Site icon Vistara News

ICC World Cup 2023 : ಸೋತು ಸುಣ್ಣವಾಗಿ ವಿಶ್ವ ಕಪ್​ನಲ್ಲಿ ಆಟ ಮುಗಿಸಿದ ಪಾಕಿಸ್ತಾನ

Pakistan Cricket team

ಕೋಲ್ಕೊತಾ: ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡ ಸೋಲಿನೊಂದಿಗೆ ವಿಶ್ವ ಕಪ್​ (ICC World Cup 2023) ಅಭಿಯಾನ ಮುಗಿಸಿದೆ. ಲೀಗ್ ಹಂತದ ತನ್ನ ಕೊನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 93 ರನ್​ಗಳಿಂದ ಸೋತಿದ್ದು ನಿರಾಸೆಯಿಂದ ತವರಿಗೆ ಮರಳುವಂತಾಗಿದೆ. ಪಾಕಿಸ್ತಾನ ತಂಡ ಹಾಲಿ ಆವೃತ್ತಿಯಲ್ಲಿ ಆಡಿರುವ 9 ಪಂದ್ಯಗಳಲ್ಲಿ ಕೇವಲ ನಾಲ್ಕು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ 8 ಅಂಕಗಳನ್ನು ಮಾತ್ರ ಸಂಪಾದಿಸಿದೆ. ಅಂಕಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡು ಅಭಿಯಾನ ಮುಗಿಸಿದೆ.

ಭಾರತಕ್ಕೆ ವಿಶ್ವ ಕಪ್​ಗಾಗಿ ಬರುವ ಮೊದಲು ಪಾಕಿಸ್ತಾನ ತಂಡ ಸಿಕ್ಕಾಪಟ್ಟೆ ಅಧಿಕ ಪ್ರಸಂಗತನ ಮಾಡಿತ್ತು. ಇಲ್ಲಿಗೆ ಬರುವುದಕ್ಕೆ ಸಾಧ್ಯವಿಲ್ಲ ಎಂದು ಆರಂಭದಲ್ಲಿ ಹೇಳಿದ್ದರೆ, ಬಳಿಕ ಆ ಮೈದಾನದಲ್ಲಿ ಆಡುವುದಿಲ್ಲ, ಈ ಮೈದಾನದಲ್ಲಿ ಆಡುವುದಿಲ್ಲ ಎಂದೆಲ್ಲ ರಗಳೆ ಮಾಡಿತ್ತು. ಕೊನೆಯಲ್ಲಿ ಅನಿವಾರ್ಯವಾಗಿ ಬರಲೇಬೇಕಾಯಿತು. ಈ ವೇಳೆ ಭಾರತದಲ್ಲಿ ನಾವು ವಿಶ್ವ ಕಪ್ ಗೆದ್ದೇ ಗೆಲ್ಲುತ್ತೇವೆ ಎಂದು ಹುಂಬತನದ ಮಾತು ಆಡಿತ್ತು. ಇದೀಗ ಐದನೇ ಸ್ಥಾನ ಪಡೆದು ತವರಿಗೆ ಮರಳುವಂತಾಗಿದೆ.

ಇದನ್ನೂ ಓದಿ : Virat Kohli : ವಿರಾಟ್ ಕೊಹ್ಲಿಗೆ ವಿಶೇಷ ರೀತಿಯಲ್ಲಿ ಶುಭಾಶಯ ಹೇಳಿದ ಸಚಿನ್ ತೆಂಡೂಲ್ಕರ್​

ವಿಶ್ವ ಕಪ್​ಗೆ ಆರಂಭಕ್ಕೆ ಮೊದಲು ವಿಶ್ವದ ನಂಬರ್ ಒನ್​ ಸ್ಥಾನ ಪಡೆದುಕೊಂಡಿದ್ದ ಪಾಕಿಸ್ತಾನ, ಭಾರತದಲ್ಲಿ ನಾವೇ ಚಾಂಪಿಯನ್​ಗಳು ಎಂದು ಬಿಂಬಿಸಿತ್ತು. ಆದರೆ, ಭಾರತಕ್ಕೆ ಕಾಲಿಟ್ಟ ಪಾಕ್​ ತಂಡದ ಆಟಗಾರರು ಸಂಪೂರ್ಣವಾಗಿ ಶಕ್ತಿ ಗುಂದಿದಂತೆ ಕಂಡು ಬಂದರು. ನಂಬರ್ 1 ಬ್ಯಾಟರ್ ಬಾಬರ್ ಅಜಂ ಹಾಗೂ ನಂಬರ್ 1 ಬೌಲರ್​ ಶಹೀನ್ ಶಾ ಅಫ್ರಿದಿ ಇದ್ದ ತಂಡ ಅದಾಗಿತ್ತು. ಆದರೆ ಅವರಿಬ್ಬರ ಕರಾಮತ್ತ ಇಲ್ಲಿ ನಡೆಯಲಿಲ್ಲ. ಶಹೀನ್​ ಬೌಲಿಂಗ್ ಅನ್ನು ಭಾರತ ತಂಡ ಸೇರಿದಂತೆ ಬಹುತೇಕ ತಂಡಗಳ ಬ್ಯಾಟರ್​ಗಳು ನುಚ್ಚು ನೂರು ಮಾಡಿದ್ದರು. ಬಾಬರ್ ಅಜಂ ಶಾಲಾ ಮಕ್ಕಳಂತೆ ವಿಕೆಟ್​ ಒಪ್ಪಿಸಿ ಅತ್ಯಂತ ನಿರಾಸೆಯ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಅಂತಿಮವಾಗಿ ಪಾಕಿಸ್ತಾನ ತಂಡದ ಆಟ ಭಾರತದಲ್ಲಿ ನಡೆಯಲೇ ಇಲ್ಲ ಎಂದು ಹೇಳಬಹುದು. ಅದಕ್ಕಿಂತಲೂ ಹೆಚ್ಚಾಗಿ ದುರ್ಬಲ ತಂಡಗಳ ಎದುರು ಮಾತ್ರ ಪಾಕ್ ತಂಡ ದೊಡ್ಡ ಚಾಂಪಿಯನ್ ಎಂಬ ಮಾತಿಗೆ ಸಾಕ್ಷಿ ಕೊಟ್ಟರು.

