Site icon Vistara News

Paris Olympics 2024 : ಭಾರತಕ್ಕೆ ಶೂಟಿಂಗ್​ನಲ್ಲಿ ಕಂಚಿನ ಪದಕ ಜಸ್ಟ್​ ಮಿಸ್​!

Paris Olympics 2024

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​ 2024ರಲ್ಲಿ (Paris Olympics 2024) ಸೋಮವಾರ ನಡೆದ ಪುರುಷರ 10 ಮೀಟರ್ ಏರ್ ರೈಫಲ್​ ಸ್ಪರ್ಧೆಯಲ್ಲಿ ಅರ್ಜುನ್ ಬಬುಟಾ 208.4 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಭಾರತಕ್ಕೆ ಕಂಚಿನ ಪದಕ ಜಸ್ಟ್ ಮಿಸ್ ಆಗಿದೆ. ಅವರಿಗಿಂತ ಮುಂದಿರುವ ಕ್ರೊಯೇಷಿಯಾದ ಮಿರಾನ್ ಮಾರಿಸಿಕ್ ಒಟ್ಟು 230 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದರು. ಚೀನಾದ ಶೆಂಗ್ ಲಿಹಾವೊ 252.2 ಅಂಕಗಳೊಂದಿಗೆ ಒಲಿಂಪಿಕ್ ದಾಖಲೆಯೊಂದಿಗೆ ಚಿನ್ನ ಗೆದ್ದರೆ, ಸ್ವೀಡನ್ನ ವಿಕ್ಟರ್ ಲಿಂಡ್ಗ್ರೆನ್ 251.4 ಅಂಕಗಳೊಂದಿಗೆ ಬೆಳ್ಳಿ ಗೆದ್ದರು.

ಬಬುಟಾ ಆರಂಭಿಕ ಶಾಟ್​ಗಳಲ್ಲಿ ಅಗ್ರ ಮೂರಲ್ಲಿ ಸ್ಥಾನ ಪಡೆದಿದ್ದರು. ಆದರೆ ಅಂತಿಮ ಶಾಟ್​ನಲ್ಲಿ 9.5 ಅಂಕಗಳನ್ನು ಗಳಿಸಿದ ಕಾರಣ ಮೂರನೇ ಸ್ಥಾನ ಉಳಿಸಿಕೊಳ್ಳುವುದಕ್ಕೆ ವಿಫಲಗೊಂಡರು. ಮಹಿಳೆಯರ 10 ಮೀಟರ್ ಏರ್ ರೈಫಲ್ ಫೈನಲ್​​ನಲ್ಲಿ ರಮಿತಾ ಜಿಂದಾಲ್ ಏಳನೇ ಸ್ಥಾನ ಪಡೆದ ನಂತರ ಅವರು ಪದಕವನ್ನು ಕಳೆದುಕೊಂಡ ಎರಡನೇ ಭಾರತೀಯ ಶೂಟರ್ ಆಗಿದ್ದಾರೆ. 60 ಶಾಟ್​ಗಳ ಅರ್ಹತಾ ಸರಣಿಯಲ್ಲಿ, ಬಾಬುಟಾ 630.1 ಅಂಕಗಳನ್ನು ಗಳಿಸುವ ಏಳನೇ ಸ್ಥಾನ ಪಡೆದಿದ್ದರು. ಈ ಮೂಲಕ ಕ್ರೀಡಾಕೂಟದಲ್ಲಿ ಶೂಟಿಂಗ್ ಈವೆಂಟ್ ಫೈನಲ್​​ಗೆ ಅರ್ಹತೆ ಪಡೆದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಅರ್ಜುನ್ ಖೇಲೋ ಇಂಡಿಯಾ ವಿದ್ಯಾರ್ಥಿವೇತನದ ಕ್ರೀಡಾಪಟು ಮತ್ತು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ ನಿಂದ ಬೆಳೆದು ಬಂದವರು. ಅವರು ಭಾರತ-ಪಾಕಿಸ್ತಾನ ಗಡಿಯ ಸಮೀಪವಿರುವ ಸಣ್ಣ ಹಳ್ಳಿಯಾದ ಪಂಜಾಬ್​​ನ ಜಲಾಲಾಬಾದ್ ಪ್ರದೇಶದ ಮಧ್ಯಮ ವರ್ಗದ ಕುಟುಂಬದವರು. ಚಂಡೀಗಢಕ್ಕೆ ತೆರಳುವ ಮೊದಲು ಅರ್ಜುನ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಊರಿನಲ್ಲಿ ಪೂರ್ಣಗೊಳಿಸಿದ್ದರು. ಅವರ ತಂದೆ ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಂತರ ಅವರು ಚಂಡೀಗಢದ ಡಿಎವಿ ಕಾಲೇಜಿನಲ್ಲಿ ಬಿಎ ಆನರ್ಸ್ ಪದವಿ ಪಡೆದುಕೊಂಡಿದ್ದಾರೆ.

