Site icon Vistara News

Mirabai Chanu: ಕೂದಲೆಳೆಯಲ್ಲಿ ಪದಕ ಕೈಚೆಲ್ಲಿದ ಮೀರಾಬಾಯಿ ಚಾನು; ಭಾರತಕ್ಕೆ ಮತ್ತೆ ನಿರಾಸೆ

Mirabai Chanu

ಪ್ಯಾರಿಸ್: ದೇಶದ ಖ್ಯಾತ ಕುಸ್ತಿಪಟು ವಿನೇಶ್‌ ಫೋಗಟ್‌ ಅವರು ಫೈನಲ್‌ಗೆ ತಲುಪಿದರೂ ಅನರ್ಹತೆಯ ಭೂತದಿಂದಾಗಿ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ (Paris Olympics) ಚಿನ್ನದ ಪದಕ ಗೆಲ್ಲುವ ಆಸೆ ಕಮರಿದ ಬೆನ್ನಲ್ಲೇ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು (Mirabai Chanu) ಅವರು ಕೂಡ 49 ಕೆ.ಜಿ ಕೆಟಗರಿಯ ವೇಟ್‌ಲಿಫ್ಟಿಂಗ್‌ನಲ್ಲಿ ಕೂದಲೆಳೆಯ ಅಂತರದಲ್ಲಿ ಪದಕ ತಪ್ಪಿಸಿಕೊಂಡಿದ್ದು, ಭಾರತದ ವೇಟ್‌ಲಿಫ್ಟರ್‌, ಅಥ್ಲೀಟ್‌ಗಳು ಹಾಗೂ ನಾಗರಿಕರಿಗೆ ನಿರಾಶೆಯಾಯಿತು.

ಚೀನಾದ ಹೌ ಝಿಹುಯಿ 117 ಕೆ.ಜಿ ಎತ್ತಿ ಚಿನ್ನದ ಪದಕ ಪಡೆದರೆ, ರೊಮಾನಿಯಾದ ಮಿಹೇಲಾ ಕಾಂಬೇಯಿ ಅವರು ಒಟ್ಟು 205 ಕೆ.ಜಿ ಎತ್ತಿ ಬೆಳ್ಳಿ ಹಾಗೂ ಥಾಯ್ಲೆಂಡ್‌ನ ಸುರೋದ್‌ಚಾನಾ ಖಾಂಬಾವೋ ಅವರು ಒಟ್ಟು 200 ಕೆ.ಜಿ ತೂಕ ಎತ್ತಿ ಕಂಚಿನ ಪದಕ ಪಡೆದರು. ಮೀರಾಬಾಯಿ ಚಾನು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಮಣಿಪುರದ ವೇಟ್‌ಲಿಫ್ಟರ್‌ ಒಟ್ಟು 199 ಕೆ.ಜಿ ಎತ್ತಿ ಒಂದೇ ಕೆ.ಜಿ ತೂಕದಲ್ಲಿ ಕಂಚಿನ ಪದಕ ಮಿಸ್‌ ಮಾಡಿಕೊಂಡರು. ಇವರು 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಕಾರಣ ಈ ಬಾರಿ ನಿರೀಕ್ಷೆಗಳು ಹೆಚ್ಚಾಗಿದ್ದವು.

ಸ್ನ್ಯಾಚ್‌ ಸುತ್ತಿನಲ್ಲಿ ಮೀರಾಬಾಯಿ ಚಾನು ಮೊದಲ ಪ್ರಯತ್ನದಲ್ಲಿಯೇ 85 ಕೆ.ಜಿ. ತೂಕ ಎತ್ತಿದರು. ಎರಡನೇ ಪ್ರಯತ್ನದಲ್ಲಿ 88 ಕೆ.ಜಿ ತೂಕ ಎತ್ತುವಲ್ಲಿ ವಿಫಲರಾದ ಅವರು ಮೂರನೇ ಅಥವಾ ಕೊನೆಯ ಪ್ರಯತ್ನದಲ್ಲಿ 88 ಕೆ.ಜಿ ತೂಕ ಎತ್ತಿ ಮೂರನೇ ಸ್ಥಾನ ಪಡೆದರು.

