ಪ್ಯಾರಿಸ್: ಶಾಂಘೈನಲ್ಲಿ ಐತಿಹಾಸಿಕ ವಿಶ್ವಕಪ್ ಜಯಿಸಿದ ತರುಣ್ ದೀಪ್ ರೈ(Tarundeep Rai), ಪ್ರವೀಣ್ ಜಾಧವ್(Pravin Jadhav) ಹಾಗೂ ಯುವ ಬಿಗ್ಲಾರ ಧೀರಜ್ ಬೊಮ್ಮದೇವರ(Dhiraj Bommadevara) ಅವರನ್ನೊಳಗೊಂಡ ಭಾರತದ ಪುರುಷರ ಆರ್ಚರಿ ತಂಡ ಪ್ಯಾರಿಸ್ ಒಲಿಂಪಿಕ್ಸ್(Paris Olympics 2024)ನಲ್ಲಿಯೂ ಪದಕ ಗೆಲ್ಲುವ ಬರವಸೆ ಮೂಡಿಸಿದೆ. ಗುರುವಾರ ನಡೆದ ಪುರುಷರ ಆರ್ಚರಿ ಶ್ರೇಯಾಂಕ ಸುತ್ತಿನಲ್ಲಿ 2013 ಅಂಕಗಳೊಂದಿಗೆ 3ನೇ ಸ್ಥಾನ ಗಳಿಸುವ ಮೂಲಕ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದೆ. ಇದಕ್ಕೂ ಮುನ್ನ ನಡೆದ ಮಹಿಳಾ ವಿಭಾಗದದಲ್ಲಿ ಭಾರತ 4ನೇ ಸ್ಥಾನ ಗಳಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಮಿಶ್ರ ತಂಡದಲ್ಲಿ ಭಾರತ 5ನೇ ಸ್ಥಾನ ಪಡೆಯಿತು. ಮಿಶ್ರ ವಿಭಾಗದಲ್ಲಿ ಧೀರಜ್ ಬೊಮ್ಮದೇವರ ಮತ್ತು ಅಂಕಿತಾ ಭಗತ್ ಜತೆಯಾಗಿ ಆಡಲಿದ್ದಾರೆ.
ಅತ್ಯಂತ ಜಿದ್ದಾಜಿದ್ದಿನಿಂದ ನಡೆದ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಹಲವು ಏರಿಳಿತ ಕಂಡ ಭಾರತೀಯ ಬಿಲ್ಗಾರರು ಕೊನೆಗೂ ಉತ್ತಮ ಸ್ಥಾನದೊಂದಿಗೆ ಮಿಂಚಿದರು. ಧೀರಜ್ ಬೊಮ್ಮದೇವರ 681 ಅಂಕದೊಂದಿಗೆ 4ನೇ ಸ್ಥಾನ ಪಡೆದರೆ, ತರುಣ್ ದೀಪ್ ರೈ(674 ಅಂಕ) 14ನೇ ಮತ್ತು ಪ್ರವೀಣ್ ಜಾಧವ್ 39ನೇ (658 ಅಂಕ) ಸ್ಥಾನ ಪಡೆದರು.
ವೈಯಕ್ತಿಕ ಶ್ರೇಯಾಂಕ ವಿಭಾಗದ ಮೊದಲ ಸೆಟ್ನಲ್ಲಿ ಧೀರಜ್ ಬೊಮ್ಮದೇವರ 57( (10, 10, 10, 10, 10, 9, 8) ಅಂಕದೊಂದಿಗೆ 11ನೇ ಸ್ಥಾನ ಗಳಿಸಿದರೆ, ಅನುಭವಿ ಪ್ರವೀಣ್ ಜಾಧವ್ 55(X, 10, 10, 9, 9, 8) ಹಾಗೂ ತರುಣ್ ದೀಪ್ ರೈ 55(10, 10, 10, 9, 9, 8) ಅಂಕದೊಂದಿಗೆ ಕ್ರಮವಾಗಿ 30 ಮತ್ತು 33ನೇ ಸ್ಥಾನ ಪಡೆದರು. 2ನೇ ಸುತ್ತಿನಲ್ಲಿ ತರುಣ್ ದೀಪ್ ರೈ ಉತ್ತಮ ಗುರಿ ಇಡುವ ಮೂಲಕ 16ನೇ ಸ್ಥಾನಕ್ಕೇರಿದರು. ಆದರೆ ಮೊದಲ ಸುತ್ತಿನಲ್ಲಿ ಮುಂದಿದ್ದ ಧೀರಜ್ ಬೊಮ್ಮದೇವರ ಆ ಬಳಿಕ ಕುಸಿತ ಕಾಣಲಾರಂಭಿಸಿದರು. ವೈಯಕ್ತಿಕ ವಿಭಾಗದಲ್ಲಿ 5 ಸುತ್ತು ಪೂರ್ಣಗೊಂಡ ವೇಳೆ ಭಾರತ ತಂಡ 832 ಅಂಕದೊಂದಿಗೆ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿತ್ತು.
