Site icon Vistara News

ವಿಸ್ತಾರ Explainer | ಭಾರತವನ್ನು ಎದುರು ಹಾಕಿಕೊಂಡರೆ ಪಾಕಿಸ್ತಾನ ಕ್ರಿಕೆಟ್‌ ಬರ್ಬಾದ್‌; ಯಾಕೆ ಗೊತ್ತೆ?

ind vs pak

ಬೆಂಗಳೂರು : ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಕ್ರಿಕೆಟ್‌ ಪಂದ್ಯವೆಂದರೆ ಅದೊಂದು ಮಿನಿ ಸಮರ. ಗ್ರೌಂಡ್‌ನ ಒಳಗೆ, ಹೊರಗೆ, ಟಿವಿಗಳಲ್ಲಿ, ನ್ಯೂಸ್‌ ಚಾನೆಲ್‌ಗಳಲ್ಲಿ, ಹಳ್ಳಿಗಳ ಕಟ್ಟೆಗಳಲ್ಲಿ ಸೇರಿದಂತೆ ಎಲ್ಲೆಡೆ ಬಿಗ್‌ ಫೈಟ್‌. ಎರಡೂ ದೇಶಗಳ ನಡುವಿನ ರಾಜಕೀಯ ವೈಷಮ್ಯ ಕ್ರಿಕೆಟ್‌ ಆಟದಲ್ಲಿ ಹಾಗೂ ಮಾತಿನಲ್ಲಿ ಎದ್ದು ಕಾಣುತ್ತದೆ ಹಾಗೂ ಜಿದ್ದಿಗೆ ಕೊನೆಯೇ ಇರುವುದಿಲ್ಲ. ತೋಳು ತಟ್ಟಿ ಪಂಥಾಹ್ವಾನ ನೀಡುವುದು, ಗೆದ್ದ ಮೇಲೆ ಬೆನ್ನು ತಟ್ಟಿಕೊಳ್ಳುವುದು, ಪರಸ್ಪರ ನಿಂದನೆ, ಕೈ ಕೈ ಹಿಸುಕಿಕೊಳ್ಳುವುದು, ಒಂದೆರಡು ಟಿವಿ ಸೆಟ್‌ಗಳು ಉಡೀಸ್ ಆಗುವುದು ಮಾಮೂಲು. ಇತ್ತಂಡಗಳ ನಡುವಿನ ಹಣಾಹಣಿಯೊಂದಕ್ಕೆ ವೇದಿಕೆ ಸಜ್ಜುಗೊಳ್ಳುತ್ತಿದ್ದಂತೆ ಆರಂಭಗೊಳ್ಳುವ ಚರ್ಚೆ, ವಿಶ್ಲೇಷಣೆ, ಮೂದಲಿಕೆಗಳು ಪಂದ್ಯದ ಫಲಿತಾಂಶ ಪ್ರಕಟಗೊಂಡ ನಂತರವೂ ಹಲವು ದಿನಗಳ ಕಾಲ ಮುಂದುವರಿಯುತ್ತದೆ. ದೇಶ ವಿಭಜನೆ ಬಳಿಕ ೧೯೫೨ರಲ್ಲಿ ನಡೆದ ಮೊದಲ ಸರಣಿಯಲ್ಲಿ ಆರಂಭಗೊಂಡ ಈ ಜಿದ್ದು ಈಗಲೂ ಮುಂದುವರಿದಿದ್ದು, ಕೊನೆಯಾಗುವ ಯಾವ ಲಕ್ಷಣವೂ ತೋರುತ್ತಿಲ್ಲ. ಏತನ್ಮಧ್ಯೆ, ಭಾರತ ಹಾಗೂ ಪಾಕಿಸ್ತಾನ ನಡುವಿನ ರಾಜಕೀಯ ಸಂಬಂಧವೂ ದಿನೇದಿನೆ ಹಳಸುತ್ತಿದೆ. ಹೀಗೆ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಜಿದ್ದು ಎಲ್ಲಿಂದ ಆರಂಭ, ಇತ್ತಂಡಗಳ ಪಂದ್ಯದ ಕಿಮ್ಮತ್ತೇನು, ಈ ದೇಶಗಳ ನಡುವಿನ ವೈರತ್ವ ಕೊನೆಯಾಗಬಹುದೇ ಎಂಬಿತ್ಯಾದಿ ವಿಷಯಗಳ ಬಗ್ಗೆ ಸಂಕ್ಷಿಪ್ತ ನೋಟ (ವಿಸ್ತಾರ Explainer) ಇಲ್ಲಿದೆ.

ಯಾಕೆ ಮತ್ತೆ ಚರ್ಚೆ?

