Site icon Vistara News

IPL 2022| ಹಾರ್ದಿಕ್‌ ಕಮಾಲ್‌, ನಾಯಕನಾದ ಮೊದಲ ಟೂರ್ನಿಯಲ್ಲೆ ಟ್ರೋಫಿ ಗೆದ್ದ ಪಾಂಡ್ಯ

Hardik pandya

ಅಹಮದಾಬಾದ್: ಪದಾರ್ಪಣೆ ಟೂರ್ನಿಯಲ್ಲೆ ಅದ್ಭುತ ಪ್ರದರ್ಶನದೊಂದಿಗೆ ಗುಜರಾತ್‌ ಟೈಟನ್ಸ್‌ ಐಪಿಎಲ್-2022‌ ಚಾಂಪಿಯನ್‌ ಆಗಿದೆ. 15ನೇ ಆವೃತ್ತಿ ಆರಂಭದಿಂದ ಸಂಘಟಿತ ಹೋರಾಟದ ಮೂಲಕ ಅಂಕಪಟ್ಟಿಯಲ್ಲಿ ಟಾಪರ್‌ ಆಗಿದ್ದ ತಂಡ, ಫೈನಲ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 7 ವಿಕೆಟ್‌ಗಳ ಅಂತರದ ಗೆಲುವು ಪಡೆದು ಟ್ರೋಫಿಯನ್ನು ಎತ್ತಿಹಿಡಿಯಿತು. ಈ ಮೂಲಕ ತನಗೆ ನಾಯಕನ ಜವಾಬ್ದಾರಿ ನೀಡಿದ ಪ್ರಾಂಚೈಸಿ ಮಾಲೀಕರ ನಂಬಿಕೆಯನ್ನು ಹಾರ್ದಿಕ್‌ ಪಾಂಡ್ಯ ಉಳಿಸಿಕೊಂಡಿದ್ದಾರೆ.

ಐಪಿಎಲ್‌-2021ರಲ್ಲಿ ಆಲ್‌ರೌಂಡರ್‌ ಆಗಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದ ಹಾರ್ದಿಕ್‌, ಟಿ20 ವಿಶ್ವಕಪ್-2021 ಟೂರ್ನಿಯಲ್ಲೂ ಫಿಟ್‌ನೆಸ್‌ ಸಮಸ್ಯೆಯಿಂದ ತಂಡಕ್ಕೆ ದೂರವಾದರು. ಆದರೂ ಇವರ ಮೇಲೆ ನಂಬಿಕೆ ಇಟ್ಟು ಸಿವಿಸಿ ಕ್ಯಾಪಿಟಲ್ಸ್ ಗುಜರಾತ್‌ ಟೈಟನ್ಸ್‌ ನಾಯಕನಾಗಲು ಅವಕಾಶ ನೀಡಿತು. ಇದರಿಂದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಪ್ರಶಸ್ತಿ ಗೆದ್ದ ನಾಲ್ಕನೇ ಭಾರತೀಯ ನಾಯಕನಾಗಿ ದಾಖಲೆ ನಿರ್ಮಿಸಿದ್ದಾರೆ.

