ಪ್ಯಾರಿಸ್: ಪ್ಯಾರಿಸ್ ಪಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಭಾರತದ ಪುರುಷರ ಹಾಕಿ ತಂಡದ ಕನಸು ನುಚ್ಚುನೂರಾಗಿದೆ. ಜರ್ಮನಿ ವಿರುದ್ಧ 3-2 ಅಂತರದಿಂದ ಸೋಲುವ ಮೂಲಕ 44 ವರ್ಷಗಳ ಬಳಿಕ ಫೈನಲ್ ಪ್ರವೇಶಿಸುವ ಅವಕಾಶ ಕಳೆದುಕೊಂಡಿತು. ಇನ್ನು ಸ್ಪೇನ್ ಜತೆ ಕಂಚಿನ ಪದಕಕ್ಕೆ ಸೆಣಸಾಟ ನಡೆಸಲಿದೆ. ಸೆಮಿ ಪೈನಲ್ನಲ್ಲಿ ಭಾರತ ತಂಡ ಕೊನೇ ಹಂತದಲ್ಲಿ ಹೋರಾಟ ನಡೆಸಿದ ಹೊರತಾಗಿಯೂ ಫೈನಲ್ಗೆ ಪ್ರವೇಶ ಪಡೆಯಲು ವಿಫಲಗೊಂಡಿತು. ಇದುವರೆಗೆ ಜರ್ಮನಿ ವಿರುದ್ಧ ಉತ್ತಮ ಅಭಿಯಾನ ಹೊಂದಿದ್ದ ಭಾರತ ತಂಡ ಗೆಲ್ಲಲೇಬೇಕಾದ ಅಗತ್ಯ ಪಂದ್ಯದಲ್ಲಿ ಸೋಲುವ ಮೂಲಕ ನಿರಾಸೆ ಎದುರಿಸಿತು.
ಸೇಡು ತೀರಿಸಿಕೊಂಡ ಜರ್ಮನಿ
ಕಳೆದ ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತ ತಂಡ ಜರ್ಮನಿ ತಂಡವನ್ನೇ ಮಣಿಸುವ ಮೂಲಕ ಕಂಚಿನ ಪದಕ ಗೆದ್ದು 41 ವರ್ಷಗಳ ಬಳಿಕ ಪದಕದ ಬರ ನೀಗಿಸಿತ್ತು. ಇದೀಗ ಅಂದಿನ ಸೋಲಿಗೆ ಜರ್ಮನಿ ಪ್ಯಾರಿಸ್ನಲ್ಲಿ ಸೇಡು ತೀರಿಸಿಕೊಂಡಿದೆ. ಭಾರತದ ಫೈನಲ್ ಕನಸಿಗೆ ತಣ್ಣೀರೆರಚಿದೆ. ಫೈನಲ್‌ನಲ್ಲಿ ಜರ್ಮನಿ ತಂಡ ನೆದರ್ಲೆಂರ್ಡ್ಸ್ ವಿರುದ್ಧ ಕಾದಾಟ ನಡೆಸಲಿದೆ.
ಮೊದಲ ಕ್ವಾರ್ಟರ್ ಆರಂಭಿಕ ಹಂತದಲ್ಲೇ ಭಾರತಕ್ಕೆ ಫೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಆದರೆ ಹರ್ಮಾನ್‌ಪ್ರೀತ್ ಸಿಂಗ್ ಇದನ್ನು ಗೋಲಾಗಿ ಪರಿವರ್ತಿಸುವಲ್ಲಿ ಎಡವಿದರು. ಈ ಅವಕಾಶ ಕೈ ತಪ್ಪಿದ ಕೆಲವೇ ಕ್ಷಣದಲ್ಲಿ ಮತ್ತೊಂದು ಫೆನಾಲ್ಟಿ ಕಾರ್ನರ್ ಲಭಿಸಿತು. ಇಲ್ಲಿ ಯಾವುದೇ ತಪ್ಪು ಮಾಡದೆ ಹರ್ಮಾನ್‌ಪ್ರೀತ್ ಗೋಲು ಬಾರಿಸಿ ಭಾರತಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟರು. ಮೊದಲ ಕ್ವಾರ್ಟರ್ 1-0 ಅಂತರದಲ್ಲಿ ಕೊನೆಗೊಂಡಿತು.
