ಬೆಂಗಳೂರು: ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯದಲ್ಲಿ ನಾಲ್ಕು ಶತಕಗಳು ದಾಖಲಾದವು. ಇದು ವಿಶ್ವಕಪ್ನ 48 ವರ್ಷಗಳ ಇತಿಹಾಸದಲ್ಲಿ ದಾಖಲಾದ ಮೊದಲ ನಿದರ್ಶನ. ಆದರೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ(Most hundreds scored in an ODI match) ಒಂದೇ ಪಂದ್ಯದಲ್ಲಿ ನಾಲ್ವರು ಶತಕ ಬಾರಿಸಿದ್ದು ಇದು ಮೂರನೇ ಬಾರಿ. ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಗಳು ತಲಾ 2 ಬಾರಿ ಈ ಸಾಧನೆ ಮಾಡಿದೆ.
ಮೊದಲ ಬಾರಿ 1998ರಲ್ಲಿ
ಏಕದಿನ ಕ್ರಿಕೆಟ್ನ ಒಂದೇ ಪಂದ್ಯದಲ್ಲಿ ಉಭಯ ತಂಡಗಳಿಂದ ಮೊದಲ ಬಾರಿಗೆ ನಾಲ್ಕು ಶತಕ ದಾಖಲಾಗಿದ್ದು 1998ರಲ್ಲಿ ಇಲ್ಲಿ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದರು. ಈ ಪಂದ್ಯದಲ್ಲಿ ಪಾಕ್ ಪರ ಇಜಾಜ್ ಅಹಮದ್(109 ಎಸೆತಗಳಿಂದ 111 ರನ್) ಮತ್ತು ಮೊಹಮ್ಮದ್ ಯೂಸುಫ್(111 ಎಸೆತಗಳಿಂದ 100 ರನ್) ಶತಕ ಬಾರಿಸಿದರೆ ಎದುರಾಳಿ ಆಸೀಸ್ ಪರ ಆಡಂ ಗಿಲ್‌ಕ್ರಿಸ್ಟ್(104 ಎಸೆತಗಳಿಂದ 103 ರನ್) ಮತ್ತು ರಿಕಿ ಪಾಂಟಿಂಗ್(129 ಎಸೆತಗಳಿಂದ ಅಜೇಯ 124 ರನ್) ಶತಕ ಬಾರಿಸಿದ್ದರು.
ಇದನ್ನೂ ಓದಿ ICC World Cup 2023 : ಕ್ರಿಕೆಟ್ ದೇವರು ಸಚಿನ್ಗೆ ಕ್ರಿಕೆಟ್ ವಿಶ್ವಕಪ್ನ ವಿಶೇಷ ಗೌರವ
ಎರಡನೇ ಬಾರಿ 2013ರಲ್ಲಿ
ಎರಡನೇ ಬಾರಿಗೆ ಒಂದೇ ಪಂದ್ಯದಲ್ಲಿ ನಾಲ್ಕು ಶತಕ ದಾಖಲಾಗಿದ್ದು 2013ರ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿಯಲ್ಲಿ. ಆಸೀಸ್ ಪರ ಜಾರ್ಜ್ ಬೈಲಿ(114 ಎಸೆತಗಳಿಂದ 156 ರನ್) ಮತ್ತು ಶೇನ್ ವಾಟ್ಸನ್(94 ಎಸೆತಗಳಿಂದ 102 ರನ್) ಶತಕ ಬಾರಿಸಿದ್ದರು. ತಾವೇನು ಕಮ್ಮಿ ಇಲ್ಲ ಎಂದು ಭಾರತ ಪರ ಶಿಖರ್ ಧವನ್(102 ಎಸೆತಗಳಿಂದ 100 ರನ್) ಮತ್ತು ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ(66 ಎಸೆತಗಳಿಂದ ಅಜೇಯ 115 ರನ್) ಶತಕ ಬಾರಿಸಿ ತಿರುಗೇಟು ನೀಡಿದ್ದರು. ನಾಗ್ಪುರದಲ್ಲಿ ಈ ಪಂದ್ಯ ನಡೆದಿತ್ತು. ಭಾರತ ಪಂದ್ಯವನ್ನು 6 ವಿಕೆಟ್ಗಳಿಂದ ಗೆದ್ದು ಬೀಗಿತ್ತು.
ಮೂರನೇ ಬಾರಿ; 2023ರ ವಿಶ್ವ ಕಪ್‌ನಲ್ಲಿ
ಒಂದೇ ಪಂದ್ಯದಲ್ಲಿ ಮೂರನೇ ಬಾರಿ 4 ಶತಕ ದಾಖಲಾಗಿದ್ದು. ಹಾಲಿ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ. ಅಲ್ಲದೆ ಇದು ವಿಶ್ವಕಪ್ನಲ್ಲಿ ದಾಖಲಾದ ಮೊದಲ ನಿದರ್ಶನವೂ ಆಗಿದೆ. ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯದಲ್ಲಿ
ಶ್ರೀಲಂಕಾ ಪರ ಕುಸಾಲ್ ಮೆಂಡಿಸ್(77 ಎಸೆತಗಳಿಂದ 122 ರನ್) ಮತ್ತು ಸದೀರ ಸಮರವಿಕ್ರಮ(89 ಎಸೆತಗಳಿಂದ 108 ರನ್) ಬಾರಿಸಿದರೆ. ಪಾಕಿಸ್ತಾನದ ಪರ ಅಬ್ದುಲ್ಲಾ ಶಫೀಕ್(103 ಎಸೆತಗಳಿಂದ 113 ರನ್) ಮತ್ತು ಮಹಮ್ಮದ್ ರಿಜ್ವಾನ್(121 ಎಸೆತಗಳಿಂದ ಅಜೇಯ 131 ರನ್) ಬಾರಿಸಿ ತಂಡಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟರು.
ಪಂದ್ಯ ಗೆದ್ದ ಪಾಕ್
ಹೈದರಾಬಾದ್‌ನ ಬ್ಯಾಟಿಂಗ್ ಸ್ನೇಹಿ ಟ್ರ್ಯಾಕ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ 9 ವಿಕೆಟಿಗೆ 344 ರನ್ ಪೇರಿಸಿತು. ಬೃಹತ್ ಮೊತ್ತವನ್ನು ದಿಟ್ಟ ರೀತಿಯಲ್ಲಿ ಚೇಸಿಂಗ್ ನಡೆಸಿ ಪಾಕಿಸ್ತಾನ 48.2 ಓವರ್‌ಗಳಲ್ಲಿ ನಾಲ್ಕೇ ವಿಕೆಟಿಗೆ 348 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು. ಈ ಮೂಲಕ ಆಡಿದ ಎರಡು ಪಂದ್ಯಗಳಲ್ಲಿಯೂ ಗೆಲುವು ದಾಖಲಿಸಿ ಅಜೇಯ ಓಟವನ್ನು ಕಾಯ್ದುಕೊಂಡಿದೆ.