ಹೈದರಾಬಾದ್: ಉತ್ತಮ ಆರಂಭದ ಹೊರತಾಗಿಯೂ ನಾಟಕೀಯ ಕುಸಿತ ಕಂಡ ನೆದರ್ಲೆಂಡ್ಸ್ ತಂಡ ಪಾಕಿಸ್ತಾನ ವಿರುದ್ಧದ ವಿಶ್ವಕಪ್ನ ಮೊದಲ ಪಂದ್ಯದಲ್ಲಿ 81 ರನ್ಗಳ ಸೋಲು ಕಂಡಿದೆ. ಸೋಲು ಕಂಡರೂ ನೆದರ್ಲೆಂಡ್ಸ್ ತಂಡದ ದಿಟ್ಟ ಹೋರಾಟ ಈ ಪಂದ್ಯದ ಹೈಲೆಟ್ಸ್ ಆಗಿತ್ತು. ಅನಾನುಭವಿಗಳ ಮುಂದೆ ಪಾಕ್ ಗೆಲುವಿಗಾಗಿ ಪರದಾಡಿತು.
ಹೈದರಾಬಾದ್ನ “ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ”ನಲ್ಲಿ(Rajiv Gandhi International Stadium, Hyderabad) ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಪಾಕಿಸ್ತಾನ ಬ್ಯಾಟರ್ಗಳು ನೆದರ್ಲೆಂಡ್ಸ್‌ನ ಘಾತಕ ಬಾಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ಪರದಾಡಿ 49 ಓವರ್ಗಳಲ್ಲಿ 286 ರನ್ಗಳಿಗೆ ಸರ್ವಪತನ ಕಂಡಿತು. ಗುರಿ ಬೆನ್ನಟ್ಟಿಕೊಂಡು ಹೋದ ನೆದರ್ಲೆಂಡ್ಸ್ ಮಧ್ಯಮ ಕ್ರಮಾಂಕದಲ್ಲಿ ನಾಟಕೀಯ ಕುಸಿತ ಕಂಡು 41 ಓವರ್ಗಳಲ್ಲಿ 205 ರನ್ ಗಳಿಶಲಷ್ಟೇ ಶಕ್ತವಾಯಿತು.
ನಾಟಕೀಯ ಕುಸಿತ ಕಂಡ ನೆದರ್ಲೆಂಡ್ಸ್
ಪಾಕಿಸ್ತಾನ ನೀಡಿದ ಗುರಿಯನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಹೋದ ನೆದರ್ಲೆಂಡ್ಸ್ ಉತ್ತಮ ಆರಂಭ ಪಡೆಯಿತು. ವಿಕ್ರಮಜಿತ್ ಸಿಂಗ್ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿ ತಂಡಕ್ಕೆ ಉತ್ತಮ ಅಡಿಪಾಯ ನಿರ್ಮಿಸಿದರು. ಇವರಿಗೆ ಇನ್ನೊಂದು ತುದಿಯಲ್ಲಿ ಬೌಲಿಂಗ್ನಲ್ಲಿ ಮಿಂಚಿದ್ದ ಬಾಸ್ ಡಿ ಲೀಡೆ ಉತ್ತಮ ಸಾಥ್ ನೀಡಿದರು. ಉಭಯ ಆಟಗಾರರು ಸೇರಿಕೊಂಡು ಪಾಕ್ ಬೌಲರ್ಗಳ ಬೆಂಡೆತ್ತಿದರು.
ಒಂದು ಹಂತದಲ್ಲಿ ನೆದರ್ಲೆಂಡ್ಸ್ ಗೆಲ್ಲುವ ವಾತಾವರಣ ನಿರ್ಮಾಣವಾಗಿತ್ತು. ಪಾಕಿಸ್ತಾನ ದುರ್ಬಲ ತಂಡದೆದುರು ಸೋಲು ಕಾಣುವ ಸ್ಥಿತಿಯಲ್ಲಿತ್ತು. ಉತ್ತಮವಾಗಿ ಆಡುತ್ತಿದ್ದ ಲೀಡೆ ಮತ್ತು ವಿಕ್ರಮಜಿತ್ ವಿಕೆಟ್ ಬಿದ್ದದ್ದೇ ತಡ ಉತ್ತಮ ಸ್ಥಿತಿಯಲ್ಲಿದ್ದ ನೆದರ್ಲೆಂಡ್ಸ್ ನಾಟಕೀಯ ಕುಸಿತ ಕಂಡಿತು. ವಿಕ್ರಮಜಿತ್ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿಂದ 52 ರನ್ ಬಾರಿಸಿ ಶದಾಬ್ಗೆ ವಿಕೆಟ್ ಒಪ್ಪಿಸಿದರು. 67 ರನ್ ಗಳಿಸಿದ ಲೀಡೆ ವಿಕೆಟ್ ನವಾಜ್ ಕಿತ್ತರು. ಮುಂದಿನ ಓವರ್ನಲ್ಲಿ ಹ್ಯಾರಿಸ್ ಹ್ಯಾರಿಸ್ ರವೂಫ್ 2 ವಿಕೆಟ್ ಕಿತ್ತು ಪಾಕ್ಗೆ ಮುನ್ನಡೆ ತಂದುಕೊಟ್ಟರು.
