ದುಬೈ : ಭಾರತ ತಂಡದ ವಿರುದ್ಧದ ಹಣಾಹಣಿಗೆ ಸಜ್ಜಾಗುತ್ತಿರುವ ಪಾಕಿಸ್ತಾನ (Ind vs Pak) ತಂಡದ ಹುಮ್ಮಸ್ಸಿಗೆ ಅಡಚಣೆ ಉಂಟಾಗಿದೆ. ತಂಡದ ವೇಗದ ಬೌಲಿಂಗ್ ವಿಭಾಗದ ಪರಿಣಾಮಕಾರಿ ಬೌಲರ್ ಶಹನವಾಜ್ ದಹಾನಿ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿಯುವಂತಾಗಿದೆ. ಇದರೊಂದಿಗೆ ಪಾಕ್ ತಂಡದ ಮೂವರು ಬೌಲರ್‌ಗಳು ಗಾಯಗೊಂಡಂತಾಗಿದೆ. ಟೂರ್ನಿ ಆರಂಭಕ್ಕೆ ಮೊದಲು ಶಹೀನ್ ಶಾ ಅಫ್ರಿದಿ ಗಾಯಗೊಂಡಿದ್ದರೆ, ಅಭ್ಯಾಸದ ವೇಳೆ ಜೂನಿಯರ್ ವಾಸಿಮ್ ಗಾಯಗೊಂಡಿದ್ದರು. ಎರಡು ಪಂದ್ಯಗಳ ಬಳಿಕ ದಹಾನಿ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ.
ಅಫ್ರಿದಿ ಹಾಗೂ ವಾಸಿಮ್ ಅನುಪಸ್ಥಿತಿಯಲ್ಲಿ ನಾಸಿಮ್ ಶಾ ಹಾಗೂ ದಹಾನಿ ಉತ್ತಮ ಪ್ರದರ್ಶನ ನೀಡಿದ್ದರು. ದಹಾನಿ ಭಾರತ ವಿರುದ್ಧದ ಪಂದ್ಯದಲ್ಲಿ ೬ ಎಸೆತಗಳಿಗೆ ೧೬ ರನ್ ಬಾರಿಸುವ ಜತೆಗೆ ೪ ಓವರ್‌ಗಳಲ್ಲಿ ೨೯ ರನ್ ಮಾತ್ರ ನೀಡಿದ್ದರು. ಹೀಗಾಗಿ ಭಾನುವಾರ ಪಂದ್ಯದಲ್ಲಿ ಅವರು ತಂಡದ ಬೌಲಿಂಗ್ ವಿಭಾಗದ ನೆಚ್ಚಿನ ಸದಸ್ಯರಾಗಿದ್ದರು.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶಹನವಾಜ್ ಅಲಭ್ಯತೆಯನ್ನು ಸ್ಪಷ್ಟಪಡಿಸಿದೆ. ಹಾಂಕಾಂಗ್ ವಿರುದ್ಧದ ಪಂದ್ಯದ ವೇಳೆ ಅವರು ಒಂದು ಪಾರ್ಶ್ವದ ನೋವಿಗೆ ಒಳಗಾಗಿರುವ ಕಾರಣ ಭಾರತ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ದಹಾನಿ ಅಲಭ್ಯತೆಯಿಂದಾಗಿ ಮೊಹಮ್ಮದ್ ಹಸ್ನೈನ್ ಅಥವಾ ಹಸನ್ ಅಲಿ ಭಾರತ ವಿರುದ್ಧದ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ. ಭಾರತ ವಿರುದ್ಧ ಪಂದ್ಯದಲ್ಲಿ ನಾಸಿಮ್ ಶಾ ಕೂಡ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಆದರೆ, ಹೆಚ್ಚಿನ ಸಮಸ್ಯೆಯಿಲ್ಲದೇ ಅವರು ಗುಣಮುಖರಾಗಿದ್ದರು.
ಇದನ್ನೂ ಓದಿ | Ind vs Pak | ಅಗ್ರ ಕ್ರಮಾಂಕದ ಬ್ಯಾಟಿಂಗ್, ಡೆತ್ ಓವರ್ ಬೌಲಿಂಗ್ ಸುಧಾರಣೆಗೆ ಭಾರತ ತಂಡದ ಒತ್ತು