ದ್ವಿತೀಯ ಕ್ವಾರ್ಟರ್ನಲ್ಲಿ ಜರ್ಮನಿಯ ಗೊಂಜಾಲೊ ಪೀಲಾಟ್ ಮಿಂಚಿನ ವೇಗದಲ್ಲಿ ನುಗ್ಗಿ ಗೋಲು ಬಾರಿಸಿ ಪಂದ್ಯವನ್ನು 1-1 ಸಮಬಲಕ್ಕೆ ತಂದರು. ಇದಾದ ಕೆಲವೇ ನಿಮಿಷದಲ್ಲಿ ಜರ್ಮನಿ ತಂಡ ಮತ್ತೊಂದು ಗೋಲು ಬಾರಿಸುವ ಮೂಲಕ 2-1 ಮುನ್ನಡೆ ಸಾಧಿಸಿತು. ಮೂರನೇ ಕ್ವಾರ್ಟರ್ನಲ್ಲಿ ಭಾರತ ಮತ್ತೆ ಗೋಲು ಬಾರಿಸಿ ಪಂದ್ಯವನ್ನು ಹಿಡಿತಕ್ಕೆ ತಂದಿತು. ಅಂತಿಮ ಕ್ವಾರ್ಟರ್ನಲ್ಲಿ ಇನ್ನೇನು ಪಂದ್ಯ ಮುಕ್ತಾಯಕ್ಕೆ ಸುಮಾರು 7 ನಿಮಿಷ ಬಾಕಿ ಇರುವಾಗ ಜರ್ಮನಿ ಮತ್ತೊಂದು ಗೋಲು ಬಾರಿಸಿ ಮುನ್ನಡೆ ಸಾಧಿಸಿ ಗೆಲುವು ಸಾಧಿಸಿತು.
ಕಳೆದ ಕ್ವಾರ್ಟರ್ ಫೈನಲ್‌ನಲ್ಲಿ ಪಂದ್ಯದಲ್ಲಿ ಭಾರತ ಕೇವಲ 10 ಮಂದಿಯ ನೆರವಿನಿಂದ ಗ್ರೇಟ್ ಬ್ರಿಟನ್ ವಿರುದ್ಧ ಜಿದ್ದಾಜಿದ್ದಿನ ಪ್ರದರ್ಶನ ನೀಡಿ ಶೂಟೌಟ್‌ನಲ್ಲಿ ಗೆದ್ದು ಬೀಗಿ ಸೆಮಿಫೈನಲ್ ಪ್ರವೇಶಿಸಿತ್ತು. ಈ ಪಂದ್ಯದಲ್ಲಿ ಹಿಮಾಲಯ ಪರ್ವತದಂತೆ ತೆಡೆಗೋಡೆಯಾಗಿ ನಿಂತು ಹಲವು ಗೋಲುಗಳನ್ನು ತಡೆದಿದ್ದ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ಗೆಲುವಿನ ಹೀರೊ ಎನಿಸಿಕೊಂಡಿದ್ದರು. ಆದರೆ ಸೆಮಿ ಫೈನಲ್‌ನಲ್ಲಿ ಇದೇ ಪ್ರದರ್ಶನ ತೋರುವಲ್ಲಿ ವಿಫಲರಾದರು.
ಐತಿಹಾಸಿಕ ಪದಕ ಖಾತ್ರಿಪಡಿಸಿದ ಕುಸ್ತಿಪಟು ವಿನೇಶ್ ಫೋಗಟ್
ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್(Vinesh Phogat) ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ(Paris Olympics) ಫೈನಲ್ ಪ್ರವೇಶಿಸುವ ಮೂಲಕ ದೇಶಕ್ಕೆ ಐತಿಹಾಸಿಕ ಪದಕವೊಂದನ್ನು ಖಾತ್ರಿಪಡಿಸಿದ್ದಾರೆ. ಮಂಗಳವಾರ ರಾತ್ರಿ ನಡೆದ ಮಹಿಳೆಯರ 50 ಕೆಜಿ ಕುಸ್ತಿ ಸೆಮಿಫೈನಲ್ ಪಂದ್ಯದಲ್ಲಿ ಯುಸ್ನಿಲಿಸ್ ಗುಜ್ಮಾನ್(Yusneylys Guzman) ಅವರನ್ನು 5-0 ಅಂತರದಿಂದ ಮಣಿಸಿ ಈ ಸಾಧನೆ ಮಾಡಿದರು. ಈ ಮೂಲಕ ವಿನೇಶ್ ಫೋಗಟ್ ಒಲಿಂಪಿಕ್ ಇತಿಹಾಸದಲ್ಲಿ ಫೈನಲ್ ಪ್ರವೇಶಿಸಿ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಫೈನಲ್‌ನಲ್ಲಿ ಚಿನ್ನ ಅಥವಾ ಬೆಳ್ಳಿ ಗೆದ್ದರೂ ಐತಿಹಾಸಿಕ ಪದಕ ಗೆದ್ದ ಸಾಧನೆ ಮಾಡಲಿದ್ದಾರೆ. 50 ಕೆಜಿ ವಿಭಾಗದಲ್ಲಿ ವಿನೇಶ್ ಒಲಿಂಪಿಕ್ಸ್ ಆಡುತ್ತಿರುವುದು ಇದೇ ಮೊದಲ ಬಾರಿ. ಇದಕ್ಕೂ ಮುನ್ನ ರಿಯೋ ಒಲಿಂಪಿಕ್ಸ್ನಲ್ಲಿ 48 ಕೆಜಿ, ಟೋಕಿಯೊದಲ್ಲಿ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಇದು ವಿನೇಶ್ ಅವರ ಮೂರನೇ ಒಲಿಂಪಿಕ್ಸ್ ಟೂರ್ನಿಯಾಗಿದೆ.