ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ನ ಬಾಕ್ಸಿಂಗ್ ವಿಭಾಗದ ಡ್ರಾ(Paris Olympics Boxing Draw) ಪಕಟಗೊಂಡಿದೆ. ಭಾರತದ ಪದಕ ಭರವಸೆಯ ಮಹಿಳಾ ಬಾಕ್ಸರ್‌ಗಳಾದ ನಿಖತ್ ಜರೀನ್(Nikhat Zareen) ಮತ್ತು ಲೊವ್ಲಿನಾ ಬೊರ್ಗೊಹೈನ್(Lovlina Borgohain) ಮೊದಲ ಸುತ್ತಿನಲ್ಲೇ ಕಠಿಣ ಸ್ಪರ್ಧಿಗಳ ಸವಾಲು ಎದುರಿಸಲಿದ್ದಾರೆ. ಮಹಿಳೆಯರ 50 ಕೆಜಿ ಬಾಕ್ಸಿಂಗ್ ಸ್ಪರ್ಧೆಯಲ್ಲಿ ನಿಖತ್ ಜರೀನ್ 32ರ ಸುತ್ತಿನಲ್ಲಿ ಜರ್ಮನಿಯ ಮ್ಯಾಕ್ಸಿ ಕ್ಯಾರಿನಾ ಕ್ಲೋಟ್ಜರ್ ಅವರನ್ನು ಎದುರಿಸಲಿದ್ದಾರೆ. ಲೊವ್ಲಿನಾ ಮಹಿಳೆಯರ 75 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ನಾರ್ವೆಯ ಸುನ್ನಿವಾ ಹಾಫ್‌ಸ್ಟಾಡ್ ಸವಾಲು ಎದುರಿಸಲಿದ್ದಾರೆ.
ಒಂದೊಮ್ಮೆ ಎರಡು ಬಾರಿಯ ವಿಶ್ವ ಚಾಂಪಿಯನ್ ನಿಖತ್ 32ರ ಸುತ್ತಿನಲ್ಲಿ ಗೆಲುವು ಸಾಧಿಸಿ 16ರ ಸುತ್ತಿಗೇರಿದರೆ ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿರುವ ಚೀನಾದ ವು ಯು ಅವರನ್ನು ಎದುರಿಸುವ ಸಾಧ್ಯತೆ ಇದೆ. ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲೊವ್ಲಿನಾ ಮೊದಲ ಸುತ್ತಿನಲ್ಲಿ ನಾರ್ವೆಯ ಸುನ್ನಿವಾ ಹಾಫ್‌ಸ್ಟಾಡ್ ವಿರುದ್ಧ ಗೆಲುವು ಸಾಧಿಸಿದರೆ, ಕ್ವಾರ್ಟರ್-ಫೈನಲ್‌ನಲ್ಲಿ ಚೀನಾದ ಲಿ ಕಿಯಾನ್ ಎದುರಾಗುವ ಸಾಧ್ಯತೆ ಇದೆ.
ನಿಖತ್ ಅವರ ಸಂಭಾವ್ಯ ಎದುರಾಳಿ, ವು ಯು, ಪ್ಯಾರಿಸ್ ಒಲಿಂಪಿಕ್ಸ್ 2024 ರ ಮಹಿಳೆಯರ 50 ಕೆಜಿ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಬಾಕ್ಸರ್ ಆಗಿದ್ದಾರೆ. ಅವರು ಮಹಿಳೆಯರ 52 ಕೆಜಿ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಿದ್ದಾರೆ. ನಿಖತ್ ಮಹಿಳೆಯರ 50 ಕೆಜಿ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಿದ್ದಾರೆ. ನಿಖತ್ ಚೀನಿ ಬಾಕ್ಸರ್ ಸವಾಲು ಮೆಟ್ಟಿ ನಿಂತರೆ ಕ್ವಾರ್ಟರ್-ಫೈನಲ್‌ನಲ್ಲಿ ಥಾಯ್ಲೆಂಡ್‌ನ ಚುತಾಮತ್ ರಕ್ಸತ್ ಅಥವಾ ಉಜ್ಬೇಕಿಸ್ತಾನ್‌ನ ಸಬೀನಾ ಬೊಬೊಕುಲೋವಾ ಅವರನ್ನು ಎದುರಿಸಬಹುದು.
ಫೆಬ್ರವರಿಯಲ್ಲಿ ನಡೆದ ಸ್ಟ್ರಾಂಡ್ಜಾ ಸ್ಮಾರಕ ಫೈನಲ್‌ನಲ್ಲಿ ನಿಖತ್ ಬೊಬೊಕುಲೋವಾ ವಿರುದ್ಧ ಸೋಲು ಕಂಡಿದ್ದರು. ಏತನ್ಮಧ್ಯೆ, ಚುತಾಮತ್ ರಕ್ಸತ್ ಅವರು ಕಳೆದ ವರ್ಷ ಏಷ್ಯನ್ ಗೇಮ್ಸ್ ಸೆಮಿಫೈನಲ್‌ನಲ್ಲಿ ನಿಖತ್ ಅವರನ್ನು ಸೋಲಿಸಿದ್ದರು. ಹೀಗಾಗಿ ಈ ಬಾರಿ ನಿಖತ್ಗೆ ಬಲಿಷ್ಠ ಎದುರಾಳಿಗಳ ಸವಾಲು ಎದುರಾಗುದ ಸಾಧ್ಯತೆ ಇದೆ.
