Site icon Vistara News

Para Badminton Ranking: ಮೊದಲ ಬಾರಿಗೆ ವಿಶ್ವ ನಂ.1 ಸ್ಥಾನಕ್ಕೇರಿದ ಕನ್ನಡಿಗ ಸುಹಾಸ್‌ ಯತಿರಾಜ್

Para Badminton Ranking

Para Badminton Ranking: New milestone for Suhas Yathiraj, becomes World No. 1 para shuttler

ನವದೆಹಲಿ: ಟೋಕಿಯೊ ಪ್ಯಾರಾ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ, ಕನ್ನಡಿಗ ಸುಹಾಸ್ ಯತಿರಾಜ್(Suhas Lalinakere Yathiraj) ಅವರು ಪ್ಯಾರಾ ಬ್ಯಾಡ್ಮಿಂಟನ್‌ ಪುರುಷರ ಸಿಂಗಲ್ಸ್‌ನ(Para Badminton Ranking) ಎಸ್‌ಎಲ್‌4 ವಿಭಾಗದಲ್ಲಿ ವಿಶ್ವ ನಂ.1 ಸ್ಥಾನಕ್ಕೇರಿದ್ದಾರೆ. ಈ ಸಂತಸ ವಿಚಾರವನ್ನು ಸುಹಾಸ್(Suhas L Yathiraj) ತಮ್ಮ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಪೋಸ್ಟ್​ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.

ಹೊಸದಾಗಿ ಪ್ರಕಟಗೊಂಡ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಸುಹಾಸ್‌ ಒಂದು ಸ್ಥಾನ ಏರಿಕೆ ಕಾಣುವ ಮೂಲಕ ಈ ಹಿಂದೆ ಅಗ್ರಸ್ಥಾನದಲ್ಲಿದ್ದ ಫ್ರಾನ್ಸ್‌ನ ಲುಕಾಸ್‌ ಮಜುರ್‌ರನ್ನು ಹಿಂದಿಕ್ಕಿದರು. ಸುಹಾಸ್​ ಇದೇ ವರ್ಷ ಥಾಯ್ಲೆಂಡ್‌ನಲ್ಲಿ ನಡೆದಿದ್ದ ಪ್ಯಾರಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದ ಜಯಿಸಿದ್ದರು. ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ 2 ಬಾರಿ ಸ್ವರ್ಣ ಪದಕ ಗೆದ್ದಿರುವ ಅವರು ಮುಂದಿನ ತಿಂಗಳು ನಡೆಯುವ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ.

“ಅಂತಿಮವಾಗಿ ವಿಶ್ವ ನಂಬರ್ 1… ಈ ವಿಚಾರವನ್ನು ಹಂಚಿಕೊಳ್ಳಲು ಸಂತೋಷವಾಗಿದೆ. ಪುರುಷರ ಸಿಂಗಲ್ಸ್ ವಿಭಾಗಕ್ಕೆ ಘೋಷಿಸಲಾದ ಇತ್ತೀಚಿನ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಪ್ಯಾರಾ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ, ನಾನು ವಿಶ್ವದ ಅಗ್ರ ಶ್ರೇಯಾಂಕವನ್ನು ಪಡೆದುಕೊಂಡಿದ್ದೇನೆ. ಜೀವನದಲ್ಲಿ ಮೊದಲ ಬಾರಿಗೆ ಈ ಸಾಧನೆ ಮಾಡಿ ಫ್ರಾನ್ಸ್‌ನ ಲೂಕಾಸ್ ಮಜೂರ್ ಅವರ ಸ್ಥಾನವನ್ನು ವಶಪಡಿಸಿಕೊಂಡಿರುವೆ. ನಿಮ್ಮ ಆಶೀರ್ವಾದ ಮತ್ತು ಹಾರೈಕೆ ಹೀಗೆ ಇರಲಿ. ಜೈ ಹಿಂದ್” ಎಂದು ಸುಹಾಸ್ ಯತಿರಾಜ್ ಟ್ವಿಟರ್​ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ Spanish Para-Badminton: ಕಂಚಿನ ಪದಕ ವಿಜೇತ ಕನ್ನಡಿಗ ಸುಹಾಸ್ ಸ್ವದೇಶಕ್ಕೆ ಆಗಮನ

ಉತ್ತರ ಪ್ರದೇಶದ ಗೌತಮ್‌ ಬುದ್ಧ ನಗರದ ಜಿಲ್ಲಾಧಿಕಾರಿಯಾಗಿರುವ ಸುಹಾಸ್‌ ಹಾಸನ ಮೂಲದ ಐಎಎಸ್ ಅಧಿಕಾರಿಯಾಗಿದ್ದಾರೆ. ಎಸ್‌ಎಲ್‌4 ಬ್ಯಾಡ್ಮಿಂಟನ್‌ ವಿಭಾಗದಲ್ಲಿ ಅವರು ಟೋಕಿಯೊ ಪ್ಯಾರಾ ಒಲಿಂಪಿಕ್ಸ್ ಫೈನಲ್‌ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು. ಈ ಮೂಲಕ ಪ್ಯಾರಾಲಿಂಪಿಕ್ಸ್‌ ಪದಕ ಗೆದ್ದ ಮೊದಲ ಐಎಎಸ್‌ ಅಧಿಕಾರಿ ಎಂಬ ಹಿರಿಮೆಗೆ ಪಾತ್ರರಾಗಿದ್ದರು.

2007ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ಸುಹಾಸ್‌, ದುರ್ಬಲ ಕಾಲನ್ನು ಹೊಂದಿದ್ದಾರೆ. ಕಾಲಿನಲ್ಲಿ ತೀವ್ರ ಬಲಹೀನತೆಯಿದ್ದರೆ ಅಂತಹವರನ್ನು ಎಸ್‌ಎಲ್‌4 ವಿಭಾಗಕ್ಕೆ ಸೇರಿಸಲಾಗುತ್ತದೆ. ಇಂತಹ ಸಮಸ್ಯೆಗಳ ಮಧ್ಯೆಯೂ ಸುಹಾಸ್‌ ಐಎಎಸ್‌ ಅಧಿಕಾರಿಯಾಗಿದ್ದಾರೆ.

ಸುಹಾಸ್‌ ಅವರು ಹಿಂದೆಮ್ಮೊ ಸಂದರ್ಶನದಲ್ಲಿ ಮಾತನಾಡುವ ವೇಳೆ “ದೇಶವನ್ನು ಪ್ರತಿನಿಧಿಸುವುದು ಗೌರವದ ವಿಷಯ. ಅದರಲ್ಲೂ ದೇಶಕ್ಕಾಗಿ ಪದಕ ಗೆಲ್ಲುವುದು ತುಂಬಾ ಹೆಮ್ಮೆ ಮತ್ತು ಸಂತೋಷದ ಕ್ಷಣವಾಗಿರುತ್ತದೆ. ಯಾವಾಗಲೂ ಅತ್ಯುತ್ತಮ ಪ್ರದರ್ಶನಕ್ಕೆ ಪ್ರಯತ್ನ ನಡೆಸುತ್ತಿರುತ್ತೇನೆ” ಎಂದು ಹೇಳಿದ್ದರು. ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಜಯಿಸಲಿ ಎನ್ನುವುದು ಎಲ್ಲ ಕನ್ನಡಿಗರ ಆಶಯವಾಗಿದೆ.

Exit mobile version