ನವದೆಹಲಿ: ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್(Paris Olympics 2024) ಕ್ರೀಡಾಕೂಟ ಜುಲೈ 26ರಿಂದ ಆರಂಭಗೊಳ್ಳಲಿದೆ. ಕೆಲವು ತಿಂಗಳ ಹಿಂದೆ ವಿಶ್ವ ಅಥ್ಲೆಟಿಕ್ (ಡಬ್ಲ್ಯುಎ) ಸಂಸ್ಥೆ ಟ್ರ್ಯಾಕ್ ಮತ್ತು ಫೀಲ್ಡ್(track & field gold medallists) ವಿಭಾಗದಲ್ಲಿ ಚಿನ್ನ ಜಯಿಸುವ ಅಥ್ಲೀಟ್‌ಗಳಿಗೆ 41.60 ಲಕ್ಷ ನಗದು ಪ್ರಶಸ್ತಿ ನೀಡುವುದಾಗಿ ಪ್ರಕಟಿಸಿತ್ತು. ಇದೀಗ ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (International Boxing Association) ಕೂಡ ಮಹತ್ವದ ನಿರ್ಧಾರ ಕೈಗೊಂಡಿದ್ದು, ಚಿನ್ನ ಗೆಲ್ಲುವ ಪ್ರತಿಯೊಬ್ಬ ಬಾಕ್ಸರ್ಗಳಿಗೆ 41.68 ಲಕ್ಷ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ. ಜತೆಗೆ ಕೋಚ್, ರಾಷ್ಟ್ರೀಯ ತಂಡಗಳಿಗೆ 10 ಲಕ್ಷ ನೀಡುವುದಾಗಿಯೂ ಪ್ರಕಟಿಸಿದೆ.
ಇಲ್ಲಿ ಗಮನಿಸಬೇಕದ ವಿಚಾರವೆಂದರೆ ಹಣಕಾಸು ವಿಷಯದಲ್ಲಿ ಪಾರದರ್ಶಕತೆ ಕಾಪಾಡದ ಕಾರಣಕ್ಕೆ ಐಒಸಿ, ಬಾಕ್ಸಿಂಗ್ ಸಂಸ್ಥೆಯನ್ನು ನಿರ್ಬಂಧಿಸಿದೆ. 2020ರ ಟೋಕಿಯೊ ಒಲಿಂಪಿಕ್ಸ್ ಬಾಕ್ಸಿಂಗ್ ಸ್ಪರ್ಧೆಗಳನ್ನು ಐಬಿಎ(IBA) ನೆರವಿಲ್ಲದೇ ಐಒಸಿಯೇ ಸಂಘಟಿಸಿತ್ತು. ಕ್ರೀಡಾ ಸಂಸ್ಥೆಗಳು ನೀಡುವ ಬಹುಮಾನ ಹಣಕ್ಕೂ ಐಒಸಿ ಸಮ್ಮತಿ ನೀಡಿಲ್ಲ.
ಜುಲೈ 26ರಂದು ಸೀನ್ ನದಿಯಲ್ಲಿ ಸಂಜೆ 7.30ಕ್ಕೆ ಅದ್ಧೂರಿ ಕಾರ್ಯಕ್ರಮದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಲಾಗುವುದು. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ಈಗಾಗಲೇ ಕ್ರೀಡಾಕೂಟದ ಆಯೋಜಕರು ಮಾಡಿದ್ದಾರೆ. ಗೇಮ್ಸ್‌ಗಾಗಿಯೇ ಇಲ್ಲಿನ ಸೀನ್ ನದಿಯನ್ನು ಸಾರ್ವಜನಿಕ ನಿಧಿಯಿಂದ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿ ಈ ನದಿಯನ್ನು ಸ್ನಾನಮಾಡಲು ಯೋಗ್ಯವೆನಿಸುವ ರೀತಿಯಲ್ಲಿ ಸ್ವಚ್ಛ ಮಾಡಲಾಗಿದೆ.
ಬೋಟ್‌ಗಳಲ್ಲೇ ಪರೇಡ್
ಒಲಿಂಪಿಕ್ಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್ ವರೆಗೆ ಬೋಟ್‌ಗಳಲ್ಲೇ ಪರೇಡ್ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.
ಇದನ್ನೂ ಓದಿ Paris Olympics 2024: 19ನೇ ಶತಮಾನದ ಹಡಗಿನಲ್ಲಿ ಇಂದು ಫ್ರಾನ್ಸ್‌ಗೆ ಬರಲಿದೆ ಒಲಿಂಪಿಕ್ ಜ್ಯೋತಿ
ಟೋಕಿಯೊ ಒಲಿಂಪಿಕ್ ಕೂಟದ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಜಯಿಸಿದ್ದದ್ದ ನೀರಜ್ ಚೋಪ್ರಾ ಅವರು ಈ ಬಾರಿ ಚೆನ್ನ ಗೆದ್ದರೆ ಅವರಿಗೆ 50,000 ಅಮೆರಿಕನ್ ಡಾಲರ್ ಬಹುಮಾನ ದೊರೆಯಲಿದೆ. ನೀರಜ್ ಅವರು ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಪ್ಯಾರಿಸ್‌ನಲ್ಲಿಯೂ ಅವರ ಮೇಲೆ ಚಿನ್ನದ ನಿರೀಕ್ಷೆ ಮಾಡಲಾಗಿದೆ.
“ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯಿಂದ ಬರುವ ಹಣವು ಒಲಿಂಪಿಕ್ ಕ್ರೀಡೆಗಳಿಗೆ ಮರಳಿ ಹೋಗುವಂತೆ ಮಾಡಿರುವುದು ಸಂತಸ ತಂದಿದೆ. ಡೈಮಂಡ್ ಲೀಗ್, ಕಾಂಟಿನೆಂಟಲ್ ಕಪ್‌ಗಳಲ್ಲಿ ಪದಕ ಗೆದ್ದಾಗ ನಗದು ಬಹುಮಾನ ಇರುತ್ತಿತ್ತು. ಆದರೆ ಒಲಿಂಪಿಕ್ಸ್ ಬಹುಮಾನದಲ್ಲಿ ಈ ಸೌಕರ್ಯ ಇರಲಿಲ್ಲ. ಇದೀಗ ಒಲಿಂಪಿಕ್ಸ್ನಲ್ಲಿಯೂ ಈ ನಿಯಮ ಬರಲಿದೆ” ಎಂದು ಡಬ್ಲ್ಯುಎ ಅಧ್ಯಕ್ಷ ಸೆಬಾಸ್ಟಿಯನ್ ಕೊ ಹೇಳಿದ್ದರು.