ಚೆನ್ನೈ: ಜಿದ್ದಾಜಿದ್ದಿನಿಂದ ಕೂಡಿದ್ದ ಹಾಲಿ ವಿಶ್ವ ಕಪ್ನ 26ನೇ ಪಂದ್ಯದಲ್ಲಿ (ICC World Cup 2023) ದಕ್ಷಿಣ ಆಫ್ರಿಕಾ ತಂಡ ಪಾಕಿಸ್ತಾನ ವಿರುದ್ಧ 1 ವಿಕೆಟ್ ರೋಚಕ ಜಯ ಸಾಧಿಸಿದೆ. ಈ ಮೂಲಕ ಬಾಬರ್ ನೇತೃತ್ವದ ಪಾಕಿಸ್ತಾನ ತಂಡ ನಾಲ್ಕನೇ ಸೋಲಿಗೆ ಒಳಗಾಯಿತು. ಪಾಕಿಸ್ತಾನ ತಂಡ ಲೀಗ್ ಹಂತದಲ್ಲೇ ಗಂಟು ಮೂಟೆ ಕಟ್ಟಬೇಕಾಗುತ್ತದೆ. ಯಾಕೆಂದರೆ ಇದುವರೆಗೆ ಆಡಿರುವ ಆರು ಪಂದ್ಯಗಳಲ್ಲಿ ಪಾಕಿಸ್ತಾನ ತಂಡಕ್ಕೆ ಎದುರಾದ 4ನೇ ಸೋಲು ಇದಾಗಿದೆ. ಕೇವಲ ನಾಲ್ಕು ಅಂಕಗಳನ್ನು ಸಂಪಾದಿಸಿರುವ ಪಾಕ್ ತಂಡಕ್ಕೆ ಇನ್ನು ಉಳಿದಿರುವ ಮೂರು ಪಂದ್ಯಗಳಲ್ಲಿ ಎಲ್ಲವನ್ನೂ ಗೆದ್ದರೂ ಸೆಮೀಸ್ಗೆ ಪ್ರವೇಶ ಮಾಡುವ ಅವಕಾಶ ಇರುವುದಿಲ್ಲ.
ಪಂದ್ಯದಲ್ಲಿ ಪಾಕಿಸ್ತಾನ ತಂಡಕ್ಕೆ ಗೆಲ್ಲುವ ಅವಕಾಶವಿತ್ತು. ಆದರೆ, ಪೆಟ್ಟಿನ ಮೇಲೆ ಪೆಟ್ಟು ತಿಂದು ಗಲಿಬಿಲಿಗೊಂಡಿರುವ ಬಾಬರ್ ಪಡೆ ಅದನ್ನೂ ಕೈಚೆಲ್ಲಿತು. ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್ ಗೆಲುವಿನ ಫೋರ್ ಬಾರಿಸಿದರೆ, ಪಾಕ್ ತಂಡ ದಕ್ಷಿಣ ಆಫ್ರಿಕಾದ ಮಹಾರಾಜನಿಗೆ ತಲೆ ಬಾಗಿತು. ಪಾಕಿಸ್ತಾನ ತಂಡ ಹಾಲಿ ಆವೃತ್ತಿಯ ಮೊದಲೆರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ದುರ್ಬಲ ನೆದರ್ಲ್ಯಾಂಡ್ಸ್ ಹಾಗೂ ಶ್ರೀಲಂಕಾ ವಿರುದ್ದ ಜಯ ಸಾಧಿಸಿತ್ತು. ಮುಂದಿನ ಪಂದ್ಯದಲ್ಲಿ ಭಾರತದ ವಿರುದ್ಧ ಸೋತಿತ್ತು. ಅಲ್ಲಿಂದ ಆಸ್ಟ್ರೇಲಿಯಾ, ಅಫಘಾನಿಸ್ತಾನ ತಂಡಕ್ಕೆ ಮಣಿದಿತ್ತು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲುವ ಅವಕಾಶವನ್ನೂ ನಷ್ಟ ಮಾಡಿಕೊಂಡಿತು.
