Site icon Vistara News

Paris Olympics 2024: ಒಲಿಂಪಿಕ್ಸ್ ಆಯೋಜನೆ; ಫ್ರಾನ್ಸ್​ ಅಧ್ಯಕ್ಷರಿಗೆ ಶುಭ ಕೋರಿದ ಪ್ರಧಾನಿ ಮೋದಿ

Paris Olympics 2024

Paris Olympics 2024: PM Modi conveys best wishes to French President Macron for conduct of Paris Olympics

ಬಾರಿ(ಇಟಲಿ): ಇಟಲಿಯಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ (G7 Summit Italy) ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಫ್ರಾನ್ಸ್​ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್‌(Emmanuel Macron)​ ಅವರನ್ನು ಭೇಟಿಯಾದ ವೇಳೆ ಪ್ಯಾರಿಸ್​ ಒಲಿಂಪಿಕ್ಸ್ ಆಯೋಜಿಸುತ್ತಿರುವುದಕ್ಕೆ ಶುಭ ಹಾರೈಸಿದ್ದಾರೆ. ಟೂರ್ನಿ ಅತ್ಯಂತ ಯಶಸ್ವಿಯಾಗಿ ಸಾಗಲಿ ಎಂದು ಮೋದಿ ಹಾರೈಸಿದ್ದಾರೆ. ಉಭಯ ನಾಯಕರು ಮಾತುಕತೆ ನಡೆಸಿದ ಫೋಟೊವನ್ನು ಮೋದಿ ಅವರು ತಮ್ಮ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ.​ ಬಹುನಿರೀಕ್ಷಿತ ಪ್ಯಾರಿಸ್​ ಒಲಿಂಪಿಕ್ಸ್​(Paris Olympics 2024) ಜುಲೈ 26ರಿಂದ ಆರಂಭಗೊಳ್ಳಲಿದೆ. ಆಗಸ್ಟ್​ 11ರ ತನಕ ಈ ಟೂರ್ನಿ ಸಾಗಲಿದೆ.

ಭಾರತವು ಜಿ7 ರಾಷ್ಟ್ರಗಳ ಒಕ್ಕೂಟದ ಸದಸ್ಯ ರಾಷ್ಟ್ರವಾಗಿರದಿದ್ದರೂ ಜಾರ್ಜಿಯಾ ಮೆಲೋನಿ ಅವರು ನರೇಂದ್ರ ಮೋದಿ ಅವರನ್ನು ವಿಶೇಷವಾಗಿ ಆಹ್ವಾನಿಸಿದ್ದರು. ಮೋದಿ ಅವರು ಶುಕ್ರವಾರ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್‌, ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಸೇರಿ ಹಲವು ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಶನಿವಾರವೂ ಹಲವು ನಾಯಕರೊಂದಿಗೆ ಮೋದಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ತಂತ್ರಜ್ಞಾನ ಜತೆಗೆ ಮಾನವ ಕೇಂದ್ರಿತ ಏಳಿಗೆಗೆ ಭಾರತ ಆದ್ಯತೆ


ಜಿ-7 ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, “ತಂತ್ರಜ್ಞಾನದ ಅಳವಡಿಕೆ ಜತೆಗೆ ಮಾನವ ಕೇಂದ್ರಿತವಾಗಿಯೇ ಏಳಿಗೆ ಹೊಂದಲು ಭಾರತ ಆದ್ಯತೆ ನೀಡುತ್ತಿದೆ. ಜಾಗತಿಕವಾಗಿ ತಂತ್ರಜ್ಞಾನದ ಜತೆಗೇ ಮಾನವ ಕೇಂದ್ರಿತ ಅಭಿವೃದ್ಧಿಯು ಪ್ರಮುಖ ವಿಷಯವಾಗಬೇಕಿದೆ” ಎಂದು ಪ್ರತಿಪಾದಿಸಿದರು.

