಮಾರ್ಕೆಲ್ ಅವರ ಬದಲಿ ಆಟಗಾರನನ್ನು ಸರಿಯಾದ ಸಮಯದಲ್ಲಿ ಘೋಷಿಸಲಾಗುತ್ತದೆ.

Exit mobile version