Site icon Vistara News

Asian Games 2023 : ಭಾರತಕ್ಕೆ ಮತ್ತೊಂದು ಚಿನ್ನ; ಮಹಿಳೆಯರ ಶೂಟಿಂಗ್​ನಲ್ಲಿ ಚಿನ್ನ ಗೆದ್ದ ಪಲಕ್, ಇಶಾಗೆ ಬೆಳ್ಳಿ

Palak Shooter

ಹ್ಯಾಂಗ್ಝೌ: ಏಷ್ಯನ್​ ಗೇಮ್ಸ್​ 2023ರಲ್ಲಿ (Asian Games 2023) ಭಾರತದ ಸ್ಪರ್ಧಿಗಳ ಪದಕದ ಬೇಟೆ ಮುಂದುವರಿದಿದೆ. ಸ್ಪರ್ಧೆಯ ಆರನೇ ದಿನವಾದ ಶುಕ್ರವಾರ ಶೂಟಿಂಗ್​ನಲ್ಲಿ ಮಗದೊಂದು ಸ್ವರ್ಣ ಪದಕ ಭಾರತಕ್ಕೆ ದೊರಕಿದೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಭಾರತದ ಶೂಟರ್​ ಪಲಕ್​ ಚಿನ್ನ ಗೆದ್ದರೆ ಇಶಾ ಬೆಳ್ಳಿಯ ಪದಕವನ್ನು ತಮ್ಮದಾಗಿಸಿಕೊಂಡರು.

ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಫೈನಲ್​ನಲ್ಲಿ ಪಲಕ್ 242.1 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಚಿನ್ನ ಗೆದ್ದರು. ಇಶಾ 239.7 ಅಂಕಗಳೊಂದಿಗೆ ಬೆಳ್ಳಿ ಪದಕದೊಂದಿಗೆ ಎರಡನೇ ಸ್ಥಾನ ತಮ್ಮದಾಗಿಸಿಕೊಂಡುರು. ಪಾಕಿಸ್ತಾನದ ತಲಾತ್ 218.2 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು.

ಇದು ಶುಕ್ರವಾರ ಭಾರತಕ್ಕೆ ಲಭಿಸಿದ ನಾಲ್ಕನೇ ಪದಕವಾಗಿದೆ. ಇದಕ್ಕಿಂತ ಮೊದಲು ಮಹಿಳೆಯರ ತಂಡ ಶೂಟಿಂಗ್​ನಲ್ಲಿ ಬೆಳ್ಳಿ, ಪುರುಷರ ತಂಡ ಶೂಟಿಂಗ್​ನಲ್ಲಿ ಚಿನ್ನ ಹಾಗೂ ಟೆನಿಸ್​ ಜೋಡಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದರು.

ಪುರುಷರ ತಂಡಕ್ಕೆ ಚಿನ್ನ

ಶುಕ್ರವಾರ ಪುರುಷರ 50 ಮೀಟರ್ ರೈಫಲ್ 3ಪಿ ತಂಡ ಸ್ಪರ್ಧೆಯಲ್ಲಿ ಭಾರತ 1769 ಅಂಕಗಳೊಂದಿಗೆ ಚಿನ್ನ ಗೆದ್ದಿದೆ. ತಂಡದಲ್ಲಿ ಐಶ್ವರಿ ಪ್ರತಾಪ್ ಸಿಂಗ್ ತೋಮರ್, ಸ್ವಪ್ನಿಲ್ ಸುರೇಶ್ ಕುಸಲೆ ಮತ್ತು ಅಖಿಲ್ ಶಿಯೋರನ್ ಇದ್ದರು. ವೈಯಕ್ತಿಕ ಅರ್ಹತಾ ಸುತ್ತಿನಲ್ಲಿ ಸ್ವಪ್ನಿಲ್ ಒಟ್ಟು 591-33x ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೆ, ಐಶ್ವರ್ಯಾ 591-27x ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರು. ಅಖಿಲ್ 587-30x ಅಂಕಗಳೊಂದಿಗೆ ಐದನೇ ಸ್ಥಾನ ಪಡೆದರು. ಮೂವರೂ ಫೈನಲ್ ಗೆ ಪ್ರವೇಶ ಪಡೆದುಕೊಂಡರು.