ಸೋಲಿನಿಂದ ಪಾರಾದ ಪಾಕ್
ಮಧ್ಯಮ ಕ್ರಮಾಂಕದಲ್ಲಿ ಯಾರಾದರು ಇಬ್ಬರು ನಿಂತು ಆಡಿದ್ದರೆ, ಪಾಕಿಸ್ತಾನ ಹೀನಾಯ ಸೋಲು ಕಾಣುತ್ತಿತ್ತು. ಆದರೆ ಯಾರು ಕೂಡ ನಿಂತು ಆಡುವ ತಾಳ್ಮೆ ತೋರಲಿಲ್ಲ. ಇದುವೇ ಸೋಲಿಗೆ ಪ್ರಮುಖ ಕಾರಣವಾಯಿತು. ಲೋಗನ್ ವ್ಯಾನ್ ಬೀಕ್ ಅಂತಿಮ ಹಂತದಲ್ಲಿ ಶಕ್ತಿ ಮೀರಿ ಬ್ಯಾಟಿಂಗ್ ಪ್ರದರ್ಶನ ತೋರಿದರೂ ಅವರಿಗೆ ಮತ್ತೊಂದು ತುದಿಯಲ್ಲಿ ಸರಿಯಾಗಿ ಸಾಥ್ ಸಿಗಲಿಲ್ಲ. ಅವರು 28 ರನ್ ಗಳಿಸಿ ಅಜೇಯರಾಗಿ ಉಳಿದರು. ಪಾಕ್ ಪರ ಹ್ಯಾರಿಸ್ ರಾವುಫ್ 3, ಹಸನ್ ಅಲಿ 2, ಮತ್ತು ಶಾಹಿನ್ ಅಫ್ರಿದಿ, ಇಫ್ತಿಕರ್,ನವಾಜ್,ಶಾದಾಬ್ ತಲಾ 1 ವಿಕೆಟ್ ಪಡೆದರು. ಬೌಲಿಂಗ್ ನಡೆಸಿದ ಎಲ್ಲರೂ ವಿಕೆಟ್ ಪಡೆದರು.
ಪರದಾಡಿದ ಬಾಬರ್
ಬೌಲಿಂಗ್ ಆಯ್ದುಕೊಂಡ ನೆದರ್ಲೆಂಡ್ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿತು. ಆರಂಭದಲ್ಲೇ ಡೇಂಜರಸ್ ಆಟಗಾರರಾದ ಫಕಾರ್ ಜಮಾನ್(12) ಮತ್ತು ನಾಯಕ ಬಾಬರ್ ಅಜಂ ಅವರನ್ನು ಪೆವಿಲಿಯನ್ಗೆ ಅಟ್ಟುವಲ್ಲಿ ಯಶಸ್ವಿಯಾದರು. ಇದರ ಬೆನ್ನಲೇ ಇಮಾಮ್ ಉಲ್ ಹಕ್(15) ವಿಕೆಟ್ ಕೂಡ ಪತನಗೊಂಡಿತು. 38 ರನ್ಗೆ 3 ವಿಕೆಟ್ ಕಳೆದುಕೊಂಡ ಪಾಕ್ ಆರಂಭಿ ಆಘಾತ ಎದುರಿಸಿತು. ಏಕದಿನ ಕ್ರಿಕೆಟ್ನ ನಂ.1 ಬ್ಯಾಟರ್ ಬಾಬರ್ ಅಜಂ ರನ್ ಗಳಿಸಲು ಸಂಪೂರ್ಣವಾಗಿ ಪರದಾಡಿದರು. 18 ಎಸೆತ ಎದುರಿಸಿ ಗಳಿಸಿದ್ದು ಕೇವಲ 5 ರನ್. ಒಂದು ಬೌಂಡರಿ ಬಾರಿಸಲು ಅವರಿಂದ ಸಾಧ್ಯವಾಗಲಿಲ್ಲ.
