ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ(Paris Olympic) ಲಕ್ಷ್ಯ ಸೇನ್(Lakshya Sen) ಅವರ ಗೆಲುವಿನ ಓಟ ಮುಂದುವರಿದಿದೆ. ಬುಧವಾರ ನಡೆದ ‘ಎಲ್’ ಗುಂಪಿನ ಪುರುಷರ ಸಿಂಗಲ್ಸ್ ವಿಭಾಗದ ಅಂತಿಮ ಪಂದ್ಯದಲ್ಲಿ ವಿಶ್ವ ನಂ.3 ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿ(Jonatan Christie) ವಿರುದ್ಧ 21-18, 21-12 ನೇರ ಗೇಮ್ಗಳಿಂದ ಗೆದ್ದು ಪ್ರೀ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿದ್ದಾರೆ. ಇದೇ ವೇಳೆ ಲಕ್ಷ್ಯ ಸೇನ್ 8 ವರ್ಷಗಳ ನಂತರ ಒಲಿಂಪಿಕ್ಸ್ ನಾಕೌಟ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
22 ವರ್ಷದ ಲಕ್ಷ್ಯ ಸೇನ್ ಮೊದಲ ಗೇಮ್ನಲ್ಲಿ 2-8 ಅಂಕಗಳ ಹಿನ್ನಡೆ ಸಾಧಿಸಿದರೂ ಕೂಡ ತಕ್ಷಣ ಎಚ್ಚೆತ್ತುಕೊಂಡು ತೀವ್ರ ಹೋರಾಟ ನಡೆಸಿ ಮುನ್ನಡೆ ಕಾಯ್ದುಕೊಂಡು ಅಂತಿಮವಾಗಿ 21-18 ಅಂಕಗಳ ಅಂತರದಿಂದ ಗೆಲುವು ತನ್ನದಾಗಿಸಿಕೊಂಡರು. ದ್ವಿತೀಯ ಗೇಮ್ನಲ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಸೇನ್ ಎದುರಾಳಿಗೆ ಚೇರಿಸಿಕೊಳ್ಳಲು ಕೂಡ ಸಮಯ ನೀಡಲಿಲ್ಲ. ಸತತವಾಗಿ ಅಂಕ ಗಳಿಸುತ್ತಲೇ ಸಾಗಿ ಮೇಲುಗೈ ಸಾಧಿಸಿ ನೇರ ಗೇಮ್ಗಳ ಅಂತರದಿಂದ ಪಂದ್ಯವನ್ನು ಗೆದ್ದು ಬೀಗಿದರು. ಹಾಲಿ ಆಲ್-ಇಂಗ್ಲೆಂಡ್ ಚಾಂಪಿಯನ್ ಕ್ರಿಸ್ಟಿ ಆಘಾತಕಾರಿ ಸೋಲುಂಡರು.
ಇದನ್ನೂ ಓದಿ Paris Olympics: ಫೈನಲ್ ಪ್ರವೇಶಿಸಿದ ಸ್ವಪ್ನಿಲ್ ಕುಸಾಲೆ; 16ರ ಸುತ್ತಿಗೇರಿದ ಸಿಂಧು
8 ವರ್ಷದ ಬಳಿಕ ನಾಕೌಟ್ ಪ್ರವೇಶ
ಲಕ್ಷ್ಯ ಸೇನ್ ಅವರು ನಾಕೌಟ್ ಹಂತಕ್ಕೇರುವ ಮೂಲಕ 2016ರ ರಿಯೊ ಗೇಮ್ಸ್‌ನ ಕಿಡಂಬಿ ಶ್ರೀಕಾಂತ್ ಬಳಿಕ ಒಲಿಂಪಿಕ್ಸ್‌ನಲ್ಲಿ ನಾಕೌಟ್ ಹಂತಕ್ಕೆ ಪ್ರವೇಶಿಸಿದ ಮೊದಲ ಭಾರತೀಯ ಪುರುಷ ಸಿಂಗಲ್ಸ್ ಶಟ್ಲರ್ ಎನಿಸಿಕೊಂಡರು. ಟೋಕಿಯೊದಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಏಕೈಕ ಸ್ಪರ್ಧಿಯಾಗಿದ್ದ ಸಾಯಿ ಪ್ರಣೀತ್ ಗುಂಪು ಹಂತದಲ್ಲೇ ಸೋಲು ಕಂಡು ನಿರ್ಗಮಿಸಿದ್ದರು.
