ಪ್ಯಾರಿಸ್: ಮಹತ್ವದ ಕ್ರೀಡಾಕೂಟವಾದ ಪ್ಯಾರಿಸ್ ಒಲಿಂಪಿಕ್ಸ್(Paris Olympics 2024) ಕ್ರೀಡಾಕೂಟಕ್ಕೆ ಇಂದು ಅದ್ಧೂರಿ ಉದ್ಘಾಟನಾ ಸಮಾರಂಭದ ಮೂಲಕ ಅಧಿಕೃತ ಚಾಲನೆ ಸಿಗಲಿದೆ. ಕಳೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ(neeraj chopra) ಅವರು ಈ ಬಾರಿಯೂ ದೇಶಕ್ಕೆ ಚಿನ್ನ ಗೆಲ್ಲುವ ಪಣತೊಟ್ಟಿದ್ದಾರೆ. ಇದಕ್ಕಾಗಿ ಅವರು ಸಮುದ್ರದ ಆಳದಲ್ಲಿ ಕಠಿಣ ಅಭ್ಯಾಸ ನಡೆಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
ನೀರಿನಾಳದಲ್ಲಿ ಸ್ಕೂಬಾ ಡೈವ್ ಉಡುಪು ತೊಟ್ಟು ಜಾವೆಲಿನ್ ಎಸೆಯುವಂತೆ ಅಭ್ಯಾಸ ನಡೆಸುತ್ತಿರುವ ವಿಡಿಯೊವನ್ನು ಸ್ವತಃ ನೀರಜ್ ತಮ್ಮ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಆಕಾಶದಲ್ಲೇ ಆಗಲಿ, ನೆಲದ ಮೇಲಾಗಲಿ, ಅಥವಾ ನೀರಿನಾಳದಲ್ಲೇ ಆಗಲಿ! ನಾನು ಯಾವಾಗಲೂ ಜಾವೆಲಿನ್ ಬಗ್ಗೆಯೇ ಯೋಚಿಸುತ್ತಿರುವೆ. ತರಬೇತಿ ಶುರುವಾಗಿದೆ ಎಂದು” ಎಂದು ಬರೆದುಕೊಂಡಿದ್ದಾರೆ.
23 ವರ್ಷದ ನೀರಜ್ ಚೋಪ್ರಾ ಇದುವರೆಗಿನ ಶ್ರೇಷ್ಠ ನಿರ್ವಹಣೆ 89.94 ಮೀ. ದೂರ ಎಸೆದಿರುವುದು. ಈ ಎಸೆತವನ್ನು 2022ರ ಸ್ಟಾಕ್ಹೋಮ್ ಡೈಮಂಡ್ ಲೀಗ್‌ನಲ್ಲಿ ಎಸೆದಿದ್ದರು. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ 90 ಮೀ. ದೂರ ಎಸೆಯುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ Paris Olympics: ಇಂದು ಪ್ಯಾರಿಸ್ ಒಲಿಂಪಿಕ್ಸ್ಗೆ ಅಧಿಕೃತ ಚಾಲನೆ: ಉದ್ಘಾಟನಾ ಸಮಾರಂಭ ಎಷ್ಟು ಗಂಟೆಗೆ ಆರಂಭ?