ಇದನ್ನೂ ಓದಿ ICC World Cup 2023 : ಏಕ ದಿನ ಕ್ರಿಕೆಟ್ ಮಾದರಿ ಯುಗಾಂತ್ಯ? ಮೈದಾನಗಳು ಯಾಕೆ ಖಾಲಿ ಖಾಲಿ?
ಆಸರೆಯಾದ ರಿಜ್ವಾನ್-ಶಕೀಲ್
ಮೂರು ವಿಕೆಟ್ ಕಳೆದುಕೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಪಾಕಿಸ್ತಾನ ತಂಡವನ್ನು ಮೇಲೆತ್ತಿದ್ದು ಮಧ್ಯಮ ಕ್ರಮಾಂಕದ ಆಟಗಾರರಾದ ಶಕೀಲ್ ಮತ್ತು ರಿಜ್ವಾನ್. ಉಭಯ ಆಟಗಾರರು ತಾಳ್ಮೆಯುವ ಬ್ಯಾಟಿಂಗ್ ನಡೆಸಿ ಉತ್ತಮ ಇನಿಂಗ್ಸ್ ಕಟ್ಟಿದರು. ಜತೆಗೆ ಅರ್ಧಶತಕವನ್ನೂ ಬಾರಿಸಿದರು. ನಾಲ್ಕನೇ ವಿಕೆಟ್ಗೆ 120 ರನ್ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು. ಇವರಿಬ್ಬರು ನಿಂತು ಆಟದೇ ಹೋಗಿದ್ದರೆ ಪಾಕ್ ಸ್ಥಿತಿ ಇನ್ನೂ ಚಿಂತಾಜನಕವಾಗಿರುತ್ತಿತ್ತು. ಸೌದ್ ಶಕೀಲ್ 52 ಎಸೆತಗಳಿಂದ 68 ರನ್ ಬಾರಿಸಿದರು. ರಿಜ್ವಾನ್ ಗಳಿಕೆಯೂ 68ಕ್ಕೆ ಕೊನೆಗೊಂಡಿತು.
ರಿಜ್ವಾನ್ ಮತ್ತು ಶಕೀಲ್ ವಿಕೆಟ್ ಪತನದ ಬಳಿಕ ಪಾಕ್ಗೆ ಆಸರೆಯಾದದ್ದು ಮೊಹಮ್ಮದ್ ನವಾಜ್(39) ಮತ್ತು ಶದಾಬ್ ಖಾನ್(32). ಇವರಿಬ್ಬರು ಸೇರಿಕೊಂಡು 8 ವಿಕೆಟ್ಗೆ 64 ರನ್ ಒಟ್ಟುಗೂಡಿಸಿದರು. ಹೀಗಾಗಿ ತಂಡದ ಮೊತ್ತ 200ರ ಗಡಿ ದಾಟಿತು. ಉಳಿದ ಯಾವುವುದೇ ಆಟಗಾರರು ನಿಂತು ಆಡುವಲ್ಲಿ ಯಶಸ್ಸು ಕಾಣಲಿಲ್ಲ.
ಬಾಸ್ ಡಿ ಲೀಡೆ ಘಾತಕ ಬೌಲಿಂಗ್
ನೆದರ್ಲೆಂಡ್ಸ್‌ನ ಆಲ್ ರೌಂಡರ್ ಬಾಸ್ ಡಿ ಲೀಡೆ ಅವರು ಘಾತಕ ಬೌಲಿಂಗ್ ನಡೆಸಿ ಪಾಕಿಸ್ತಾನ ಬ್ಯಾಟರ್ಗಳಿಗೆ ಸಿಂಹಸ್ವಪ್ನರಾದರು. 9 ಬೌಲಿಂಗ್ ನಡೆಸಿ ಕೇವಲ 62 ರನ್ ಬಿಟ್ಟುಕೊಟ್ಟು 4 ವಿಕೆಟ್ ಉರುಳಿಸಿದರು. ಅಕರ್ಮನ್ ಎರಡು ವಿಕೆಟ್ ಕಿತ್ತು ಮಿಂಚಿದರು. ಆರ್ಯನ್ ದತ್ ಮತ್ತು ವೇನ್ ಬೀಕ್ ತಲಾ ಒಂದು ವಿಕೆಟ್ ಪಡೆದರು.