ಪ್ಯಾರಿಸ್: ಶೂಟಿಂಗ್ನಲ್ಲಿ(Paris 2024 Shooting) ಭಾರತ ಸದ್ಯ 2 ಪದಕಗಳ ನಿರೀಕ್ಷೆಯಲ್ಲಿದೆ. ಇಂದು ನಡೆದ 10 ಮೀಟರ್ ಮಹಿಳಾ ಏರ್ ರೈಫಲ್ ಸ್ಪರ್ಧೆಯಲ್ಲಿ ಶೂಟರ್ ರಮಿತಾ ಜಿಂದಾಲ್(Ramita Jindal) 631.5 ಅಂಕ ಗಳಿಸಿ 5 ನೇ ಸ್ಥಾನದೊಂದಿಗೆ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಆದರೆ, ಅನುಭವಿ ಶೂಟರ್ ಎಲವೆನಿಲ್ ವಲರಿವನ್(Elavenil Valarivan) 630.7 ಅಂಕ ಗಳಿಸಿ 10ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅಗ್ರ 8 ಮಂದಿಗೆ ಫೈನಲ್ ಪ್ರವೇಶ ಲಭಿಸಿತು. ಇಂದು ನಡೆಯುವ 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ಫೈನಲ್‌ನಲ್ಲಿ ಭಾರತದ ಚೊಚ್ಚಲ ಪದಕದ ಗುರಿಯೊಂದಿಗೆ ಮನು ಭಾಕರ್ ಕಣಕ್ಕಿಳಿಯಲಿದ್ದಾರೆ.
ರಮಿತಾ ಕಳೆದ 20 ವರ್ಷಗಳಲ್ಲಿ ಮನು ಭಾಕರ್ ನಂತರ ಪದಕ ಸುತ್ತಿಗೆ ತಲುಪಿದ ಎರಡನೇ ಮಹಿಳಾ ಶೂಟರ್ ಎನಿಸಿಕೊಂಡರು. ರಮಿತಾ ತನ್ನ ಕೋಚ್ ಸುಮಾ ಶಿರೂರ್ (ಅಥೆನ್ಸ್ 2004) ನಂತರ ಒಲಿಂಪಿಕ್ ಫೈನಲ್‌ಗೆ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ರೈಫಲ್ ಶೂಟರ್ ಆಗಿದ್ದಾರೆ. ಎಲವೆನಿಲ್ ವಲರಿವನ್ ಆರಂಭಿಕ ಮೂರು ಸೆಟ್ಗಳಲ್ಲಿ ಅಗ್ರ 8ರೊಳಗೆ ಕಾಣಿಸಿಕೊಂಡಿದ್ದರೂ ಕೂಡ ಅಂತಿಮ ಮೂರು ಸೆಟ್ಗಳಲ್ಲಿ ಹಿನ್ನಡೆ ಕಂಡು ಫೈನಲ್ ಅವಕಾಶ ತಪ್ಪಿಸಿಕೊಂಡರು. ಕನಿಷ್ಠ 8ನೇ ಸ್ಥಾನ ಪಡೆಯುತ್ತಿದ್ದರೂ ಕೂಡ ಅವರಿಗೆ ಫೈನಲ್ ಟಿಕೆಟ್ ಲಭಿಸುತ್ತಿತ್ತು.
ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಬಾಲರಾಜ್
ಇದಕ್ಕೂ ಮುನ್ನ ನಡೆದಿದ್ದ ರೋಯಿಂಗ್ ಸ್ಪರ್ಧೆಯಲ್ಲಿ(Paris Olympics 2024) ಭಾರತದ ಏಕೈಕ ಭರವಸೆ ಎನಿಸಿಕೊಂಡಿರುವ ಬಾಲರಾಜ್ ಪನ್ವರ್(Rower Balraj Panwar) ಇಂದು ನಡೆದ ಪುರುಷರ ಸಿಂಗಲ್ಸ್ ಸ್ಕಲ್ಸ್ ವಿಭಾಗದ ರಿಪಿಚೇಜ್ ಸುತ್ತಿನಲ್ಲಿ 7 ನಿಮಿಷ 12.41 ಸೆಂಕಡ್ನಲ್ಲಿ ಗುರಿ ಮುಟ್ಟಿ 2ನೇ ಸ್ಥಾನ ಪಡೆಯುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಪದಕದಾಸೆಯನ್ನು ಜೀವಂತವಿರಿಸಿದ್ದಾರೆ. ರಿಪಿಚೇಜ್ ಸುತ್ತಿನಲ್ಲಿ ಅಗ್ರ 2 ಸ್ಥಾನ ಪಡೆದ ಆಟಗಾರರಿಗೆ ಕ್ವಾರ್ಟರ್ ಫೈನಲ್ ಅರ್ಹತೆ ಲಭಿಸುತ್ತದೆ.
7 ನಿಮಿಷ 10 ಸೆಂಕಡ್ನಲ್ಲಿ ಗುರಿ ಮುಟ್ಟಿದ ಮೊನಕೊ ದೇಶದ ಕ್ವೆಂಟಿನ್ ಆಂಟೊಗ್ನೆಲ್ಲಿ ಮೊದಲ ಸ್ಥಾನ ಪಡೆದರು. ಕೇವಲ 2 ಸೆಂಕಡ್ಗಳ ಅಂತರದಲ್ಲಿ ಭಾರತದ ನಾವಿಕ ಬಾಲರಾಜ್ ಮೊದಲ ಸ್ಥಾನದಿಂದ ವಂಚಿತರದಾದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆದ್ದು ಸೆಮಿಫೈನಲ್ ಪ್ರವೇಶಿಸಿದರೆ ಐತಿಹಾಸಿಕ ಪದಕವೊಂದು ಖಾತ್ರಿಯಾಗಲಿದೆ.
ಸಿಂಧು ಗೆಲುವಿನ ಆರಂಭ
ಅವಳಿ ಒಲಿಂಪಿಕ್ಸ್(Paris Olympics) ಪದಕ ವಿಜೇತೆ, ಭಾರತದ ಸ್ಟಾರ್ ಶಟ್ಲರ್ ಪಿ.ವಿ ಸಿಂಧು(PV Sindhu) ಅವರು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಗೆಲುವಿನ ಶುಭಾರಂಭ ಕಂಡಿದ್ದಾರೆ. ಇಂದು(ಭಾನುವಾರ) ನಡೆದ ಮಹಿಳಾ ಸಿಂಗಲ್ಸ್ ವಿಭಾಗದ(Paris Olympics Badminton) ಮೊದಲ ಸುತ್ತಿನ ಪಂದ್ಯದಲ್ಲಿ ಮಾಲ್ಡಿವ್ಸ್ನ ಫಾತಿಮತ್ ನಬಾಹಾ ಅಬ್ದುಲ್ ರಝಾಕ್ ವಿರುದ್ಧ 21-9, 21-6 ನೇರ ಗೇಮ್ಗಳಿಂದ ಗೆದ್ದು ಮುಂದಿನ ಹಂತಕ್ಕೆ ಪ್ರವೇಶ ಪಡೆದಿದ್ದಾರೆ. ಸಿಂಧು 2ನೇ ಸುತ್ತಿನ ಪಂದ್ಯದಲ್ಲಿ ಕ್ರಿಸ್ಟಿನ್ ಕುಬಾ ವಿರುದ್ಧ ಆಡಲಿದ್ದಾರೆ. ಈ ಪಂದ್ಯ ಬುಧವಾರ ನಡೆಯಲಿದೆ.