ಇದಕ್ಕೂ ಮೊದಲು ನಾಯಕತ್ವದ ಅನುಭವ ಇಲ್ಲದಿದ್ದರೂ ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿ ಮೊದಲ ಸೀಸನ್‌ನಲ್ಲೇ ಟ್ರೋಪಿ ಗೆದ್ದಿದ್ದಾರೆ. ಈ ಹಿಂದೆ ಎಂ.ಎಸ್‌.ಧೋನಿ (4 ಬಾರಿ-ಚೆನ್ನೈ ಸೂಪರ್‌ಕಿಂಗ್ಸ್; 2010, 2011, 2018, 2021), ಗೌತಮ್‌ ಗಂಭೀರ್ (2‌ ಬಾರಿ-ಕೋಲ್ಕತ್ತಾ ನೈಟ್‌ರೈಡರ್ಸ್‌ ; 2012, 2014, ರೋಹಿತ್‌ ಶರ್ಮ (5 ಬಾರಿ-ಮುಂಬೈ ಇಂಡಿಯನ್ಸ್‌; 2013, 2015, 2017, 2019, 2020) ಈ ಸಾಧನೆ ಮಾಡಿದ್ದಾರೆ. ಗುಜರಾತ್‌ ಸಾರಥಿಯಾಗಿ ಅಲ್ಲದೆ ಆಲ್‌ರೌಂಡರ್‌ ಆಗಿ ಹಾರ್ದಿಕ್‌ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಮೊದಲ ಬಾರಿ ಸಮರ್ಥವಾಗಿ ನಾಯಕತ್ವ ನಿರ್ವಹಣೆ
ಗೆದ್ದರೆ ಶ್ರೇಯಸ್ಸು ನಿಮ್ಮದು, ಸೋತರೆ ಹೊಣೆ ತಮ್ಮದು ಎಂದು ಐಪಿಎಲ್-2022‌ ಆವೃತ್ತಿಯಲ್ಲಿ ಗುಜರಾತ್‌ ಟೈಟನ್ಸ್‌ ಟ್ರೋಫಿ ಅನಾವರಣಗೊಳಿಸಿದಾಗ ಸಹಚರರೊಂದಿಗೆ ಹಾರ್ದಿಕ್‌ ಪಾಂಡ್ಯ ಹೇಳಿದ್ದ ಮಾತು ಇದು. ಐಪಿಎಲ್‌ ಟೈಟಲ್ಸ್‌ ಇವರಿಗೆ ಹೊಸತೇನೂ ಅಲ್ಲ, ಮುಂಬೈ ಇಂಡಿಯನ್ಸ್‌ನಲ್ಲಿ ಅವರ ಸಾಧನೆ ಅಮೋಘವಾದುದು. ಆದರೂ ನಾಯಕನಾಗಿ ಮೊದಲ ಅವಕಾಶದಲ್ಲೂ ತಂಡವನ್ನು ಚಾಂಪಿಯನ್‌ ಮಾಡಿದ್ದಾರೆ.

ಈ ಮೊದಲು ನಾಯಕನಾಗಿ ಜವಾಬ್ದಾರಿ ಹೊತ್ತ ಉದಾಹರಣೆ ಕಡಿಮೆ. ಆದರೂ ಸಮರ್ಥ ನಾಯಕತ್ವ ಗುಣಗಳಿಂದ ಈ ಟೂರ್ನಿಯಲ್ಲಿ ಸತತ ಗೆಲುವು ದಾಖಲಿಸಿ ಕೊನೆಗೆ ಪ್ರಶಸ್ತಿ ಗೆದ್ದುಕೊಟ್ಟ ಪಾಂಡ್ಯ ಅವರನ್ನು ಎಷ್ಟು ಪ್ರಶಂಸಿಸಿದರೂ ಸಾಲದು. ಎಷ್ಟೋ ಮಂದಿ ಸ್ಟಾರ್‌ ಆಟಗಾರರಿಗೂ ಸಾಧ್ಯವಾಗದ ಸಾಧನೆಯನ್ನು ಇವರು ಮಾಡಿದ್ದಾರೆ. ಈ ಬಾರಿ ಬ್ಯಾಟಿಂಗ್‌ನಲ್ಲಿ 131.26 ಸ್ಟ್ರೈಕ್‌ರೇಟ್‌ನೊಂದಿಗೆ 487 ರನ್‌ ಜತೆಗೆ ಪ್ರಮುಖ ಸಮಯದಲ್ಲಿ ವಿಕೆಟ್‌(ಒಟ್ಟು8) ಪಡೆದು ಆಲ್‌ರೌಂಡರ್‌ ಆಗಿ ತಾವು ಏನೆಂದು ನಿರೂಪಿಸಿದ್ದಾರೆ.