ಕ್ಲೀನ್‌ ಆ್ಯಂಡ್‌ ಜರ್ಕ್‌ ಸುತ್ತಿನ ಮೊದಲ ಯತ್ನದಲ್ಲಿ ಅವರು 111 ಕೆ.ಜಿ ತೂಕವನ್ನು ಎತ್ತುವಲ್ಲಿ ವಿಫಲರಾದರು. ಆದರೆ, ಹಠ ಬಿಡದ ಅವರು ಎರಡನೇ ಪ್ರಯತ್ನದಲ್ಲಿ ಸುಲಭವಾಗಿ 111 ಕೆ.ಜಿ ತೂಕವನ್ನು ಎತ್ತಿದರು. ಆದರೆ, ಮೂರನೇ ಪ್ರಯತ್ನದಲ್ಲಿ 114 ಕೆ.ಜಿ. ತೂಕವನ್ನು ಎತ್ತುವಲ್ಲಿ ವಿಫಲರಾಗಿ ಅವರು ನಾಲ್ಕನೇ ಸ್ಥಾನ ಪಡೆದರು. ಇದು ಅವರಿಗೆ ಭಾರಿ ನಿರಾಸೆ ಮೂಡಿಸಿತು.

2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಒಟ್ಟು 202 ಕೆಜಿ ಭಾರವನ್ನೆತ್ತಿ (87 ಕೆಜಿ, 115 ಕೆಜಿ) ಬೆಳ್ಳಿ ಪದಕ ಗೆದ್ದಿದ್ದರು. ಗಾಯದಿಂದಾಗಿ ಕಳೆದ ಏಷ್ಯಾಡ್‌ನಲ್ಲಿ ಕಣಕ್ಕಿಳಿದಿರಲಿಲ್ಲ. ಚಾನು ಸ್ನ್ಯಾಚ್‌ನಲ್ಲಿ 88 ಕೆಜಿ ದಾಖಲೆ ಹೊಂದಿದ್ದಾರೆ. ಹಾಗೆಯೇ ಜೆರ್ಕ್‌ನಲ್ಲಿ 119 ಕೆಜಿ ಎತ್ತಿರುವುದು ವೈಯಕ್ತಿಕ ದಾಖಲೆಯಾಗಿದೆ.

ಮೀರಾಬಾಯಿಗೆ ಪ್ಯಾರಿಸ್‌ ಒಲಿಂಪಿಕ್ಸ್‌ ಟಿಕೆಟ್‌ ಧೃಡಪಡಿಸಿಕೊಳ್ಳಲು ಐಡಬ್ಲ್ಯುಎಫ್ ವಿಶ್ವಕಪ್‌ನಲ್ಲಿ ಕಡ್ಡಾಯವಾಗಿ ಸ್ಪರ್ಧಿಸಬೇಕಾಗಿತ್ತು. ಹೀಗಾಗಿ ಅವರು ಈ ಕೂಟದಲ್ಲಿ ಕಣಕ್ಕಿಳಿದಿದ್ದರು. ಒಟ್ಟು 184 ಕೆಜಿ (81ಕೆಜಿ+103ಕೆಜಿ) ತೂಕ ಎತ್ತಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಕಳೆದ ವರ್ಷ ಸಪ್ಟೆಂಬರ್‌ನಲ್ಲಿ ನಡೆದಿದ್ದ ಏಷ್ಯನ್‌ ಗೇಮ್ಸ್‌ ವೇಳೆ ತೊಡೆಯ ಸ್ನಾಯುಬೇನೆಗೆ ತುತ್ತಾಗಿದ್ದ ಚಾನು ಆ ಬಳಿಕ ಯಾವುದೇ ಪ್ರಮುಖ ಕೂಟದಲ್ಲಿ ಪಾಲ್ಗೊಂಡಿರಲಿಲ್ಲ.

ಇದನ್ನೂ ಓದಿ: Vinesh Phogat: ವಿನೇಶ್‌ ಫೋಗಟ್‌ ಅನರ್ಹ; ದಿಢೀರ್ 2-3 ಕೆ.ಜಿ ತೂಕ ಇಳಿಸಲು ಮುಂದಾದರೆ ದೇಹಕ್ಕೆ ಏನಾಗುತ್ತದೆ?

Exit mobile version