6ನೇ ಸೆಟ್ನಲ್ಲಿ ತರುಣ್ ದೀಪ್ ರೈ 56 ಅಂಕದೊಂದಿಗೆ 14ನೇ ಸ್ಥಾನಕ್ಕೇರಿದರು. ಅತ್ತ ಧೀರಜ್ ಮತ್ತು ಪ್ರವೀಣ್ ಕೂಡ ತಮ್ಮ ಸ್ಥಾನಗಳಲ್ಲಿ ಏರಿಕೆ ಕಂಡರು. ಆದರೆ, ತಂಡ ವಿಭಾಗದಲ್ಲಿ 1000 ಅಂಕದೊಂದಿಗೆ ಒಂದು ಸ್ಥಾನ ಕುಸಿತ ಕಂಡು 6ಕ್ಕೆ ಇಳಿಯಿತು. ಕೊರಿಯಾ ಅಗ್ರಸ್ಥಾನ, ಫ್ರಾನ್ಸ್ ಮತ್ತು ಇಟಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆಯಿತು. ಚೀನಾ 5ನೇ ಸ್ಥಾನ ಸಂಪಾದಿಸಿತು.
ಮೊದಲ ಸೆಟ್ನಲ್ಲಿ 11ನೇ ಸ್ಥಾನಗಳಿಸಿ ಆ ಬಳಿಕದ ಸುತ್ತಿನಲ್ಲಿ ಕುಸಿತ ಕಂಡಿದ್ದ ಯುವ ಬಿಗ್ಲಾರ ಧೀರಜ್ ಬೊಮ್ಮದೇವರ ಫಿನಿಕ್ಸ್ನಂತೆ ಎದ್ದು ಬಂದು 7ನೇ ಸುತ್ತಿನಲ್ಲಿ 58 (X, X, 10, 10, 9, 9) ಅಂಕದೊಂದಿಗೆ 10ನೇ ಸ್ಥಾನಕ್ಕೆ ಜಿಗಿದರು. ಹಿಂದಿನ ಸೆಟ್ನಲ್ಲಿ 24ನೇ ಸ್ಥಾನಿಯಾಗಿದ್ದರು. ತರುಣ್ ದೀಪ್ ರೈ ಈ ಸುತ್ತಿನಲ್ಲಿ ಒಂದು ಸ್ಥಾನ ಕುಸಿದ ಕಂಡರೂ ಕೂಡ ತಕ್ಷಣ ಎಚ್ಚೆತ್ತುಕೊಂಡು 8ನೇ ಸುತ್ತಿನಲ್ಲಿ 15ನೇ ಸ್ಥಾನದಿಂದ 12ನೇ ಸ್ಥಾನಕ್ಕೆ ಏರಿಕೆ ಕಂಡರು. ಉಭಯ ಬಿಲ್ಗಾರರ ಈ ಶ್ರೇಷ್ಠ ಸಾಧನೆಯಿಂದ ಭಾರತ, ತಂಡ ವಿಭಾಗದಲ್ಲಿ ಮೂರನೇ ಸ್ಥಾನಕ್ಕೇರಿತು. 9ನೇ ಸೆಟ್ನಲ್ಲಿ 5 ಬಿಲ್ಲುಗಳನ್ನು 10 ಅಂಕಕ್ಕೆ ಗುರಿ ಇಟ್ಟ ಧೀರಜ್ 8ನೇ ಸ್ಥಾನ ಪೆಡೆದುಕೊಂಡರು. ಇದೇ ವೇಳೆ ಭಾರತ ತಂಡ 1511 ಅಂಕದೊಂದಿಗೆ 2ನೇ ಸ್ಥಾನಕ್ಕೆ ಜಿಗಿಯಿತು. ಆದರೆ ಅಂತಿಮ ಸುತ್ತಿನಲ್ಲಿ ಒಂದು ಸ್ಥಾನ ಕುಸಿತ ಕಂಡು 3ನೇ ಸ್ಥಾನ ಪಡೆದು ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ದಕ್ಷಿಣ ಕೊರಿಯಾ 2049 ಅಂಕದೊಂದಿಗೆ ಅಗ್ರಸ್ಥಾನ ಪಡೆದರೆ, ಆತಿಥೇಯ ಫ್ರಾನ್ಸ್ 2025 ಅಂಕ ಗಳಿಸಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು. ಚೀನಾ 1998 ಅಂಕದೊಂದಿಗೆ ನಾಲ್ಕನೇ ಸ್ಥಾನ ಪಡೆಯಿತು. ಭಾರತ ಪುರುಷರ ತಂಡ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಟರ್ಕಿಯೆ ಅಥವಾ ಕೊಲಂಬಿಯಾ ವಿರುದ್ಧ ಸೆಣಸಲಿದೆ.