ಇದನ್ನೂ ಓದಿ : Asian Games 2023 : ಟೆನಿಸ್​ ಪುರುಷರ ಡಬಲ್ಸ್​​ನಲ್ಲಿ ಬೆಳ್ಳಿಯ ಪದಕ ಗೆದ್ದ ಸಾಕೇತ್​, ರಾಮ್​ಕುಮಾರ್​

ಮಹಿಳೆಯರ ತಂಡಕ್ಕೆ ಬೆಳ್ಳಿ

ಪಾಲಕ್, ಇಶಾ ಸಿಂಗ್ ಮತ್ತು ದಿವ್ಯಾ ತಡಿಗೋಲ್ ಅವರನ್ನೊಳಗೊಂಡ ಭಾರತೀಯ ಶೂಟಿಂಗ್ ತಂಡ 10 ಮೀಟರ್ ಏರ್ ಪಿಸ್ತೂಲ್ ಮಹಿಳಾ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದೆ. ಈ ಮೂಲಕ ಭಾರತ ಆರನೇ ದಿನದ ಸ್ಪರ್ಧೆಯಲ್ಲಿ ಶುಭಾರಂಭ ಮಾಡಿದೆ.

10 ಮೀಟರ್ ಏರ್ ಪಿಸ್ತೂಲ್ ಮಹಿಳಾ ತಂಡ ಸ್ಪರ್ಧೆಯಲ್ಲಿ ಭಾರತ 1731-50 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದು ಎರಡನೇ ಸ್ಥಾನ ಪಡೆಯಿತು. ಚೀನಾ 1736-66x ಅಂಕಗಳೊಂದಿಗೆ ಚಿನ್ನ ಗೆದ್ದುಕೊಂಡಿತು. ಭಾರತೀಯ ತಂಡದಲ್ಲಿ ಪಾಲಕ್, ಇಶಾ ಸಿಂಗ್ ಮತ್ತು ದಿವ್ಯಾ ಸುಬ್ಬರಾಜು ತಡಿಗೋಳ್ ಇದ್ದರು. ಅಲ್ಲದೆ, ಅರ್ಹತಾ ಸುತ್ತಿನಲ್ಲಿ ಇಶಾ ಐದನೇ ಸ್ಥಾನ ಪಡೆದರೆ, ಪಾಲಕ್ ಏಳನೇ ಸ್ಥಾನ ಪಡೆದರು. ಈ ಜೋಡಿ 10 ಮೀಟರ್ ಏರ್ ಪಿಸ್ತೂಲ್ ಮಹಿಳಾ ಫೈನಲ್ಗೆ ಅರ್ಹತೆ ಪಡೆದಿದೆ. ಇದು ಭಾರತದ ಪಾಲಿಗೆ ದಿನದ ಮೊದಲ ಪದಕ ಎನಿಸಿಕೊಂಡಿತು.

ಟೆನಿಸ್​ನಲ್ಲಿ ಬೆಳ್ಳಿ

ಟೆನಿಸ್​ನ ಡಬಲ್ಸ್​ನ ಫೈನಲ್​ನಲ್ಲಿ ಭಾರತದ ಜೋಡಿಯಾಗಿರುವ ಸಾಕೇತ್ ಮೈನೇನಿ ಹಾಗೂ ರಾಮ್​ಕುಮಾರ್ ರಾಮನಾಥನ್​ ಅವರು ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾರೆ. ಈ ಜೋಡಿ ಚೈನಿಸ್​ ತೈಪೆಯ ಜೇಸನ್​ ಮತ್ತು ಸು ವಿರುದ್ದ 4-6, 4-6 ಅಂತರದಿಂದ ಪರಾಜಯ ಎದುರಿಸುವ ಮೂಲಕ ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟರು.

Exit mobile version