ಕೆಲವು ದಿನಗಳ ಹಿಂದೆ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್‌ ತಂಡಗಳ ನಡುವಿನ ಕ್ರಿಕೆಟ್‌ ವೈರತ್ವ ಮತ್ತೆ ಮುನ್ನೆಲೆಗೆ ಬಂದಿದೆ. ಅದಕ್ಕೆ ಕಾರಣ ೨೦೨೩ರಲ್ಲಿ ಪಾಕಿಸ್ತಾನದಲ್ಲಿ ಆಯೋಜನೆಗೊಂಡಿರುವ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿ. ಏಷ್ಯಾ ಕ್ರಿಕೆಟ್ ಕೌನ್ಸಿಲ್‌ನಿಂದ (ಎಸಿಸಿ) ಆತಿಥ್ಯದ ಹಕ್ಕು ಪಡೆದುಕೊಂಡಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ತನ್ನ ನೆಲದಲ್ಲೇ ಟೂರ್ನಿ ಆಯೋಜಿಸಲು ಮುಂದಾಗಿದೆ. ಆದರೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಸಾಧ್ಯ ಎಂದಿದೆ. ನಾವು ಬರಬೇಕಿದ್ದರೆ ತಟಸ್ಥ ತಾಣದಲ್ಲಿ ಪಂದ್ಯ ನಡೆಯಲಿ. ಯಾವ ಕಾರಣಕ್ಕೂ ನಮ್ಮ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲ ಎಂಬುದಾಗಿ ಹೇಳಿಕೆ ಕೊಟ್ಟಿದೆ. ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ನ ಮುಖ್ಯಸ್ಥರೂ ಆಗಿರುವ ಜಯ್‌ ಶಾ ಅವರು ಟೂರ್ನಿ ತಟಸ್ಥ ತಾಣದಲ್ಲೇ ನಡೆಯಲಿದೆ ಎಂಬುದನ್ನು ಒತ್ತಿ ಹೇಳಿದ್ದಾರೆ. ಭಾರತದ ಹೇಳಿಕೆಗೆ ಬೇಸ್ತು ಬಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಹಾಗಾದರೆ ನಮ್ಮ ತಂಡವನ್ನು ಮುಂದಿನ ವರ್ಷ ಭಾರತದಲ್ಲಿ ನಡೆಯುವ ಏಕ ದಿನ ವಿಶ್ವ ಕಪ್‌ಗೆ ಕಳುಹಿಸುವುದಿಲ್ಲ ಎಂದು ಬಾಲಿಷ ಹೇಳಿಕೆ ಕೊಟ್ಟಿದೆ. ಆದರೆ, ಪಾಕಿಸ್ತಾನದ ಬೆದರಿಕೆಗೆ ಕಿಮ್ಮತ್ತಿಲ್ಲ ಎಂಬುದು ಎಲ್ಲಿಗೂ ಗೊತ್ತಿರುವ ಸಂಗತಿ.

ಸದ್ಯದ ಪರಿಸ್ಥಿತಿಯಲ್ಲಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರಕಾರ ಸಮ್ಮತಿ ನೀಡದು. ಇದರ ಅರಿವಿರುವ ಬಿಸಿಸಿಐ ನಮ್ಮ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲ ಎಂಬುದಾಗಿ ಮೊದಲೇ ಹೇಳಿಕೆ ಕೊಟ್ಟಿದೆ. ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಕೂಡ, ಜಗತ್ತಲ್ಲಿ ಏನೂ ಬೇಕಾದರೂ ಆಗಬಹುದು, ಆದರೆ ಇದೊಂದು ಕಷ್ಟ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಯಾಕೆ ಕಳುಹಿಸುವುದಿಲ್ಲ?

ಕ್ರಿಕೆಟ್‌ ಹೊರತುಪಡಿಸಿ ಉಳಿದ ಕ್ರೀಡಾ ಕ್ಷೇತ್ರದ ಕ್ರೀಡಾಪಟುಗಳು ಪಾಕಿಸ್ತಾನಕ್ಕೆ ಹೋಗುತ್ತಾರೆ. ಅಲ್ಲಿನ ಕ್ರೀಡಾಪಟುಗಳೂ ಭಾರತಕ್ಕೆ ಬಂದು ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಾರೆ. ಅಥ್ಲೆಟಿಕ್ಸ್‌, ಚೆಸ್‌, ಟೆನಿಸ್‌ಗೆ ಇಲ್ಲದ ನಿರ್ಬಂಧ ಕ್ರಿಕೆಟ್‌ಗೆ ಮಾತ್ರ ಸೀಮಿತ ಯಾಕೆ ಎನ್ನುವ ಪ್ರಶ್ನೆಯೂ ಸಹಜ. ಉತ್ತರವೂ ಅಷ್ಟೇ ಸರಳ. ಭಾರತ ಹಾಗೂ ಪಾಕಿಸ್ತಾನದ ನಾಗರಿಕರು ಕ್ರಿಕೆಟ್‌ಗೆ ಇನ್ನಿಲ್ಲದ ಪ್ರಾಮುಖ್ಯತೆ ಕೊಡುತ್ತಾರೆ. ಕ್ರಿಕೆಟ್‌ ಅವರ ಜೀವಾಳ. ಕ್ರಿಕೆಟ್‌ ತಾರೆಗಳನ್ನು ಅವರು ಹೃದಯದಲ್ಲಿಟ್ಟು ಆರಾಧಿಸುತ್ತಾರೆ. ಎಲ್ಲದರ ಮಧ್ಯೆ ಎರಡೂ ದೇಶಗಳಲ್ಲಿ ಕ್ರಿಕೆಟ್‌ ತಂಡಗಳಲ್ಲಿ ಹಲವು ಸ್ಟಾರ್‌ಗಳಿದ್ದಾರೆ.