South Africa overcome Pakistan by the barest of margins to take an absolute #CWC23 cliffhanger in Chennai 🔥#PAKvSA 📝: https://t.co/gVCbKjerMZ pic.twitter.com/MCf3QQIjLA
— ICC Cricket World Cup (@cricketworldcup) October 27, 2023
ಇಲ್ಲಿನ ಎಮ್ಎ ಚಿದಂಬರಂ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡ ಮೊದಲು ಬ್ಯಾಟ್ ಮಾಡಿ 46. 4 ಓವರ್ಗಳಲ್ಲಿ 270 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ತಂಡ 47.2 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 271 ರನ್ ಬಾರಿಸಿ ಗೆಲುವು ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ಮತ್ತೆ ಬ್ಯಾಟಿಂಗ್ ವೈಫಲ್ಯ ಎದುರಿಸಿತು. ಅಬ್ದುಲ್ಲಾ ಶಫಿಕ್ (9) ಹಾಗೂ ಇಮಾಮ್ ಉಲ್ ಹಕ್ (12) ಬೇಗ ವಿಕೆಟ್ ಒಪ್ಪಿಸಿದರು. ಹೀಗಾಗಿ ಪಾಕ್ 20 ರನ್ ಒಳಗೆ ಮೊದಲೆರಡು ವಿಕೆಟ್ ಕಳೆದುಕೊಂಡಿತು. ದಕ್ಷಿಣ ಆಫ್ರಿಕಾದ ಬೌಲರ್ ಮರ್ಕೊ ಜೆನ್ಸನ್ ಆರಂಭಿಕರನ್ನು ಪೆವಿಲಿಯನ್ಗೆ ಅಟ್ಟಿದರು. ಬಳಿಕ ಬಂದ ನಾಯಕ ಬಾಬರ್ ಅಜಮ್ ಹಾಲಿ ವಿಶ್ವ ಕಪ್ನಲ್ಲಿ ಮತ್ತೊಂದು ಅರ್ಧ ಶತಕ ಬಾರಿಸಿದರು. ಅವರು 65 ಎಸೆತಕ್ಕೆ 50 ರನ್ ಬಾರಿಸಿದರು. ಅವರಿಗೆ ಉತ್ತಮ ಸಾಥ್ ಕೊಟ್ಟ ಮೊಹಮ್ಮದ್ ರಿಜ್ವಾನ್ 31 ರನ್ ಬಾರಿಸಿದರು. ಈ ವೇಳೆ ತಂಡ ಪ್ರಗತಿಯ ಹಾದಿಯಲ್ಲಿತ್ತು. ಅದಾದ ಬಳಿಕ ಇಫ್ತಿಕಾರ್ ಅಹಮದ್ 21 ರನ್ ಬಾರಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಸೌದ್ ಶಕೀಲ್ (52) ಅರ್ಧ ಶತಕ ಬಾರಿಸಿ ಮಿಂಚಿದರು. ಅವರಿಗೆ ಸ್ಪಿನ್ ಆಲ್ರೌಂಡರ್ ಶದಾಬ್ ಖಾನ್ ಉತ್ತಮ ಬೆಂಬಲ ಕೊಟ್ಟು 43 ರನ್ ಬಾರಿಸಿದರು. ಅಂತಿಮ ಹಂತದಲ್ಲಿ ಮೊಹಮ್ಮದ್ ನವಾಜ್ ಕೂಡ 24 ರನ್ ಬಾರಿಸಿ ಸ್ಪರ್ಧಾತ್ಮ ಮೊತ್ತವನ್ನು ಪೇರಿಸಲು ನೆರವಾದರು.