ಪಾಕ್​ ತಂಡದ ಈ ಪ್ರದರ್ಶನದಿಂದಾಗಿ ಅಲ್ಲಿನ ಕ್ರಿಕೆಟ್​ ಮಂಡಳಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಆಯ್ಕೆಗಾರ ಇಂಜಮಾಮ್​ ಉಲ್ ಹಕ್​ ತಲೆದಂಡವಾಗಿದೆ. ಇನ್ನು ಪಾಕಿಸ್ತಾನ ತಂಡ ತವರಿಗೆ ಮರಳಿದ ಬಳಿಕ ಆಟಗಾರರಲ್ಲೂ ಅನೇಕರು ಸೋಲಿನ ಬಿಸಿಯನ್ನು ಅನುಭವಿಸಲಿದ್ದಾರೆ. ಪ್ರಮುಖವಾಗಿ ನಾಯಕ ಬಾಬರ್ ಅಜಂ ಅವರ ಸ್ಥಾನಕ್ಕೆ ಕುತ್ತು ಬಂದಿದೆ.

ಪಂದ್ಯದಲ್ಲಿ ಏನಾಯಿತು?

ಐತಿಹಾಸಿಕ ಈಡನ್​ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್​ ತಂಡ ಮೊದಲು ಬ್ಯಾಟ್ ಮಾಡಿತು. ಬಜ್​ಬಾಲ್ ತಂತ್ರದೊಂದಿಗೆ ಆಡಿದ ಜೋಸ್​ ಬಟ್ಲರ್ ಪಡೆ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 337 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಾಕಿಸ್ತಾನ ಬಳಗ 43.3 ಓವರ್​ಗಳಲ್ಲಿ 244 ರನ್​ಗಳಿಗೆ ಆಲ್​ಔಟ್ ಆಯಿತು. ಅದರಲ್ಲೂ ಕೊನೇ ವಿಕೆಟ್​ಗೆ ರವೂಫ್​ (35) ಮತ್ತು ಹಾಗೂ ವಾಸಿಮ್​ (16) ಸೇರಿಕೊಂಡು 53 ರನ್​ಗಳ ಜತೆಯಾಟವಾಡಿದ ಕಾರಣ ತಂಡದ ಮರ್ಯಾದೆ ಸ್ವಲ್ಪ ಮಟ್ಟಿಗೆ ಉಳಿಯಿತು. ಇಲ್ಲದಿದ್ದರೆ 100ಕ್ಕಿಂತಲೂ ಅಧಿಕ ರನ್​ಗಳಿಂದ ಸೋಲು ಕಾಣುತ್ತಿತ್ತು.

ಸೆಮೀಸ್ ಆಸೆ ಭಗ್ನ

ಪಾಕಿಸ್ತಾನ ತಂಡಕ್ಕೆ ಈ ಪಂದ್ಯದಲ್ಲಿ ಇಂಗ್ಲೆಂಡ್​ ತಂಡವನ್ನು 287 ರನ್​ಗಳ ಅಂತರದಿಂದ ಸೋಲಿಸಿದ್ದರೆ ಸೆಮಿಫೈನಲ್ ಅವಕಾಶವಿತ್ತು. ಅದಕ್ಕಾಗಿ ಪಾಕ್ ತಂಡ ಟಾಸ್​ ಗೆಲ್ಲಬೇಕಾಗಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಅಲ್ಲಿಗೆ ಪಾಕ್​ ಅವಕಾಶ ಕೊನೆಗೊಂಡಿತ್ತು. ಬಳಿಕವೂ ಇಂಗ್ಲೆಂಡ್ ತಂಡ ದೊಡ್ಡ ಮೊತ್ತವನ್ನು ಪೇರಿಸಿತ್ತು. ಈ ವೇಳೆ ಪಾಕ್​ ತಂಡ 6.4 ಓವರ್​ಗಳಲ್ಲಿ 338 ರನ್​ ಗಳಿಸಿದರಷ್ಟೇ ಸೆಮೀಸ್​ಗೆ ಎಂಬ ಸವಾಲು ಎದುರಾಯಿತು. ಅದು ಕೂಡ ಅಸಂಭವ. ಕೊನೆಗ ಗೆಲವಿನ ಅವಕಾಶವನ್ನೂ ನಷ್ಟ ಮಾಡಿಕೊಂಡಿತು.

Exit mobile version