ಭಾರತದ ಹಾಲಿ ತಂಡವನ್ನು ಪರಿಗಣಿಸುವುದಾದರೆ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ, ಕೆ ಎಲ್‌ ರಾಹುಲ್‌ ಅವರಂತಹ ಸ್ಟಾರ್‌ಗಳ ದಂಡೇ ಇದೆ. ಇಂಥ ಆಟಗಾರರನ್ನು ಒಳಗೊಂಡ ತಂಡವನ್ನು ಬೇರೆ ದೇಶಕ್ಕೆ ಕಳುಹಿಸುವಾಗ ಅವರ ಸುರಕ್ಷತೆಯ ಬಗ್ಗೆಯೂ ಕಾಳಜಿ ಅಗತ್ಯ. ಸುರಕ್ಷತೆ ಎಂಬುದು ಎರಡೂ ದೇಶಗಳ ನಡುವಿನ ರಾಜಕೀಯ ಸಂಬಂಧವನ್ನು ಅವಲಂಬಿಸಿರುತ್ತದೆ. ಭಾರತ ಮತ್ತು ಪಾಕಿಸ್ತಾನದ ದ್ವಿಪಕ್ಷೀಯ ಸಂಬಂಧ ಹಳಸಿ ಹೋಗಿರುವ ಪ್ರಸ್ತುತ ಸಂದರ್ಭದಲ್ಲಿ ಆ ದೇಶಕ್ಕೆ ನಮ್ಮ ಸ್ಟಾರ್‌ ಆಟಗಾರರನ್ನು ಕಳುಹಿಸಿಕೊಡುವುದು ಉಚಿತವಲ್ಲ ಎಂಬುದುಎಲ್ಲರ ಅಭಿಪ್ರಾಯ. ಹೇಳಿಕೇಳಿ ಪಾಕಿಸ್ತಾನ, ಭಯೋತ್ಪಾದಕರ ನೆಲೆವೀಡು. ಅಲ್ಲಿಗೆ ನಮ್ಮ ಆಟಗಾರರನ್ನು ಕಳುಹಿಸಿ ಸಂಕಷ್ಟಕ್ಕೆ ದೂಡಲು ಬಿಸಿಸಿಐ ಹಿರಿ ತಲೆಗಳು ಸಿದ್ಧರಿಲ್ಲ.

ಈ ಹಿಂದೆ ಪಾಕಿಸ್ತಾನಕ್ಕೆ ಪ್ರವಾಸ ಹೋಗಿದ್ದ ಶ್ರೀಲಂಕಾ ಕ್ರಿಕೆಟ್‌ ತಂಡದ ಆಟಗಾರರು ಪ್ರಯಾಣಿಸುತ್ತಿದ್ದ ಬಸ್‌ಗೆ ಭಯೋತ್ಪಾದಕರ ಗುಂಡಿನ ದಾಳಿ ನಡೆದಿತ್ತು. ವಿಶ್ವ ಕ್ರಿಕೆಟ್‌ನ ಅತ್ಯಂತ ಕರಾಳ ಘಟನೆ ಇದು. ಇಂಥ ದೇಶಕ್ಕೆ ಭಾರತ ತಂಡದ ಆಟಗಾರರನ್ನು ಹೇಗೆ ಕಳುಹಿಸಿತು?

ಇದು ಬರೇ ಆಟಗಾರರ ವಿಷಯಕ್ಕೆ ಸೀಮಿತವಾಗಿರುವ ಸಂಗತಿಯಲ್ಲ. ಅಲ್ಲಿ ಕ್ರಿಕೆಟ್‌ ಮ್ಯಾಚ್‌ ನಡೆದರೆ ಭಾರತದ ಕ್ರಿಕೆಟ್‌ ಅಭಿಮಾನಿಗಳು ಪಂದ್ಯ ವೀಕ್ಷಣೆಗೆ ಹೋಗುತ್ತಾರೆ. ವೀಸಾ ನೀಡುವಿಕೆ, ಅವರ ಸುರಕ್ಷತೆ ಸೇರಿದಂತೆ ಎಲ್ಲವೂ ಭಾರತಕ್ಕೆ ಸವಾಲು. ಅಲ್ಲಿ ಒಬ್ಬ ಭಾರತೀಯನ ಮೇಲೆ ಆಕ್ರಮಣ ನಡೆದರೂ ಅದು ದೊಡ್ಡ ವಿಷಯವಾಗಿ ಮಾರ್ಪಡುತ್ತದೆ. ಭದ್ರತಾ ವೈಫಲ್ಯ ಎಂಬುದು ಪಾಕಿಸ್ತಾನದಲ್ಲಿ ಮಾಮೂಲಿ ಸಂಗತಿ. ಅಲ್ಲಿನ ಸರಕಾರವೂ ಆರ್ಥಿಕವಾಗಿ ಸೊರಗಿದೆ. ಇಂಥ ಸಂದರ್ಭದಲ್ಲಿ ಸ್ಟಾರ್‌ ಆಟಗಾರರನ್ನು ಒಳಗೊಂಡಿರುವ ಭಾರತ ತಂಡಕ್ಕೆ ರಕ್ಷಣೆ ಕೊಡುವುದಕ್ಕೆ ಅವರಿಗೆ ಸಾಧ್ಯವಿಲ್ಲ ಎಂಬುದು ಬಿಸಿಸಿಐ ಅಭಿಪ್ರಾಯ.