ಪ್ರತಿಯಾಗಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಉತ್ತಮ ಆರಂಭವನ್ನೇ ಪಡೆಯಿತು. 3 ಓವರ್ಗಳಲ್ಲಿ 31 ರನ್ ಬಾರಿಸಿತು. ಬಳಿಕ ವ್ಯಾನ್ಡೆರ್ ಡುಸ್ಸೆನ್ 21 ರನ್ ಬಾರಿಸಿದರು. ಆ ಬಳಿಕ ಬಂದ ಏಡೆನ್ ಮಾರ್ಕ್ರಮ್ ಅಬ್ಬರದ ಬ್ಯಾಟಿಂಗ್ ಮಾಡಿ 91 ರನ್ ಬಾರಿಸಿದರು. ಈ ಹಂತದಲ್ಲಿ ದಕ್ಷಿಣ ಆಫ್ರಿಕಾ ತಂಡ ಗೆಲುವಿನ ಅವಕಾಶವನ್ನು ಪಡೆದುಕೊಂಡಿತ್ತು. ಅದಕ್ಕಿಂತ ಮೊದಲು ಉತ್ತಮ ಫಾರ್ಮ್ನಲ್ಲಿರುವ 12 ರನ್ ಬಾರಿಸಿದರು. ಬಳಿಕ ಡೇವಿಡ್ ಮಿಲ್ಲರ್ 29 ರನ್ ಬಾರಿಸಿದರು. ಮರ್ಕೊ ಜೆನ್ಸನ್ 20 ರನ್ ಬಾರಿಸಿದರೆ ಗೆರಾಲ್ಡ್ ಕೊಯೆಡ್ಜಿ 10 ರನ್ ಬಾರಿಸಿ ಔಟಾದರು.
ಹೊಸ ದಾಖಲೆ ಬರೆದ ಉಸ್ಮಾ ಮಿರ್
ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ವಿಶ್ವಕಪ್ ಪಂದ್ಯದಲ್ಲಿ (ICC World Cup 2023) ಪಾಕಿಸ್ತಾನ ತಂಡ ಮೊಟ್ಟ ಮೊದಲ ಬಾರಿಗೆ ಕನ್ಕಷನ್ ಆಟಗಾರನ್ನು ಬಳಸಿಕೊಂಡಿತು. ಈ ಮೂಲಕ ಏಕ ದಿನ ವಿಶ್ವ ಕಪ್ ಇತಿಹಾಸದಲ್ಲಿ ಈ ನಿಯಮವನ್ನು ಬಳಸಿದ ಮೊದಲ ತಂಡವೆಂಬ ಖ್ಯಾತಿ ಪಡೆದುಕೊಂಡಿತು. ಪಂದ್ಯದ ವೇಳೆ ಗಾಯಗೊಂಡ ಶದಾಬ್ ಖಾನ್ ಬದಲಿಗೆ ಲೆಗ್ ಸ್ಪಿನ್ನರ್ ಉಸಾಮಾ ಮಿರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು.
ಪಾಕಿಸ್ತಾನದ ಡೈನಾಮಿಕ್ ಆಲ್ರೌಂಡರ್ ಶದಾಬ್ ಖಾನ್ ದಕ್ಷಿಣ ಆಫ್ರಿಕಾದ ಇನಿಂಗ್ಸ್ನ ಆರಂಭಿಕ ಹಂತಗಳಲ್ಲಿ ಗಾಯಗೊಂಡರು. ದಕ್ಷಿಣ ಆಫ್ರಿಕಾದ ನಾಯಕ ತೆಂಬಾ ಬವುಮಾ ಅವರ ಶಾಟ್ ಅನ್ನು ತಡೆಯಲು ಮುಂದಾದ ಶದಾಬ್ ಅವರ ಧೈರ್ಯಶಾಲಿ ಪ್ರಯತ್ನವು ದುರದೃಷ್ಟಕರ ಕುಸಿತಕ್ಕೆ ಕಾರಣವಾಯಿತು. ಪರಿಣಾಮವಾಗಿ ಅವರ ತಲೆಗೆ ಗಂಭೀರ ಪೆಟ್ಟು ಬಿತ್ತು. ಮುಂದುವರಿಯುವ ಅವರ ಆರಂಭಿಕ ನಿರ್ಧಾರದ ಹೊರತಾಗಿಯೂ ಅವರು ಆಡಲು ಸಾಧ್ಯವಾಗುವುದಿಲ್ಲ ಎಂಬುದು ಸ್ಪಷ್ಟವಾಯಿತು, ಇದು ಅಭೂತಪೂರ್ವ ಕಂಕಷನ್ ಬದಲಿ ನಿಯಮವನ್ನು ಸಕ್ರಿಯಗೊಳಿಸಲು ಕಾರಣವಾಯಿತು. ಬಳಿಕ ಉಸ್ಮಾನ್ ಮಿರ್ ತಂಡವನ್ನು ಸೇರಿಕೊಂಡರು.