Site icon Vistara News

World Cup 2023 : ಭಾರತಕ್ಕೆ ಪ್ರಯಾಣಿಸಲು ಪಾಕ್ ತಂಡಕ್ಕೆ ಅಲ್ಲಿನ ಸರಕಾರದ ಗ್ರೀನ್​ ಸಿಗ್ನಲ್​

india vs pakistan

ನವದೆಹಲಿ: ಭಾರತದ ಆತಿಥ್ಯದಲ್ಲಿ 2023ರ ಏಕದಿನ ವಿಶ್ವಕಪ್ (World Cup 2023) ನಡೆಯುತ್ತಿರುವುದು ಹಲವು ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಗಿವೆ. ಪ್ರಮುಖವಾಗಿ ಪಾಕಿಸ್ತಾನ ತಂಡದ ಭಾರತಕ್ಕೆ ಪ್ರಯಾಣಿಸಲಿದೆಯಾ ಎಂಬ ಪ್ರಶ್ನೆ ಎದ್ದಿತ್ತು. ಹೀಗಾಗಿ ವೇಳಾಪಟ್ಟಿ ಸೇರಿದಂತೆ ಪ್ರತಿಯೊಂದು ತಯಾರಿ ನಿಧಾನವಾಗಿ ನಡೆಯುತ್ತಿದೆ. ಇದೀಗ ಬಂದಿರುವ ಸುದ್ದಿಯ ಪ್ರಕಾರ ಪಾಕಿಸ್ತಾನದ ಪುರುಷರ ಕ್ರಿಕೆಟ್ ತಂಡವು ಭಾರತಕ್ಕೆ ಪ್ರಯಾಣಿಸಲಿದೆ. ಅಲ್ಲಿನ ವಿದೇಶಾಂಗ ಸಚಿವಾಲಯ ಭಾನುವಾರ ಈ ಮಾಹಿತಿಯನ್ನು ದೃಢಪಡಿಸಿದೆ. ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧಗಳು ಪಾಕಿಸ್ತಾನ ಕ್ರಿಕೆಟ್​​ನ ಅಂತಾರಾಷ್ಟ್ರೀಯ ಬಾಧ್ಯತೆಗಳಿಗೆ ಅಡ್ಡಿಯಾಗುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಕ್ರೀಡೆಯನ್ನು ರಾಜಕೀಯದೊಂದಿಗೆ ಬೆರೆಸಬಾರದು ಎಂಬುದನ್ನು ಪಾಕಿಸ್ತಾನ ನಿರಂತರವಾಗಿ ಪ್ರತಿಪಾದಿಸುತ್ತಿದೆ. ಆದ್ದರಿಂದ ಮುಂಬರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರಲ್ಲಿ ಭಾಗವಹಿಸಲು ತನ್ನ ಕ್ರಿಕೆಟ್ ತಂಡವನ್ನು ಭಾರತಕ್ಕೆ ಕಳುಹಿಸಲು ನಿರ್ಧರಿಸಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.

ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧಗಳ ಸ್ಥಿತಿಯು ಅಂತಾರಾಷ್ಟ್ರೀಯ ಕ್ರೀಡಾ ಸಂಬಂಧಿತ ಬಾಧ್ಯತೆಗಳನ್ನು ಪೂರೈಸಲು ಅಡ್ಡಿಯಾಗಬಾರದು ಎಂದು ಪಾಕಿಸ್ತಾನ ನಂಬುತ್ತದೆ ಎಂಬುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಏಕದಿನ ವಿಶ್ವಕಪ್​ಗಿಂತ ಮೊದಲು ಏಷ್ಯಾ ಕಪ್ ನಡೆಯುತ್ತದೆ. ಅದಕ್ಕೆ ಮೂಲತಃ ಪಾಕಿಸ್ತಾನ ಆತಿಥ್ಯ ವಹಿಸುತ್ತದೆ. ಆದಾಗ್ಯೂ, ಭಾರತ ತಂಡವನ್ನು ನೆರೆಯ ದೇಶಕ್ಕೆ ಕಳುಹಿಸಲು ಬಿಸಿಸಿಐ ನಿರಾಕರಿಸಿದ್ದರಿಂದ ಟೂರ್ನಿಯನ್ನು ಹೈಬ್ರಿಡ್​ ಮಾದರಿಯಲ್ಲಿ ನಡೆಸಲಾಗುತ್ತಿದೆ. ಶ್ರೀಲಂಕಾವನ್ನು ಸಹ-ಆತಿಥೇಯ ದೇಶವಾಗಿ ಆಯ್ಕೆ ಮಾಡಲಾಯಿತು, ಭಾರತದ ಎಲ್ಲಾ ಪಂದ್ಯಗಳನ್ನು ದ್ವೀಪ ದೇಶದಲ್ಲಿ ನಿಗದಿಪಡಿಸಲಾಗಿದೆ.