ಟೋಕಿಯೊ ಒಲಿಂಪಿಕ್ಸ್ 2020ರ ಕಂಚಿನ ಪದಕ ವಿಜೇತೆ ಲೊವ್ಲಿನಾ ಎರಡನೇ ಸುತ್ತನ್ನು ತಲುಪಿದರೆ, ಅವರು ತಮ್ಮ ಹಳೆಯ ಪ್ರತಿಸ್ಪರ್ಧಿ ಮತ್ತು ಅಗ್ರ ಶ್ರೇಯಾಂಕದ ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಲಿ ಕಿಯಾನ್ ಅವರನ್ನು ಎದುರಿಸಬಹುದು. ಏಷ್ಯನ್ ಗೇಮ್ಸ್ ಚಿನ್ನದ ಪದಕದ ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ಭಾರತೀಯ ಆಟಗಾರ್ತಿಯನ್ನು ಸೋಲಿಸಿದ್ದರು.
ಇದನ್ನೂ ಓದಿ Paris Olympics 2024: ನೀರಿನಾಳದಲ್ಲಿ ಅಭ್ಯಾಸ ನಡೆಸಿದ ನೀರಜ್ ಚೋಪ್ರಾ; ವಿಡಿಯೊ ವೈರಲ್
ಜಾಸ್ಮಿನ್ ಲಂಬೋರಿಯಾ ಮಹಿಳೆಯರ 57 ಕೆಜಿ ವಿಭಾಗದ ತನ್ನ ಆರಂಭಿಕ ಸುತ್ತಿನ ಪಂದ್ಯದಲ್ಲಿ ಟೋಕಿಯೊ 2020 ರ ಬೆಳ್ಳಿ ಪದಕ ವಿಜೇತ ಫಿಲಿಪೈನ್ಸ್‌ನ ನೆಸ್ತಿ ಪೆಟೆಸಿಯೊ ವಿರುದ್ಧ ಸೆಣಸಲಿದ್ದಾರೆ. ಇಲ್ಲಿ ಗೆದ್ದು ಮುಂದಿನ ಸುತ್ತಿಗೆ ಮುನ್ನಡೆದರೆ, ಹಾಲಿ ಯುರೋಪಿಯನ್ ಚಾಂಪಿಯನ್ ಆಗಿರುವ ಫ್ರಾನ್ಸ್‌ನ ಮೂರನೇ ಶ್ರೇಯಾಂಕದ ಅಮಿನಾ ಜಿದಾನಿಯನ್ನು ಎದುರಿಸಲಿದ್ದಾರೆ. ಏಷ್ಯನ್ ಗೇಮ್ಸ್‌ನ ಕಂಚಿನ ಪದಕ ವಿಜೇತೆ ಪ್ರೀತಿ ಪವಾರ್ 32 ರ ಸುತ್ತಿನಲ್ಲಿ ವಿಯೆಟ್ನಾಂನ ವೋ ಥಿ ಕಿಮ್ ಅನ್ಹ್ ವಿರುದ್ಧ ಆಡಲಿದ್ದಾರೆ.
ಅಮಿತ್ ಪಂಘಲ್ ಮತ್ತು ನಿಶಾಂತ್ ದೇವ್ ಅವರು ಕ್ರಮವಾಗಿ ಪುರುಷರ 51 ಕೆಜಿ ಮತ್ತು 71 ಕೆಜಿಯ 16 ರ ಸುತ್ತಿನಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ. ಇಬ್ಬರೂ ಆರಂಭಿಕ ಸುತ್ತಿನಲ್ಲಿ ಬೈಗಳನ್ನು ಪಡೆದಿದ್ದಾರೆ. ಅಮಿತ್ ಪಂಘಲ್ ಅವರು ಪ್ಯಾರಿಸ್‌ನಲ್ಲಿ ತಮ್ಮ ಆರಂಭಿಕ ಪಂದ್ಯದಲ್ಲಿ ಜಾಂಬಿಯಾದ ಪ್ಯಾಟ್ರಿಕ್ ಚಿನ್ಯೆಂಬಾ ಅವರನ್ನು ಎದುರಿಸಲಿದ್ದಾರೆ. ಚಿನ್ಯೆಂಬಾ ಟೋಕಿಯೊ 2020 ಒಲಿಂಪಿಕ್ಸ್‌ನಲ್ಲಿ ಮತ್ತು 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಗೆದ್ದ ಬಾಕ್ಸರ್ ಆಗಿದ್ದಾರೆ. ನಿಶಾಂತ್ ದೇವ್ ಈಕ್ವೆಡಾರ್‌ನ ಜೋಸ್ ರೊಡ್ರಿಗಸ್ ಟೆನೊರಿಯೊ ವಿರುದ್ಧ ಹೋರಾಡಲಿದ್ದಾರೆ.