ರಾವಲ್ಪಿಂಡಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket) ದಿನದಿಂದ ದಿನಕ್ಕೆ ಸೊರಗುತ್ತಿದೆ. ಬಾಬರ್ ಅಜಮ್ ಸೇರಿದಂತೆ ಕೆಲವು ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿರು ಹೊರತಾಗಿಯೂ ಅಲ್ಲಿನ ಕ್ರಿಕೆಟ್ ಆಡಳಿತ ಮಂಡಳಿ ದುರ್ಬಲಗೊಳ್ಳುತ್ತಿದೆ. ಅದಕ್ಕೆ ಮತ್ತೊಂದು ಸಾಕ್ಷಿ ದೊರಕಿದ್ದು ಪಿಸಿಬಿಯ ಆಡಳಿತ ವೈಖರಿಗೆ ಟೀಕೆಗಳು ವ್ಯಕ್ತಗೊಂಡಿವೆ. ಅಂತಾರಾಷ್ಟ್ರೀಯ ಪಂದ್ಯಗಳನ್ನ ನಡೆಸುವ ವೇಳೆ ಸರಿಯಾಗಿ ಮೈದಾನವನ್ನೂ ಸಿದ್ಧಪಡಿಸಲೂ ಸಾಧ್ಯವಾಗುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಏಪ್ರಿಲ್ 29, 2023 ರಂದು ರಾವಲ್ಪಿಂಡಿಯಲ್ಲಿ ನಡೆಯುತ್ತಿದ್ದ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯವನ್ನು ಅಂಪೈರ್ ಅಲೀಮ್ ದಾರ್ ಮಧ್ಯದಲ್ಲಿ ನಿಲ್ಲಿಸಿದರು. ಯಾಕೆಂದರೆ 30 ಯಾರ್ಡ್ ವೃತ್ತವನ್ನು ತಪ್ಪಾಗಿ ಅಳೆಯಲಾಗಿದ್ದರಿಂದ ಪಂದ್ಯದಲ್ಲಿ ಅರ್ಧದಲ್ಲಿ ನಿಲ್ಲಿಸಿ ವೃತ್ತವನ್ನು ಸರಿಪಡಿಸಬೇಕಾಯಿತು. ಆಟಗಾರರು, ಅಂಪೈರ್ಗಳು ಸೇರಿಕೊಂಡು ವೃತ್ತವನ್ನು ಸರಿಪಡಿಸಿದರು. ಅಲ್ಲಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದ್ದ ಮರ್ಯಾದೆಯನ್ನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳೆದುಕೊಂಡಿತು. ಅಂತಾರಾಷ್ಟ್ರೀಯ ಮಟ್ಟದ ಪಂದ್ಯವೊಂದನ್ನು ಆಯೋಜಿಸುವ ಕನಿಷ್ಠ ಪಕ್ಷ ಮೈದಾನವನ್ನು ಸರಿಯಾಗಿ ಇಟ್ಟುಕೊಳ್ಳುವುದಕ್ಕೆ ಸಾಧ್ಯವಿಲ್ಲವೇ ಎಂದು ನೆಟ್ಟಿಗರು ಪ್ರಶ್ನಿಸಿದರು.
ಪಾಕಿಸ್ತಾನದ ಸುದ್ದಿ ವಾಹಿನಿಯಾದ ಜಿಯೋ ನ್ಯೂಸ್ ಈ ಸುದ್ದಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಅದರ ಮೊದಲ ಓವರ್ ಆದ ತಕ್ಷಣ ಅನುಭವಿ ಅಂಪೈರ್ ಅಲೀಮ್ದಾರ್ ಅವರಿಗೆ, 30 ಯಾರ್ಡ್ನ ಸರ್ಕಲ್ ಸರಿಯಾಗಿ ಅಳತೆ ಮಾಡಿಲ್ಲ ಎಂಬ ವಿಚಾರ ತಿಳಿಯಿತು. ಬಳಿಕ ಅವರು ಸಿಬ್ಬಂದಿಯನ್ನು ಕರೆದು ಸರಿಪಡಿಸಿದರು. ಇದರಿಂದಾಗಿ ಆರು ನಿಮಿಷಗಳ ಕಾಲ ಪಂದ್ಯ ತಡವಾಯಿತು. ಕ್ರಿಕೆಟ್ ಅಭಿಮಾನಿಗಳಿಗೆ ಇಷ್ಟೇ ಸಾಕಾಗಿತ್ತು ಟ್ರೋಲ್ ಮಾಡಲು. ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಯೋಗ್ಯತೆಯನ್ನು ಅಳೆಯಲು ಆರಂಭಿಸಿದರು.