ಪಾಕಿಸ್ತಾನದ ನಿರ್ಧಾರವು ಭಾರತದ ಹಠಮಾರಿ ಧೋರಣೆಗೆ ವಿರುದ್ಧ, ರಚನಾತ್ಮಕ ಮತ್ತು ಜವಾಬ್ದಾರಿಯುತವಾಗಿದೆ. ಏಕೆಂದರೆ ಏಷ್ಯಾ ಕಪ್​ಗೆ ಪಾಕಿಸ್ತಾನಕ್ಕೆ ತನ್ನ ಕ್ರಿಕೆಟ್ ತಂಡವನ್ನು ಕಳುಹಿಸಲು ಭಾರತ ನಿರಾಕರಿಸಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : World Cup 2023 : ಪಾಕ್​ ತಂಡಕ್ಕೆ ಇನ್ನೂ ಅಭದ್ರತೆ; ಪರಿಶೀಲನೆಗೆ ಬರುತ್ತದಂತೆ ನಿಯೋಗ!

ಕಳೆದ ಕೆಲವು ವಾರ, ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಲು ಪಾಕಿಸ್ತಾನ ಅಧಿಕಾರಿಗಳು ಭಾರತದ ವಿವಿಧ ಸ್ಥಳಗಳಿಗೆ ಪ್ರಯಾಣಿಸಿದ್ದರು. 2016ರ ಟಿ 20 ವಿಶ್ವಕಪ್ ನಂತರ ಪಾಕಿಸ್ತಾನ ಪುರುಷರ ತಂಡವು ಭಾರತಕ್ಕೆ ಪ್ರಯಾಣಿಸುತ್ತಿರುವುದು ಇದೇ ಮೊದಲು. ಪಾಕಿಸ್ತಾನವು ಕೊನೆಯ ಬಾರಿಗೆ ಭಾರತದ ನೆಲದಲ್ಲಿ ದ್ವಿಪಕ್ಷೀಯ ಸರಣಿಯನ್ನು ಆಡಿದ್ದು ಡಿಸೆಂಬರ್ 2012 ಜನವರಿ 2013 ರಲ್ಲಿ. ಇದು ಉಭಯ ದೇಶಗಳ ನಡುವಿನ ಕೊನೆಯ ಸರಣಿಯಾಗಿದೆ. ಅಂದಿನಿಂದ, ಉಭಯ ದೇಶಗಳ ನಡುವಿನ ಮುಖಾಮುಖಿ ಕಾಂಟಿನೆಂಟಲ್ (ಏಷ್ಯಾ ಕಪ್) ಮತ್ತು ಜಾಗತಿಕ (ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ) ಪಂದ್ಯಾವಳಿಗಳಿಗೆ ಸೀಮಿತವಾಗಿವೆ.

ಈ ವರ್ಷ ಭಾರತ ಮತ್ತು ಪಾಕಿಸ್ತಾನ ತಂಡಗಳು ಹಲವು ಬಾರಿ ಮುಖಾಮುಖಿಯಾಗಲಿದೆ. ಏಷ್ಯಾಕಪ್​ನಲ್ಲಿ ಉಭಯ ತಂಡಗಳು ಮೂರು ಬಾರಿ ಮುಖಾಮುಖಿಯಾಗಬಹುದು. ವಿಶ್ವಕಪ್​​ನಲ್ಲಿ ಉಭಯ ತಂಡಗಳು ಅಕ್ಟೋಬರ್ 15 ರಂದು ಅಹಮದಾಬಾದ್​ನಲ್ಲಿ ಮುಖಾಮುಖಿಯಾಗಲಿವೆ. ಆದಾಗ್ಯೂ, ಭದ್ರತಾ ಕಾರಣಗಳಿಂದಾಗಿ ಪಂದ್ಯದ ದಿನಾಂಕ ಬದಲಾಗುವ ಸಾಧ್ಯತೆಗಳಿವೆ.

Exit mobile version