ಕ್ರಿಸ್ಟಿ ವಿರುದ್ಧ ಸೇನ್ ಇದುವರೆಗೆ ಆಡಿದ್ದ 5 ಪಂದ್ಯಗಳಲ್ಲಿ 4ರಲ್ಲಿ ಸೋಲು ಕಂಡಿದ್ದರು. ಒಂದು ಪಂದ್ಯ ಮಾತ್ರ ಗೆದ್ದಿದ್ದರು. ಈ ವರ್ಷದ ಆರಂಭದಲ್ಲಿ ನಡೆದಿದ್ದ ಆಲ್ ಇಂಗ್ಲೆಂಡ್ ಓಪನ್‌ನ ಸೆಮಿಫೈನಲ್ ಸೇರಿದಂತೆ ಇಂಡೋನೇಷ್ಯಾದ ಎರಡು ಕೂಟಗಳಲ್ಲಿಯೂ ಲಕ್ಷ್ಯ ಕ್ರಿಸ್ಟಿ ವಿರುದ್ಧ ಸೋಲು ಕಂಡಿದ್ದರು. ಈ ಎಲ್ಲ ಸೋಲಿನ ಸೇಡನ್ನು ಇದೀಗ ಪ್ರತಿಷ್ಠಿತ ಒಲಿಂಪಿಕ್ಸ್ ಟೂರ್ನಿಯಲ್ಲಿ ಸೇನ್ ತೀರಿಸಿಕೊಂಡಿದ್ದಾರೆ. ಜತೆಗೆ ಭಾರತಕ್ಕೆ ಪದಕ ಭರವಸೆಯನ್ನು ಮೂಡಿಸಿದ್ದಾರೆ.
ಸಿಂಧುಗೆ ಭರ್ಜರಿ ಗೆಲುವು
ಇದಕ್ಕೂ ಮುನ್ನ ನಡೆದಿದ್ದ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದ ‘ಎಂ’ ಗುಂಪಿನ ಪಂದ್ಯದಲ್ಲಿ ಅವಳಿ ಒಲಿಂಪಿಕ್ಸ್ ಪದಕ ವಿಜೇತೆ, ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು(PV Sindhu) ಕೂಡ ಗೆಲುವು ಸಾಧಿಸಿ 16ನೇ ಸುತ್ತಿಗೆ ಪ್ರವೇಶ ಪಡೆದಿದ್ದರು.
73ನೇ ಶ್ರೇಯಾಂಕದ ಎಸ್ಟೋನಿಯಾದ ಕ್ರಿಸ್ಟಿನ್ ಕುಬಾ ವಿರುದ್ಧ 21-5, 21-10 ಸುಲಭ ಜಯ ಸಾಧಿಸಿ 16ರ(ಪ್ರೀ ಕ್ವಾರ್ಟರ್) ಸುತ್ತಿಗೇರಿದ್ದಾರೆ. ಸಿಂಧು ಅವರ ಬಲಿಷ್ಠ ಹೊಡೆತಗಳ ಮುಂದೆ ಕ್ರಿಸ್ಟಿನ್ ಕುಬಾ ಸಂಪೂರ್ಣ ಮಂಕಾದರು. ಮೊದಲ ಗೇಮ್ನಲ್ಲಿ ಕೇವಲ 5 ಅಂಕಕ್ಕೆ ಸೀಮಿತರಾದರು. ಈ ಪಂದ್ಯ ಕೇವಲ 34 ನಿಮಿಷಗಳಲ್ಲಿ ಅಂತ್ಯ ಕಂಡಿತ್ತು.