ಕಾಶಿನಾಥ್ ನಾಯ್ಕ್ ಅವರು ನೀರಜ್ ಪ್ಯಾರಿಸ್ನಲ್ಲಿ ನಡೆಯುವ ಒಲಿಂಪಿಕ್ಸ್ನಲ್ಲಿಯೂ(neeraj chopra paris olympics) ಚಿನ್ನದ ಪದಕ ಗೆಲ್ಲಲಿದ್ದಾರೆ ಎಂದು ಆತ್ಮವಿಶ್ವಾಸದಿಂದ ಈ ಮಾತನ್ನು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಕಾಶಿನಾಥ್, “ನಾನು 2015 ರಿಂದ ನೀರಜ್ ಜತೆ ಕೆಲಸ ಮಾಡುತ್ತಿದ್ದೇನೆ. ಅವರ ಛಲವನ್ನು ಮೆಚ್ಚಲೇ ಬೇಕು. ಸಾಧಿಸುವ ಛಲವೇ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಅತ್ಯಂತ ಶಿಸ್ತಿನ ಕ್ರೀಡಾಪಟು ಕೂಡ ಆಗಿದ್ದಾರೆ. 90 ಮೀ. ದೂರ ಜಾವೆಲಿನ್ ಎಸೆಯುವದು ಪ್ರಮುಖ ಗುರಿ ಎಂದು ನೀರಜ್ ಈಗಾಗಲೇ ಹೇಳಿದ್ದಾರೆ. ಹೇಳಿದಂತೆ ಅವರು ಈ ದೂರವನ್ನು ಕ್ರಮಿಸುವ ವಿಶ್ವಾಸ ನನ್ನಲ್ಲಿದೆ” ಎಂದು ಹೇಳಿದ್ದಾರೆ.
ಕಾಶಿನಾಥ್ ಮನೆ ಭೇಟಿ ನೀಡಿದ್ದ ನೀರಜ್
ನೀರಜ್ ಪೋಲೆಂಡ್‌ನಲ್ಲಿ ನಡೆದಿದ್ದ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ಬಳಿಕ 2018ರ ಕಾಮನ್‌ವೆಲ್ತ್ ಗೇಮ್ಸ್, 2018 ಇಂಡೋನೇಷ್ಯಾ ಏಷ್ಯನ್ ಗೇಮ್ಸ್, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮತ್ತು ಡೈಮಂಡ್ ಲೀಗ್‌ನಲ್ಲಿ ಚಿನ್ನ ಗೆದ್ದಿದ್ದರು. ವಿಶ್ವ ಚಾಂಪಿಯನ್ಶಿಪ್ನಲ್ಲಿ ಚೊಚ್ಚಲ ಪ್ರಯತ್ನದಲ್ಲಿ ಬೆಳ್ಳಿ ಗೆದ್ದರೂ ಈ ಬಾರಿ ಚಿನ್ನ ಗೆದ್ದು ಎಲ್ಲ ವಿಶ್ವಮಟ್ಟದ ಟೂರ್ನಿಯಲ್ಲಿಯೂ ಚಿನ್ನ ಗೆದ್ದು ತಮ್ಮ ಆಸೆಯನ್ನು ಈಡೇರಿಸಿದರು. ಜತೆಗೆ ದೇಶದ ಕೀರ್ತಿ ಪತಾಕೆಯನ್ನು ಬಹು ಎತ್ತರಕ್ಕೆ ಹಾರಿಸಿದರು. ಅವರ ಈ ಸಾಧನೆ ಹೀಗೆಯೇ ಮುಂದುವರಿಯಲಿ ಎಂದು ಕಾಶಿನಾಥ್ ಹಾರೈಸಿದರು. ಟೊಕಿಯೊದಲ್ಲಿ ಚಿನ್ನದ ಪದಕ ಗೆದ್ದವು ಭಾರತಕ್ಕೆ ಮರಳಿದ ನೀರಜ್ ಚೋಪ್ರಾ ಅವರು ತನ್ನ ಗುರು ಕಾಶಿನಾಥ್ ಅವರ ಮನೆಗೆ ಭೇಟಿ ನೀಡಿ ತಾವು ಗೆದ್ದ ಪದಕವನ್ನು ಅವರಿಗೆ ತೋರಿಸಿದ್ದರು. ಅಲ್ಲದೆ ಅವರ ಮನೆಯಲ್ಲಿ ಭೋಜನ ಮಾಡಿ ಮುಂದಿನ ಟೂರ್ನಿಗೆ ಆಶಿರ್ವಾದ ಪಡೆದು ಹಿಂದಿರುಗಿದ್ದರು.