ಯಾರಿಗೆ ಲಾಸ್‌?

ಭಾರತ ತಂಡ ಪಾಕಿಸ್ತಾನಕ್ಕೆ ಹೋಗದಿದ್ದರೆ ಅಥವಾ ಪಾಕಿಸ್ತಾನ ತಂಡ ಭಾರತಕ್ಕೆ ಬರದಿದ್ದರೆ ಯಾರಿಗೆ ನಷ್ಟ ಎಂಬುದು ಸದ್ಯದ ಚರ್ಚೆ. ಎರಡೂ ಪ್ರಸಂಗಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನಷ್ಟ. ಭಾರತ ತಂಡ ಪಾಕಿಸ್ತಾನಕ್ಕೆ ಹೋಗದಿದ್ದರೆ ಉಳಿದ ತಂಡಗಳೂ ಟೂರ್ನಿಗೆ ಹಿಂದೇಟು ಹಾಕುವ ಸಾಧ್ಯತೆಗಳಿವೆ. ಭಾರತ ಬರದಿದ್ದರೂ ಪರ್ವಾಗಿಲ್ಲ. ಇಲ್ಲೇ ಪಂದ್ಯ ನಡೆಸುತ್ತೇವೆ ಎಂದು ಪಿಸಿಬಿ ಏನಾದರೂ ತೀರ್ಮಾನಿಸಿದರೆ? ಅದೊಂದು ಕೆಟ್ಟ ನಿರ್ಧಾರವಾಗಲಿದೆ ಹಾಗೂ ಪಿಸಿಬಿ ಬರ್ಬಾದ್ ಅಗೋದು ಗ್ಯಾರಂಟಿ. ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಪಂದ್ಯವೇ ಇಲ್ಲದ ಆ ಟೂರ್ನಿಯನ್ನು ನೋಡಲು ಪ್ರೇಕ್ಷಕರು ಮುಂದೆ ಬರುವುದಿಲ್ಲ. ಹೀಗಾಗಿ ಟಿಕೆಟ್‌ ಮಾರಾಟದಿಂದ ಬರುವ ಆದಾಯ ಸಂಪೂರ್ಣ ಖೋತಾ. ಪ್ರಾಯೋಜಕರು ಆ ಕಡೆ ಕತ್ತೆತ್ತಿಯೂ ನೋಡುವುದಿಲ್ಲ. ನೇರ ಪ್ರಸಾರದ ಹಕ್ಕುಗಳ ಮಾರಾಟವೂ ಕನಿಷ್ಠ ದರಕ್ಕೆ ಬಿಡ್ ಆಗಬಹುದು. ಈ ಎರಡೂ ಆದಾಯಗಳನ್ನು ನಷ್ಟ ಮಾಡಿಕೊಂಡು ಟೂರ್ನಿಗೆ ಆತಿಥ್ಯ ವಹಿಸಿ ಮಾಡುವುದು ಏನಿದೆ?

ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ ಆತಿಥ್ಯವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನೀಡಿರುವ ಹೊರತಾಗಿಯೂ ಟೂರ್ನಿಯ ಮೇಲಿನ ಹಿಡಿತ ಕಳೆದುಕೊಳ್ಳುವುದಿಲ್ಲ. ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌, ಪಂದ್ಯವನ್ನು ತಟಸ್ಥ ತಾಣದಲ್ಲಿ ನಡೆಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಬಹುಮತದೊಂದಿಗೆ ವ್ಯಕ್ತಪಡಿಸಿದರೆ, ಪಿಸಿಬಿ ಅದನ್ನು “ಕೈ ಕಟ್‌, ಬಾಯ್‌ ಮುಚ್‌’ ಎಂದು ಒಪ್ಪಲೇಬೇಕಾಗುತ್ತದೆ. ಈ ವಿಚಾರದಲ್ಲಿ ಏಷ್ಯಾ ಕ್ರಿಕೆಟ್ ಕೌನ್ಸಿಲ್‌ನಲ್ಲಿ ಸದಸ್ಯತ್ವ ಹೊಂದಿರುವ ಬಾಂಗ್ಲಾದೇಶ, ಶ್ರೀಲಂಕಾ ಕ್ರಿಕೆಟ್‌ ಸಂಸ್ಥೆಗಳೂ ಬಿಸಿಸಿಐ ಪರವಾಗಿರುತ್ತದೆ. ಇನ್ನು ಅತಿ ಹೆಚ್ಚು ಆದಾಯ ತಂದುಕೊಡುವ ಬಿಸಿಸಿಐ ವಿರೋಧಿ ನಿರ್ಧಾರವನ್ನು ಕ್ರಿಕೆಟ್‌ನ ಜಾಗತಿಕ ಸಂಸ್ಥೆ ಐಸಿಸಿ ಕೂಡ ತಳೆಯದು. ಹೀಗಾಗಿ ಈ ವಿಚಾರದಲ್ಲಿ ಬಿಸಿಸಿಐ ಗೆಲುವು ನಿಶ್ಚಿತ.