ಅರ್ಜುನ್ ಅವರ ಶೂಟಿಂಗ್ ಆಸಕ್ತಿ ಈ ಕ್ರೀಡೆಯ ಯಾವುದೇ ಪೂರ್ವ ಜ್ಞಾನವಿಲ್ಲದೆ ಪ್ರಾರಂಭಗೊಂಡಿತ್ತು. ಅವರು ಮತ್ತು ಅವರ ತಂದೆ ನೀರಜ್ ಬಬುಟಾ ಅವರು ಚಂಡೀಗಢದಲ್ಲಿ ಭಾರತೀಯ ಒಲಿಂಪಿಕ್ ಶೂಟರ್ ಅಭಿನವ್ ಬಿಂದ್ರಾ ಅವರಿಂದ ಸಲಹೆ ಪಡೆದುಕೊಂಡಿದ್ದರು. 2013 ರಲ್ಲಿ, ಬಿಂದ್ರಾ ಅರ್ಜುನ್ ಅವರನ್ನು ತಮ್ಮ ತರಬೇತುದಾರ ಕರ್ನಲ್ ಜೆ.ಎಸ್.ಧಿಲ್ಲಾನ್ ಅವರಿಗೆ ಪರಿಚಯಿಸಿದ್ದರು. ಅವರು ಅರ್ಜುನ್ ಗೆ ರೈಫಲ್ ಶೂಟಿಂಗ್ ತೆಗೆದುಕೊಳ್ಳಲು ಶಿಫಾರಸು ಮಾಡಿದ್ದರು. ಕೋಚ್ ಧಿಲ್ಲಾನ್ ಅವರ ಸಲಹೆಯನ್ನು ಅನುಸರಿಸಿ ಅರ್ಜುನ್ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ತರಬೇತಿ ಪ್ರಾರಂಭಿಸಿದ್ದರು.

2005ರಲ್ಲಿ, ಅವರು ರಾಷ್ಟ್ರೀಯ ಶೂಟಿಂಗ್ ತಂಡಕ್ಕೆ ಸೇರಿದ್ದರು. ರಾಷ್ಟ್ರೀಯ ತರಬೇತುದಾರ ದೀಪಾಲಿ ದೇಶಪಾಂಡೆ ಅವರ ಅಡಿಯಲ್ಲಿ ತರಬೇತಿ ಪಡೆದಿದ್ದರು. ತರಬೇತಿಗಾಗಿ ಅವರು ದಿನಕ್ಕೆ ೧೦ ಗಂಟೆ ಮೀಸಲಿಡುತ್ತಿದ್ದರು. 2016ರಲ್ಲಿ, ಅವರು ಜೂನಿಯರ್ ರಾಷ್ಟ್ರೀಯ ರೈಫಲ್ ಶೂಟಿಂಗ್ ತಂಡಕ್ಕೆ ಆಯ್ಕೆಯಾಗಿದ್ದರು. ಇದು ಅಂತರರಾಷ್ಟ್ರೀಯ ಪಂದ್ಯಾವಳಿಗಳಿಗೆ ವೇದಿಕೆಯನ್ನು ಒದಗಿಸಿತು.

ಇದನ್ನೂ ಓದಿ: Rohit Sharma : ಏಕ ದಿನ ಸರಣಿಗಾಗಿ ಶ್ರೀಲಂಕಾ ತಲುಪಿದ ರೋಹಿತ್, ವಿರಾಟ್​ ಕೊಹ್ಲಿ

2016 ರಲ್ಲಿ ಜೆಕ್ ಗಣರಾಜ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಅರ್ಜುನ್ ಅರ್ಹತಾ ಸುತ್ತಿನಲ್ಲಿ 632.4 ಅಂಕಗಳನ್ನು ಗಳಿಸಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಸ್ಕೋರ್ ಅನ್ನು ಸಾಧಿಸಿದ್ದರು. ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದರು ಮತ್ತು ನಿಯಮಿತವಾಗಿ 620 ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ್ದರು. 2018 ರಲ್ಲಿ ಬೆನ್ನು ನೋವು ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೂ, ಅರ್ಜುನ್ ದೇಶೀಯ ಸರ್ಕೀಟ್​ನಲ್ಲಿ ಸ್ಪರ್ಧಿಸುವುದನ್ನು ಮುಂದುವರಿಸಿದ್ದರು. ಅದೇ ರೀತಿ ಖೇಲೋ ಇಂಡಿಯಾ ಪಂದ್ಯಾವಳಿಯಲ್ಲಿ ಕಂಚಿನ ಪದಕ ಗೆದ್ದರು. 2022 ರಲ್ಲಿ ಬಲವಾದ ಪುನರಾಗಮನ ಮಾಡಿ ವಿಶ್ವ ಪಂದ್ಯಾವಳಿಗಳಲ್ಲಿ ಸತತ ಪದಕಗಳನ್ನು ಗೆದ್ದಿದ್ದರು.

Exit mobile version