ಸಹಚರರಿಗೆ ವಿವಿಧ ಹೊಣೆಗಾರಿಕೆ ವಹಿಸಿ ಪ್ರಶಾಂತವಾಗಿ ತಮ್ಮ ಕೆಲಸ ನಿರ್ವಹಿಸಿದ್ದಾರೆ. ತಂಡದ ಪ್ರಣಾಳಿಕೆಗಳಲ್ಲಿ ಇವರು ಹಾಕಿದ ಪ್ರತಿ ಹೆಜ್ಜೆ ಉತ್ತಮ ಫಲಿತಾಂಶ ನೀಡಿತು. ಇವರ ತಂಡ ಯಾರೋ ಒಬ್ಬರ ಮೇಲೆ ಆಧಾರವಾಗದೆ ಎಲ್ಲರನ್ನೂ ನಂಬಿ ಮುನ್ನಡೆದಿದ್ದೆ ಇದರ ಯಶಸ್ಸಿಗೆ ಕಾರಣವಾಗಿದೆ. ಹಾರ್ದಿಕ್‌,‌ ಶುಭಮನ್ ಗಿಲ್‌,‌ ವೃದ್ಧಿಮಾನ್ ಸಾಹ, ರಾಹುಲ್‌ ತೆವಾಟಿಯಾ, ರಷೀದ್‌ ಖಾನ್‌, ಡೇವಿಡ್‌ ಮಿಲ್ಲರ್…‌ ಹೀಗೆ ಪ್ರಧಾನ ಆಟಗಾರರು ಯಾವುದಾದರೂ ಒಂದು ಪಂದ್ಯದಲ್ಲಿ ಮ್ಯಾನ್‌ ಆಫ್‌ ದಿ ಮ್ಯಾಚ್‌ ಆಗಿ ನಿಂತು ತಂಡದ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಗಿಲ್(483), ಮಿಲ್ಲರ್(481)‌, ಸಾಹ(317) ರನ್‌ ಗಳಿಸುವ ಮೂಲಕ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ಮಾಡಿದ್ದಾರೆ. ಇನ್ನು ರಷೀದ್‌ಖಾನ್‌, ಮೊಹಮದ್‌ ಶಮಿ ಬೌಲಿಂಗ್‌ನಲ್ಲಿ ಮಿಂಚಿದ್ದಾರೆ.

ಇನ್ನು ಯುವ ಆಟಗಾರರಲ್ಲಿ ಸಾಯಿಸುದರ್ಶನ್‌, ಅಭಿನವ್‌ ಮನೋಹರ್‌, ಸಾಯಿಕಿಶೋರ್‌ ಎಲ್ಲಿಯೂ ನಿರಾಸೆಪಡಿಸದೆ ತಮಗೆ ನೀಡಿದ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡಿದ್ದಾರೆ. ಗುಜರಾತ್ ಕೊನೆಯ ಓವರ್‌ನಲ್ಲಿ ಸಾಧಿಸಿದ ಗೆಲುವುಗಳು ಗಮನಾರ್ಹ. 8 ಬಾರಿ ಚೇಸಿಂಗ್‌ ಇಳಿದಾಗ, ಇದರಲ್ಲಿ 7 ಬಾರಿ ಕೊನೆಯ ಓವರ್‌ನಲ್ಲೇ ಈ ತಂಡ ಗೆದ್ದಿದೆ. ರನ್‌ಗಳಿಕೆಗಿಂತ ಕೊನೆಯ ಸಂದರ್ಭದಲ್ಲಿ ತಂಡದ ಸದಸ್ಯರ ಪ್ರಶಾಂತತೆಯ ಆಟ ಹಾಗೂ ಒತ್ತಡ ನಿರ್ವಹಣೆ ಪ್ರಶಂಸನೀಯವಾಗಿದೆ.

ಇದನ್ನೂ ಓದಿ | IPL 2022 | IPLಗಷ್ಟೇ ಹೊಸಬರು, ಕ್ರಿಕೆಟ್‌ಗಲ್ಲ !: ಮೊದಲ ಟೂರ್ನಿಯಲ್ಲೇ ಗುಜರಾತ್‌ ಟೈಟಾನ್ಸ್‌ ಚಾಂಪಿಯನ್

Exit mobile version