ಇದಕ್ಕೆ ಪ್ರತಿಯಾಗಿ ೨೦೨೩ರಲ್ಲಿ ನಡೆಯುವ ವಿಶ್ವ ಕಪ್‌ಗೆ ತನ್ನ ತಂಡವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತಕ್ಕೆ ಕಳುಹಿಸದಿದ್ದರೂ ಅವರಿಗೇ ನಷ್ಟ. ಐಸಿಸಿ ಟೂರ್ನಿಯೊಂದರಲ್ಲಿ ಪಾಲ್ಗೊಳ್ಳುವ ಅವಕಾಶ ಕಳೆದುಕೊಂಡರೆ ಆ ಕ್ರಿಕೆಟ್‌ ಮಂಡಳಿಗೆ ಉಳಿಗಾಲವೇ ಇಲ್ಲ. ಐಸಿಸಿಯಿಂದ ಯಾವುದೇ ಆದಾಯ ಹಂಚಿಕೆ ಆ ಕ್ರಿಕೆಟ್‌ ಮಂಡಳಿಗೆ ಆಗದು. ಇಲ್ಲೂ ಪಿಸಿಬಿಗೆ ಆರ್ಥಿಕ ಹಿಂಜರಿತ. ಈಗ ಬರವುದಿಲ್ಲ ಎಂದು ಬೆದರಿಕೆ ಹಾಕಿದರೂ, ಮುಂದೆ ತಂಡವನ್ನು ಕಳುಹಿಸಿಯೇ ಕಳುಹಿಸುತ್ತದೆ. ಒಂದು ವೇಳೆ ಕೊನೇ ತನಕ ಹಠ ಹಿಡಿದರೂ, ಐಸಿಸಿ ಮಧ್ಯಸ್ಥಿಕೆ ವಹಿಸಲಿದೆ.

ತಟಸ್ಥ ತಾಣ ಯಾವುದು?

ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಾಲಿಗೆ ತಟಸ್ಥ ತಾಣ ದುಬೈ. ಅಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಮ್‌ ಭಾರತದ ಪಾಲಿಗೆ ಸುರಕ್ಷಿತ ತಾಣ. ನೇರ ಪ್ರಸಾರ, ಭದ್ರತೆ, ಟೈಮ್‌ ಜೋನ್‌ ಸೇರಿದಂತೆ ಎಲ್ಲ ವಿಚಾರದಲ್ಲೂ ಅನುಕೂಲಕರ. ಶಾರ್ಜಾ ಹಾಗೂ ಅಬು ಧಾಬಿಯೂ ಈ ಪಟ್ಟಿಯಲ್ಲಿವೆ. ದಶಕಗಳ ಹಿಂದೆ ಕೆನಡಾದ ಟೊರಂಟೊವನ್ನು ಕೂಡ ತಟಸ್ಥ ತಾಣವಾಗಿ ಆಯ್ಕೆ ಮಾಡಲಾಗುತ್ತಿತ್ತು.

ಭಾರತ – ಪಾಕ್‌ ಕ್ರಿಕೆಟ್‌ ವೈರತ್ವ ಎಲ್ಲಿಂದ ಆರಂಭ?

ದೇಶ ವಿಭಜಗೊಂಡು ಎರಡೂ ದೇಶಗಳೂ ಪರಸ್ಪರ ದ್ವೇಷ ಬೆಳೆಸಿಕೊಂಡ ಬಳಿಕದಿಂದಲೇ ಕ್ರಿಕೆಟ್‌ ತಂಡಗಳ ನಡುವೆಯೂ ವೈರತ್ವ ಶುರುವಾಯಿತು. ೧೯೪೭ರಲ್ಲಿ ಎರಡೂ ದೇಶಗಳಿಗೆ ಸ್ವಾತಂತ್ರ್ಯ ದೊರಕಿದರೂ ಮೊದಲ ದ್ವಿಪಕ್ಷೀಯ ಸರಣಿ ನಡೆದಿದ್ದು ೧೯೫೨ರಲ್ಲಿ. ಎರಡೂ ದೇಶಗಳ ರಾಜಕೀಯ ದ್ವೇಷ ಕ್ರಿಕೆಟ್‌ನೊಂದಿಗೆ ಬೆರೆತಿತು. ಪಂದ್ಯವನ್ನು ಗೆದ್ದರೆ ಯುದ್ಧದ್ದಲಿ ಗೆದ್ದಂತೆ ಎಂಬ ಭಾವ ಸೃಷ್ಟಿಯಾಯಿತು.

ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ಮೇಲಿನ ಹಕ್ಕು ಸ್ಥಾಪನೆ ವಿಚಾರದಲ್ಲಿ ಆರಂಭಗೊಂಡ ಬಿಕ್ಕಟ್ಟು ಹಾಗೂ ಆ ಬಳಿಕ ನಡೆದ ಇಂಡೋ-ಪಾಕ್‌ ಸಮರಗಳ ಪ್ರಭಾವ ಹಲವು ಬಾರಿ ಕ್ರಿಕೆಟ್‌ ಪಂದ್ಯಗಳಿಗೂ ತಟ್ಟಿದೆ. ೧೯೫೨ರಲ್ಲಿ ಪಾಕ್‌ ತಂಡ ಮೊದಲ ಬಾರಿ ಭಾರತಕ್ಕೆ ಬಂತು. ಆದರೆ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಹಣಾಹಣಿ ೧೯೬೨ರಲ್ಲಿ ಕೊನೆಗೊಂಡಿತು. ೧೯೬೨ರಿಂದ ೧೯೭೭ರವರೆಗೆ ಕ್ರಿಕೆಟ್ ಸಂಬಂಧವೇ ಇರಲಿಲ್ಲ. ೧೯೬೫ ಹಾಗೂ ೧೯೭೧ರಲ್ಲಿ ನಡೆದ ಎರಡೂ ದೇಶಗಳ ನಡುವಿನ ಯುದ್ಧವೇ ಅದಕ್ಕೆ ಕಾರಣ.

೧೯೭೮ರಲ್ಲಿ ಭಾರತ ತಂಡದ ಮತ್ತೆ ಪಾಕಿಸ್ತಾನಕ್ಕೆ ಪ್ರವಾಸ ಮಾಡಿತ್ತು. ಅಲ್ಲಿಗೆ ದೀರ್ಘ ಕಾಲದ ವೈಷಮ್ಯ ಕೊನೆಗೊಂಡಿತ್ತು. ೧೯೭೯ರಲ್ಲಿ ಪಾಕ್‌ ತಂಡ ಭಾರತಕ್ಕೂ ಬಂತು. ೧೯೮೪ರಲ್ಲಿ ಭಾರತ ತಂಡದ ಪಾಕ್‌ ಪ್ರವಾಸ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಹತ್ಯೆಯ ಕಾರಣಕ್ಕೆ ಸ್ಥಗಿತಗೊಂಡಿತ್ತು. ಅ೮೦ ಹಾಗೂ ೯೦ರ ದಶಕದಲ್ಲಿ ಇತ್ತಂಡಗಳ ನಡುವಿನ ಪಂದ್ಯಗಳು ಯುಎಇನಲ್ಲಿ ನಡೆದಿದ್ದವು.

೧೯೯೯ರಲ್ಲಿ ಭಾರತದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನಕ್ಕೆ ಐತಿಹಾಸಿಕ ಭೇಟಿ ನೀಡಿದ ಬಳಿಕ ಪಾಕ್‌ ತಂಡ ಭಾರತಕ್ಕೆ ಬಂದಿತ್ತು. ಅದಾದ ಬೆನ್ನಲ್ಲೇ ಕಾರ್ಗಿಲ್‌ ಯುದ್ಧ ನಡೆಯಿತು. ಬಳಿಕ ಕ್ರಿಕೆಟ್‌ ಸಂಬಂಧ ಹಳಸಿ ಹೋಯಿತು. ೨೦೦೩ರಲ್ಲಿ ವಾಜಪೇಯಿ ಮತ್ತೆ ಪಾಕಿಸ್ತಾನ ಜತೆಗಿನ ಶಾಂತಿಯ ಒಪ್ಪಂದ ಮಾಡಿಕೊಂಡ ಬಳಿಕ ೧೫ ವರ್ಷಗಳ ಮುನಿಸು ಮುಗಿದು ಭಾರತ ತಂಡ ಪಾಕಿಸ್ತಾನಕ್ಕೆ ಭೇಟಿ ನೀಡಿತು. ೨೦೦೫ ಹಾಗೂ ೨೦೦೬ರಲ್ಲಿ ಮತ್ತೆ ಪ್ರವಾಸಗಳು ನಡೆದವು. ೨೦೦೮ರಲ್ಲಿ ಪಾಕ್‌ ಚಿತಾವಣೆಯಿಂದ ಮುಂಬಯಿ ಭಯೋತ್ಪಾದನಾ ದಾಳಿ (೨೬/೧೧) ನಡೆಯಿತು. ಹೀಗಾಗಿ ೨೦೦೯ರಲ್ಲಿ ನಿಗದಿಯಾಗಿದ್ದ ಪಾಕ್‌ ಪ್ರವಾಸ ಕೈಗೊಳ್ಳಲು ಬಿಸಿಸಿಐ ನಿರಾಕರಿಸಿತು. ಅಲ್ಲಿಂದ ಭಾರತ ತಂಡ ಪಾಕಿಸ್ತಾನಕ್ಕೆ ಕಾಲಿಟ್ಟಿಲ್ಲ. ಮುಂದೆಯೂ ಹೋಗುವುದಿಲ್ಲ ಎಂದು ಶಪಥ ಮಾಡಿದೆ.

