ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ(Paris Olympics 2024) ಭಾರತಕ್ಕೆ ಮತ್ತೊಂದು ಪದಕ ಒಲಿದಿದೆ. 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್(Sarabjot Singh) ಮತ್ತು ಮನು ಭಾಕರ್(Manu Bhaker) ಜೋಡಿ ಕಂಚಿನ ಪದಕಕ್ಕೆ ಮುತ್ತಿಕ್ಕಿದೆ. 2 ದಿನಗಳ ಹಿಂದಷ್ಟೇ ಮಹಿಳೆಯರ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದ ಮನು ಇದೀಗ 2ನೇ ಪದಕ ಗೆಲ್ಲುವ ಮೂಲಕ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಜಯಿಸಿದ ಭಾರತದ ಮೊದಲ ಕ್ರೀಡಾಪಟು ಎನಿಸಿಕೊಂಡರು.
ಮಂಗಳವಾರ ನಡೆದ ಕಂಚಿನ ಪದಕ ಸ್ಪರ್ಧೆಯಲ್ಲಿ ಭಾರತೀಯ ಜೋಡಿ ದಕ್ಷಿಣ ಕೊರಿಯಾದ ಯೆ ಜಿನ್ ಒಹ್ ಮತ್ತು ವೊನೊಹೊ ಲೀ ವಿರುದ್ಧ 16-10 ಅಂಕಗಳಿಂದ ಗೆದ್ದು ಕಂಚಿನ ಪದಕ ತನ್ನದಾಗಿಸಿಕೊಂಡಿತು. ಸೋಮವಾರ ನಡೆದಿದ್ದ ಮಿಶ್ರ ತಂಡ ಸ್ಪರ್ಧೆಯಲ್ಲಿ ಮನು ಭಾಕರ್-ಸರಬ್ಜೋತ್ ಸಿಂಗ್ ಒಟ್ಟು 580 ಅಂಕ ಸಂಪಾದಿಸಿದ್ದರು. ಕೊರಿಯಾದ ಜೋಡಿ 579 ಅಂಕ ಗಳಿಸಿತ್ತು.
ಮೊದಲ ಸುತ್ತಿನಲ್ಲಿ ಕೊರಿಯಾ ಜೋಡಿ 2-0 ಮುನ್ನಡೆ ಸಾಧಿಸಿತು. ಇದಾದ ಬಳಿಕ ಭಾರತದ ಜೋಡಿ ಉತ್ತಮ ಅಂಕಗಳನ್ನು ಕಲೆಹಾಕುವ ಮೂಲಕ ಎಲ್ಲ ಸುತ್ತಿನಲ್ಲಿಯೂ ಪ್ರಾಬಲ್ಯ ಸಾಧಿಸಿತು. 12ನೇ ಸುತ್ತಿನಲ್ಲಿ ಕೊರಿಯಾ 10 ಅಂಕ ಗಳಿಸಿ ಕಮ್‌ಬ್ಯಾಕ್ ಮಾಡುವ ಪ್ರಯತ್ನ ನಡೆಸಿತಾದರೂ, ಬಳಿಕದ ಸುತ್ತಿನಲ್ಲಿ ಯಶಸ್ಸು ಕಾಣದೆ ಸೋಲು ಕಂಡಿತು.
ಇದನ್ನೂ ಓದಿ Paris Olympics 2024: ಭಾರತ-ಅರ್ಜೆಂಟೀನಾ ಹಾಕಿ ಪಂದ್ಯ ವೀಕ್ಷಿಸಿದ ರಾಹುಲ್ ದ್ರಾವಿಡ್
ಈ ಬಾರಿಯ ಒಲಿಂಪಿಕ್ಸ್ ಪದಕ ನಿರೀಕ್ಷೆಯ ಕ್ರೀಡಾಪಟುಗಳಲ್ಲಿ ಮನು ಭಾಕರ್ ಕೂಡ ಕಾಣಿಸಿಕೊಂಡಿದ್ದರು. ಭಾರತೀಯರು ನಿರೀಕ್ಷೆ ಮಾಡಿದಂತೆ ಅವರು ಒಂದಲ್ಲ 2 ಪದಕ ಗೆದ್ದು ಅವರ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.
ಸದ್ಯ ಭಾರತ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 2 ಪದಕ ತನ್ನದಾಗಿಸಿಕೊಂಡಿದೆ. 2 ಪದಕ ಕೂಡ ಶೂಟಿಂಗ್ ವಿಭಾಗದಲ್ಲಿ ಬಂದಿದೆ. ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಸಿನೊಂದಿಗೆ ಟೋಕಿಯೋಗೆ ಆಗಮಿಸಿದ್ದ ಮನು ಭಾಕರ್ಗೆ ಅದೃಷ್ಟ ಕೈಕೊಟ್ಟಿತ್ತು. ಕೂಟದ ಮೊದಲ ಸ್ಪರ್ಧೆಯಲ್ಲೇ ಅವರ ಪಿಸ್ತೂಲ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಅವರಿಗೆ ಫೈನಲ್ಗೇರುವ ಅವಕಾಶ ಕೈತಪ್ಪಿತ್ತು. ಮೊದಲ ಸುತ್ತಿನಲ್ಲಿ ಎದುರಾಗ ಈ ಆಘಾತದಿಂದ ಚೇತರಿಕೊಳ್ಳದ ಮನು ಆ ಬಳಿಕ ಆಡಿದ 2 ಸ್ಪರ್ಧೆಗಳಲ್ಲಿಯೂ ಏಕಾಗ್ರತೆ ಸಾಧಿಸಲು ವಿಫಲರಾಗಿ ಸೋಲು ಕಂಡಿದ್ದರು. ಇದು ಅವರ ಪದಾರ್ಪಣ ಒಲಿಂಪಿಕ್ಸ್ ಕೂಟವಾಗಿತ್ತು. ಆಗ ಅವರಿಗೆ ಕೇವಲ 19 ವರ್ಷ ವಯಸ್ಸಾಗಿತ್ತು. ಅಂದಿನ ನಿರಾಸೆಯನ್ನು ಈ ಬಾರಿ ಪ್ಯಾರಿಸ್ನಲ್ಲಿ 2 ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆಯನ್ನೇ ಮಾಡಿ ತಮ್ಮ ಎಲ್ಲ ನೋವನ್ನು ಮರೆತಿದ್ದಾರೆ.