“ತಂತ್ರಜ್ಞಾನವನ್ನು ಸೃಜನಶೀಲತೆಯ ಸೃಷ್ಟಿಗಾಗಿ, ಅಭಿವೃದ್ಧಿಗಾಗಿ, ಏಳಿಗೆಗಾಗಿ ಬಳಸಬೇಕೇ ಹೊರತು, ವಿನಾಶಕ್ಕಾಗಿ ಅದನ್ನು ಬಳಸಬಾರದು. ಜಗತ್ತಿನಾದ್ಯಂತ ಬೇರೂರಿರುವ ಸಾಮಾಜಿಕ ಅಸಮಾನತೆಯನ್ನು ನಿರ್ಮೂಲನೆ ಮಾಡುವ ದಿಸೆಯಲ್ಲಿ ಇಂದು ತಂತ್ರಜ್ಞಾನವನ್ನು ಬಳಸಬೇಕಾಗಿದೆ. ಭಾರತವು, ಇಂತಹ ಪ್ರಯತ್ನ ಮಾಡುತ್ತಿದೆ. ಕೃತಕ ಬುದ್ಧಿಮತ್ತೆ ಸೇರಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಏಳಿಗೆಯತ್ತ ಮುಂದೆ ಸಾಗುತ್ತಿದೆ. ಎಲ್ಲರಿಗೂ ಕೃತಕ ಬುದ್ಧಿಮತ್ತೆ (AI For All) ಎಂಬ ತತ್ವದೊಂದಿಗೆ, ಕೃತಕ ಬುದ್ಧಿಮತ್ತೆ ಬಳಕೆಗೆ ರಾಷ್ಟ್ರೀಯ ಸ್ಟ್ರ್ಯಾಟಜಿಯೊಂದಿಗೆ ಮುನ್ನಡೆಯುತ್ತಿದೆ” ಎಂದು ತಿಳಿಸಿದರು.

ಮೋದಿಯನ್ನು ಹಾಡಿ ಹೊಗಳಿದ್ದ ಮೆಲೋನಿ

ಜಾರ್ಜಿಯಾ ಮೆಲೋನಿ ಅವರು ಇದಕ್ಕೂ ಮೊದಲು ನರೇಂದ್ರ ಮೋದಿ ಅವರನ್ನು ಹೊಗಳಿದ್ದರು. ರೈಸಿನಾ ಶೃಂಗಸಭೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಿದ್ದ ಜಾರ್ಜಿಯಾ ಮೆಲೋನಿ, “ನರೇಂದ್ರ ಮೋದಿ ಅವರು ವಿಶ್ವದ ನಾಯಕರಲ್ಲಿಯೇ ಹೆಚ್ಚು ಪ್ರೀತಿಗೆ ಪಾತ್ರರಾಗಿದ್ದಾರೆ. ಅವರು ಧೀಮಂತ ನಾಯಕರು ಎಂಬುದು ಸಾಬೀತಾಗಿದೆ. ಇದಕ್ಕಾಗಿ ಮೋದಿ ಅವರಿಗೆ ಅಭಿನಂದನೆಗಳು” ಎಂದಿದ್ದರು. “ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಹಾಗೂ ಇಟಲಿ ಸಂಬಂಧ ಮತ್ತಷ್ಟು ವೃದ್ಧಿಯಾಗುತ್ತಿದೆ. ಉಭಯ ದೇಶಗಳ ಸಂಬಂಧವನ್ನು ವ್ಯೂಹಾತ್ಮಕ ಸಂಬಂಧವಾಗಿ ಮಾರ್ಪಡಿಸಲು ನಾವು ಉತ್ಸುಕರಾಗಿದ್ದೇವೆ. ಇದರಿಂದ ಎರಡೂ ದೇಶಗಳ ಸಂಬಂಧ ಇನ್ನಷ್ಟು ವೃದ್ಧಿಯಾಗಲಿದೆ” ಎಂದು ತಿಳಿಸಿದ್ದರು.

Exit mobile version