೨೦೦೯ರಲ್ಲಿ ಪಾಕಿಸ್ತಾನಕ್ಕೆ ಪ್ರವಾಸ ಮಾಡಿದ್ದ ಶ್ರೀಲಂಕಾ ತಂಡದ ಆಟಗಾರರು ಇದ್ದ ಬಸ್‌ ಮೇಲೆ ಭಯೋತ್ಪಾದಕರ ದಾಳಿ ನಡೆಯಿತು. ಸುರಕ್ಷಿತವಲ್ಲದ ಪಾಕಿಸ್ತಾನಕ್ಕೆ ಬೇರೆ ದೇಶಗಳ ಕ್ರಿಕೆಟ್‌ ತಂಡಗಳು ಕಾಲಿಡಲಿಲ್ಲ. ಈ ವಿಚಾರದಲ್ಲಿ ಎಲ್ಲರೂ ಭಾರತ ಪರ ನಿಂತವು. ಈ ಘಟನೆಯಿಂದಾಗಿ ಪಾಕಿಸ್ತಾನದ ನಿಜ ಬಣ್ಣ ಬಯಲಾಯಿತು. ಏತನ್ಮಧ್ಯೆ, ೨೦೧೩ರಲ್ಲಿ ಪಾಕಿಸ್ತಾನ ಕ್ರಿಕೆಟ್‌ ತಂಡ ಭಾರತಕ್ಕೆ ಆಗಮಿಸಿತ್ತು. ಅದುವೇ ಕೊನೇ ಸರಣಿ. ಅಲ್ಲಿಂದ ಎರಡೂ ದೇಶಗಳ ಕ್ರಿಕೆಟ್‌ ಮಂಡಳಿಗಳು ಹಲವು ಒಪ್ಪಂದಕ್ಕೆ ಮುಂದಾಗಿದ್ದವು. ಆದರೆ, ಇಂಥ ಒಪ್ಪಂದಕ್ಕೆ ಭಾರತ ಸರಕಾರದ ಒಪ್ಪಿಗೆ ಅಗತ್ಯವಾಗಿತ್ತು. ಎಲ್ಲ ಪ್ರಸ್ತಾಪಗಳನ್ನು ಸರಕಾರ ತಳ್ಳಿ ಹಾಕಿತು. ಈಗ ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.

ಆಟಗಾರರಿಗೂ ಅಷ್ಟೇ ಜಿದ್ದು

ಎರಡೂ ದೇಶಗಳ ನಡುವಿನ ರಾಜಕೀಯ ವಿರೋಧ ಮೈದಾನದಲ್ಲೂ ಪ್ರಕಟಗೊಂಡಿದ್ದವು. ೧೯೯೨ರಲ್ಲಿ ಕಿರಣ್‌ ಮೋರೆ ಹಾಗೂ ಜಾವೆದ್ ಮೀಯಾಂದಾದ್‌ ನಡುವಿನ ಗಲಾಟೆ, ೧೯೯೬ರಲ್ಲಿ ವೆಂಕಟೇಶ್‌ ಪ್ರಸಾದ್‌ ಹಾಗೂ ಅಮಿರ್‌ ಸೋಹೈಲ್ ನಡುವಿನ ಜಿದ್ದು, ೨೦೦೭ರಲ್ಲಿ ಕಾನ್ಪುರದಲ್ಲಿ ನಡೆದ ಪಂದ್ಯದಲ್ಲಿ ಶಾಹಿದ್‌ ಅಫ್ರಿದಿ ಹಾಗೂ ಗೌತಮ್‌ ಗಂಭೀರ್‌ ಕಿತ್ತಾಡಿಕೊಂಡಿರುವುದು, ೨೦೧೦ರಲ್ಲಿ ಶೋಯೆಬ್‌ ಅಖ್ತರ್‌ ಹಾಗೂ ಹರ್ಭಜನ್ ಸಿಂಗ್ ಕಚ್ಚಾಡಿಕೊಂಡಿರುವುದು, ೨೦೧೦ರಲ್ಲಿ ಗೌತಮ್‌ ಗಂಭೀರ್ ಹಾಗೂ ಕಮ್ರಾನ್‌ ಅಕ್ಮಲ್‌ ಜಗಳವಾಡಿಕೊಂಡಿರುವುದು ಕ್ರಿಕೆಟ್‌ ಪ್ರೇಮಿಗಳ ಮನದಲ್ಲಿ ಇನ್ನೂ ಅಚ್ಚಳಿಯದೇ ಉಳಿದ ಘಟನೆಗಳಾಗಿವೆ.

ಈಗ ಹೇಗಿದೆ ಆಟಗಾರರ ವರ್ತನೆ?

ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್‌ ತಂಡಗಳ ಆಟಗಾರರು ಈಗ ಮೊದಲಿನಂತೆ ಗ್ರೌಂಡ್‌ನಲ್ಲಿ ಕಚ್ಚಾಡುವುದಿಲ್ಲ. ಎದುರು ಸಿಕ್ಕಾಗ ಪರಸ್ಪರ ಅಭಿಮಾನದಿಂದಲೇ ಮಾತನಾಡುತ್ತಾರೆ. ೨೦೨೧ರ ಟಿ೨೦ ವಿಶ್ವ ಕಪ್‌ನಲ್ಲಿ ಪರಸ್ಪರ ಎದುರಾದಾಗ, ಕಳೆದ ತಿಂಗಳು ನಡೆದ ಏಷ್ಯಾ ಕಪ್‌ನಲ್ಲಿ ಎರಡು ಸಲ ಪರಸ್ಪರ ಎದುರಾದಾಗಲೂ ಇತ್ತಂಡಗಳ ಆಟಗಾರರು ಸಂಭ್ರಮದಿಂದಲೇ ಎದುರುಗೊಂಡಿದ್ದರು. ಎರಡೂ ದೇಶಗಳ ಆಟಗಾರರು ಪ್ರೀತಿ, ಅಭಿಮಾನದಿಂದ ಮಾತನಾಡುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು. ಪಾಕಿಸ್ತಾನದ ಬೌಲರ್‌ ಹ್ಯಾರಿಸ್ ರವೂಫ್‌, ಟೀಮ್‌ ಇಂಡಿಯಾ ಸ್ಟಾರ್ ಬ್ಯಾಟರ್‌ ವಿರಾಟ್‌ ಕೊಹ್ಲಿಯಿಂದ ಟಿ ಶರ್ಟ್‌ ಮೇಲೆ ಆಟೋಗ್ರಾಫ್‌ ಪಡೆದಿರುವುದು, ರೋಹಿತ್ ಶರ್ಮ ಅವರು ಪಾಕ್‌ ತಂಡದ ನಾಯಕನ ಕೈ ಕುಲುಕಿ ಮಾತನಾಡಿದ್ದು, ಪಾಕ್‌ ಬೌಲರ್‌ ಶಾಹಿನ್‌ ಶಾ ಅಫ್ರಿದಿ ಜತೆ ಭಾರತ ತಂಡದ ಆಟಗಾರರ ಒಡನಾಟ ಇದಕ್ಕೆಲ್ಲ ಸ್ಪಷ್ಟ ಉದಾಹರಣೆ. ಆದರೆ, ಪರಸ್ಪರ ಗೆದ್ದೇ ತೀರಬೇಕು ಎಂಬ ಇತ್ತಂಡಗಳ ಆಟಗಾರರ ಮೇಲಿನ ಒತ್ತಡ ಇನ್ನೂ ಕಡಿಮೆಯಾಗಿಲ್ಲ.

ಆಯೋಜಕರಿಗೆ ಹಬ್ಬ?

ಭಾರತ- ಪಾಕ್‌ ತಂಡಗಳ ನಡುವಿನ ಜಿದ್ದು ಟೂರ್ನಿ ಆಯೋಜಕರ ಪಾಲಿಗೆ ಆದಾಯದ ಮೂಲ. ಎರಡೂ ದೇಶಗಳ ನಡುವಿನ ಪಂದ್ಯ ಆಯೋಜನೆಗೊಂಡರೆ ಆದಾಯ ಮತ್ತು ಪ್ರಾಯೋಜಕತ್ವ ಹುಡುಕಿಕೊಂಡು ಬರುತ್ತದೆ. ಪ್ರೇಕ್ಷಕರ ಗ್ಯಾಲರಿಗಳೂ ತುಂಬಿ ತುಳುಕುತ್ತವೆ. ಪಂದ್ಯದ ಟಿಕೆಟ್‌ ಬಿಡುಗಡೆಗೊಂಡ ಕ್ಷಣಾರ್ಧದಲ್ಲೇ ಸೋಲ್ಡ್‌ ಔಟ್‌ ಆಗುತ್ತದೆ. ನೇರ ಪ್ರಸಾರದ ಹಕ್ಕು ಕೂಡ ಲಾಭದಾಯಕ ಮೊತ್ತಕ್ಕೆ ಸೇಲ್‌ ಆಗುತ್ತದೆ. ಹೀಗಾಗಿ ಪ್ರತಿ ಐಸಿಸಿ ಟೂರ್ನಿಯಲ್ಲೂ ಭಾರತ ಹಾಗೂ ಪಾಕಿಸ್ತಾನ ಒಂದೇ ಗುಂಪಿನಲ್ಲಿರುತ್ತದೆ ಹಾಗೂ ಆರಂಭದಲ್ಲೇ ಒಂದು ಪಂದ್ಯ ನಿಗದಿ ಮಾಡಲಾಗುತ್ತದೆ. ಅಲ್ಲಿಂದ ಇಡೀ ಟೂರ್ನಿಗೆ ಕಳೆ ಬರುತ್ತದೆ.

ಭಾರತ ಮತ್ತು ಪಾಕಿಸ್ತಾನಗಳ ನಡುವಿನ ದ್ವಿಪಕ್ಷೀಯ ಸಂಬಂಧ ಸದ್ಯಕ್ಕೆ ಸರಿಹೋಗುವ ಯಾವುದೇ ಲಕ್ಷಗಳು ಇಲ್ಲ. ಹೀಗಾಗಿ ಕ್ರಿಕೆಟ್‌ ತಂಡಗಳ ನಡುವಿನ ವೈರತ್ವವೂ ಮುಂದುವರಿಯುವುದರಲ್ಲಿ ಅನುಮಾನ ಇಲ್ಲ. ಆದರೆ, ಬಿಸಿಸಿಐ ಜಾಗತಿಕ ಮಟ್ಟದಲ್ಲಿ ಅತ್ಯಂತ ಬಲಿಷ್ಠ ಕ್ರಿಕೆಟ್‌ ಸಂಸ್ಥೆಯಾಗಿರುವ ಕಾರಣ ನೇರ ಸಮರದಲ್ಲಿ ಗೆಲುವು ನಮ್ಮದೇ.

ಇದನ್ನೂ ಓದಿ | IND vs PAK | ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಆಟಗಾರರ ನಡುವಿನ ಬಿಗ್‌ ಫೈಟ್‌ಗಳು ಇಲ್ಲಿವೆ

Exit mobile version