Site icon Vistara News

ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡುವ ಅಭಿಲಾಷೆ ವ್ಯಕ್ತಪಡಿಸಿದ ಪಾಕಿಸ್ತಾನದ ಕ್ರಿಕೆಟಿಗ, ಯಾಕೆ ಗೊತ್ತೇ?

ನವ ದೆಹಲಿ : ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಭಾನುವಾರ ನಡೆದ ರೋಚಕ ಹಣಾಹಣಿ ಕ್ರಿಕೆಟ್‌ ಅಭಿಮಾನಿಗಳ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಅದರಲ್ಲೂ ಟೀಮ್ ಇಂಡಿಯಾದ ಬ್ಯಾಟರ್‌ ವಿರಾಟ್‌ ಕೊಹ್ಲಿಯ ಅದ್ಭುತ ಬ್ಯಾಟಿಂಗ್‌ಗೆ ಎಲ್ಲರೂ ಫಿದಾ ಆಗಿದ್ದಾರೆ. ಭಾನುವಾರ ಸಂಜೆಯಿಂದ ಅವರನ್ನು ಹೊಗಳಲು ಆರಂಭಿಸಿದವರೂ ಇನ್ನೂ ನಿಲ್ಲಿಸಿಲ್ಲ. ಏತನ್ಮಧ್ಯೆ, ಪಾಕಿಸ್ತಾನ ಕ್ರಿಕೆಟ್‌ ಅಭಿಮಾನಿಗಳನೇಕರು ಮೋಸದಾಟ ಎಂಬುದಾಗಿ ಕ್ಯಾತೆ ತೆಗೆದಿದ್ದಾರೆ. ಅವರ ಪ್ರಕಾರ ನವಾಜ್‌ ಅವರು ಇನಿಂಗ್ಸ್‌ನ ಕೊನೇ ಓವರ್‌ನಲ್ಲಿ ಹಾಕಿರುವುದು ನೋ ಬಾಲ್‌ ಅಲ್ಲ. ಅಂಪೈರ್‌ಗಳು ಟೀಮ್ ಇಂಡಿಯಾದ ಪರವಾಗಿ ತೀರ್ಪು ನೀಡಿದ್ದಾರೆ ಎಂಬುದು ಅವರ ಆರೋಪ. ಇಷ್ಟೆಲ್ಲ ಚರ್ಚೆಗಳ ನಡುವೆ ಪಾಕಿಸ್ತಾನ ತಂಡದ ಮಾಜಿ ಆಟಗಾರರೊಬ್ಬರು ಅಯೋಧ್ಯೆಯಲ್ಲಿರುವ ರಾಮ ಮಂದಿರಕ್ಕೆ ಭೇಟಿ ನೀಡುವ ಬಯಕೆ ವ್ಯಕ್ತಪಡಿಸಿದ್ದಾರೆ. ಅದನ್ನವರು ಟ್ವೀಟ್‌ ಮೂಲಕ ಬರೆದುಕೊಂಡಿದ್ದಾರೆ.

ಅಯೋಧ್ಯೆಗೆ ಬರುವುದಾಗಿ ಹೇಳಿರುವುದು ಮತ್ಯಾರೂ ಅಲ್ಲ. ಪಾಕಿಸ್ತಾನ ತಂಡದ ಮಾಜಿ ಸ್ಪಿನ್ನರ್‌ ದ್ಯಾನಿಶ್‌ ಕನೇರಿಯಾ ಅವರು. ಸೋಮವಾರ ಹಿಂದುಗಳೆಲ್ಲರೂ ದೀಪಾವಳಿ ಆಚರಿಸುತ್ತಿದ್ದು, ಅವರಿಗೆ ದ್ಯಾನಿಶ್‌ ಶುಭಾಶಯ ತಿಳಿಸಿದ್ದಾರೆ.

ಜೈಶ್ರೀರಾಮ್‌. ಜಗತ್ತಿನಲ್ಲಿರುವ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಅಯೋಧ್ಯೆಯಲ್ಲಿರುವ ರಾಮ ಮಂದಿರಕ್ಕೆ ಭೇಟಿ ನೀಡುವುದೇ ನನ್ನ ಗುರಿಯಾಗಿದೆ. ನಾನು ಖಂಡಿತಾ ಬರುತ್ತೇನೆ ಎಂಬುದಾಗಿ ಅವರು ಬರೆದುಕೊಂಡಿದ್ದಾರೆ.

ಪಾಕಿಸ್ತಾನ ಆಟಗಾರನಿಗೆ ಈ ಅಭಿಲಾಷೆ ಯಾಕೆ ಬಂತು ಎಂಬ ಅನುಮಾನ ಖಚಿತ. ಆದರೆ, ದ್ಯಾನಿಶ್‌ ಅವರು ಹಿಂದು. ಅವರು ಪಾಕಿಸ್ತಾನದಲ್ಲಿರುವ ಅಲ್ಪ ಸಂಖ್ಯಾತ ಹಿಂದು ಸಮುದಾಯಕ್ಕೆ ಸೇರಿದವರು. ಹೀಗಾಗಿ ಅವರು ಹಿಂದು ದೇವರನ್ನು ಪೂಜಿಸುತ್ತಾರೆ. ಹೀಗಾಗಿ ದೀಪಾವಳಿಗೆ ಶುಭಾಶಯ ಕೋರುವ ಜತೆಗೆ ಅವರು ಅಯೋಧ್ಯೆಯ ರಾಮ ಮಂದಿರಕ್ಕೂ ಭೇಟಿ ಕೊಡುವ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | IND vs PAK | ಟ್ರೋಲ್‌ ಮಾಡಿದ ಪಾಕ್‌ ಕ್ರಿಕೆಟ್‌ ಅಭಿಮಾನಿ ಬಾಯ್ಮುಚ್ಚಿಸಿದ ಗೂಗಲ್‌ ಸಿಇಒ ಪಿಚೈ

Exit mobile version